ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುವಿಹಾರಕ್ಕೆ ಹೋಗಿ, ನಾಯಿ ಕಾಟ ನೋಡಿ

Last Updated 6 ಜುಲೈ 2012, 19:40 IST
ಅಕ್ಷರ ಗಾತ್ರ

ಬೆಂಗಳೂರು: `ಬೆಳಿಗ್ಗೆ ವಾಯುವಿಹಾರಕ್ಕೆ ಕಬ್ಬನ್ ಉದ್ಯಾನಕ್ಕೆ ಒಮ್ಮೆ ಹೋಗಿ. ನಾಯಿಗಳ ಕಾಟ ಎಷ್ಟು ಇದೆ ಎಂಬುದು ಗೊತ್ತಾಗುತ್ತದೆ. ವೃದ್ಧರು ನಡೆದುಕೊಂಡು ಹೋಗುತ್ತಿದ್ದರಂತೂ ಮುಗಿದೇ ಹೋಯ್ತು. ಎಷ್ಟು ಶ್ವಾನಗಳು ಅವರ ಬೆನ್ನತ್ತಿ ಹೋಗುತ್ತವೆ ಎನ್ನುವುದನ್ನು ಸ್ವತಃ ಹೋಗಿ ನೋಡಿ~ ಎಂದು ಪ್ರಾಣಿ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಸರ್ಕಾರೇತರ ಸಂಸ್ಥೆಗಳಿಗೆ ಹೈಕೋರ್ಟ್ ತಾಕೀತು ಮಾಡಿತು.

`ಶ್ವಾನಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ಅಂಕಿ ಅಂಶ ನೀಡುತ್ತೀರಿ. ಆದರೆ ವಾಸ್ತವದಲ್ಲಿ ಅವೆಲ್ಲ ಸುಳ್ಳು ಎಂದು ಕಾಣಿಸುತ್ತದೆ. ನಾಯಿಗಳಿಗೆ ಪ್ರಚೋದನೆ ಮಾಡಿದರೆ ಮಾತ್ರ ಅವು ಕಚ್ಚುತ್ತವೆ ಎನ್ನುವುದು ನಿಮ್ಮ ಹೇಳಿಕೆ. ಇದನ್ನು ನೋಡಿದರೆ `ನಮ್ಮನ್ನು ದಯವಿಟ್ಟು ಕಚ್ಚಬೇಡ~ ಎಂದು ನಾಯಿಗಳಿಗೆ ಮನವಿ ಸಲ್ಲಿಸುತ್ತಾ ಹೋಗಬೇಕೆ~ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡಿತು.

`ಸರ್ಕಾರೇತರ ಸಂಸ್ಥೆಗಳು ಎಂದರೆ ಮನುಷ್ಯರ ಬದಲು ಪ್ರಾಣಿಗಳ ಮೇಲಷ್ಟೇ ಹೆಚ್ಚಿನ ಕಾಳಜಿ ತೋರುವ ಸಂಸ್ಥೆಗಳು ಎನ್ನುವ ಭಾವನೆ ಜನರಲ್ಲಿ ಮೂಡಿದೆ. ಇದನ್ನು ಮೊದಲು ಹೋಗಲಾಡಿಸಿ. ಜನರ ಜೀವ ಮುಖ್ಯ~ ಎಂದು ನ್ಯಾಯಮೂರ್ತಿಗಳು ಹೇಳಿದರು.

ನಗರದಲ್ಲಿ ಹೆಚ್ಚಿರುವ ಬೀದಿನಾಯಿ ಹಾವಳಿ ತಪ್ಪಿಸಲು ಸೂಕ್ತ ಕ್ರಮಕ್ಕೆ ಆದೇಶಿಸುವಂತೆ ಕೋರಿ, ನಾಯಿ ದಾಳಿಗೆ ತುತ್ತಾಗಿರುವ ಯಲಹಂಕದ ಐದು ವರ್ಷದ ಬಾಲಕ ಜಿಷ್ಣು ಹಾಗೂ ಆತನ ಪೋಷಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ.

ಇವುಗಳ ಹಾವಳಿಗೆ ಕ್ರಮ ತೆಗೆದುಕೊಂಡಿರುವುದಾಗಿ ಸಂಸ್ಥೆಗಳ ಪರ ವಕೀಲರು ಹೇಳಿದ ಕಾರಣ, ವಸ್ತುಸ್ಥಿತಿ ತಿಳಿಸುವಂತೆ ನ್ಯಾಯಮೂರ್ತಿಗಳು ಸಂಸ್ಥೆಗೆ ನಿರ್ದೇಶಿಸಿದ್ದಾರೆ.

ರೇಬಿಸ್ ರೋಗಕ್ಕೆ ತುತ್ತಾದ ನಾಯಿಗಳ ಮೇಲೆ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತೀರಿ ಎಂದು ನ್ಯಾಯಮೂರ್ತಿಗಳು ಸಂಸ್ಥೆ ಪರ ವಕೀಲರನ್ನು ಪ್ರಶ್ನಿಸಿದರು. ಅದಕ್ಕೆ ಅವರು, ಮೊದಲು ಅದು ರೋಗಕ್ಕೆ ತುತ್ತಾಗಿದೆಯೋ, ಇಲ್ಲವೋ ಎಂಬ ಬಗ್ಗೆ ಇಬ್ಬರು ವೈದ್ಯರು ಪರೀಕ್ಷೆ ಮಾಡುತ್ತಾರೆ. ರೋಗ ಸಾಬೀತಾದರೆ, ನಾಯಿ ಸಹಜ ರೀತಿಯಲ್ಲಿ ಸಾಯುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ~ ಎಂದರು. ಅದಕ್ಕೆ ನ್ಯಾ.ಸೇನ್ `ಮನುಷ್ಯರು ರೋಗಕ್ಕೆ ತುತ್ತಾದರೆ ನೋಡಿಕೊಳ್ಳಲು ಒಬ್ಬರೂ ವೈದ್ಯರು ಸಿಗುವುದಿಲ್ಲ. ರೋಗಕ್ಕೆ ತುತ್ತಾಗಿರುವ ಒಂದು ನಾಯಿಗೆ ಇಬ್ಬರು ವೈದ್ಯರೆ, ಏನಿದು~ ಎಂದು ಹಾಸ್ಯದ ರೂಪದಲ್ಲಿ ಹೇಳಿದರು.

ನಾಯಿ ದಾಳಿಗೆ ತುತ್ತಾದವರಿಗೆ ಸರ್ಕಾರದ `ಆರೋಗ್ಯ ಕವಚ~ ಯೋಜನೆ ಅಡಿ ಪರಿಹಾರ ನೀಡಲಾಗುವುದು ಎಂದು ಇದೇ ವೇಳೆ ಸರ್ಕಾರದ ಪರ ವಕೀಲ ರವೀಂದ್ರ ಕೊಲ್ಲೆ ವಿವರಿಸಿದರು. ವಿಚಾರಣೆಯನ್ನು ಮುಂದೂಡಲಾಯಿತು.

`ಪ್ರತಿವಾದಿಯಾಗಿ ರಾಜ್ಯಪಾಲ~
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಂಸದ ಧರ್ಮಸಿಂಗ್ ವಿರುದ್ಧ ಸಲ್ಲಿಸಿರುವ ಅರ್ಜಿಯಲ್ಲಿ ರಾಜ್ಯಪಾಲರನ್ನು ಪ್ರತಿವಾದಿಯಾಗಿಸಿರುವುದನ್ನು ಹೈಕೋರ್ಟ್ ಗುರುವಾರ ಊರ್ಜಿತಗೊಳಿಸಿದೆ.

ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ ಎಂಬ ಬಗ್ಗೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ ನೀಡಿರುವ ವರದಿಯ ಅನ್ವಯ ಸೂಕ್ತ ಕ್ರಮಕ್ಕೆ ಆದೇಶಿಸುವಂತೆ ಕೋರಿ ವಕೀಲ ಡಿ.ನಟೇಶ್ ಸಲ್ಲಿಸಿರುವ ಅರ್ಜಿ ಇದಾಗಿದೆ.

ಧರ್ಮಸಿಂಗ್ ಅವರು ಅಕ್ರಮ ಎಸಗಿದ್ದಾರೆ ಎನ್ನಲಾದ ಸುಮಾರು 24 ಕೋಟಿ ರೂಪಾಯಿಗಳನ್ನು ಅವರಿಂದ ವಸೂಲು ಮಾಡುವ ಅಗತ್ಯ ಇಲ್ಲ ಎಂದು  2009ರಲ್ಲಿ ಅಂದಿನ ರಾಜ್ಯಪಾಲರು (ರಾಮೇಶ್ವರ ಠಾಕೂರ್) ಸೂಚಿಸಿದ್ದರು. ಈ ಕಾರಣದಿಂದ ರಾಜ್ಯಪಾಲರನ್ನೂ ನಟೇಶ್ ಅವರು ಅರ್ಜಿಯಲ್ಲಿ ಪ್ರತಿವಾದಿಯಾಗಿಸಿದ್ದಾರೆ. ಇದು ಸರಿಯಲ್ಲ ಎಂಬ ಧರ್ಮಸಿಂಗ್ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಜಾ ಮಾಡಿದೆ.

ಅವರನ್ನು ಪ್ರತಿವಾದಿಯಾಗಿಸಬಹುದು ಎಂದು ಅಡ್ವೊಕೇಟ್ ಜನರಲ್ ಕೂಡ ವಾದಿಸಿದರು. ಈ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದ್ದಾರೆ. ಆದರೆ ನ್ಯಾಯಮೂರ್ತಿಗಳು ಆದೇಶದಲ್ಲಿ, `ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದವರು. ಆದರೆ ಈಗ ಆಡಳಿತದಲ್ಲಿ ಇರುವ ಪಕ್ಷಕ್ಕೆ ಅವರು ಸೇರಿದವರಲ್ಲ. ಒಂದು ವೇಳೆ ಆಡಳಿತದಲ್ಲಿ ಇರುವ ಪಕ್ಷಕ್ಕೆ ಸೇರಿರುವ ಮುಖ್ಯಮಂತ್ರಿಗಳು ಇದೇ ರೀತಿ ಆರೋಪಗಳಲ್ಲಿ ಸಿಲುಕಿದರೂ ಅಡ್ವೊಕೇಟ್ ಜನರಲ್ ಅವರು ಇದೇ ರೀತಿ ವಾದ ಮಂಡಿಸುತ್ತಾರೆಯೇ~ ಎಂದು ಪ್ರಶ್ನಿಸಿದ್ದಾರೆ. ನಟೇಶ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮುಂದುರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT