ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣನ ಅಬ್ಬರ; ರೂ 31.54 ಲಕ್ಷ ಹಾನಿ

ಚಿತ್ರದುರ್ಗ ಜಿಲ್ಲೆಯಾದ್ಯಂತ ಭಾರೀ ಮಳೆ, ಹಿರಿಯೂರಿನಲ್ಲಿ ದಾಖಲೆ ನಿರ್ಮಾಣ
Last Updated 14 ಸೆಪ್ಟೆಂಬರ್ 2013, 5:32 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ಈಚೆಗೆ ಸುರಿದ ಭಾರಿ ಮಳೆಯಿಂದ ಮನೆ ಕುಸಿತ, ಬೆಳೆ ಹಾನಿ ಸೇರಿದಂತೆ ಸುಮಾರು ರೂ ೩೧.೫೪ ಲಕ್ಷ ನಷ್ಟವಾಗಿದ್ದು ಮನೆ ಕುಸಿತದಿಂದ ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ತಿಳಿಸಿದ್ದಾರೆ.

ಹಿರಿಯೂರು ಪಟ್ಟಣದಲ್ಲಿ ಹೆಚ್ಚಿನ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಅನೇಕ ಜನರು ನಿರ್ವಸತಿಗರಾಗಿದ್ದಾರೆ. ಇಲ್ಲಿ ತಾತ್ಕಾಲಿಕವಾಗಿ ೩ ಗಂಜಿ ಕೇಂದ್ರ ಸ್ಥಾಪಿಸಿ ೧,೨೦೦ ಜನರಿಗೆ ಆಶ್ರಯ ಕಲ್ಪಿಸಲಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಕಾಗಳಗೆರೆ ಗ್ರಾಮದ  ೭೦ ವರ್ಷದ ಹನುಮಂತಪ್ಪ ಎಂಬುವವರು ಮನೆಯ ಗೋಡೆ ಕುಸಿದು ಮೃತಪಟ್ಟಿದ್ದಾರೆ. ಉಳಿದಂತೆ ಹಿರಿಯೂರು ತಾಲ್ಲೂಕಿನಲ್ಲಿ ೬ ಮನೆಗಳು ಸಂಪೂರ್ಣ ಕುಸಿದಿವೆ. ೬೦ ಮನೆಗಳಿಗೆ ತೀವ್ರ ಹಾನಿಯಾಗಿದೆ. ಚಳ್ಳಕೆರೆಯಲ್ಲಿ ೧೭, ಹೊಳಲ್ಕೆರೆ ೪೧, ಹೊಸದುರ್ಗ ೨, ಹಿರಿಯೂರು ತಾಲ್ಲೂಕಿನಲ್ಲಿ ೧೭೨ ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಹಿರಿಯೂರು ಪಟ್ಟಣದ ಗೋಪಾಲಪುರ, ಸಿ.ಎಂ.ಬಡಾವಣೆ, ನಂಜಯ್ಯನಕೊಟ್ಟಿಗೆ, ಆಶ್ರಯ ಕಾಲೊನಿ, ವಾಗ್ದೇವಿ ಶಾಲೆ ಹಿಂಭಾಗದ ಪ್ರದೇಶದಲ್ಲಿ ಹೆಚ್ಚಿನ ಮಳೆಯಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಹಿರಿಯೂರು ತಾಲ್ಲೂಕಿನ 3೦ ಎಕರೆ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು ರೂ ೯.೮೦ ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ಕಾಗಳಗೆರೆಯಲ್ಲಿ ಮನೆ ಕುಸಿತದಿಂದ ಮೃತಪಟ್ಟ ಹನುಂತಪ್ಪನ ಕುಟುಂಬದವರಿಗೆ ಪರಿಹಾರ ನೀಡಲು ಕ್ರಮ ಕೈಗೊಂಡಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಹಿರಿಯೂರು ಪಟ್ಟಣದಲ್ಲಿ ಖುದ್ದು ಪರಿಶೀಲನೆ ನಡೆಸಲಾಗಿದ್ದು ಪರಿಹಾರ ಕಾರ್ಯ ಕೈಗೊಂಡು ಹಳ್ಳ, ತೊರೆ, ದೊಡ್ಡ ಚರಂಡಿಗಳ ಸಮೀಪದಲ್ಲಿನ ಜನರು ಮುಂಜಾಗ್ರತೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಪ್ರಚಾರ ಕೈಗೊಳ್ಳಲಾಗಿದೆ. ಬಿದ್ದ ಮಳೆಯ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಇಕ್ಕೇರಿ ತಿಳಿಸಿದ್ದಾರೆ.

ಹಿರಿಯೂರಿನಲ್ಲಿ ದಾಖಲೆ ಮಳೆ
ಹಿರಿಯೂರು:
ಪಟ್ಟಣದಲ್ಲಿ ಸೆ.11 ರಂದು 205.2 ಮಿಮೀ ಹಾಗೂ ಸೆ. 12 ರಂದು 62 ಮಿಮೀ ನಷ್ಟು ಮಳೆಯಾಗಿದ್ದು, ನೂರಾರು ಸಂಖ್ಯೆ ಜನರು ಸಂತ್ರಸ್ಥರಾಗಿದ್ದು, ಗಂಜಿಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ಸೆ.12ರ ಮಳೆವಿವರ: ಬಬ್ಬೂರು: 97ಮಿ.ಮೀ, ಇಕ್ಕನೂರು: 80, ಹಿರಿಯೂರು: 62, ಈಶ್ವರಗೆರೆ: 51.6, ಸೂಗೂರು: 48, ಜವನಗೊಂಡನಹಳ್ಳಿ: 45 ಮಿ.ಮೀ. ಮಳೆಯಾದ ವರದಿ ಬಂದಿದೆ.

ತಾಲೂಕಿನ ಮಾಳಗೊಂಡನಹಳ್ಳಿ, ಶ್ರವಣಗೆರೆ, ಕಾಟನಾಯಕನಹಳ್ಳಿ, ದಿಂಡಾವರ, ಮಾವಿನಮಡು ಗ್ರಾಮಗಳ ಕೆರೆಗಳು ಭರ್ತಿಯಾಗಿವೆ.

ಬೆನಕನಹಳ್ಳಿ, ವಿ.ಕೆ.ಗುಡ್ಡ, ಅಬ್ಬಿನಹೊಳೆ, ಸಕ್ಕರ, ಯರದಕಟ್ಟೆ, ಬಿದರಕೆರೆ ಗ್ರಾಮಗಳ ಕೆರೆಗಳು ತುಂಬಲು ಸ್ವಲ್ಪ ನೀರಿನ ಅಗತ್ಯವಿದೆ.

ಧರ್ಮಪುರ, ಹಲಗಲದ್ದಿ, ಕೋಡಿಹಳ್ಳಿ, ಇಕ್ಕನೂರು, ಬೇತೂರು, ತವಮದಿ, ಸೂಗೂರು ಕೆರೆಗಳ ಏರಿಗಳಲ್ಲಿ ಎಲ್ಲೆಂದರಲ್ಲಿ ರಂಧ್ರ(ಮಂಗೆ) ಬಿದ್ದು ಸೋರಲಾರಂಭಿಸಿದ್ದು,  ಅಪಾಯದಲ್ಲಿದೆ. ಮಳೆ ಸತತವಾಗಿ ಮುಂದುವರಿದು ಹೆಚ್ಚಿನ ನೀರು ಶೇಖರಣೆಯಾದರೆ ಅಪಾಯ ತಪ್ಪಿದ್ದಲ್ಲ. ಆದಾಗ್ಯೂ ಸಣ್ಣ ಮತ್ತು ದೊಡ್ಡ ನೀರಾವರಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದರು.

ಮಸ್ಕಲ್ ಗ್ರಾಮದ ಕೆರೆ ಅಂಗಳದಲ್ಲಿ ನಿರ್ಮಿಸಿರುವ ಸುಮಾರು 30 ಗುಡಿಸಲು, ಮನೆಗಳು ಜಲಾವೃತಗೊಂಡಿವೆ.

ತಾಲೂಕಿನ ಲಕ್ಕವ್ವನಹಳ್ಳಿ ಗ್ರಾಮದ ಬಿ.ವಿ.ಮಾಧವ, ಬಿ.ವಿ.ವೆಂಕಟಪ್ಪ, ಗಂಗಮ್ಮ ಅವರ ಹೊಲದಲ್ಲಿದ್ದ ಹತ್ತಿ, ಬಾಳೆ, ಈರುಳ್ಳಿ, ಅಡಿಕೆ, ತೆಂಗು ಬೆಳೆಗೆ ಅಪಾರ ಹಾನಿಯಾಗಿದೆ. ಕಸವನಹಳ್ಳಿ ಗ್ರಾಮದ ರೈತ ರಮೇಶ್ ಕುಮಾರ್ ಎಂಬವರ ಹೊಲದಲ್ಲಿ ಬೆಳೆದಿದ್ದ ಬೂದುಗುಂಬಳ  ಬೆಳೆ ಮಳೆಗೆ ಕೊಚ್ಚಿಹೋಗಿದೆ.

ತಾಲೂಕಿನಲ್ಲಿ ಗುರುವಾರ ಸುರಿದ ಮಳೆಯಿಂದಾಗಿ ಒಟ್ಟು ರೂ 15.10 ಲಕ್ಷ ಆಸ್ತಿ ಹಾನಿಯಾಗಿದೆ ಎಂದು ಕಂದಾಯ ಇಲಾಖೆ ಪ್ರಾಥಮಿಕ ಅಂದಾಜು ಪಟ್ಟಿ ತಿಳಿಸಿದೆ.

ಭೇಟಿ: ಹಿರಿಯೂರಿನ ಚಿಟುಗುಮಲ್ಲೆೀಶ್ವರಸ್ವಾಮಿ ಬಡಾವಣೆಗೆ ಶಾಸಕ ಡಿ.ಸುಧಾಕರ್ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು. ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ ಶುಕ್ರವಾರ ಪಟ್ಟಣದಲ್ಲಿ ನೆರೆಗೆ ಸಿಲುಕಿದ ಎಲ್ಲಾ ಬಡಾವಣೆಗಳಿಗೆ ಭೇಟಿ ನೀಡಿ ಜನರಿಂದ ಅಹವಾಲು ಸ್ವೀಕರಿಸಿದರು.

ಭಾರಿ ಮಳೆ: ಮನೆ ಕುಸಿತ, ಬೆಳೆಹಾನಿ
ಹೊಳಲ್ಕೆರೆ: ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಮೆಕ್ಕೆಜೋಳ, ಹತ್ತಿ ಮತ್ತಿತರ ಬೆಳೆಗಳಿಗೆ ಹಾನಿಯಾಗಿದ್ದು, ಕೆಲವು ಗ್ರಾಮಗಳಲ್ಲಿ ಮನೆಗಳು ಕುಸಿದು ಬಿದ್ದಿವೆ.

ತಾಲ್ಲೂಕಿನ ಗುಡ್ಡದ ಸಾಂತೇನಹಳ್ಳಿ, ತಿರುಮಲಾಪುರ ಸುತ್ತಮುತ್ತ ಸುರಿದ ಮಳೆಗೆ ಮೆಕ್ಕೆಜೋಳ ನೆಲಕಚ್ಚಿದೆ. ಈಗಾಗಲೇ ತೆನೆಯೊಡೆದ ಜೋಳ ನೆಲಕ್ಕೆ ಬಿದ್ದಿರುವುದರಿಂದ ರೈತರು ನಷ್ಟ ಅನುಭವಿಸುವಂತೆ ಆಗಿದೆ. ಈ ಭಾಗದಲ್ಲಿ ಹಳ್ಳಗಳಲ್ಲಿ ನೀರು ಹರಿದಿದ್ದು, ಹೊಲಗಳಲ್ಲಿ ನೀರು ನಿಂತಿದೆ.


ಈಚಘಟ್ಟ ಗ್ರಾಮದಲ್ಲಿ ಹತ್ತಾರು ಮನೆಗಳು ಕುಸಿದಿದ್ದು, ಭಾರಿ ನಷ್ಟ ಉಂಟಾಗಿದೆ. ಕೆಂಚಮ್ಮ ಎಂಬ ಮಹಿಳೆಯ ಮನೆ ಮಧ್ಯರಾತ್ರಿ ಬಿದ್ದಿದ್ದು, ತಕ್ಷಣವೇ ಮಹಿಳೆ ಹೊರಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮದ ಬೊಮ್ಮಣ್ಣ, ನಾಗಣ್ಣ ಎಂಬುವರ ಮನೆಗಳೂ ನೆಲಕಚ್ಚಿವೆ.

ಅತಿವೃಷ್ಟಿ ಭಯ: ತಾಲ್ಲೂಕಿನಲ್ಲಿ ಈ ಬಾರಿ ಮೆಕ್ಕೆಜೋಳ ಉತ್ತಮ ಇಳುವರಿ ಬರುವ ಲಕ್ಷಣ ಕಂಡುಬಂದಿದ್ದು, ಈಗಾಗಲೇ ಜೋಳ ತೆನೆ ಕಟ್ಟಿತ್ತು. ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಎಡಬಿಡದೆ ಸುರಿಯುತ್ತಿರುವುದರಿಂದ ಬೆಳೆ ಹಾಳಾಗುವ ಭಯ ರೈತರನ್ನು ಕಾಡುತ್ತಿದೆ.
 

ಧಾರಾಕಾರ ಮಳೆ: ದೇವಸ್ಥಾನ ಶಿಥಿಲ
ಧರ್ಮಪುರ
: ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಸಮೀಪದ ಬೆಟ್ಟಗೊಂಡನಹಳ್ಳಿ ಜೋಗಿಸಿದ್ದೇಶ್ವರಸ್ವಾಮಿ ದೇವಸ್ಥಾನದ ಗೋಡೆ ಮತ್ತು ಗರ್ಭದಗುಡಿ ಬಿದ್ದಿದೆ. ದೇವಸ್ಥಾನದಲ್ಲಿ ಯಾರೂ ಇಲ್ಲದ ಕಾರಣ  ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.

ಬೆಳೆ ಹಾನಿ: ಕಳೆದ ಮೂರು ದಿನಗಳಿಂದ ಬಿಡದೇ ಸುರಿಯುತ್ತಿರುವ ಮಳೆುಂದಾಗಿ ಅರಳೀಕೆರೆ, ಬೆಟ್ಟಗೊಂಡನಹಳ್ಳಿ, ಧರ್ಮಪುರ, ಸಕ್ಕರ, ಮುಂಗುಸವಳ್ಳಿಯಲ್ಲಿ ರೈತರ ಹೊಲಗಳಲ್ಲಿ ನೀರು ನುಗ್ಗಿ ರೇಷ್ಮೆ, ಈರುಳ್ಳಿ ಸಾಕಷ್ಟು ಪ್ರಮಾಣದಲ್ಲಿ ಕೊಚ್ಚಿ ಹೋಗಿದೆ.
ಧರ್ಮಪುರ ಹೋಬಳಿಯಲ್ಲಿ ಮಳೆಯ ಹಾನಿುಂದ ನಷ್ಟಕ್ಕೀಡಾದ ರೈತರ ಜಮೀನುಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT