ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಡೀಸ್‌ ಮಡಿಲಿಗೆ ಸರಣಿ

ಕ್ರಿಕೆಟ್‌: ಎಡ್ವರ್ಡ್ಸ್‌ ಶತಕ; ಅಂತಿಮ ಪಂದ್ಯದಲ್ಲೂ ಎಡವಿದ ಭಾರತ ‘ಎ’ ತಂಡ
Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ನೆಚ್ಚಿನ ತಂಡ ಎನಿಸಿಕೊಂಡಿದ್ದ ಭಾರತ ‘ಎ’ ಮತ್ತೆ ಮುಗ್ಗರಿಸಿದರೆ, ಎಲ್ಲರೂ ತಳ್ಳಿಹಾಕಿದ್ದ ವೆಸ್ಟ್‌ ಇಂಡೀಸ್‌ ‘ಎ’ ತಂಡ ಸರಣಿ ಗೆಲುವಿನ ಸಂಭ್ರಮ ಆಚರಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಆಂತಿಮ ಪಂದ್ಯದಲ್ಲಿ 45 ರನ್‌ಗಳ ಜಯ ಪಡೆದ ವಿಂಡೀಸ್‌ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನು 2-1 ರಲ್ಲಿ ಗೆದ್ದುಕೊಂಡಿತು. ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಕೀರನ್‌ ಪೊವೆಲ್‌ ಬಳಗ ಆ ಬಳಿಕ ಪುಟಿದೆದ್ದು ನಿಂತ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಮೊದಲು ಬ್ಯಾಟ್‌ ಮಾಡಿದ ಕೆರಿಬಿಯನ್‌ ನಾಡಿನ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 312 ರನ್‌ ಪೇರಿಸಿತು. ಆಕರ್ಷಕ ಶತಕ ಗಳಿಸಿದ ಕರ್ಕ್‌ ಎಡ್ವರ್ಡ್ಸ್‌ (104, 104 ಎಸೆತ, 12 ಬೌಂ, 3 ಸಿಕ್ಸರ್‌) ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು. ಜಯದೇವ್‌ ಉನದ್ಕತ್‌ (55ಕ್ಕೆ 5) ಅವರ ಐದು ವಿಕೆಟ್‌ ಸಾಧನೆಯ ಹೊರತಾಗಿಯೂ ಪ್ರವಾಸಿ ತಂಡ ಭಾರಿ ಮೊತ್ತ ಕಲೆಹಾಕಿದ್ದು ವಿಶೇಷ.

ಭಾರತ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು ಗಳಿಸಿದ್ದು 267 ರನ್‌ ಮಾತ್ರ. ಬಾಬಾ ಅಪರಾಜಿತ್‌ (78, 96 ಎಸೆತ, 6 ಬೌಂ, 1 ಸಿಕ್ಸರ್‌) ಮತ್ತು ನಾಯಕ ಯುವರಾಜ್‌ ಸಿಂಗ್‌ (61, 59 ಎಸೆತ, 4 ಬೌಂ, 3 ಸಿಕ್ಸರ್) ನಡೆಸಿದ ಹೋರಾಟಕ್ಕೆ ಫಲ ಲಭಿಸಲಿಲ್ಲ.

ಇವೆರಡು ತಂಡಗಳು ಶನಿವಾರ ಇದೇ ತಾಣದಲ್ಲಿ ನಡೆಯಲಿರುವ ಏಕೈಕ ಟ್ವೆಂಟಿ-20 ಪಂದ್ಯದಲ್ಲಿ ಮತ್ತೆ ಎದುರಾಗಲಿವೆ.

ಎಡ್ವರ್ಡ್ಸ್‌ ಶತಕ: ಪಂದ್ಯದ ಆರಂಭದ ವೇಳೆ ಮೋಡ ಕವಿದ ವಾತಾವರಣವಿತ್ತು. ಅದರ ಲಾಭ ಎತ್ತಿಕೊಳ್ಳುವ ಉದ್ದೇಶದಿಂದ ಯುವರಾಜ್‌ ಮೊದಲು ಫೀಲ್ಡಿಂಗ್‌ ಮಾಡಲು ನಿರ್ಧರಿಸಿದರು. ವಿಂಡೀಸ್‌ಗೆ ತನ್ನ ಪೂರ್ಣ 50 ಓವರ್‌ಗಳನ್ನು ಮೋಡ ಕವಿದ ವಾತಾವರಣದಲ್ಲೇ ಆಡಬೇಕಾಯಿತು. ಆದರೂ ತಂಡ ಉತ್ತಮ ಮೊತ್ತ ಪೇರಿಸಿತು.

ಅಗ್ರ ಕ್ರಮಾಂಕದ ಐವರು ಬ್ಯಾಟ್ಸ್‌ಮನ್‌ಗಳ ಜವಾಬ್ದಾರಿಯುತ ಆಟ ಇದಕ್ಕೆ ಕಾರಣ. ಆಂಡ್ರೆ ಫ್ಲೆಚರ್‌ (28) ಮತ್ತು ಕೀರನ್‌ ಪೊವೆಲ್‌ (40, 33 ಎಸೆತ) ಮೊದಲ ವಿಕೆಟ್‌ಗೆ 74 ರನ್‌ಗಳನ್ನು ಸೇರಿಸಿ ತಂಡಕ್ಕೆ ಅಗತ್ಯವಿದ್ದ ಆರಂಭ ಒದಗಿಸಿದರು. ಶಹಬಾಜ್‌ ನದೀಮ್‌ ಇಬ್ಬರನ್ನೂ ಅಲ್ಪ ಅಂತರದಲ್ಲಿ ಪೆವಿಲಿಯನ್‌ಗೆ ಅಟ್ಟಿದಾಗ ಭಾರತ ನಿಟ್ಟುಸಿರುಬಿಟ್ಟಿತು.

ಆದರೆ ಈ ಯಶಸ್ಸಿನ ಸಂತಸ ಹೆಚ್ಚುಹೊತ್ತು ಇರಲಿಲ್ಲ. ಮೂರನೇ ವಿಕೆಟ್‌ಗೆ ಜೊತೆಯಾದ ಕರ್ಕ್‌ ಎಡ್ವರ್ಡ್ಸ್‌ ಮತ್ತು ಜೊನಾಥನ್‌ ಕಾರ್ಟರ್‌ ಪರಿಸ್ಥಿತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಈ ಜೋಡಿ 66 ರನ್‌ಗಳನ್ನು ಕಲೆಹಾಕಿತು. ಎರಡನೇ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕಾರ್ಟರ್‌ (35, 38 ಎಸೆತ) ತಮಗೆ ದೊರೆತ ಉತ್ತಮ ಆರಂಭದ ಪ್ರಯೋಜನ ಪಡೆಯಲು ವಿಫಲ ರಾದರು. ಬಾಬಾ ಅಪರಾಜಿತ್‌ ಎಸೆತದಲ್ಲಿ ಅವರು ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್‌ಗೆ ಹೆಜ್ಜೆಯಿಟ್ಟರು.

ಕಾರ್ಟರ್‌ ಔಟಾದರೂ ವಿಂಡೀಸ್‌ ಬ್ಯಾಟಿಂಗ್‌ನ ಅಬ್ಬರ ತಗ್ಗಲಿಲ್ಲ. ಲಿಯೊನ್‌ ಜಾನ್ಸನ್‌ (54, 42 ಎಸೆತ, 4 ಬೌಂ 3 ಸಿಕ್ಸರ್‌) ಅವರು ಎಡ್ವರ್ಡ್ಸ್‌ಗೆ ತಕ್ಕ ಸಾಥ್‌ ನೀಡಿದರು. ಇದರಿಂದ ನಾಲ್ಕನೇ ವಿಕೆಟ್‌ಗೆ 80 ಎಸೆತಗಳಲ್ಲಿ 93 ರನ್‌ಗಳು ಹರಿದುಬಂದವು.

14ನೇ ಓವರ್‌ನಲ್ಲಿ ಕ್ರೀಸ್‌ಗಿಳಿದ ಎಡ್ವರ್ಡ್ಸ್‌ 49ನೇ ಓವರ್‌ನಲ್ಲಿ ಔಟಾದರು. ಅದುವರೆಗೆ ಆತಿಥೇಯ ತಂಡದ ಎಲ್ಲ ಬೌಲರ್‌ಗಳನ್ನು ಸಮರ್ಥವಾಗಿ ಮೆಟ್ಟಿನಿಂತರು. ಉನದ್ಕತ್‌ ಮತ್ತು ಶಹಬಾಜ್‌ ನದೀಮ್‌ (33ಕ್ಕೆ 2) ಅವರನ್ನು ಹೊರತುಪಡಿಸಿದರೆ, ಭಾರತದ ಇತರ ಬೌಲರ್‌ಗಳು ಶಿಸ್ತಿನ ದಾಳಿ ನಡೆಸಲು ವಿಫಲರಾದರು.

ಹೋದ ಪಂದ್ಯದಲ್ಲಿ ಕೊನೆಯ 10 ಓವರ್‌ಗಳಲ್ಲಿ 97 ರನ್‌ ಕಲೆಹಾಕಿದ್ದ ವಿಂಡೀಸ್‌ ಈ ಪಂದ್ಯದಲ್ಲಿ ಭರ್ತಿ 100 ರನ್ ಪೇರಿಸಿತು. ಸಿದ್ಧಾರ್ಥ್ ಕೌಲ್‌ ಎಸೆದ 45ನೇ ಓವರ್‌ನಲ್ಲಿ 23 ರನ್‌ಗಳು ಬಂದವು.

ಅಪರಾಜಿತ್‌, ಯುವರಾಜ್‌ ಹೋರಾಟ: ಭಾರತ ತಂಡ ರನ್‌ ಬೆನ್ನಟ್ಟುವ ಕೆಲಸವನ್ನು ಸಕಾರಾತ್ಮಕ ರೀತಿಯಲ್ಲಿ  ಆರಂಭಿಸಿತು. ಬಾಬಾ ಅಪರಾಜಿತ್‌ ಮತ್ತು ರಾಬಿನ್‌ ಉತ್ತಪ್ಪ ಆರಂಭದ ಓವರ್‌ಗಳನ್ನು ಎಚ್ಚರಿಕೆಯಿಂದ ಎದುರಿಸಿದರು. ಆದರೆ ರಾಬಿನ್‌ಗೆ ಈ ಪಂದ್ಯದಲ್ಲೂ ದುರದೃಷ್ಟ ಕಾಡಿತು. 27 ರನ್‌ ಗಳಿಸಿದ್ದ ವೇಳೆ ರನೌಟ್‌ ಆದರು.

ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದು ಬಂದ ನಮನ್‌ ಓಜಾ ಖಾತೆ ತೆರೆಯದೇ ಪೆವಿಲಿಯನ್‌ಗೆ ವಾಪಾಸಾದರು. ಬಳಿಕ ಆಗಮಿಸಿದ್ದು ಯುವರಾಜ್‌. 12 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಕರತಾಡನದೊಂದಿಗೆ ಕ್ರೀಸ್‌ಗಿಳಿದ ಎಡಗೈ ಬ್ಯಾಟ್ಸ್‌ಮನ್‌ ತಾವೆದುರಿಸಿದ ಮೊದಲ ಎಸೆತವನ್ನು ಸ್ಕ್ವೇರ್‌ ಲೆಗ್‌ ಕಡೆಯಿಂದ ಬೌಂಡರಿಗೆ ಅಟ್ಟಿದರು.

ಬಾಬಾ ಮತ್ತು ಯುವರಾಜ್‌ ತಂಡದ ಇನಿಂಗ್ಸ್‌ಗೆ ಜೀವ ತುಂಬುವ ಕೆಲಸ ಮಾಡಿದರು. ರಕ್ಷಣೆಗೆ ಒತ್ತು ನೀಡಿದ ಇವರು ಕೆಟ್ಟ ಎಸೆತಗಳನ್ನು ದಂಡಿಸಲು ಮರೆಯಲಿಲ್ಲ. ಇವರಿಬ್ಬರ ಆಟ ನೋಡಿದಾಗ ಭಾರತ ಪಂದ್ಯದಲ್ಲಿ ಗೆಲುವು ಪಡೆಯುತ್ತದೆ ಎಂದೇ ಭಾವಿಸಲಾಗಿತ್ತು. 40 ರನ್‌ ಗಳಿಸಿದ್ದ ವೇಳೆ ‘ಯುವಿ’ಗೆ ಜೀವದಾನ ಲಭಿಸಿತ್ತು. ಆದರೆ ಈ ‘ಜೀವದಾನ’ದ ಪೂರ್ಣ ಪ್ರಯೋಜನ ಪಡೆಯಲು ಯುವರಾಜ್‌ಗೆ ಆ್ಯಶ್ಲೆ ನರ್ಸ್‌ ಅವಕಾಶ ನೀಡಲಿಲ್ಲ. ಈ ಜೋಡಿ 112 ರನ್‌ಗಳನ್ನು ಸೇರಿಸಿತು.

30ನೇ ಓವರ್‌ನಲ್ಲಿ ಯುವರಾಜ್ ಔಟಾದಾಗ ತಂಡದ ಗೆಲುವಿಗೆ ಓವರ್‌ವೊಂದಕ್ಕೆ 7.5ರ ಸರಾಸರಿ ಯಲ್ಲಿ ರನ್‌ ಗಳಿಸುವ ಅಗತ್ಯವಿತ್ತು. ಅಪರಾಜಿತ್‌ ಮತ್ತು ಕೇದಾರ್‌ ಜಾಧವ್‌ (17) ಅಲ್ಪ ಅಂತರದಲ್ಲಿ ಔಟಾದದ್ದು ಭಾರತಕ್ಕೆ ಹಿನ್ನಡೆ ಉಂಟುಮಾಡಿತು. ಕ್ಷೇತ್ರರಕ್ಷಣೆ ವೇಳೆ ಕೈಬೆರಳಿಗೆ ಗಾಯಮಾಡಿಕೊಂಡ ಮನ್‌ದೀಪ್‌ ಸಿಂಗ್‌ ಬ್ಯಾಟಿಂಗ್‌ಗೆ ಆಗಮಿಸಲಿಲ್ಲ. ಇದು ಕೂಡಾ ತಂಡಕ್ಕೆ ಮುಳುವಾಗಿ ಪರಿಣಮಿಸಿತು.

ಕೊನೆಯ 10 ಓವರ್‌ಗಳಲ್ಲಿ ಗೆಲುವಿಗೆ 99 ರನ್‌ಗಳು ಬೇಕಿದ್ದವು. ವೀರಸ್ವಾಮಿ ಪೆರುಮಾಳ್‌ ಎಸೆದ 41ನೇ ಓವರ್‌ನ ಮೂರನೇ ಎಸೆತದಲ್ಲಿ ಚೆಂಡನ್ನು ಕ್ರೀಡಾಂಗಣದಿಂದಲೇ ಹೊರಕ್ಕಟ್ಟಿದ ಯೂಸುಫ್‌ (18, 21 ಎ, 1 ಬೌಂ, 1 ಸಿಕ್ಸರ್‌) ಎದುರಾಳಿ ಆಟಗಾರರಲ್ಲಿ ಭಯ ಮೂಡಿಸುವ ಪ್ರಯತ್ನ ನಡೆಸಿದರು. ಆದರೆ ಮುಂದಿನ ಓವರ್‌ನಲ್ಲಿ ಕಮಿನ್ಸ್‌ ಎಸೆತದಲ್ಲಿ ಅವರು ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್‌ಗೆ ಮರಳುವುದ ರೊಂದಿಗೆ ಭಾರತದ ಸೋಲು ಖಚಿತವಾಯಿತು.
 

ಸ್ಕೋರ್ ವಿವರ
ವೆಸ್ಟ್‌ ಇಂಡೀಸ್‌ ‘ಎ’: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 312
ಆ್ಯಂಡ್ರೆ ಫ್ಲೆಚರ್‌ ಎಲ್‌ಬಿಡಬ್ಲ್ಯು ಬಿ ನದೀಮ್‌  28
ಕೀರನ್‌ ಪೊವೆಲ್‌ ಸಿ ರಾಬಿನ್‌ ಬಿ ಶಹಬಾಜ್‌ ನದೀಮ್‌ 40
ಕರ್ಕ್‌ ಎಡ್ವರ್ಡ್ಸ್‌ ಬಿ ಜಯದೇವ್‌ ಉನದ್ಕತ್‌  104
ಜೊನಾಥನ್‌ ಕಾರ್ಟರ್‌ ಬಿ ಬಾಬಾ ಅಪರಾಜಿತ್‌  35
ಲಿಯೊನ್‌ ಜಾನ್ಸನ್‌ ಸಿ ಜಾಧವ್‌ ಬಿ ಉನದ್ಕತ್‌  54
ಆ್ಯಂಡ್ರೆ ರಸೆಲ್‌ ಬಿ ಜಯದೇವ್‌ ಉನದ್ಕತ್‌  01
ಡೆವೊನ್‌ ಥಾಮಸ್‌ ಸಿ ಮತ್ತು ಬಿ ಉನದ್ಕತ್‌  21
ಆ್ಯಶ್ಲೆ ನರ್ಸ್‌ ಸಿ ಕೌಲ್‌ ಬಿ ಜಯದೇವ್‌ ಉನದ್ಕತ್‌  10
ನಿಕಿತಾ ಮಿಲ್ಲರ್‌ ಔಟಾಗದೆ  02
ವೀರಸ್ವಾಮಿ ಪೆರುಮಾಳ್‌ ಸಿ ಪಠಾಣ್‌ ಬಿ ಆರ್‌. ವಿನಯ್‌ ಕುಮಾರ್‌ 02
ಮಿಗುಯೆಲ್‌ ಕಮಿನ್ಸ್‌ ಔಟಾಗದೆ  00
ಇತರೆ: (ಲೆಗ್‌ಬೈ–10, ವೈಡ್‌–5)  15
ವಿಕೆಟ್‌ ಪತನ: 1–74 (ಪೊವೆಲ್‌; 13.2), 2–79 (ಫ್ಲೆಚರ್‌; 15.4), 3–145 (ಕಾರ್ಟರ್‌; 28.4), 4–238 (ಜಾನ್ಸನ್‌; 41.6), 5–255 (ರಸೆಲ್‌; 43.2), 6–295 (ಥಾಮಸ್‌; 46.5), 7–308 (ನರ್ಸ್‌; 48.3), 8–308 (ಎಡ್ವರ್ಡ್ಸ್‌; 48.4), 9–311 (ಪೆರುಮಾಳ್‌; 49.3)
ಬೌಲಿಂಗ್‌: ಆರ್. ವಿನಯ್‌ ಕುಮಾರ್‌ 10–1–56–1, ಜಯ­ದೇವ್‌ ಉನದ್ಕತ್‌ 10–0–55–5, ಸಿದ್ಧಾರ್ಥ್‌ ಕೌಲ್‌ 7–0–56–0, ಶಹಬಾಜ್‌ ನದೀಮ್‌ 9–1–33–2, ಯೂಸುಫ್‌ ಪಠಾಣ್‌ 5–0–38–0, ಯುವರಾಜ್‌ 5–0–34–0, ಬಾಬಾ ಅಪರಾಜಿತ್‌ 4–0–30–1

ಭಾರತ ‘ಎ’: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 267
ರಾಬಿನ್‌ ಉತ್ತಪ್ಪ ರನೌಟ್‌  27
ಬಾಬಾ ಅಪರಾಜಿತ್‌ ಬಿ ವೀರಸ್ವಾಮಿ ಪೆರುಮಾಳ್‌  78
ನಮನ್‌ ಓಜಾ ಸಿ ಥಾಮಸ್‌ ಬಿ ಕಾರ್ಟರ್‌  00
ಯುವರಾಜ್‌ ಸಿಂಗ್‌ ಬಿ ಆ್ಯಶ್ಲೆ ನರ್ಸ್‌  61
ಕೇದಾರ್‌ ಜಾಧವ್‌ ಸಿ ಮಿಲ್ಲರ್‌ ಬಿ ಕಮಿನ್ಸ್‌  17
ಯೂಸುಫ್‌ ಪಠಾಣ್‌ ಬಿ ಮಿಗುಯೆಲ್‌ ಕಮಿನ್ಸ್‌  18
ಆರ್‌. ವಿನಯ್‌ ಕುಮಾರ್‌ ಔಟಾಗದೆ  37
ಶಹಬಾಜ್‌ ನದೀಮ್‌ ಬಿ ವೀರಸ್ವಾಮಿ ಪೆರುಮಾಳ್‌  06
ಸಿದ್ಧಾರ್ಥ್‌ ಕೌಲ್‌ ಸಿ ನರ್ಸ್‌ ಬಿ ಪೆರುಮಾಳ್‌  06
ಜಯದೇವ್‌ ಉನದ್ಕತ್‌ ಔಟಾಗದೆ  01
ಇತರೆ: (ಬೈ–4, ಲೆಗ್‌ಬೈ–1, ವೈಡ್‌–11)  16
ವಿಕೆಟ್‌ ಪತನ: 1–46 (ರಾಬಿನ್‌; 8.6), 2–46 (ಓಜಾ; 9.5), 3–158 (ಯುವರಾಜ್‌; 29.2), 4–181 (ಅಪರಾಜಿತ್‌; 32.6), 5–197 (ಜಾಧವ್‌; 37.1), 6–227 (ಪಠಾಣ್‌; 41.3), 7–234 (ನದೀಮ್‌; 42.5), 8–250 (ಕೌಲ್‌; 46.2)
ಬೌಲಿಂಗ್‌: ಮಿಗುಯೆಲ್‌ ಕಮಿನ್ಸ್‌ 10–0–46–2, ಆ್ಯಂಡ್ರೆ ರಸೆಲ್‌ 10–0–52–0, ಜೊನಾಥನ್‌ ಕಾರ್ಟರ್‌ 6–0–27–1, ನಿಕಿತಾ ಮಿಲ್ಲರ್‌ 5–0–40–0, ಆ್ಯಶ್ಲೆ ನರ್ಸ್‌ 9–0–42–1, ವೀರಸ್ವಾಮಿ ಪೆರುಮಾಳ್‌ 10–0–55–3

ಫಲಿತಾಂಶ: ವೆಸ್ಟ್‌ ಇಂಡೀಸ್‌ ‘ಎ’ ತಂಡಕ್ಕೆ 45 ರನ್‌ ಜಯ; 2–1 ರಲ್ಲಿ ಸರಣಿ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT