ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ವಾರ್ಡ್ ಹಬ್ಬಕ್ಕೆ' ನಾಗರಿಕರ ದಂಡು

ನಗರ ಸಂಚಾರ
Last Updated 24 ಡಿಸೆಂಬರ್ 2012, 5:57 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ಜನರು ಹೊಯ್ಸಳೋತ್ಸವ ಮರೆತು ವರ್ಷಗಳೇ ಆಗಿವೆ. ನಗರಸಭೆ ಹಿಂದೆ ಅದ್ದೂರಿಯಾಗಿ ನಡೆಸುತ್ತಿದ್ದ ವಸ್ತು ಪ್ರದರ್ಶನ ವರ್ಷದಿಂದ ವರ್ಷಕ್ಕೆ ವೈಭವ ಕಳೆದುಕೊಳ್ಳುತ್ತ ಬಂದು ಕಳೆದ ವರ್ಷದಿಂದ ನಿಂತು ಹೋಗಿದೆ. ರಜಾ ದಿನದಂದು ಮಕ್ಕಳೊಂದಿಗೆ ಹೋಗಿ ಸುಮ್ಮನೆ ಒಂದು ಸುತ್ತು ಹಾಕಿ ಬರೋಣವೆಂದರೆ ಒಳ್ಳೆ ಜಾಗವಿಲ್ಲ. ಪಾರ್ಕ್‌ಗಳೆಲ್ಲವೂ ಸ್ಮಶಾನದ ಕಳೆಹೊತ್ತು ಕುಳಿತಿವೆ...  ಇಂಥ ಸ್ಥಿತಿಯಲ್ಲಿದ್ದ ಹಾಸನದ ಜನರನ್ನು ತನ್ನತ್ತ ಸೆಳೆದುಕೊಂಡು ನಾಲ್ಕು ಗೋಡೆಯೊಳಗೆ ಕಟ್ಟಿ ಹಾಕಿದ್ದು ಟಿ.ವಿ. ಎಂಬ ಮೂರ್ಖರ ಪೆಟ್ಟಿಗೆ.

ಇಡೀದಿನ ಟಿ.ವಿ ಮುಂದೆ ಕುಳಿತ ಪರಿಣಾಮ ನಮ್ಮ ಸಂಬಂಧಗಳು, ಆತ್ಮೀಯತೆಯ ಕಟ್ಟು ಶಿಥಿಲವಾಗಿ ನಗರದ ಜನರಲ್ಲಿ ಒಂದು ಚಡಪಡಿಕೆ ಆರಂಭವಾಗಿದೆ. ಇದನ್ನು ಅನೇಕ ಮಂದಿ ವಿವಿಧ ವೇದಿಕೆಗಳಲ್ಲಿ ವ್ಯಕ್ತಪಡಿಸುತ್ತ ಬಂದಿದ್ದಾರೆ. ಮಾನವೀಯ ಸಂಬಂಧಗಳನ್ನು ಬೆಸೆಯಲು ಹಬ್ಬ ಹರಿದಿನಗಳಿಗಿಂತ ಉತ್ತಮ ಮಾಧ್ಯಮ ಇಲ್ಲ. ದೃಶ್ಯ ಮಾಧ್ಯಮವೋ ಅಥವಾ ಇನ್ಯಾವುದೋ ಸೆಳೆತಗಳಿಂದ ಎಲ್ಲರೂ ಒಂದೆಡೆ ಸೇರುವಂಥ ಹಬ್ಬಗಳೇ ಕಾಣೆಯಾಗಿವೆ. ಆದರೆ ಹಾಸನದಲ್ಲಿ ಎಲ್ಲರನ್ನೂ ಒಂದೆಡೆ ಸೇರಿಸುವಂಥ ವಿನೂತನ ಪ್ರಯತ್ನ ಇಲ್ಲಿನ ಮೂರನೇ ವಾರ್ಡ್‌ನಲ್ಲಿ ನಡೆದಿದೆ.

ಸುರೇಶ್ ಕುಮಾರ್ ಪ್ರತಿನಿಧಿಸುವ ಈ ವಾರ್ಡ್ ಹಲವು ದೃಷ್ಟಿಯಿಂದ ಗಮನ ಸೆಳೆಯುತ್ತ ಬಂದಿದೆ. `ಪ್ರಭಾವಿ'ಗಳ ಪ್ರೋತ್ಸಾಹ ಇಲ್ಲದಿದ್ದರೂ ಇಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಕೆಲವು ಯೋಜನೆಗಳನ್ನು `ಪ್ರಭಾವಿ'ಗಳು ಮೊಳಕೆಯಲ್ಲೇ ಚಿವುಟಿದ್ದೂ ಇದೆ. ಈ ಎಲ್ಲ ಸಮಸ್ಯೆಗಳ ಮಧ್ಯದಲ್ಲೂ ಮೂರನೇ ವಾರ್ಡ್ ನಗರದ ಅತಿ ಸುಂದರ, ಸ್ವಚ್ಛ ವಾರ್ಡ್ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.

ವಾರ್ಡ್‌ನ ವ್ಯಾಪ್ತಿಯಲ್ಲಿ ಬರುವ ಶಂಕರೀಪುರಂ ಹಾಗೂ ಕುವೆಂಪುನಗರದ ಕೆಲವು ಹಿರಿಯರು ಮತ್ತು ಯುವಕರು ಸೇರಿಕೊಂಡು `ಶಂಕರಿಪುರಂ ಕುವೆಂಪುನಗರ ಕ್ಷೇಮಾಭಿವೃದ್ಧಿ ಸಂಘ ಸ್ಥಾಪಿಸಿದ್ದರು. ವಾರ್ಡ್‌ನ ಹಲವು ಯೋಜನೆಗಳಿಗೆ ಈ ಸಂಘ ಬೆನ್ನೆಲುಬಾಗಿ ನಿಂತಿದೆ. ವಾರ್ಡ್‌ನ ಎಲ್ಲ ಸದಸ್ಯರನ್ನೂ ಒಂದೆಡೆ ಸೇರಿಸಬೇಕು, ಒಬ್ಬರಿಗೊಬ್ಬರು ಪರಿಚಯವಾಗಬೇಕು.

ಎಲ್ಲ ಮಕ್ಕಳೂ ಒಂದೆಡೆ ಕಲೆತು ಒಂದು ಹಬ್ಬ ಆಚರಿಸಬೇಕು ಎಂಬ ಒಂದು ಯೋಜನೆ ಸಂಘದ ಸದಸ್ಯರಿಗೆ ಹೊಳೆ ದದ್ದೇ ತಡ, ಅದನ್ನು ಕಾರ್ಯಗತ ಮಾಡಲು ಸುರೇಶ್ ಸೇರಿದಂತೆ ಒಂದಿಷ್ಟು ಮಂದಿ ಮುಂದಾದರು. ಸಂಘದ ಸದಸ್ಯರೆಲ್ಲರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದೇಣಿಗೆ ನೀಡಿದರು. ವಾರ್ಡ್ ವ್ಯಾಪ್ತಿಯಲ್ಲಿರುವ ಕೆಲವು ಶ್ರೀಮಂತರು ದೇಣಿಗೆ ನೀಡಿದರು. ನೋಡನೋಡುತ್ತಿದ್ದಂತೆ ಒಂದು ಕಾರ್ಯಕ್ರಮ ಸಿದ್ಧವಾಗಿಯೇ ಬಿಟ್ಟತು.

ಮೂರು ದಿನಗಳ `ವಾರ್ಡ್ ಹಬ್ಬಕ್ಕೆ' ಭಾನುವಾರ ಮುಂಜಾನೆ ಉದ್ಯಮಿ ಎಂ.ಕೆ.ಗೋವರ್ಧನ ಚಾಲನೆ ನೀಡಿದರು.
ಮೂರನೇ ವಾರ್ಡ್‌ನ ಸುಮಾರು ಎರಡು ಸಾವಿರ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದು ಆಯೋಜಕರಲ್ಲೂ ಅಚ್ಚರಿ ಮೂಡಿಸಿತ್ತು. ತುಂಬ ಎಚ್ಚರಿಕೆಯಿಂದಲೇ ಆಯೋಜಕರು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಪುಟಾಣಿ ಮಕ್ಕಳಿಂದ ಆರಂಭಿಸಿ ವಯೋವೃದ್ಧರವರೆಗೆ ಎಲ್ಲರಿಗೂ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶವಿತ್ತು.

ವಿವಿಧ ಕ್ರೀಡಾ ಸ್ಪರ್ಧೆಗಳ ಜತೆ, ರಂಗೋಲಿ ಸ್ಪರ್ಧೆ, ಆಹಾರ  ಮೇಳ, ಚಿತ್ರ ಬಿಡಿಸುವ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಲಘು ಸಂಗೀತ...  ಹೀಗೆ ಮನರಂಜನೆಗೆ ಇಲ್ಲಿ ಕೊರತೆಯೇ ಇರಲಿಲ್ಲ. ಆಹಾರ ಮೇಳದಲ್ಲಿ 45 ಕೌಂಟರ್‌ಗಳನ್ನು ಸ್ಥಾಪಿಸಿದ್ದರಿಂದ ಬಂದವರಿಗೆ ತಿಂಡಿ ತಿನಿಸಿಗೂ ತೊಂದರೆಯಾಗಲಿಲ್ಲ. 

ಕೆಲವು ಮಹಿಳೆಯರು ಮನೆಯಿಂದಲೇ ತಿಂಡಿ  ತಯಾರಿಸಿ ತಂದು ಮಾರಾಟ ಮಾಡಿದರೆ ಇನ್ನೂ ಕೆಲವರು ಸ್ಥಳದಲ್ಲೇ ತಿಂಡಿ-ತಿನಿಸು ತಯಾರಿಸಿ ಬಿಸಿಬಿಸಿಯಾಗಿ ಗ್ರಾಹಕರಿಗೆ ಮಾರಾಟ ಮಾಡಿದರು. ಪಾನಿಪೂರಿಯಿಂದ ಆರಂಭಿಸಿ, ಕಟ್ಲೆಟ್, ಸಮೋಸ, ಸಿಹಿತಿಂಡಿ... ಹೀಗೆ ಜನರು ಎಲ್ಲವನ್ನೂ ಸವಿದರು.

ಒಟ್ಟಿನಲ್ಲಿ ಇತ್ತೀಚೆಗೆ ಅಭಿವೃದ್ಧಿ ಕಂಡ ಶಂಕರಿಪುರಂ ಪಾರ್ಕ್‌ನಲ್ಲಿ ಮುಂಜಾನೆಯಿಂದಲೇ ಜನಜಂಗುಳಿ, ಮಕ್ಕಳ ಕೇಕೆ, ಆಟೋಟಗಳ ಭರಾಟೆ ಕಾಣಿಸಿಕೊಂಡಿತು. ಸೋಮವಾರ ಕುವೆಂಪುನಗರ ಪಾರ್ಕ್‌ನಲ್ಲಿ ಜಾನಪದ ಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಂಗಳವಾರವೂ ಆರ್ಕೆಸ್ಟ್ರಾ, ಬಸ್ ನಿಲ್ದಾಣ ಉದ್ಘಾಟನೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಯಾರು ಬೇಕಾದರೂ ಬಂದು ಕಾರ್ಯಕ್ರಮ ವೀಕ್ಷಿಸಬಹುದು. ಆದರೆ ವಾರ್ಡ್‌ನ ಸದಸ್ಯರಿಗೆ ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ಬೇರೆ ವಾರ್ಡ್‌ನವರಿಗೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿಲ್ಲ.

ಎಲ್ಲರೂ ಪಾಲ್ಗೊಳ್ಳಬಹುದಾದಂಥ ಸಾಂಸ್ಕೃತಿಕ ಚಟುವಟಿಕೆಗಳಿಲ್ಲದೆ ಬರಗೆಟ್ಟಿದ್ದ ಹಾಸನದ ಜನರಿಗೆ ಇದೊಂದು ಸಣ್ಣ ಭರವಸೆ. ಇತರ ವಾರ್ಡ್‌ಗಳವರಿಗೂ ಈ ಹಬ್ಬ ಮಾದರಿಯಾಗುವುದೇ ಎಂಬುದನ್ನು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT