ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತರಿಗೆ ಪರಮಾಧಿಕಾರ: ಜಾಗೃತಿ ಜಾಥಾ

Last Updated 15 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಲೋಕಾಯುಕ್ತರಿಗೆ ಪರಮಾಧಿಕಾರ ನೀಡಲು ಹಾಗೂ ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಬೈಸಿಕಲ್‌ನಲ್ಲಿ ಜಾಗೃತಿ ಜಾಥಾ ಕೈಗೊಂಡಿರುವ ನಂಜನಗೂಡು ಪಟ್ಟಣದ ಕೆಂಪಯ್ಯ ಅವರನ್ನು ರೈತಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಸಂಜೆ ಪಟ್ಟಣದಲ್ಲಿ ಸ್ವಾಗತಿಸಿದರು.

ನಂಜನಗೂಡು ಪಟ್ಟಣದಲ್ಲಿ ಕೂಲಿ ಕೆಲಸ ಮಾಡುವ 58ರ ಹರೆಯದ ಕೆಂಪಯ್ಯ ಸೋಮವಾರ ಚಾಮರಾಜನಗರದಿಂದ ಏಕಾಂಗಿಯಾಗಿ ಜಾಗೃತಿ ಜಾಥಾ ಆರಂಭಿಸಿದ್ದಾರೆ. ಸಾಗುವ ದಾರಿಯಲ್ಲಿ ಸಿಗುವ ಊರುಗಳ ಬಳಿ ಬೈಸಿಕಲ್ ನಿಲ್ಲಿಸಿ ಕರಪತ್ರ ಹಂಚುತ್ತಿದ್ದಾರೆ.ಮೈ ಮೇಲಿನ ನಿಲುವಂಗಿ ತುಂಬ ಭ್ರಷ್ಟಾಚಾರ ವಿರೋಧಿ ಘೋಷಣೆ ಬರೆಸಿಕೊಂಡು ಸಾರ್ವಜನಿಕರ ಗಮನ ಸೆಳೆಯುತ್ತಿದ್ದಾರೆ. ತಮ್ಮ ಬೈಸಿಕಲ್‌ನಲ್ಲಿ ಕನ್ನಡ ಬಾವುಟ ಕಟ್ಟಿಕೊಂಡಿದ್ದು ಒಂದಿಷ್ಟು ಬಿಸ್ಕತ್, ನೀರು ಇಟ್ಟುಕೊಂಡು ಕೆಂಪಯ್ಯ ಜಾಥಾ ಕೈಗೊಂಡಿದ್ದಾರೆ.

ಶಾಲೆಯ ಮುಖವನ್ನೇ ನೋಡಿಲ್ಲ ಎನ್ನುವ ಕೆಂಪಯ್ಯ ಸಹಿ ಮಾಡುವುದನ್ನು ಹೊರತುಪಡಿಸಿ ಓದು, ಬರಹ ಗೊತ್ತಿಲ್ಲ ಎಂದು ಹೇಳುತ್ತಾರೆ. ‘ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಎಲ್ಲ ರಾಜಕಾರಣಿಗಳು, ಅಧಿಕಾರಿಗಳು ಲಂಚ ಕೇಳ್ತಾ ಅವ್ರೆ.ಮಿನಿಷ್ಟ್ರು ಅನ್ನಿಸಿಕೊಂಡೋರು ಗಣಿನೆಲ್ಲ ನುಂಗಿ ನೀರು ಕುಡೀತಾ ಅವ್ರೆ. ಭ್ರಷ್ಟಾಚಾರ ಮಾಡೋರಿಗೆ ಬಿಸಿ ಮುಟ್ಟಿಸ್ತಿರೋ ಲೋಕಾಯುಕ್ತರಿಗೇ ಅವಮಾನ ನಡೀತಿದೆ’ 19ರಂದು ಬೆಂಗಳೂರ್ನಲ್ಲಿ ರಾಜ್ಯಪಾಲ್ರು ನೋಡಿ ಮನವಿ ಕೊಡ್ತೀನಿ’ ಎಂದು ತಮ್ಮ ಕಳಕಳಿ ತೋಡಿಕೊಂಡರು.

ಕೆಂಪಯ್ಯ ಅವರಿಗೆ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಮತ್ತ ಅವರ ಬೆಂಬಲಿಗರು ಹಣ್ಣು, ನೀರು ಕೊಟ್ಟು ಸತ್ಕರಿಸಿದರು. ಮಂಗಳವಾರ ರಾತ್ರಿ ಪಟ್ಟಣದಲ್ಲಿ ತಂಗಲು ಅನುಕೂಲ ಕಲ್ಪಿಸಿದರು. ಗಂಜಾಂ ಶ್ರೀನಿವಾಸ್, ಎಂ.ಶೆಟ್ಟಹಳ್ಳಿ ಬಸವಣ್ಣ, ನಾಗೇಂದ್ರು, ತಡಗವಾಡಿ ದ್ಯಾವೇಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT