ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತಮಾನದ ಬಾಗಿಲು ಸಂದ ಸಮಯದ ಹಿತ್ತಿಲು

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರೈಟ್ ಲೈನ್ ಆರ್ಟ್ ಗ್ಯಾಲರಿ ಸಹಯೋಗದಲ್ಲಿ ಅಲಿಲಾ ಬೆಂಗಳೂರು ಖ್ಯಾತ ಕಲಾವಿದ ಸುದೀಪ್ ರಾಯ್ ಅವರ ಚಿತ್ರಕಲಾಕೃತಿಗಳ ಪ್ರದರ್ಶನ ಏರ್ಪಡಿಸಿದೆ. ಪ್ರದರ್ಶನದ ಹೆಸರು `ಟೈಂ ಪಾಸ್ಟ್ ಈಸ್ ಪ್ರೆಸೆಂಟ್~. ಇವರ ಈ ಕಲಾಕೃತಿಗಳು ಖ್ಯಾತ ಇಂಗ್ಲಿಷ್ ಕವಿ ಟಿ.ಎಸ್.ಎಲಿಯೆಟ್ ಕಾವ್ಯದ ನಾಲ್ಕು ಸಾಲುಗಳಿಂದ ಪ್ರೇರಿತಗೊಂಡಂತಹವು.

`ಮಾತು ಆಡಿದರೆ ಹೋಯಿತು, ಸಮಯ ಕಳೆದರೆ ಹೋಯಿತು~ ಎನ್ನುವ ಸಾಲಿದೆ. ಸಮಯದ ಬೆಲೆ ತಿಳಿದವರಿಗೆ ಗೊತ್ತು. ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬ ಮಾತಿನಂತೆ ಒಮ್ಮೆ ಸರಿದು ಹೋದ ಕಾಲವನ್ನು ಮತ್ತೆ ಪಡೆದುಕೊಳ್ಳಲು ಸಾಧ್ಯವಿಲ್ಲ.

ಅದು ಇತಿಹಾಸದ ಪುಟ ಸೇರಿಕೊಂಡುಬಿಡುತ್ತದೆ. ಸಂದ ಕಾಲ ನೆನಪಾಗಿ ಮಾತ್ರ ಉಳಿಯುತ್ತದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ವರ್ತಮಾನ ಅತ್ಯಂತ ಮಹತ್ವದ್ದು, ಅದು ಸದುಪಯೋಗಗೊಳ್ಳಬೇಕು. ಇಲ್ಲದಿದ್ದರೆ ಹೋದಕಾಲ ಮರಳಿ ಸಿಗುವುದಿಲ್ಲ.

ಕಲಾವಿದ ಸುದೀಪ್ ರಾಯ್ ಅವರ ಕಲಾ ಪಯಣವನ್ನು ಸಮಗ್ರವಾಗಿ ಅವಲೋಕಿಸಿದಾಗ ಅವರ ಎಲ್ಲ ಕಲಾಕೃತಿಗಳು ವರ್ತಮಾನ ಹಾಗೂ ಭೂತಕಾಲಕ್ಕೆ ಕನ್ನಡಿ ಹಿಡಿಯುತ್ತವೆ. ಇವರ ಕಲಾಕೃತಿಗಳೆಲ್ಲವೂ ಕಾಲದ ಹಿನ್ನೆಲೆ ಹಾಗೂ ವರ್ತಮಾನದ ಅನುಸಂಧಾನ ಮಾಡುತ್ತವೆ.
 
ಈ ವಸ್ತುವಿಷಯವನ್ನು ಅವರು ಅಸಂಖ್ಯಾತ ವಿಧಾನದಲ್ಲಿ ಅನಾವರಣಗೊಳಿಸಿದ್ದಾರೆ. ಇವರು ಕಾಲದ ಮೇಲೆ ಕುಳಿತೇ ಕಲಾಸವಾರಿ ಮಾಡಿದ್ದಾರೆ. ಇವರು ತಮ್ಮ ಕಲಾಕೃತಿಗಳ ರಚನೆಗೆ ಬಳಸಿರುವ ತಂತ್ರ ಹಾಗೂ ನೂತನ ಪರಿಕಲ್ಪನೆ ನೋಡುಗರಲ್ಲಿ ಸೋಜಿಗ ಹುಟ್ಟಿಸುತ್ತದೆ.

ಈ ಪ್ರದರ್ಶನವು ಮೂರು ದಶಕದ ಅವರ ಕಲಾ ಪ್ರಯಾಣದ ಮಿನುಗು ನೋಟವನ್ನು ಕಟ್ಟಿಕೊಡುತ್ತದೆ. ಸುದೀಪ್ ಅವರ ಕಲಾಕೃತಿಗಳು ಅವರ ಲಹರಿ ಹಾಗೂ ಅನ್ವೇಷಣೆಯ ಹಪಹಪಿಯಿಂದ ವಿಭಿನ್ನ ಆಯಾಮಗಳಲ್ಲಿ ಅಭಿವ್ಯಕ್ತಗೊಂಡಂಥವು.

ಕಲಾಕೃತಿಗಳಲ್ಲಿ ಅವರ ಲಹರಿಗಳು ಝರಿಯಾಗಿ ಹರಿದಿವೆ. ಅನ್ವೇಷಣೆಯೆಂಬ ಬಿಸಿಲುಕುದುರೆಯನ್ನು ಏರಿ ಹೊರಟಿರುವ ಕಲಾವಿದ ಈತನಾದ್ದರಿಂದ ಅವರ ಕಲೆಯಲ್ಲಿ ಅಮೂರ್ತ ಹಾಗೂ ಜನರ ವ್ಯಾವಹಾರಿಕ ಮನೋವೃತ್ತಿ ನಿಚ್ಚಳವಾಗಿ ಅಭಿವ್ಯಕ್ತಿಗೊಂಡಿದೆ.

ಇವರ ಕಲಾಕೃತಿಗಳಲ್ಲಿ ಸಾಮಾನ್ಯ ಮನುಷ್ಯನ ಜೀವನಚಕ್ರ ಅನಾವರಣಗೊಂಡಿದೆ. ಇವರ ಕಲಾಶಕ್ತಿ ಇರುವುದು ಜನಸಾಮಾನ್ಯರ ದಿನನಿತ್ಯದ ಬದುಕನ್ನು ಸಾದೃಶ್ಯವಾಗಿ ಕಟ್ಟಿಕೊಟ್ಟಿರುವುದರಲ್ಲಿ. ಇವರ ಕಲಾಕೃತಿಗಳ ರಚನೆಗೆ ಜನಸಾಮಾನ್ಯರ ಬದುಕೇ  ಪ್ರೇರಣೆಯಂತೆ.

ತನ್ನ ಸುತ್ತ ಮುತ್ತ ಇರುವ ಪರಿಸರ, ಸಾಮಾಜಿಕ ಜೀವನವನ್ನು ಬೆರಗುಗಣ್ಣಿನಿಂದ ನೋಡುವ ಹಾಗೂ ಅವುಗಳಿಗೆ ವಿಶ್ಲೇಷಣಾ ಮನೋಭಾವದಿಂದ ಬಣ್ಣ ತುಂಬುವ ಇವರ ಈ ಶಕ್ತಿಯಿಂದಲೇ ಇಂತಹ ಅಪೂರ್ವ ಕಲಾಕೃತಿಗಳು ಮೈದಳೆದಿವೆ.

ಕಲಾಕೃತಿಗಳ ರಚನೆಗೆ ಸುದೀಪ್ ತೈಲ ಹಾಗೂ ಜಲವರ್ಣ ಬಳಸಿದ್ದಾರೆ. ನೆರಳು ಹಾಗೂ ಬೆಳಕಿನ ಸಂಯೋಜನೆಯನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಇದರಿಂದಾಗಿ ಕಲಾಕೃತಿಗಳಿಗೆ ಮರುಗಿನ ಜೊತೆಗೆ ಸಹಜತೆಯ ಲೇಪವೂ ದಕ್ಕಿದೆ.

ಸುದೀಪ್ ರಾಯ್ ಕೋಲ್ಕತ್ತಾದ ಸರ್ಕಾರಿ ಕಲಾ ಕಾಲೇಜಿನಲ್ಲಿ  ಪದವಿ ಪಡೆದವರು. ಇವರ ಕಲಾಪ್ರತಿಭೆಗೆ ಅನೇಕ ಕಲಾ ಪ್ರಶಸ್ತಿಗಳು ಲಭಿಸಿವೆ. 1979ರಲ್ಲಿ ಕೋಲ್ಕತ್ತಾ ಸಾಹಿತ್ಯ ಪರಿಷತ್ತು ಇವರಿಗೆ ಚಿನ್ನದ ಪದಕ ನೀಡಿ ಗೌರವಿಸಿದೆ.

ಇವರು ದೇಶದ ಹಲವೆಡೆ ಏಕವ್ಯಕ್ತಿ ಹಾಗೂ ಸಮೂಹ ಪ್ರದರ್ಶನ ನೀಡಿ ಕಲಾ ರಸಿಕರಿಂದ ಸೈ ಎನಿಸಿಕೊಂಡಿದ್ದಾರೆ. ನಗರದಲ್ಲಿ ಇವರ ಕಲಾಕೃತಿಗಳ ಪ್ರದರ್ಶನ ಫೆಬ್ರುವರಿ 11ರವರೆಗೆ ನಡೆಯಲಿದೆ.
ಸ್ಥಳ: ಅಲಿಲಾ ಬೆಂಗಳೂರು, ವರ್ತೂರು ಮುಖ್ಯರಸ್ತೆ, ವೈಟ್‌ಫೀಲ್ಡ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT