ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯಸ್ಸು ಕಿರಿದಾಗಿದ್ದರೂ ವೃದ್ಧನಂತೆ ನರಳಾಟ

Last Updated 11 ಜೂನ್ 2011, 19:30 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಅಪರೂಪದ ಅನುವಂಶಿಕ ಕಾಯಿಲೆ `ಪ್ರೋಗೇರಿಯಾ~ದಿಂದ ಬಳಲುವ ಬಾಲಕನ ಪಾತ್ರವನ್ನು ನಟ ಅಮಿತಾಭ್ ಬಚ್ಚನ್ `ಪಾ~ ಚಲನಚಿತ್ರದಲ್ಲಿ ಅಭಿನಯಿಸಿದ್ದರು. ವಯಸ್ಸು ಚಿಕ್ಕದಿದ್ದರೂ ನೋಡಲು ಮುದುಕನಂತೆ ಕಾಣುತ್ತಾರೆ. 80 ಲಕ್ಷ ಮಂದಿಯಲ್ಲಿ ಒಬ್ಬರಿಗೆ ಕಾಡುವ ಈ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಶಿಡ್ಲಘಟ್ಟದಲ್ಲಿ ವಾಸವಿದ್ದಾರೆ.

ಶಿಡ್ಲಘಟ್ಟದ ಚಿಂತಾಮಣಿ ರಸ್ತೆ ನಿವಾಸಿ ಕೃಷ್ಣಪ್ಪ ಎಂಬುವವರ 3ನೇ ಪುತ್ರ ದೇವರಾಜು `ಪ್ರೋಗೇರಿಯಾ~ ಕಾಯಿಲೆಯಿಂದ ನರಳುತ್ತಿದ್ದಾರೆ. ಕುಬ್ಜ ದೇಹ, ಸುಕ್ಕುಗಟ್ಟಿದ ಚರ್ಮ, ಸಂಕುಚಿತಗೊಂಡ ಮುಖ ಮೇಲ್ನೋಟಕ್ಕೆ ಕಾಣುವ ಲಕ್ಷಣಗಳು. ಅವರಿಗೆ ಆಹಾರ ಸುಲಭವಾಗಿ ಜೀರ್ಣಿಸಿಕೊಳ್ಳಲು ಆಗುವುದಿಲ್ಲ. ನಿಶ್ಶಕ್ತಿ, ಪರಾವಲಂಬನೆ, ನೋವು, ನರಳಾಟದ ಸಮಸ್ಯೆ ನಿತ್ಯ ಎದುರಿಸುತ್ತಿದ್ದಾರೆ.

32 ವರ್ಷ ವಯಸ್ಸಿನ ದೇವರಾಜುಗೆ ಕೈಲಿ ಒಂದು ಲೋಟ ನೀರನ್ನು ತೆಗೆದುಕೊಳ್ಳುವಷ್ಟು ಶಕ್ತಿಯಿಲ್ಲ. ದಿನಕ್ಕೆ ಒಂದು ಬಾರಿ ಅದೂ ಅತ್ಯಲ್ಪ ಆಹಾರವಷ್ಟೇ ಸೇವಿಸಲು ಸಾಧ್ಯ. ತಿನ್ನುವ ಆಹಾರ ಸ್ವಲ್ಪ ಹೆಚ್ಚಾದರೆ ತೀವ್ರ ಹೊಟ್ಟೆ ನೋವು ಬರುತ್ತದೆ.

ಕೃಷ್ಣಪ್ಪ- ಸರೋಜಮ್ಮ ದಂಪತಿಗೆ ಉಳಿದ ಮೂವರು ಮಕ್ಕಳು ಆರೋಗ್ಯವಾಗಿದ್ದು, ಬೇರೆ ಕಡೆ ವಾಸವಿದ್ದಾರೆ. ಈ ದಂಪತಿಗೆ ಸದ್ಯಕ್ಕೆ ಜೀವನದ ಆಸರೆಯಾಗಿ ಉಳಿದಿರುವುದು ಅರ್ಧ ಎಕರೆ ಜಮೀನು  ಮಾತ್ರ.
`ನನ್ನ ಮಗ ದೇವರಾಜು ಅನುಭವಿಸುತ್ತಿರುವ ನರಕ ಯಾತನೆ ಯಾರಿಗೂ ಬೇಡ.

ಇಷ್ಟು ವರ್ಷಗಳಿಂದ ಕೇವಲ ಮೂರು ಅಡಿಯಷ್ಟೇ ಬೆಳೆದಿರುವ ಮಗನಿಗೆ ಬಂದಿರುವ ಕಾಯಿಲೆ ಎಂಥದ್ದು ಅಂತ ಯಾವ ವೈದ್ಯರೂ ಕಂಡು ಹಿಡಿಯಲಾಗಿಲ್ಲ. 1979ರಲ್ಲಿ ಜನಿಸಿದ ದೇವರಾಜು 6 ತಿಂಗಳ ಮಗುವಾಗಿದ್ದಾಗ ಸ್ವಲ್ಪ ಜ್ವರ ಕಾಣಿಸಿಕೊಂಡಿತು.

ಬೆನ್ನ ಕೆಳಗೆ ಸಣ್ಣ ಗುಳ್ಳೆಗಳಾಗಿ ಗಾಯಗಳಾದವು. ಚಿಕಿತ್ಸೆ ಕೊಡಿಸಿದ ನಂತರ ವಾಸಿಯಾದರೂ ನಂತರದ ದಿನಗಳಲ್ಲಿ ದೇಹದ ಬೆಳವಣಿಗೆಯಾಗಲೇ ಇಲ್ಲ~ ಎಂದು ತಾಯಿ ಸರೋಜಮ್ಮ `ಪ್ರಜಾವಾಣಿ~ಗೆ ತಿಳಿಸಿದರು.

`ಮುಖದ ಮೇಲೆ ನಿಧಾನವಾಗಿ ಮಚ್ಚೆ, ಪೊರೆ ಕಾಣಿಸಿಕೊಳ್ಳತೊಡಗಿತು. ಸರಿಯಾಗಿ ಹಸಿವಾಗದೆ ಊಟ ಮಾಡುತ್ತಿರಲಿಲ್ಲ. ಆಗಾಗ ಜ್ವರ ಮತ್ತು ಬೇಧಿಯಿಂದ ನರಳತೊಡಗಿದ. ದಿನಕ್ಕೆ ಕೇವಲ ಒಂದು ಹೊತ್ತು ಒಂದೆರಡು ತುತ್ತು ಊಟ ಮಾಡಿದರೂ ಅಜೀರ್ಣವಾಗುತ್ತದೆ. ಇಂತಹ ಯಾತನಾ ಬದುಕು ಕೇವಲ ಒಂದೆರಡು ದಿನದ್ದಲ್ಲ. ನಿರಂತರವಾಗಿ ಮೂವತ್ತು ವರ್ಷಗಳಿಂದ ನಡೆಯುತ್ತಲೇ ಇದೆ~ ಎಂದು ಅವರು ತಿಳಿಸಿದರು.
`ದೇವರಾಜುಗೆ ಅಪರೂಪದ ಅನುವಂಶಿಕ ಕಾಯಿಲೆ. 1886ರಲ್ಲಿ ಹಚಿನ್‌ಸನ್ ಮತ್ತು ಗಿಲ್‌ಫೋರ್ಡ್ ಎಂಬ ವಿಜ್ಞಾನಿಗಳು ಇದರ ಗುಣಲಕ್ಷಣಗಳ ಬಗ್ಗೆ ಬೆಳಕು ಚೆಲ್ಲಿದ್ದರಿಂದ ಕಾಯಿಲೆಗೆ `ಹಚಿನ್‌ಸನ್ ಗಿಲ್‌ಫೋರ್ಡ್ ಪ್ರೋಗೇರಿಯಾ ಸಿಂಡ್ರೋಮ್~ (ಎಚ್‌ಜಿಪಿಎಸ್) ಎಂದು ಕರೆಯುತ್ತಾರೆ.

ಇದಕ್ಕೆ ಈವರೆಗೆ ಸೂಕ್ತ ಔಷಧಿಯನ್ನು ಕಂಡು ಹಿಡಿಯಲಾಗಿಲ್ಲ. ದೇಹದ ವಿವಿಧ ತೊಂದರೆಗಳಿಗೆ ತಾತ್ಕಾಲಿಕವಾಗಿ ಚಿಕಿತ್ಸೆ ನೀಡಬಹುದೇ ಹೊರತು ಸಂಪೂರ್ಣವಾಗಿ ಗುಣಪಡಿಸಲು ಆಗುವುದಿಲ್ಲ~ ಎಂದು ವೈದ್ಯ ಡಾ. ಡಿ.ಟಿ. ಸತ್ಯನಾರಾಯಣರಾವ್ ತಿಳಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT