ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣನ ಕೃಪೆ;ಜಿಲ್ಲೆಯಲ್ಲಿ ಬಿತ್ತನೆ ಚುರುಕು

Last Updated 13 ಅಕ್ಟೋಬರ್ 2012, 8:45 IST
ಅಕ್ಷರ ಗಾತ್ರ

ವಿಜಾಪುರ: ಸತತ ಮೂರು ಹಂಗಾಮು ಗಳಲ್ಲಿ ಕೈಕೊಟ್ಟಿದ್ದ ಮಳೆ ಈಗಷ್ಟೇ ಕೃಪೆ ತೋರಿದ್ದು, ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಭರದಿಂದ ಸಾಗಿದೆ. ಕಾಳು-ಕಣಿಕೆಯ ಕೊರತೆಯಿಂದ ಬಳಲಿದ ರೈತರು ಬಿಳಿ ಜೋಳವನ್ನು ಹೆಚ್ಚಾಗಿ ಬಿತ್ತುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ಬಿಳಿ ಜೋಳ ಮತ್ತೆ ಮುತ್ತಿನಂತಹ ಕಳೆ ಪಡೆಯಲಿದೆ!

ಜಿಲ್ಲೆಯಲ್ಲಿ ಬರದಿಂದ 2011ರ ಮುಂಗಾರಿನಲ್ಲಿ ರೂ.197 ಕೋಟಿ, ಹಿಂಗಾರಿನಲ್ಲಿ ರೂ.628 ಕೋಟಿ, ಪ್ರಸಕ್ತ ಮುಂಗಾರಿನಲ್ಲಿ ರೂ.870 ಕೋಟಿ ಹೀಗೆ ಮೂರು ಹಂಗಾಮುಗಳಲ್ಲಿ ಒಟ್ಟಾರೆ ರೂ.1695 ಕೋಟಿ ಮೊತ್ತದ ಕೃಷಿ ಬೆಳೆ ನಾಶವಾಗಿ ರೈತರ ಬದುಕನ್ನು ಬರಡಾ ಗಿಸಿತ್ತು. ಈ ಹಂಗಾಮು ಅವರಲ್ಲಿ ಬಹಳಷ್ಟು ನಿರೀಕ್ಷೆಗಳನ್ನು ಮೂಡಿಸಿದೆ.

3.21 ಲಕ್ಷ ರೈತರಿದ್ದು, ಹಿಂಗಾರಿ ಹಂಗಾಮಿನಲ್ಲಿ ಜಿಲ್ಲೆಯ ಸಾಮಾನ್ಯ ಕೃಷಿ ಕ್ಷೇತ್ರ 5.25 ಹೆಕ್ಟೇರ್. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಆಗದೇ ಉಳಿದ ಭೂಮಿಯೂ ಸೇರಿದಂತೆ ಈ ಹಂಗಾಮಿನಲ್ಲಿ 6.23 ಲಕ್ಷ ಹೆಕ್ಟೇರ್ ಬಿತ್ತನೆಯ ಗುರಿ ಹಾಕಿಕೊಳ್ಳಲಾಗಿದೆ.

ಅವಧಿಗೆ ಸರಿಯಾಗಿ ಮಳೆ ಆಗಿದ್ದರೆ ಈ ವರೆಗೆ ಶೇ.70ರಷ್ಟು ಬಿತ್ತನೆ ಆಗಬೇಕಿತ್ತು. ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಆಗದ ಕಾರಣ ಈ ವರೆಗೆ ಕೇವಲ ಶೇ.19ರಷ್ಟು ಬಿತ್ತನೆ ಆಗಿದೆ. ಈ ತಿಂಗಳ ಮೊದಲ ವಾರದಲ್ಲಿ ಉತ್ತಮ ಮಳೆ ಬಿದ್ದಿದ್ದು, ಬಿತ್ತನೆ ಚುರುಕು ಗೊಂಡಿದೆ.

ಸೂರ್ಯಕಾಂತಿ 83 ಸಾವಿರ ಹೆಕ್ಟೇರ್, ಬಿಳಿ ಜೋಳ 2.36 ಲಕ್ಷ ಹೆಕ್ಟೇರ್, ಕಡಲೆ 2.07 ಹೆಕ್ಟೇರ್ ಹಾಗೂ ಗೋಧಿ 66 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿದೆ. ಜೋಳ 2.83 ಲಕ್ಷ ಟನ್, ಗೋಧಿ 73,150 ಟನ್, ಕಡಲೆ 1.86 ಲಕ್ಷ ಟನ್ ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ.

`ಸೂರ್ಯಕಾಂತಿಗೆ ದರ ಇಲ್ಲ. ರೋಗದ ಬಾಧೆ ಹೆಚ್ಚಿದೆ. ಕಳೆದ ವರ್ಷ ಜೋಳದ ಬೆಳೆ ಕೈಕೊಟ್ಟಿದ್ದರಿಂದ ಜೋಳ- ಕಣಿಕೆಗಾಗಿ ರೈತರು ಪರದಾಡಿದರು. ಹೀಗಾಗಿ ಈ ವರ್ಷ ಬಿಳಿ ಜೋಳದ ಬಿತ್ತನೆಗೆ ಹೆಚ್ಚಿನ ಒತ್ತು ನೀಡುತ್ತಿದಾರೆ. ಈ ವರೆಗೆ 67 ಸಾವಿರ ಹೆಕ್ಟೇರ್ (ಶೇ.28)ನಲ್ಲಿ ಬಿಳಿ ಜೋಳ ಬಿತ್ತನೆ ಮಾಡಿದ್ದಾರೆ~ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

`ಕಳೆದ ವರ್ಷ ಹಿಂಗಾರಿ ಹಂಗಾಮಿ ನಲ್ಲಿ ಕೇವಲ ಶೇ.60ರಷ್ಟು (ಈ ಅವಧಿಯಲ್ಲಿ ಶೇ.13ರಷ್ಟು) ಕ್ಷೇತ್ರದಲ್ಲಿ ಬಿತ್ತನೆ ಆಗಿತ್ತು. ಈ ವರ್ಷ ಶೇ.90ಕ್ಕೂ ಅಧಿಕ ಪ್ರದೇಶದಲ್ಲಿ ಬಿತ್ತನೆ ಆಗಲಿದೆ. ಜೋಳ ಬಿತ್ತನೆಗೆ ಇನ್ನೂ ಒಂದು ತಿಂಗಳು ಕಾಲಾವಕಾಶ ಇದೆ. ರೈತರು ಧೈರ್ಯ ಮಾಡಿ ಈಗಾಗಲೆ ಬಿತ್ತಿರುವ ಬೆಳೆ ಈಗಿನ ಮಳೆಯಿಂದ ಜೀವ ಪಡೆದುಕೊಂಡಿವೆ.

ಮುಂಗಾರಿ ಹಂಗಾಮಿನಲ್ಲಿ ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳಲ್ಲಿ ಬಿತ್ತಿರುವ ತೊಗರಿ ಈಗ ಸುರಿದಿರುವ ಮಳೆಯಿಂದ ನಳನಳಿ ಸುತ್ತಿದ್ದು, ಇಳುವರಿ ಚೆನ್ನಾಗಿ ಬರಲಿದೆ~ ಎಂಬುದು ಅವರ ನಿರೀಕ್ಷೆ.

`ಕಳೆದ ವರ್ಷ ಒಣ ಮಣ್ಣಿನಲ್ಲಿಯೇ ಜೋಳ ಬಿತ್ತಿದ್ದೆವು. ಈಗ ಹಸಿ ಮಳೆ ಆಗಿದ್ದು, ಎಳ್ಳ ಅಮಾವಾಸ್ಯೆಯ ಸಮಯ ದಲ್ಲಿ ಮತ್ತಷ್ಟು ಮಳೆ ಆದರೆ ಈ ವರ್ಷ ಜೋಳದ ಉತ್ತಮ ಇಳುವರಿ ಬರಲಿದೆ~ ಎಂದು ತಾಲ್ಲೂಕಿನ ಅತಾಲಟ್ಟಿಯಲ್ಲಿ ಜೋಳದ ಬಿತ್ತನೆಯಲ್ಲಿ ತೊಡಗಿದ್ದ ರೈತ ರಮೇಶ ಕೃಷ್ಣಾ ಪವಾರ ಹೇಳಿದರು.

`ಜೋಳ ಬಿತ್ತನೆಗೆ ಎಕರೆಗೆ ಕನಿಷ್ಠ 5 ಸಾವಿರ ರೂಪಾಯಿ ಖರ್ಚಾಗುತ್ತಿದೆ. ಎತ್ತುಗಳಿಗೇ ದಿನಕ್ಕೆ ಸಾವಿರ ರೂಪಾಯಿ ಬಾಡಿಗೆ ಕೊಡುತ್ತಿದ್ದೇವೆ. ಗೊಬ್ಬರ ಮಿಶ್ರಣ ಮಾಡಲು ಕೂಲಿಯವರಿಗೆ ನಿತ್ಯ ತಲಾ ರೂ.300 ನೀಡುತ್ತಿದ್ದೇವೆ~ ಎಂದು ರೈತ ರಾಜು ಹೇಳಿದರು.

`ಯೂರಿಯಾ ಗೊಬ್ಬರದ ಕೊರತೆ ಇತ್ತು. 5 ಸಾವಿರ ಟನ್ ಯೂರಿಯಾ ಗೊಬ್ಬರ ದಾಸ್ತಾನು ಮಾಡಿಕೊಳ್ಳ ಲಾಗಿದೆ. ಈಗ ಬೀಜ-ಗೊಬ್ಬರದ ಕೊರತೆ ಇಲ್ಲ~ ಎಂದು ಅಧಿಕಾರಿಗಳ ವಿವರಣೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT