ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡ್‌ವಾರು ಮೀಸಲು ಪಟ್ಟಿ ವಾಪಸ್

ರಾಜ್ಯ ಸಚಿವ ಸಂಪುಟ ಸಭೆ ನಿರ್ಧಾರ
Last Updated 13 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸಂಬಂದ ಇದೇ 4ರಂದು ಪ್ರಕಟಿಸಿರುವ ಕರಡು ಮೀಸಲಾತಿ ಪಟ್ಟಿಯನ್ನು ಹಿಂದಕ್ಕೆ ಪಡೆಯಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಪಟ್ಟಿಗೆ ಸಾರ್ವಜನಿಕರಿಂದ 2,318 ಆಕ್ಷೇಪಣೆಗಳು ಸಲ್ಲಿಕೆಯಾಗಿರುವುದರಿಂದ ಈ ಬಗ್ಗೆರಾಜ್ಯದ ಅಡ್ವೊಕೇಟ್ ಜನರಲ್ ಜತೆ ಚರ್ಚಿಸಲು ಕೂಡ ನಿರ್ಧರಿಸಲಾಗಿದೆ.

ಹೈಕೋರ್ಟ್ ಆದೇಶದ ಪ್ರಕಾರ ಇದೇ 17ರೊಳಗೆ ವಾರ್ಡ್‌ವಾರು ಅಂತಿಮ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಬೇಕಾಗಿದೆ. ಆದರೆ, ಕರಡು ಪಟ್ಟಿ ಪ್ರಕಟಣೆ ನಂತರ ಅದಕ್ಕೆ ಭಾರಿ ಸಂಖ್ಯೆಯ ಆಕ್ಷೇಪಣೆಗಳು ಬಂದಿರುವ ಹಿನ್ನೆಲೆಯಲ್ಲಿ ಅದನ್ನು ರದ್ದುಪಡಿಸಿ, ಹೊಸದಾಗಿಯೇ ಕರಡು ಮೀಸಲು ಪಟ್ಟಿ ಪ್ರಕಟಿಸುವುದು ಸೂಕ್ತ ಎನ್ನುವ ತೀರ್ಮಾನಕ್ಕೆ ಬರಲಾಗಿದೆ ಎಂದು ಗೊತ್ತಾಗಿದೆ.

ಸಕಾಲದಲ್ಲಿ ಚುನಾವಣೆ ನಡೆಸುವುದಕ್ಕೆ ಹೈಕೋರ್ಟ್‌ನ ಸ್ಪಷ್ಟ ಸೂಚನೆ ಇದೆ. ಆದಕಾರಣ ಆಕ್ಷೇಪಣೆಗಳ ಬಗ್ಗೆ ಹೈಕೋರ್ಟ್‌ಗೆ ಯಾವ ರೀತಿ ತಿಳಿಸಬೇಕು ಎಂಬುದರ ಬಗ್ಗೆ ಅಡ್ವೊಕೇಟ್ ಜನರಲ್ ಜತೆ ಚರ್ಚೆ ನಡೆಸಿದ ಬಳಿಕ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನಿರ್ಧಾರ ಕೈಗೊಳ್ಳಲಿದ್ದಾರೆ. ಶೆಟ್ಟರ್ ಅವರು ಶುಕ್ರವಾರ ಅಡ್ವೊಕೇಟ್ ಜನರಲ್ ಜತೆ ಮಾತುಕತೆ ನಡೆಸುವ ಸಂಭವ ಇದೆ.

ಹೈಕೋರ್ಟ್ ಸಲಹೆ ಮೇರೆಗೆ ನಗರಾಭಿವೃದ್ಧಿ ಇಲಾಖೆ ನವೆಂಬರ್ 9ರಂದು ವಾರ್ಡ್‌ವಾರು ಮೀಸಲಾತಿ ನಿಗದಿಗೆ ಮಾರ್ಗಸೂಚಿಗಳನ್ನು ರೂಪಿಸಿದ್ದು, ಅವು ಕೂಡ ಸರಿ ಇಲ್ಲ ಎನ್ನುವ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ. ಈ ಮಾರ್ಗಸೂಚಿ ಅನ್ವಯ ನಿಗದಿಪಡಿಸಿದ ಮೀಸಲಾತಿಯಿಂದ ಗೊಂದಲ ಉಂಟಾಗಿದೆ ಎನ್ನುವ ಅಭಿಪ್ರಾಯ ಸಂಪುಟ ಸಭೆಯಲ್ಲೂ ವ್ಯಕ್ತವಾಗಿದೆ ಎನ್ನಲಾಗಿದೆ.

ಆಕ್ಷೇಪಣೆ ಸಲ್ಲಿಸಲು ಏಳು ದಿನ ಸಮಯ ನೀಡಲಾಗಿತ್ತು. ಆ ಸಂದರ್ಭದಲ್ಲಿ 2,318 ಆಕ್ಷೇಪಣೆಗಳು ಬಂದಿವೆ. ಅತಿ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿರುವುದು ಧಾರವಾಡ ಜಿಲ್ಲೆಯಿಂದ (298). ರಾಮನಗರ ಜಿಲ್ಲೆಯಿಂದ ಒಂದು ಆಕ್ಷೇಪಣೆ ಮಾತ್ರ ಸಲ್ಲಿಕೆಯಾಗಿದೆ. ಬೆಳಗಾವಿ ಜಿಲ್ಲೆಯಿಂದ 165, ಬಳ್ಳಾರಿ- 163, ದಾವಣಗೆರೆ-118, ಗುಲ್ಬರ್ಗ- 104, ಹಾವೇರಿ- 145, ಮಂಡ್ಯ- 117 ಮತ್ತು  ಮೈಸೂರು ಜಿಲ್ಲೆಯಿಂದ  125 ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಬಳ್ಳಾರಿ ಹೊರತುಪಡಿಸಿ, ಉಳಿದ ಎಲ್ಲ ಜಿಲ್ಲೆಗಳ ಆಕ್ಷೇಪಣೆಗಳು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಕಚೇರಿ ತಲುಪಿದ್ದು, ಅವುಗಳ ಪರಿಶೀಲನೆ ನಡೆದಿದೆ ಎನ್ನಲಾಗಿದೆ.

ಆಕ್ಷೇಪಣೆ ಏನು?
* 2011ರ ಜನಗಣತಿ  ಆಧರಿಸಿ ಮೀಸಲಾತಿ ನಿಗದಿಪಡಿಸಬೇಕು.

* ವಾರ್ಡ್‌ಗಳ ಪುನರ್ ವಿಂಗಡಣೆ ಪ್ರಕಾರ ಮೀಸಲಾತಿ ನಿಗದಿಪಡಿಸಬೇಕು.

* ಸಾಮಾನ್ಯ ವರ್ಗದವರು ಹೆಚ್ಚಾಗಿರುವ ವಾರ್ಡ್‌ಗಳಲ್ಲಿ ಪರಿಶಿಷ್ಟ ಜಾತಿ/ಪಂಗಡದವರಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಪರಿಶಿಷ್ಟರು ಹೆಚ್ಚು ಇರುವ ವಾರ್ಡ್‌ಗಳನ್ನು ಸಾಮಾನ್ಯ ವರ್ಗದವರಿಗೆ ಮೀಸಲು ಕಲ್ಪಿಸಲಾಗಿದೆ ಎನ್ನುವ ಆಕ್ಷೇಪಣೆ.

* ಹಿಂದುಳಿದ ಮತ್ತು ಅಲ್ಪಸಂಖ್ಯಾತರು ಹೆಚ್ಚಾಗಿರುವ ವಾರ್ಡ್‌ಗಳಿಗೆ ಜನಸಂಖ್ಯೆಯನ್ನು ಆಧರಿಸಿ ಮೀಸಲಾತಿ ಕಲ್ಪಿಸಿಲ್ಲ ಎನ್ನುವ ದೂರು.

* ಮಹಿಳೆಯರಿಗೆ ಶೇ 50ಕ್ಕಿಂತ ಹೆಚ್ಚು ಮೀಸಲಾತಿ ಕಲ್ಪಿಸಿ, ಪುರುಷರಿಗೆ ಅನ್ಯಾಯ ಮಾಡಲಾಗಿದೆ ಎನ್ನುವ ಆರೋಪ.

* ಮೀಸಲಾತಿ ನಿಗದಿಪಡಿಸುವಾಗ ಮೀಸಲಾತಿ ಪ್ರಮಾಣದ ಲೆಕ್ಕಾಚಾರದಲ್ಲಿ ನ್ಯೂನತೆ ಇರುವ ಬಗ್ಗೆ ಆಕ್ಷೇಪಣೆ.

* ಮೀಸಲಾತಿ ನಿಗದಿಪಡಿಸುವಾಗ ಕಳೆದ ಮೂರು ಅವಧಿಯ ಮೀಸಲಾತಿಯನ್ನು ಗಮನದಲ್ಲಿ ಇಟ್ಟುಕೊಂಡು ಆವರ್ತನೆ ಮಾಡಲು ಕೋರಿಕೆ.

* ಮಹಿಳಾ ಮೀಸಲಾತಿ ಪುನರಾವರ್ತನೆಯಾಗಿದೆ ಎಂದು ದೂರು.

* ವಿವಿಧ ಪ್ರವರ್ಗಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಯಲ್ಲಿ ಇರುವ ಮೀಸಲಾತಿ ಅನುಕ್ರಮದ ಬಗ್ಗೆ ಆಕ್ಷೇಪಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT