ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಾಹ ಮಿಹಿರನ ಸೂತ್ರ ಬಲ್ಲ ರೈತರು

Last Updated 6 ಏಪ್ರಿಲ್ 2011, 8:30 IST
ಅಕ್ಷರ ಗಾತ್ರ

ಬೀಳಗಿ: ಸ್ಥಳೀಯ ರೈತರು ಭಾನುವಾರ ಅಮಾವಾಸ್ಯೆಯ ಸಾಯಂಕಾಲ ದಿಂದಲೇ ಸಿದ್ಧತೆ ನಡೆಸಿ ಪ್ರತಿಪದೆಯ ಸೋಮವಾರ ಸೂರ್ಯೋದಯ ದೊಂದಿಗೇನೇ ಪ್ರಾರಂಭಗೊಳ್ಳಲಿರುವ ವರ್ಷದ ಮಳೆ ಬೆಳಯ ವಿಚಾರಗಳ ಭವಿಷ್ಯ ವನ್ನು ಲೆಕ್ಕ ಹಾಕಿಕೊಂಡ ರಲ್ಲದೇ, ಗಣಿತ ಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ಸಾಧನೆ ಮಾಡಿದ್ದ ವರಾಹಮಿಹಿರನು (ಕ್ರಿ.ಶ. 6ನೇ ಶತಮಾನ) ಮೋಡಗಳು ಹಾಗೂ ಮಳೆಯ ಕುರಿತಾಗಿ ವಿವರಿಸಿದ ಸೂತ್ರಗಳನ್ನು ತಾವೂ ಬಲ್ಲೆವು ಎಂಬುದನ್ನು ಸಾಬೀತು ಪಡಿಸಿದರು.

ಭಾನುವಾರ ಸಂಜೆ ಊರ ಮುಂದಿನ ಹೊಲದಲ್ಲಿ ಕೆಸರಿನಿಂದ ಕಟ್ಟೆಯೊಂದನ್ನು ಕಟ್ಟಿ (ಅದಕ್ಕೆ ಜಕಣೇರ ಕಟ್ಟೆ ಎನ್ನುತ್ತಾರೆ.) ಅದರಲ್ಲಿ 27 ರಂಧ್ರಗಳನ್ನು ಮಾಡಿ ಪ್ರತಿ ರಂಧ್ರದಲ್ಲಿ ಧಾನ್ಯಗಳನ್ನು ತುಂಬಿ (ಮುಂಗಾರಿ ಹಂಗಾಮಿನ 13, ಹಿಂಗಾರಿ ಹಂಗಾಮಿನ 14 ಮಳೆಗಳು, ಅಶ್ವಿನಿಯಿಂದ ರೇವತಿ ಯವರೆಗೆ 27 ಮಳೆ ನಕ್ಷತ್ರಗಳು) ಪ್ರತಿ ರಂಧ್ರದ ಮೇಲೂ ನಾಲ್ಕು, ನಾಲ್ಕು ಎಕ್ಕೆ ಎಲೆಗಳನ್ನು ಮುಚ್ಚಿದ್ದರು. ಕಟ್ಟೆಯ ಮೇಲೆ ಹೊಸ ಮಡಿಕೆ. ಜೊತೆಗೆ ಉತ್ತಿ, ಬಿತ್ತಿ, ನಮ್ಮನ್ನು ಸಲಹುವ ಮಣ್ಣಿನಿಂದ ಮಾಡಿದ ಬಸವಣ್ಣ ಗಳು. ಎಲ್ಲವಕ್ಕೂ ಪೂಜೆ ಮಾಡಲಾಯಿತು.

ಸೋಮವಾರ ನಸುಕಿನಲ್ಲಿ ಊರ ರೈತರೆಲ್ಲರೂ ಸೇರಿ ಮತ್ತೊಮ್ಮೆ ಪೂಜಿಸಿ ಧಾನ್ಯ ತುಂಬಿದ ರಂಧ್ರಗಳ ಮೇಲೆ ಮುಚ್ಚಿದ್ದ ಎಲೆಗಳನ್ನು ಸರಿಸಿ ಸೂಕ್ಷ್ಮವಾಗಿ ಅವಲೋಕಿಸುತ್ತಾ ನಡೆದರು. ಒಂದು ರಂಧ್ರದ ಮೇಲೆ ನಾಲ್ಕು ಎಕ್ಕೆ ಎಲೆಗಳು. (ಒಂದು ಮಳೆಗೆ ನಾಲ್ಕು ಪಾದಗಳೆಂದು ಲೆಕ್ಕ ಹಾಕಿರುತ್ತಾರೆ.) ಒಂದನೇ ರಂಧ್ರ ಅಶ್ವಿನಿ ಮಳೆ. ರಂಧ್ರದ ಮೇಲೆ ಮುಚ್ಚಿದ ಒಂದನೇ ಎಲೆ ಒಂದನೇ ಪಾದ. ಹೀಗೆ 27 ಮಳೆಗಳ ಹೆಸರಿನಲ್ಲಿ ಇಡಲಾಗಿದ್ದ ಎಲೆಗಳನ್ನು ತೆಗೆಯುತ್ತಿದ್ದಂತೆ ಎಲೆಗಳ ಒಳ ಭಾಗದಲ್ಲಿ ಬೆವರು ಹನಿಗಳಂತೆ ತೇವಾಂಶ ಹೆಚ್ಚು ಕಂಡು ಬಂದಲ್ಲಿ ಹೆಚ್ಚು ಮಳೆಯೂ, ಕಡಿಮೆ ತೇವಾಂಶ ಕಂಡು ಬಂದಲ್ಲಿ ಕಡಿಮೆ ಪ್ರಮಾಣದ ಮಳೆಯೂ, ತೇವಾಂಶವೇ ಇರದಿದ್ದಲ್ಲಿ ಆ ಪಾದದಲ್ಲಿ ಮಳೆ ಆಗುವದಿಲ್ಲ ಎಂಬುದು ಈ ಮಣ್ಣಿನ ಮಕ್ಕಳ ಗಟ್ಟಿಯಾದ ನಂಬುಗೆ.

ವರಾಹ ಮಿಹಿರನು ಚಂದ್ರಮಾನಕ್ಕೆ ತಕ್ಕಂತೆ ಗ್ರಹಗಳು ಹಾಗೂ ನಕ್ಷತ್ರಗಳ ಚಲನೆಯನ್ನು ಆಧರಿಸಿ ಮಳೆಯನ್ನು ಅಂದಾಜಿಸು ತ್ತಿದ್ದ. ಮೋಡ ಕಟ್ಟುವಿಕೆಯನ್ನು ಆತ ಗರ್ಭಧಾರಣವೆಂದೂ, ಮೋಡದ ಲಕ್ಷಣಗಳನ್ನು ಗರ್ಭ ಕ್ಷಣಗಳೆಂದೂ ವಿವರಿಸಿರುವ ಆತ ವೇಳೆ ಹಾಗೂ ಮಳೆಯ ಪ್ರಮಾಣಗಳ ಅಧ್ಯಯನ ಮಾಡಿ ಸಿದ್ಧಾಂತ ರೂಪಿಸಿದ್ದಾನೆ.

ವರಾಹ ಮಿಹಿರನ ಸೂತ್ರಗಳನ್ನು ನಮ್ಮ ಬೀಳಗಿ ರೈತಾಪಿ ವರ್ಗ ಓದಿಕೊಂಡವರಲ್ಲ. ಆದರೆ ಅವರು ತಮಗೆ ಗೊತ್ತಿಲ್ಲದಂತೆಯೇ ಮುತ್ತಜ್ಜ, ಅಜ್ಜ, ಅಪ್ಪ, ಮಗ ಹೀಗೆ ಎಲ್ಲರೂ ಪರಂಪರಾಗತವಾಗಿ ಆ ಸೂತ್ರಗಳನ್ನು ಅನುಸರಿಸುತ್ತಲೇ ಬಂದಿದ್ದಾರೆ. ಅಮಾವಾಸ್ಯೆಯ ರಾತ್ರಿ ವಾತಾವರಣದಲ್ಲಿರುವ ತಾಪಮಾನ ವನ್ನು ಅವಲಂಬಿಸಿ ಎಲೆಗಳ ಮೇಲೆ ನೀರ ಹನಿಗಳ ಸಾಲು ಬೆವರುಗಟ್ಟುತ್ತವೆ. ಅದನ್ನೇ ಆಧರಿಸಿ ಮಳೆಯ ಲೆಕ್ಕಾಚಾರ ಹಾಕುವ ರೈತರು ಬೃಹತ್ ಸಂಹಿತದ ವರಾಹ ಮಿಹಿರ, ಕೃಷಿ ವಿಜ್ಞಾನಕ್ಕೆ ರೂಪ ನೀಡಿದ ಗರ್ಗ, ಕಾಶ್ಯಪಿ (ಕಾಶ್ಯಪೀಯ ಸೂತ್ರ), ಪರಾಶರ ಇವರೆಲ್ಲರನ್ನು ತಮಗೆ ಗೊತ್ತಿಲ್ಲದಂ ತೆಯೇ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದಂತೂ ಸತ್ಯ ಸಂಗತಿ.

‘ನಾವು ಸಣ್ಣವರಿದ್ದಾಗಿನಿಂದಲೂ ನೋಡುತ್ತ ಬಂದಿದ್ದೇವೆ. ಇದುವರೆಗೂ ಒಂದು ಚೂರು ಲೆಕ್ಕಾಚಾರ ತಪ್ಪಿಲ್ಲ’ ಎನ್ನುತ್ತಾರೆ ರೈತರಾದದ ಸಿದ್ದಪ್ಪ ಬೆಣ್ಣಿರೊಟ್ಟಿ, ಎಸ್.ಎನ್.ಪಾಟೀಲ.       
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT