ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್‌ಮಾರ್ಟ್ ಗದ್ದಲ

ಲಾಬಿಗೆ ರೂ 125 ಕೋಟಿ: ಸ್ವತಂತ್ರ ತನಿಖೆಗೆ ಆಗ್ರಹ
Last Updated 10 ಡಿಸೆಂಬರ್ 2012, 21:01 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಭಾರತದ ಚಿಲ್ಲರೆ ಮಾರಾಟ ಕ್ಷೇತ್ರಕ್ಕೆ ಪ್ರವೇಶಿಸಲು ಮಾಡಿದ ಲಾಬಿಗೆ 2008ರಿಂದ ಈವರೆಗೆ ಸುಮಾರು ರೂ 125 ಕೋಟಿ ವ್ಯಯ ಮಾಡಲಾಗಿದೆ ಎಂದು ವಾಲ್ ಮಾರ್ಟ್ ಹೇಳಿಕೊಂಡಿರುವುದರಿಂದ ಈ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಮತ್ತು ಸ್ವತಃ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ವಿರೋಧ ಪಕ್ಷಗಳು ಒಕ್ಕೊರಲಿನಿಂದ ಆಗ್ರಹಿಸಿದ್ದರಿಂದ ರಾಜ್ಯಸಭೆಯಲ್ಲಿ ಭಾರಿ ಗದ್ದಲ ಉಂಟಾಗಿ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ಲಾಬಿ ನಡೆಸುವುದು ಕಾನೂನು ಬಾಹಿರ. ಆದ್ದರಿಂದ ಲಾಬಿ ಮಾಡಲು ಹಣ ವ್ಯಯ ಮಾಡಲಾಗಿದೆ ಎಂದರೆ ಭ್ರಷ್ಟಾಚಾರ ನಡೆದಿದೆ ಎಂದೇ ಅರ್ಥ. ಯಾರಿಗೆ ಹಣ ನೀಡಲಾಗಿದೆ ಎಂಬುದು ಬಹಿರಂಗವಾಗಬೇಕು ಎಂದು ಬಿಜೆಪಿ, ಸಿಪಿಐ, ಸಿಪಿಎಂ, ಎಸ್‌ಪಿ, ಜೆಡಿಯು, ತೃಣಮೂಲ ಕಾಂಗ್ರೆಸ್, ಎಜಿಪಿ ಮತ್ತು ಎಐಎಡಿಎಂಕೆ ಸದಸ್ಯರು ಪಟ್ಟು ಹಿಡಿದಿದ್ದರಿಂದ ಭೋಜನ ವಿರಾಮದ ಮೊದಲು ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ರವಿಶಂಕರ್ ಪ್ರಸಾದ್ ಅವರು, `ಭಾರತದ ಚಿಲ್ಲರೆ ವ್ಯಾಪಾರ ಕ್ಷೇತ್ರವನ್ನು ಪ್ರವೇಶಿಸಲು ವಾಲ್ ಮಾರ್ಟ್ ಅಪಾರ ಹಣ ವ್ಯಯ ಮಾಡುತ್ತಿರಬಹುದು ಎಂದು ಈ ಮೊದಲು ಶಂಕಿಸಿದ್ದು ಈಗ ನಿಜವಾಗಿದೆ' ಎಂದರು.

ಅಮೆರಿಕದ ಸೆನೆಟ್‌ಗೆ ವಾಲ್ ಮಾರ್ಟ್ ಸಲ್ಲಿಸಿರುವ ವರದಿಯಲ್ಲಿ  ಭಾರತದ ಚಿಲ್ಲರೆ ಮಾರಾಟ ಕ್ಷೇತ್ರವನ್ನು ಪ್ರವೇಶಕ್ಕೆ ಲಾಬಿ ಮಾಡಲು 125 ಕೋಟಿ  ರೂಪಾಯಿ ಮತ್ತು 2012ರಲ್ಲಿ ಇದೇ ಬಾಬ್ತಿನಲ್ಲಿ 30ಲಕ್ಷ ಅಮೆರಿಕ ಡಾಲರ್ ವ್ಯಯ ಮಾಡಲಾಗಿದೆ ಎಂದು ತಿಳಿಸಿದೆ. ಇಷ್ಟು ದೊಡ್ಡ ಮೊತ್ತವನ್ನು ಲಾಬಿ ಮಾಡಲು ಬಳಸಲಾಗಿದೆ ಎಂದರೆ ಭ್ರಷ್ಟಾಚಾರ ನಡೆದಿದೆ ಎಂದೇ ಅರ್ಥ. ಆದ್ದರಿಂದ ಯಾರಿಗೆ ಈ ಹಣ ನೀಡಲಾಗಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಪ್ರಸಾದ್ ಒತ್ತಾಯಿಸಿದರು.

ಪ್ರಸಾದ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ತೃಣಮೂಲ ಕಾಂಗ್ರೆಸ್ ಮುಖಂಡ ಡಿ. ಬಂಡೋಪಾಧ್ಯಾಯ ಅವರು ಸತ್ಯಾಂಶ ಹೊರಬರಲು ಸ್ವತಂತ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಸಿಪಿಎಂ ಸದಸ್ಯ ರಾಜೀವ್ ಅವರು, `ಫೆಮಾ' ಕಾಯ್ದೆ ತಿದ್ದುಪಡಿಯಾಗುವ ಮೊದಲೇ ವಾಲ್ ಮಾರ್ಟ್ ಅಪಾರ ಪ್ರಮಾಣದಲ್ಲಿ ಭಾರತದಲ್ಲಿ ಬಂಡವಾಳ ಹೂಡಿದೆ ಎಂಬ ವರದಿಗಳೂ ಇವೆ ಎಂದರು.

ರಾಜ್ಯಸಭೆಯಲ್ಲಿ ಗದ್ದಲ

ಈ ಸಂದರ್ಭದಲ್ಲಿ ವಿರೋಧ ಪಕ್ಷಗಳ ಸದಸ್ಯರು ಎಫ್‌ಡಿಐ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಘೋಷಣೆ ಕೂಗಿದ್ದರಿಂದ ಸದನದಲ್ಲಿ ಬಾರಿ ಕೋಲಾಹಲ ಉಂಟಾಯಿತು. ಈ ಮಧ್ಯೆ ಸಮಾಜವಾದಿ ಪಕ್ಷದ ಸದಸ್ಯರು  ಪರಿಶಿಷ್ಟ ಜಾತಿ, ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿ ಮೀಸಲಾತಿಗೆ ಸಂಬಂಧಿಸಿದ ಉದ್ದೇಶಿತ ಸಂವಿಧಾನ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿ ಸಭಾಧ್ಯಕ್ಷರ ಪೀಠದ ಎದುರು ಧಾವಿಸಿ ಗದ್ದಲವೆಬ್ಬಿಸಿದರು.

ಇದಕ್ಕೂ ಮೊದಲು ಗದ್ದಲದ ಮಧ್ಯೆ ಮಾತನಾಡಿದ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ರಾಜೀವ್ ಶುಕ್ಲಾ ಅವರು, ಎಫ್‌ಡಿಐ ವಿಚಾರವನ್ನು ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗುವುದು ಎಂದರು. ಆದರೆ ವಿರೋಧ ಪಕ್ಷಗಳು ಪ್ರಧಾನಿಯವರೇ ಉತ್ತರಿಸಬೇಕು ಎಂದು ಪಟ್ಟು ಹಿಡಿದರು.

ವಾಲ್‌ಮಾರ್ಟ್ ಸ್ಪಷ್ಟನೆ

ನವದೆಹಲಿ (ಪಿಟಿಐ): ಭಾರತದ ಚಿಲ್ಲರೆ ಮಾರಾಟ ಕ್ಷೇತ್ರ ಪ್ರವೇಶಿಸಲು ಭ್ರಷ್ಟಾಚಾರ ನಡೆಸಲಾಗಿದೆ ಎಂಬ ಆಪಾದನೆಯನ್ನು ಭಾರ್ತಿ ವಾಲ್‌ಮಾರ್ಟ್ ತಳ್ಳಿಹಾಕಿದೆ. `ಭ್ರಷ್ಟಾಚಾರ ನಡೆಸಲಾಗಿದೆ ಎಂಬ ಆಪಾದನೆ ಶುದ್ಧ ಸುಳ್ಳು. ಅಮೆರಿಕದ ಕಾನೂನಿನಂತೆ ಪ್ರತಿ ತ್ರೈಮಾಸಿಕಕ್ಕೊಮ್ಮೆ ಖರ್ಚು- ವೆಚ್ಚ ಮತ್ತು ಕಂಪೆನಿ ತನ್ನ ವ್ಯಾಪಾರ ವಿಸ್ತರಣೆಗಾಗಿ ಕೈಗೊಂಡ ಕಾರ್ಯಗಳ ಬಗ್ಗೆ ಮಾಹಿತಿ ಸಲ್ಲಿಸಬೇಕು. ಅದರಂತೆ ಸೆನೆಟ್‌ಗೆ ಮಾಹಿತಿ ಸಲ್ಲಿಸಲಾಗಿದೆ' ಎಂದು ಭಾರ್ತಿ ವಾಲ್‌ಮಾರ್ಟ್  ವಕ್ತಾರರು ಹೇಳಿದ್ದಾರೆ.

ಅಮೆರಿಕ ಮೂಲದ ಚಿಲ್ಲರೆ ಮಾರಾಟ ಕೇತ್ರದ ದೊಡ್ಡ ಕಂಪೆನಿ ವಾಲ್‌ಮಾರ್ಟ್ ಮತ್ತು ಭಾರತದ ಭಾರ್ತಿ ಎಂಟರ್‌ಪ್ರೈಸಸ್ ಒಪ್ಪಂದ ಮಾಡಿ ಕೊಂಡಿದ್ದು, `ಭಾರ್ತಿ ವಾಲ್‌ಮಾರ್ಟ್ ಪ್ರೈವೇಟ್ ಲಿಮಿಟೆಡ್' ಕಂಪೆನಿ ಸ್ಥಾಪಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT