ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಕಾರರ ಧ್ಯೇಯ: ಆಂದೋಲನ ಮತ್ತು ಆಧ್ಯಾತ್ಮ

Last Updated 4 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ವಚನ ಚಳವಳಿಯ ಸೈದ್ಧಾಂತಿಕ ಹಿನ್ನೆಲೆ ಕುರಿತು ಸಂಗತದಲ್ಲಿ ಚರ್ಚೆ ನಡೆಯುತ್ತ ಬಂದಿದೆ. ಜಾತಿಯ ಬೇಲಿಯನ್ನು ಕಿತ್ತು ಮನುಷ್ಯರೆಲ್ಲರೂ ಒಂದೆಡೆ ಸೇರುವಂತಹ ಮಹಾಸಾಹಸವನ್ನು ಶರಣರು ತೋರಿದರು. ಅವರ ಅನುಭವಗಳ ಅಭಿವ್ಯಕ್ತಿಯಾದ ವಚನ ರಚನೆಯು ಅವರ ಉದ್ದೇಶಗಳಲ್ಲಿ ಒಂದು. ವಚನಗಳನ್ನು ರಚಿಸಿದ ಶರಣರೆಲ್ಲ ಸಂಸ್ಕೃತ ಪಂಡಿತರಾಗಿರಲಿಲ್ಲ.

ಅವಲ್ಲಿ ಬಸವಣ್ಣ, ಚನ್ನಬಸವಣ್ಣ, ಅಲ್ಲಮ ಮುಂತಾದ ಕೆಲವೇ ಶರಣರಿಗೆ ಸಂಸ್ಕೃತ ಜ್ಞಾನವಿತ್ತು. ಉಳಿದಂತೆ ಎಲ್ಲ ಶರಣರು ಕನ್ನಡಪ್ರಿಯರು. ಕೆಲಶರಣರಿಗೆ ಕನ್ನಡವಲ್ಲದೆ ತೆಲುಗು (ತೆಲುಗು ಬೊಮ್ಮಯ್ಯ), ತಮಿಳು (ಮಾದಾರ ಚೆನ್ನಯ್ಯನವರು ತಮಿಳುನಾಡಿನ ಚೋಳದೇಶದಿಂದ ಬಂದವರೆಂದು ಹೇಳಲಾಗಿದೆ). ಮರಾಠಿ, ಹಿಂದಿ (ಉತ್ತರ ಭಾರತದಿಂದ ಬಂದಂತಹ ಶರಣರ ಭಾಷೆ). ಅವರೆಲ್ಲ ಸಂಸ್ಕೃತವನ್ನು ಕಡ್ಡಾಯವೆಂದು ಭಾವಿಸಿರಲಿಲ್ಲ.

ಸಂಸ್ಕೃತದಲ್ಲಿ ಮಾತನಾಡಿದರೆ ಮತ್ತು ವಚನ ರಚಿಸಿದರೆ ಕೆಲವರಷ್ಟೇ ಅರ್ಥ ಮಾಡಿಕೊಳ್ಳಬಹುದಾಗಿತ್ತು. ಎಲ್ಲರಿಗೂ ಅರ್ಥವಾಗಲಿ ಮತ್ತು ಅಭಿವ್ಯಕ್ತಿ ಒಂದೇ ಭಾಷೆಗೆ ಸೀಮಿತವಾಗುವುದು ಬೇಡವೆಂದು ಕನ್ನಡದಲ್ಲಿ ವಚನ ರಚಿಸಿ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದರು. ಸಂಸ್ಕೃತದಲ್ಲಿ ವಚನ ರಚನೆಗೆ ಇಳಿದಿದ್ದರೆ, ಭಗವದ್ಗೀತೆಯಂತೆ ವ್ಯಾಪಕತೆಯನ್ನು ಪಡೆಯಬಹುದಾಗಿತ್ತೇನೋ. ಶರಣರಿಗೆ ಅವರ ವ್ಯಾಪ್ತಿಗಿಂತ ಪ್ರಯೋಗ ಪ್ರಮುಖವಾಗಿತ್ತು. ಜನಸಾಮಾನ್ಯರನ್ನು ಚಳವಳಿಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕಾಗಿತ್ತು. ಇದಲ್ಲದೆ ಸಂಸ್ಕೃತ ಕಲಿತವರ ಮೇಲರಿಮೆ; ಕನ್ನಡ ಕಲಿತವರ ಕೀಳರಿಮೆಯನ್ನು ಅವರು ಕಿತ್ತುಹಾಕಬೇಕಾಗಿತ್ತು.

ವಚನಕಾರರು ಕೇವಲ ವಚನ ಸಾಹಿತ್ಯಕ್ಕೆ ತಮ್ಮನ್ನು ಸಂಕುಚಿತಗೊಳಿಸಿಕೊಳ್ಳುವುದಿಲ್ಲ. ಬದಲಾಗಿ ಅವರು ಪ್ರಯೋಗಶೀಲರಾಗಿದ್ದರು. ಒಂದೆಡೆ ಜಾತಿಯು ಸೃಷ್ಟಿಸುತ್ತಿದ್ದಂತಹ ಅಸಮಾನತೆಯನ್ನು ತೊಡೆಯುವುದು ಅವರ ಮುಖ್ಯ ಉದ್ದೇಶವಾಗಿತ್ತು. ಇಂದಿಗೂ ತಳಮಟ್ಟದ ಸಮುದಾಯಗಳು ಅಸ್ಪೃಶ್ಯತೆಯ ಅತೀವ ಯಾತನೆಯನ್ನು ಅನುಭವಿಸುತ್ತಿವೆ. ಜಾತೀಯತೆಯ ತೀವ್ರತೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಅವರ ಪ್ರಮುಖ ಪ್ರಯೋಗ. ಜಾತ್ಯತೀತ ಭಾವನೆಯ ಮುಖಾಂತರ ಏಳುನೂರೈವತ್ತು ಅಮರಗಣಂಗಳು ಒಂದೆಡೆ ಸೇರುವುದೇ ಒಂದು ಮಹಾ ಸಾಹಸ. ಜಾತಿಯ ಜಟಿಲತೆಯನ್ನು ಕರಗಿಸುವುದು ಎಂದೆಂದಿಗೂ ಕ್ಲಿಷ್ಟಕರ.

ಜಾತ್ಯತೀತತೆಯೆಂದರೆ ಮಾನವೀಯತೆ. ಮಾನವೀಯ ಕಾಳಜಿಯಿಂದ ಸಮಾನತೆಯನ್ನು ತರಲು ಅವರಿಗೆ ಸಾಧ್ಯವಾಯಿತು. ಶರಣರೆಲ್ಲ ಜೀವಕಾರುಣ್ಯ ಹೊಂದಿದವರು. ಆದ್ದರಿಂದಲೇ ಶೋಷಿತರ ಅವಮಾನದ ಕಾವನ್ನು ಕಡಿಮೆ ಮಾಡಲು ಹರಸಾಹಸ ಮಾಡಿದ್ದಾರೆ. ವಚನ ರಚನೆ ಪರಿವರ್ತನೆಯ ಸ್ವರೂಪ. ಪ್ರಯೋಗವೆಂದರೆ ಪರಿವರ್ತನೆ. ತಾನು ಪರಿವರ್ತನೆ ಆಗದೆ ಇತರರಲ್ಲಿ ಪರಿವರ್ತನೆ ತರಲು ಸಾಧ್ಯವಿಲ್ಲವೆಂಬುದನ್ನು ಅವರು ಅರಿತಿದ್ದರು. ಪರಿವರ್ತನೆಯು ತನ್ನಿಂದಲೇ ಆರಂಭವಾಗಲಿ ಎಂಬುದು ಅವರ ಆಶಯ. ಸಮಗಾರ ಹರಳಯ್ಯ, ಆಯ್ದಕ್ಕಿ ಲಕ್ಕಮ್ಮ, ಸತ್ಯಕ್ಕ ಮುಂತಾದ ಭಾಗಶಃ ಶರಣರಿಗೆ ಪರಿವರ್ತನೆಯೇ ಪ್ರಮುಖವಾದ ಅಂಶವಾಗಿತ್ತು.

ಅಲ್ಲಮ, ಅಕ್ಕಮಹಾದೇವಿ, ಚನ್ನಬಸವಣ್ಣ, ಮೋಳಿಗೆ ಮಾರಯ್ಯ ಮುಂತಾದವರು ಪರಿವರ್ತನೆಯ ಪರವಾಗಿದ್ದರೂ ಅನುಭವದ ಹಂಬಲಕ್ಕೆ ಒಳಗಾಗಿದ್ದರು. ಅಲ್ಲಮ ಸುತ್ತಾಟವನ್ನು ಆರಂಭಿಸಿಕೊಂಡು, ನದಿ-ತಟಾಕ-ಗುಹೆ ಮುಂತಾದೆಡೆಯಲ್ಲಿ ಏಕಾಂತ ಸಾಧನೆ ಮಾಡುತ್ತಾ, ಆಧ್ಯಾತ್ಮಿಕವಾದ ಆನಂದವನ್ನು ಅನುಭವಿಸಿದ್ದಾನೆ. ಅಲ್ಲದೆ ಸಿದ್ಧರು - ಸಾಧಕರನ್ನು ಸಂದರ್ಶಿಸುತ್ತ ಚರ್ಚೆಗೆ ಇಳಿದಿದ್ದಾನೆ.  ಅಲೆಮಾರಿ ಅಲ್ಲಮ , ಮುಂದೆ  ಅನುಭಾವಿ ಅಲ್ಲಮ ನೆನಿಸಿಕೊಳ್ಳುತ್ತಾನೆ.

ಲೋಕಾನುಭವ ಮತ್ತು ಸಿದ್ಧಿ ಸಂಪಾದನೆ ಮಹಾನುಭಾವಿ ಆಗುತ್ತಾನೆ. ಅನೇಕ ಸಂದರ್ಭದಲ್ಲಿ ಅವನು ಏಕಾಂತ ಸಾಧಕ. ಏಕಾಂತ ಮತ್ತು ಲೋಕಾಂತ ಎರಡನ್ನು ಸಾಧಿಸಿದ ಅಧ್ಯಾತ್ಮ ಸಾಧಕ. ಆಧ್ಯಾತ್ಮವು ಶರಣರ ಒಂದು ಸಾಧನೆ ಆಗಿತ್ತು. ಅಕ್ಕಮಹಾದೇವಿಯು ಕೌಶಿಕನ ಅರಮನೆಯನ್ನು ತೊರೆದಿದ್ದೇ ಆಧ್ಯಾತ್ಮಿಕ ಹಂಬಲದಿಂದ. ಅದು ಪರಮಾನಂದ. ಪರಮಾನಂದ ಪ್ರಾಪ್ತಿಗಾಗಿ ಒಬ್ಬಂಟಿಯಾಗಿ ನಿಸರ್ಗವನ್ನು ಅನುಭವಿಸುತ್ತ, ಎದುರಾದ ಕಷ್ಟ-ನಷ್ಟಗಳನ್ನು ಧೈರ್ಯವಾಗಿ ಎದುರಿಸುತ್ತ, ಕಲ್ಯಾಣದತ್ತ ಸಾಗಿ, ಶರಣ ತಿಂಥಿಣಿಯನ್ನು ಸೇರಿಕೊಂಡಳು. ಅಲ್ಲಿ ಆಕೆಯ ಬದುಕನ್ನು ಎತ್ತರಿಸುವಂತಹ  ಶರಣರ ಸಂಗ . ಶರಣರ ಸಂಗದಿಂದ ಆಧ್ಯಾತ್ಮಿಕ ಆನಂದವನ್ನು ಅನುಭವಿಸಿದ ಮಹಾನ್ ಸಾಧಕಿ.

ಆಂದೋಲನ ಮತ್ತು ಅಧ್ಯಾತ್ಮ ಎರಡೂ ವಚನಕಾರರ ಧ್ಯೇಯವಾಗಿದ್ದವು. ಬಸವಣ್ಣನವರ ಆಂತರ್ಯದಲ್ಲಿ ಆಧ್ಯಾತ್ಮ; ಬಹಿರಂಗದಲ್ಲಿ ಪರಿವರ್ತನಶೀಲ ಪವೃತ್ತಿ. ಪ್ರಭುದೇವ ಮತ್ತಿತರ ಶರಣರ ಅಂತರಂಗದಲ್ಲಿ ಸುಧಾರಣೆ; ಬಹಿರಂಗದಲ್ಲಿ ಆಧ್ಯಾತ್ಮಿಕ ಜಿಜ್ಞಾಸೆ. ವಚನಗಳಲ್ಲಿ ಜೀವಪ್ರೀತಿಯಿದೆ, ನಿಸರ್ಗದ ಆರಾಧನೆ, ಸತ್ಯದ ಅನ್ವೇಷಣೆ, ಮಾನವೀಯ ಮೌಲ್ಯಗಳ ಕಾಳಜಿ, ಪರಿವರ್ತನಾಪರವಾದ ಆಶಯ, ಸ್ವಾತಂತ್ರ - ಸ್ವಾಭಿಮಾನ, ಜೀವನ ಶಿಕ್ಷಣ, ಪ್ರಜಾಪ್ರಭುತ್ವ ಪರವಾದ ಚಿಂತನೆ, ಸಾಮ್ರೋಜ್ಯಶಾಹಿ ಮತ್ತು ಪೌರೋಹಿತ್ಯಶಾಹಿಯ ಖಂಡನೆ, ಶೋಷಣೆಯ ವಿಮೋಚನೆ, ಲಿಂಗ ತಾರತಮ್ಯದ ನಿವಾರಣೆ ಇತ್ಯಾದಿ. ನಮಗೆ ಬೇಕಾಗಿರುವುದನ್ನು ಅದರಲ್ಲಿ ಆಯ್ದುಕೊಳ್ಳಬಹುದು. ಜಾತಿ ವ್ಯವಸ್ಥೆಯ ಶೋಷಣೆಯ ಸಂಕಷ್ಟಗಳಾಗಲೀ, ವರ್ಣಾಶ್ರಮ ಫಲಿತ ಭೇದಗಳಾಗಲೀ ಅಂದು ಸ್ಥಾಯಿಯಾಗಿರದಿದ್ದರೆ ಶರಣಚಳವಳಿ ಮೂಡಿಬರಲು ಸಾಧ್ಯವಿರಲಿಲ್ಲವೆನ್ನುವುದೂ ಸಹ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT