ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸೀಮ್, ವಕಾರ್ ಅತಿಬುದ್ಧಿವಂತರು

Last Updated 24 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ವಿವಾದಗಳಿಂದ ತಮ್ಮ ಆತ್ಮಚರಿತ್ರೆಯ ಪುಸ್ತಕಕ್ಕೆ ಪ್ರಚಾರ ನೀಡುವ ಸಾಹಸ ಮುಂದುವರಿಸಿರುವ ಪಾಕಿಸ್ತಾನದ ವಿವಾದಾತ್ಮಕ ವೇಗಿ ಶೋಯಬ್ ಅಖ್ತರ್ ತಮ್ಮದೇ ನಾಡಿನ ತಂಡದ ಡ್ರೆಸಿಂಗ್ ಕೋಣೆಯ ಗುಟ್ಟುಗಳನ್ನು ತೆರೆದಿಟ್ಟಿದ್ದಾರೆ.

`ಕಾಂಟ್ರೊವರ್ಸಿಯಲಿ ಯುವರ್ಸ್~ ಪುಸ್ತಕದಲ್ಲಿ ಹೆಸರಿಗೆ ತಕ್ಕಂತೆಯೇ ಸಾಕಷ್ಟು ವಿವಾದಾತ್ಮಕ ಅಂಶಗಳ ಹೂರಣ ಸೇರಿಸಿರುವ ಅವರು ಪಾಕ್ ತಂಡದ ಖ್ಯಾತ ಮಾಜಿ ಆಟಗಾರರಾದ ವಾಸೀಮ್ ಅಕ್ರಮ್ ಹಾಗೂ ವಕಾರ್ ಯೂನಿಸ್ ಅವರನ್ನು `ಅತಿಬುದ್ಧಿವಂತರು~ ಎಂದು ವ್ಯಂಗ್ಯಮಾಡಿದ್ದಾರೆ.

ವಕಾರ್ ಹಾಗೂ ಅಕ್ರಮ್ ಅವರಿಂದಾಗಿ ಪಾಕ್ ತಂಡದ ಡ್ರೆಸಿಂಗ್ ಕೋಣೆಯಲ್ಲಿ ಇರುತ್ತಿದ್ದ ಒತ್ತಡದ ವಾತಾವರಣವನ್ನು ವಿವರಿಸಿರುವ ಶೋಯಬ್ `ಪದಾರ್ಪಣೆಯ ಟೆಸ್ಟ್ ಪಂದ್ಯದಲ್ಲಿಯೇ ನನ್ನ ಭವಿಷ್ಯವನ್ನು ಕತ್ತಲೆಯಲ್ಲಿ ಮುಳುಗಿಸುವ ಉದ್ದೇಶದಿಂದ ಇವರಿಬ್ಬರೂ ಗುಂಪುಗಾರಿಕೆ ಮಾಡಿದ್ದರು~ ಎಂದು ಕೂಡ ಟೀಕೆ ಮಾಡಿದ್ದಾರೆ.

`ಮೊದಲ ಪಂದ್ಯದಲ್ಲಿಯೇ ಮಾನಸಿಕವಾಗಿ ಕುಗ್ಗುವಂತೆ ಮಾಡುವುದು ಅವರ ಹುನ್ನಾರವಾಗಿತ್ತು~ ಎಂದು ಆರೋಪಿಸಿರುವ ಅಖ್ತರ್ 1999ರಲ್ಲಿ ಕೋಲ್ಕತ್ತದಲ್ಲಿ ನಡೆದಿದ್ದ ಏಷ್ಯನ್ ಟೆಸ್ಟ್ ಚಾಂಪಿಯನ್‌ಷಿಪ್ ಪಂದ್ಯಕ್ಕೆ ಮುನ್ನ ತಂಡದೊಳಗೆ ಇದ್ದ ಕೆಂಡದಂಥ ವಾತಾವರಣವನ್ನು ಕೂಡ ನೆನಪಿಸಿಕೊಂಡಿದ್ದಾರೆ.

`ದೆಹಲಿ ಟೆಸ್ಟ್ ಸೋಲಿನ ನಂತರ ವಾಸೀಮ್ ಮತ್ತು ವಕಾರ್ ನಡುವೆ ಭಾರಿ ಘರ್ಷಣೆ ನಡೆಯಿತು. ಪರಿಸ್ಥಿತಿ ಎಷ್ಟು ತಾರಕಕ್ಕೆ ಹೋಗಿತ್ತೆಂದರೆ ಸ್ವದೇಶಕ್ಕೆ ಹೋಗಲು ವಕಾರ್‌ಗೆ ಸೂಚನೆ ನೀಡಬಹುದು ಎನ್ನುವ ಅನುಮಾನ ಮೂಡಿತ್ತು. ಆದರೆ ಅವರೂ ಸೇರಿದಂತೆ ತಂಡವು ಕೋಲ್ಕತ್ತಕ್ಕೆ ಬಂದಿಳಿಯಿತು. ಪಂದ್ಯದ ಹಿಂದಿನ ದಿನವಂತೂ ಹಿರಿಯ ಆಟಗಾರರ ನಡುವಣ ಚಕಮಕಿಯಿಂದ ನಾವು ಕಿರಿಯ ಆಟಗಾರರು ಬೆಚ್ಚಿಬಿದ್ದೆವು. ಕೊನೆಗೆ ಏನು ಆಯಿತೋ ಗೊತ್ತಿಲ್ಲ~  ಎಂದು ಪುಸ್ತಕದಲ್ಲಿ ಬರೆದಿದ್ದಾರೆ.

ಅಷ್ಟೇ ಅಲ್ಲ ಅಕ್ರಮ್ ತಮ್ಮ ಕ್ರಿಕೆಟ್ ಭವಿಷ್ಯಕ್ಕೆ ಕುತ್ತು ತರಲು ಸಾಕಷ್ಟು ಪ್ರಯತ್ನ ಮಾಡಿದರೆಂದು ಕೂಡ ಅವರು ದೂರಿದ್ದಾರೆ.

`2003ರ ವಿಶ್ವಕಪ್‌ನಲ್ಲಿ ಪಾಕ್ ತಂಡವು ನಾಲ್ಕರ ಘಟ್ಟವನ್ನು ತಲುಪಲು ಸಾಧ್ಯವಾಗಲಿಲ್ಲ. ಆ ಟೂರ್ನಿ ಸಂದರ್ಭದಲ್ಲಿ ತಂಡದ ಡ್ರೆಸಿಂಗ್ ಕೋಣೆಯ ವಾತಾವರಣ ಹೇಗಿತ್ತು ಎನ್ನುವುದು ಅಂಗಳದಲ್ಲಿನ ಆಟದಲ್ಲಿ ಬಿಂಬಿತವಾಯಿತು~ ಎಂದು ಕೂಡ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈನಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ರದ್ದು
ಮುಂಬೈ (ಪಿಟಿಐ):
ಸಾಕಷ್ಟು ಟೀಕೆಗಳು ಕೇಳಿಬಂದಿರುವ ಕಾರಣ ಪಾಕಿಸ್ತಾನದ ಕ್ರಿಕೆಟಿಗ ಶೋಯಬ್ ಅಖ್ತರ್ ಅವರ ಆತ್ಮಚರಿತ್ರೆ `ಕಾಂಟ್ರೊವರ್ಸಿಯಲ್ ಯುವರ್ಸ್~ ಪುಸ್ತಕ ಬಿಡುಗಡೆ ಸಮಾರಂಭವನ್ನು ರದ್ದು ಮಾಡಲಾಗಿದೆ.

ಇಲ್ಲಿನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (ಸಿಸಿಐ) ಆವರಣದಲ್ಲಿ ಭಾರತ ತಂಡದ ಮಾಜಿ ನಾಯಕ ದಿಲೀಪ್ ವೆಂಗ್‌ಸರ್ಕರ್ ಅವರು ಭಾನುವಾರ ಈ ಪುಸ್ತಕ ಬಿಡುಗಡೆ ಮಾಡುವರೆಂದು ಈ ಮೊದಲು ಪ್ರಕಟಿಸಲಾಗಿತ್ತು. ಆದರೆ ಅನಿರೀಕ್ಷಿತವಾಗಿ ಪತ್ರಿಕಾ ಪ್ರಕಟಣೆ ನೀಡಿರುವ ಸಿಸಿಐ `ಸಮಾರಂಭವನ್ನು ರದ್ದು ಮಾಡಲಾಗಿದೆ~ ಎಂದು ತಿಳಿಸಿದೆ. ಈ ನಿರ್ಧಾರಕ್ಕೆ ಕಾರಣವನ್ನು ಮಾತ್ರ ಅದು ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT