ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಿ ಕೇಳಿದ ಕೇಂದ್ರ ಸರ್ಕಾರ

ಮುಜಾಫರ್‌ನಗರ ಕೋಮುಗಲಭೆ: ಮೃತರ ಸಂಖ್ಯೆ 21ಕ್ಕೆ ಏರಿಕೆ
Last Updated 8 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಲಖನೌ/ನವದೆಹಲಿ (ಪಿಟಿಐ, ಐಎಎನ್‌ಎಸ್): ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ನಡೆದ ಕೋಮುಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿದೆ. ಈ ಮಧ್ಯೆ, ಘಟನೆಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ನಂಗ್ಲಾ ಮಂಡೌಡ್‌ನಲ್ಲಿ ಶನಿವಾರ ನಡೆದ ಮಹಾಪಂಚಾಯತ್‌ನ ನಂತರ ಉಂಟಾದ ಹಿಂಸಾಚಾರದಲ್ಲಿ ಟಿವಿ ಪತ್ರಕರ್ತ ಸೇರಿದಂತೆ 21 ಜನರು ಮೃತಪಟ್ಟು, 34ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮುಜಾಫರ್‌ನಗರದಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಕ್ಷಿಪ್ರ ಕಾರ್ಯಪಡೆ, ಪ್ರಾಂತೀಯ ಸಶಸ್ತ್ರ ಪೊಲೀಸ್ ದಳ ಸೇರಿದಂತೆ ಭದ್ರತಾ ಪಡೆಗಳ 28 ತುಕಡಿಗಳನ್ನು ಹಿಂಸಾಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

ಅಗತ್ಯ ಕ್ರಮಕ್ಕೆ ಸೂಚನೆ
ಘಟನೆಗೆ ಸಂಬಂಧಿಸಿದಂತೆ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿರುವ ಕೇಂದ್ರ ಸರ್ಕಾರ ಹಿಂಸಾಚಾರವನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಉತ್ತರ ಪ್ರದೇಶದ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಗಲಭೆ ನಿಯಂತ್ರಣಕ್ಕೆ ಬೇಕಾದ ಎಲ್ಲಾ ನೆರವನ್ನು ನೀಡುವ ಭರವಸೆ ನೀಡಿದೆ.

ಅಗತ್ಯ ಬಿದ್ದರೆ, ಶಾಂತಿಗೆ ಭಂಗ ತರುವವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸುವುದು ಅಥವಾ ಗೃಹ ಬಂಧನದಲ್ಲಿಡುವುದು ಸೇರಿದಂತೆ ಇನ್ನಿತರ ಕ್ರಮವನ್ನು ಕೈಗೊಳ್ಳುವಂತೆಯೂ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿ.ಎಂ ರಾಜೀನಾಮೆಗೆ ಆಗ್ರಹ
ರಾಜ್ಯ ಸರ್ಕಾರವು `ಕೋಮುವಾದಿ ರಾಜಕಾರಣ'ದಲ್ಲಿ ತೊಡಗಿದೆ ಎಂದು ಆರೋಪಿಸಿರುವ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಮುಜಾಫರ್‌ನಗರ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಯನ್ನು ತಡೆಯಲು ವಿಫಲಗೊಂಡಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.

`ಮುಜಾಫರ್‌ನಗರದಲ್ಲಿ ನಡೆದ ಹಿಂಸಾಚಾರದಿಂದಾಗಿ ಸಮಾಜವಾದಿ ಪಕ್ಷದ ಸರ್ಕಾರ ಆಡಳಿತಾತ್ಮಕವಾಗಿ ವಿಫಲಗೊಂಡಿರುವುದು ಮತ್ತೊಮ್ಮೆ ಬಯಲಾಗಿದೆ. ಅಖಿಲೇಶ್ ನೇತೃತ್ವದ ಸರ್ಕಾರ ಕ್ರಿಮಿನಲ್‌ಗಳಿಗೆ ತಲೆ ಬಾಗಿದೆ ಎಂಬುದನ್ನು ಈ ಗಲಭೆ ಸಾಬೀತು ಮಾಡಿದೆ. ತಕ್ಷಣವೇ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು' ಎಂದು ಬಿಎಸ್‌ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇಲ್ಲ. ಕೋಮುವಾದಿ ಶಕ್ತಿಗಳು, ಅಪರಾಧಿಗಳು ಮತ್ತು ಮಾಫಿಯಾಗಳು ಆಡಳಿತ ನಡೆಸುತ್ತಿವೆ ಎಂದೂ ಅವರು ಆರೋಪಿಸಿದ್ದಾರೆ.

ಶಾಂತಿಗೆ ಮೌಲ್ವಿಗಳ ಮನವಿ
ಮುಜಾಫರ್‌ನಗರದಲ್ಲಿ ನಡೆದಿರುವ ಕೋಮು ಗಲಭೆಯನ್ನು ಖಂಡಿಸಿರುವ ಮೌಲ್ವಿಗಳು, ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುವ `ರಾಜಕೀಯ ಕುತಂತ್ರ'ದ ವಿರುದ್ಧ ಎಚ್ಚರಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಶಾಂತಿ ಹಾಗೂ ಸಾಮರಸ್ಯವನ್ನು ಕಾಪಾಡುವಂತೆಯೂ ಅವರು ಜನತೆಗೆ ಮನವಿ ಮಾಡಿದ್ದಾರೆ.

`ಹಿಂಸಾಚಾರ ಖಂಡನಾರ್ಹ. ರಾಜ್ಯದ ಪಶ್ಚಿಮ ಭಾಗದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಯತ್ನಗಳು ಕೆಲವು ದಿನಗಳಿಂದ ನಡೆಯುತ್ತಿತ್ತು. ಈಗ ನಡೆದಿರುವ ಗಲಭೆಯು ರಾಜಕೀಯ ಆಟದ ಭಾಗ. ಅದನ್ನು ಬಯಲುಗೊಳಿಸಬೇಕಿದೆ' ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಮೌಲಾನಾ ಖಾಲಿದ್ ರಶೀದ್ ಫರಂಗಿ ಮಹ್ಲಿ ಹೇಳಿದ್ದಾರೆ.

ಕೆಲವು `ಶಕ್ತಿ'ಗಳು ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಸಂಘಟನೆಗಳ ನಡುವೆ ಒಡಕು ಮೂಡಿಸಲು ಯತ್ನಿಸುತ್ತಿವೆ ಎಂದು ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿಯ ವಕ್ತಾರ ಮೌಲಾನ ಯಾಸೂಬ್ ಅಬ್ಬಾಸ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಆರೋಪ
(ನವದೆಹಲಿ ವರದಿ):ಉತ್ತರ ಪ್ರದೇಶ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, `ಕೋಮು ಹಿಂಸಾಚಾರ ತಡೆಯಲು ರಾಜ್ಯ ಸರ್ಕಾರ ವಿಫಲವಾಗಿದೆ' ಎಂದು ದೂರಿದ್ದಾರೆ. `ಈಗಿನ ಅವಧಿಯಲ್ಲಿ ಸಮಾಜವಾದಿ ಪಕ್ಷದ ಆಡಳಿತ ಉತ್ತಮವಾಗಿಲ್ಲ. ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳನ್ನು ತಡೆಯಲು ಅದಕ್ಕೆ ಸಾಧ್ಯವಾಗಿಲ್ಲ. ಈ ವಿಚಾರದಲ್ಲಿ ಬಿಎಸ್‌ಪಿ ಆಡಳಿತ ಉತ್ತಮವಾಗಿತ್ತು' ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಮುಲಾಯಂ ತುರ್ತು ಸಭೆ
ಲಖನೌ (ಐಎಎನ್‌ಎಸ್):
ಮುಜಾಫರ್‌ನಗರ ಗಲಭೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಯಾದವ್  ಭಾನುವಾರ ತಮ್ಮ ನಿವಾಸದಲ್ಲಿ ತುರ್ತು ಸಭೆ ನಡೆಸಿದರು.

ಕೋಮು ಗಲಭೆಯನ್ನು ತಡೆಯಲು ಸರ್ಕಾರ ಅಸಮರ್ಥಗೊಂಡಿರುವುದಕ್ಕೆ ಮುಲಾಯಂ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ. ಶನಿವಾರ ತಡರಾತ್ರಿ ದೆಹಲಿಯಿಂದ ರಾಜ್ಯಕ್ಕೆ ಹಿಂದಿರುಗಿರುವ ಅವರು ಖುದ್ದಾಗಿ ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಹಿಂಸಾಚಾರ ತಡೆಯಲು ವಿಫಲರಾಗಿರುವ ರಾಜ್ಯ ಪೊಲೀಸರ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಅವರು, ಗೃಹ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಕಳೆದ ವರ್ಷ ಹೊಸ ಸರ್ಕಾರ ರಚನೆಯಾದಾಗ ಸ್ವತಃ ಮುಲಾಯಂ ಅವರೇ ತಮಗೆ ಬೇಕಾದವರನ್ನು ಗೃಹ ಇಲಾಖೆಗೆ ನೇಮಿಸಿಕೊಂಡಿದ್ದರು.

ಇಂತಹ ಘಟನೆಗಳು 2014ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಪರಿಣಾಮ ಬೀರುವುದು ಮಾತ್ರವಲ್ಲದೇ, ಆಡಳಿತಗಾರರಾಗಿ ವೈಯಕ್ತಿಕ ವರ್ಚಸ್ಸಿನ ಮೇಲೆಯೂ ಪರಿಣಾಮ ಬೀರಲಿದೆ ಎಂದು ಮುಲಾಯಂ ಅವರು ಪುತ್ರ ಅಖಿಲೇಶ್ ಯಾದವ್ ಅವರಿಗೆ ತಿಳಿಸಿದರು ಎಂದೂ ತಿಳಿದುಬಂದಿದೆ.

ಉತ್ತರಾಖಂಡದಲ್ಲಿ ಕಟ್ಟೆಚ್ಚರ
(ಡೆಹ್ರಾಡೂನ್ ವರದಿ
): ಮುಜಾಫರ್‌ನಗರದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ನೆರೆಯ ಉತ್ತರಾಖಂಡದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಉತ್ತರ ಪ್ರದೇಶಕ್ಕೆ ಹೊಂದಿಕೊಂಡಿರುವ ಡೆಹ್ರಾಡೂನ್, ಹರಿದ್ವಾರ ಮತ್ತು ಉಧಮ್‌ಸಿಂಗ್ ಜಿಲ್ಲೆಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಮಾರ್ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT