ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಲೋಕಸಭೆ ಚುನಾವಣೆಗೆ ಬಿಜೆಪಿ ಕಾರ್ಯತಂತ್ರ'

Last Updated 8 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಯಾವುದೇ ಕ್ಷಣದಲ್ಲಿ ಲೋಕಸಭೆಗೆ ಚುನಾವಣೆ ಘೋಷಣೆಯಾದರೂ ಬಿಜೆಪಿ ಅದಕ್ಕೆ ಸಿದ್ಧವಾಗಿದ್ದು, ಉತ್ತಮ ಆಡಳಿತ ಮತ್ತು ಅಭಿವೃದ್ಧಿಯೇ ಪಕ್ಷದ ಧ್ಯೇಯ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅವರು ತಿಳಿಸಿದರು.

ಬೆಲೆ ಏರಿಕೆ ನಿಯಂತ್ರಣ, ಭ್ರಷ್ಟಾಚಾರ ಮತ್ತು ಅರ್ಥ ವ್ಯವಸ್ಥೆಯ ಕುಸಿತದಂತಹ ಯುಪಿಎ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಶೀಘ್ರದಲ್ಲಿಯೇ ಪಕ್ಷವು ಅನೇಕ ಸಮಿತಿಗಳನ್ನು ರಚಿಸಲಿದೆ ಎಂದು ಪಕ್ಷದ ಸಂಸದೀಯ ಮಂಡಳಿ ಸಭೆಯ ನಂತರ ಅನಂತ್‌ಕುಮಾರ್ ಮಾಧ್ಯಮದವರಿಗೆ ತಿಳಿಸಿದರು.

ಈ ಸಮಿತಿಗಳ ರಚನೆಯ ಅಧಿಕಾರವನ್ನು ನರೇಂದ್ರ ಮೋದಿ ಮತ್ತು ರಾಜನಾಥ್ ಸಿಂಗ್ ಅವರಿಗೆ ಸಂಸದೀಯ ಮಂಡಳಿ ನೀಡಿದೆ. ಸಂಸದೀಯ ಮಂಡಳಿಯ ಸದಸ್ಯರ ಜತೆ ಸಮಾಲೋಚಿಸಿ ಈ ಇಬ್ಬರೂ ಸಮಿತಿಗಳನ್ನು ರಚಿಸಲಿದ್ದಾರೆ ಎಂದು ಹೇಳಿದರು.

ಮಿತ್ರ ಪಕ್ಷಗಳ ಒತ್ತಡದಿಂದಾಗಿ ಯುಪಿಎದಲ್ಲಿ ಒಡಕು ಮೂಡುತ್ತಿದೆ ಎಂದು ಟೀಕಿಸಿರುವ ಅನಂತ್ ಕುಮಾರ್, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಈಗ ದೇಶ ಹಾಗೂ ಸಂಸತ್ತನ್ನು ಎದುರಿಸುವ ಧೈರ್ಯವಿಲ್ಲದೆ ಸಂಸತ್ತಿನ ಮುಂಗಾರು ಅಧಿವೇಶನವನ್ನು ಮುಂದೂಡಿದೆ ಎಂದರು.

ಆಹಾರ ಭದ್ರತೆ ಮಸೂದೆಗೆ ಮಿತ್ರ ಪಕ್ಷಗಳೇ ಬೆಂಬಲ ನೀಡುವ ಸಾಧ್ಯತೆ ಕಡಿಮೆ ಎಂಬ ಅನುಮಾನದಿಂದ ಸುಗ್ರಿವಾಜ್ಞೆಯನ್ನು ಜಾರಿಗೆ ತರಲಾಗಿದೆ ಎಂದು ಟೀಕಿಸಿದರು.

ಸಾಧಾರಣವಾಗಿ ಜುಲೈ ಮೂರನೇ ವಾರದಲ್ಲಿ ಆರಂಭವಾಗುವ ಸಂಸತ್‌ನ ಮುಂಗಾರು ಅಧಿವೇಶನಕ್ಕೆ ದಿನಾಂಕ ನಿಗದಿಪಡಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದರು.

ಸಂಸದೀಯ ಮಂಡಲಿಯ ಸಭೆಯಲ್ಲಿ ದೇಶದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಯಿತು ಹಾಗೂ ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಲು ಅಗತ್ಯವಾದ ಕಾರ್ಯತಂತ್ರದ ಬಗ್ಗೆ ತೀರ್ಮಾನಿಸಲಾಯಿತು ಎಂದು ಹೇಳಿದರು.

ವಾರದಲ್ಲಿ ಎರಡನೇ ಬಾರಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಚುನಾವಣೆ ಪ್ರಚಾರ ಸಮಿತಿಯ ಮುಖ್ಯಸ್ಥ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ನಾಯಕರು ಪಾಲ್ಗೊಂಡಿದ್ದರು.

ಪಕ್ಷದ ಸಂಘಟನೆಯನ್ನು ಬಲಪಡಿಸುವುದು ಮತ್ತು ದೇಶದಾದ್ಯಂತ ಸಭೆ ಹಾಗೂ ರ‌್ಯಾಲಿಗಳನ್ನು ನಡೆಸುವುದು ಪಕ್ಷದ ಚುನಾವಣಾ ಕಾರ್ಯತಂತ್ರವಾಗಿದೆ ಎಂದು ಕುಮಾರ್ ಹೇಳಿದರು.

ಸದ್ಯದಲ್ಲೇ ಚುನಾವಣೆ ನಡೆಯಲಿರುವ ಮಧ್ಯಪ್ರದೇಶ, ಛತ್ತೀಸಗಡ, ದೆಹಲಿ, ರಾಜಸ್ತಾನ ಮತ್ತು ಮಿಜೋರಾಂ ರಾಜ್ಯಗಳ ಬಗ್ಗೆ ಈಗ ಹೆಚ್ಚಿನ ಗಮನಹರಿಸಲಾಗುತ್ತದೆ ಎಂದರು.

ಸರಣಿ ಬಾಂಬ್ ಸ್ಫೋಟ ಸಂಭವಿಸಿರುವ ಬೋಧಗಯಾಕ್ಕೆ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಅವರು ಮಂಗಳವಾರ ಭೇಟಿ ನೀಡಲಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT