ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಕ್ಷಿಣೆ ಸಾವು: ಮೂವರಿಗೆ ಜೀವಾವಧಿ ಶಿಕ್ಷೆ

Last Updated 10 ಜುಲೈ 2013, 8:57 IST
ಅಕ್ಷರ ಗಾತ್ರ

ಬಳ್ಳಾರಿ: `ಮದುವೆ ವೇಳೆ ಸಾಕಷ್ಟು ವರದಕ್ಷಿಣೆ ತರಲಿಲ್ಲ. ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ' ಎಂದು ಆರೊಪಿಸುತ್ತ ಮಹಿಳೆ ಯೊಬ್ಬರಿಗೆ ತೀವ್ರ ಕಿರುಕುಳ ನೀಡಿ, ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಆರೋಪ ಎದುರಿಸುತ್ತಿದ್ದ ಮೂವರಿಗೆ ಜಿಲ್ಲಾ ನ್ಯಾಯಾಲಯ ಮಂಗಳವಾರ ಜೀವಾ ವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

2010ರ ಜುಲೈ 12ರಂದು ಸ್ಥಳೀಯ ಕಮೇಲಾ ರಸ್ತೆಯ ನಿವಾಸಿ ನಜ್ಮಾ ಎಂಬುವವರನ್ನು ಕೊಲೆ ಮಾಡಿದ್ದ ಆರೋಪಿಗಳಾದ ಪತಿ ಖಾದರ್‌ಬಾಷಾ, ಮೃತಳ ಮಾವ ಅಬ್ದುಲ್ ಗಫಾರ್, ಅತ್ತೆ ಖಲೀಂ ಉನ್ನಿಸಾ ಅವರಿಗೇ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಡಿ.ವಿಶ್ವೇಶ್ವರ ಭಟ್ ಅವರು ಮೂವರೂ ಆರೋಪಿಗಳಿಗೆ ಈ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.

ಕಠಿಣ ಕಾರಾಗೃಹ ಶಿಕ್ಷೆ: ಮಕ್ಕಳಾಗಲಿಲ್ಲ ಎಂಬ ಕಾರಣದಿಂದ ನಿತ್ಯವೂ ತೀವ್ರ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತ ಪತ್ನಿಯ ಆತ್ಮಹತ್ಯೆಗೆ ಕಾರಣವಾಗಿದ್ದ ವ್ಯಕ್ತಿಗೆ ಜಿಲ್ಲಾ ನ್ಯಾಯಾಲಯ ಐದು ವರ್ಷಗಳ ಅವಧಿಯ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಜಿಲ್ಲೆಯ ಸಿರುಗುಪ್ಪದ ಅಂಬಾನಗರದಲ್ಲಿ 2011ರ ನವೆಂಬರ್ 18ರಂದು ಸಂಜೆ ಪತಿಯ ಕಿರುಕುಳ ತಾಳದೆ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಮಾರೆಮ್ಮ ಅವರ ಪತಿ ಪರಮೇಶಿಗೇ ಈ ಶಿಕ್ಷೆ ವಿಧಿಸಲಾಗಿದೆ.

ಪತಿಯು ನಿತ್ಯವೂ ಕುಡಿದು ಬಂದು ಚಿತ್ರಹಿಂಸೆ ನೀಡುತ್ತಿದ್ದರಿಂದ ಮಾರೆಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಧೀಶ ಡಿ.ವಿಶ್ವೇಶ್ವರ ಭಟ್ ಈ ಶಿಕ್ಷೆ ವಿಧಿಸಿದ್ದಲ್ಲದೆ, ರೂ 5 ಸಾವಿರ ದಂಡವನ್ನೂ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಅಂಜಲಿದೇವಿ ಎರಡೂ ಪ್ರಕರಣಗಳಲ್ಲಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT