ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕೆಟ್ ಬೇಟೆಗಾರ ವಿನಯ್

Last Updated 16 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

“ಡಿಸೆಂಬರ್ 19ರಂದು ಪುಣೆಯಲ್ಲಿ ಭಾರತ ತಂಡಕ್ಕೆ ವರದಿ ಮಾಡಿಕೊಳ್ಳಬೇಕು. 18ರಂದು ಇಲ್ಲಿಯ ಪಂದ್ಯ ಮುಗಿಸಿ ಹೊರಡುತ್ತೇನೆ. ರಾಷ್ಟ್ರೀಯ ತಂಡದಲ್ಲಿ ಆಡಲು ಆವಕಾಶ ಸಿಕ್ಕಿರುವುದು ಖುಷಿಯ ಸಂಗತಿ. ಈ ಬಾರಿ ಉತ್ತಮ ಪ್ರದರ್ಶನ ನೀಡಿ, ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ”-

ಇಂಗ್ಲೆಂಡ್ ವಿರುದ್ಧದ ಟ್ವೆಂಟಿ -20 ಸರಣಿಗೆ ಆಯ್ಕೆಯಾಗಿರುವ  ಕರ್ನಾಟಕ ರಣಜಿ ತಂಡದ ನಾಯಕ ಆರ್. ವಿನಯಕುಮಾರ್ ಮಾತುಗಳಲ್ಲಿ ಹೆಚ್ಚಿನ ಆವೇಶ, ಅತ್ಯುತ್ಸಾಹ ಇರಲಿಲ್ಲ. ಸಮಾಧಾನಚಿತ್ತದಿಂದ, ಸ್ಥಿತಪ್ರಜ್ಞನಂತೆ ಮಾತನಾಡಿದರು.

ಮೈಸೂರಿನಲ್ಲಿ ವಿದರ್ಭ ವಿರುದ್ಧದ ಪಂದ್ಯ ಆಡಲು ಬರುವ ಮುನ್ನಾದಿನವೇ ಅವರಿಗೆ ಆಯ್ಕೆಯ ಸಿಹಿಸುದ್ದಿ ಸಿಕ್ಕಿತ್ತು. ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಅಭ್ಯಾಸದ ನಂತರ ಮಾತಿಗೆ ಸಿಕ್ಕಿದ್ದರು. ಆದರೆ ಯಾವಾಗಲೂ ಮಿತಭಾಷಿಯಾಗಿರುವ ವಿನಯ್ ತಮ್ಮ ಆಯ್ಕೆಯ ಬಗ್ಗೆಯೂ ಹೆಚ್ಚು ಮಾತನಾಡಲಿಲ್ಲ. ಆದರೆ ಅವರಾಡಿದ ಕೆಲವೇ ಮಾತುಗಳು ಅವರ ಎಸೆತಗಳಂತೆಯೇ ನಿಖರವಾಗಿದ್ದವು.

ಹೆಚ್ಚು ವೇಗವಿಲ್ಲದಿದ್ದರೂ ಕರಾರುವಾಕ್ ಸ್ವಿಂಗ್ ಮತ್ತು ವಿಕೆಟ್ ಟು ವಿಕೆಟ್ ಬೌಲಿಂಗ್ ಮಾಡುವ ಕಲೆಯನ್ನು ಕಳೆದ ಒಂಬತ್ತು ವರ್ಷಗಳಲ್ಲಿ ವಿನಯ್ ಒಲಿಸಿಕೊಂಡಿದ್ದಾರೆ. ಆದರೆ ಭಾರತ ತಂಡದಲ್ಲಿ ಅವರಿಗೆ ನಿರಂತರವಾಗಿ ಆಡುವ ಅವಕಾಶ ಇನ್ನೂ ಸಿಗುತ್ತಿಲ್ಲ. ಯಾರಾದರೂ ಗಾಯಗೊಂಡಾಗ ಮಾತ್ರ ವಿನಯ್ ಹೆಸರು ಆಯ್ಕೆದಾರರಿಗೆ ನೆನಪಾಗುತ್ತಿದೆ. 

ಕಳೆದ ಮಾರ್ಚ್‌ನಲ್ಲಿ  ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಚುಟುಕು ಪಂದ್ಯದಲ್ಲಿ ಆಡಿದ ನಂತರ ಈಗ ಅವರಿಗೆ ಮತ್ತೆ ಅವಕಾಶ ಸಿಕ್ಕಿದೆ. ಅದೂ ಲಕ್ಷ್ಮೀಪತಿ ಬಾಲಾಜಿ ಗಾಯಗೊಂಡಿದ್ದರಿಂದ ಅವರ ಜಾಗದಲ್ಲಿ ವಿನಯ್ ಆಡಲಿದ್ದಾರೆ. 2010ರಲ್ಲಿ ನಡೆದ ಐಸಿಸಿ ಟ್ವೆಂಟಿ -20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ವಿನಯ್  ಗ್ಯಾರೋಸ್ ಐಲೆಟ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ ಎರಡು ವಿಕೆಟ್ ಕೂಡ ಗಳಿಸಿದರು. ಎಂಟು ಟಿ-20 ಪಂದ್ಯಗಳಲ್ಲಿ ಏಳು ವಿಕೆಟ್ ಗಳಿಸಲು ಅವರಿಗೆ ಸಾಧ್ಯವಾಗಿದೆ.

ತಾವಾಡಿದ 22 ಏಕದಿನ ಪಂದ್ಯಗಳಲ್ಲಿ 28 ವಿಕೆಟ್ ಕಬಳಿಸಿದ್ದಾರೆ.  ಕಳೆದ ವರ್ಷ ದೆಹಲಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ (30ಕ್ಕೆ4) ತೋರಿದ್ದ ಉತ್ತಮ ಪ್ರದರ್ಶನ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ. ಟೆಸ್ಟ್‌ನಲ್ಲಿ ಮಾತ್ರ ಇದುವರೆಗೆ ಒಂದೇ ಪಂದ್ಯದಲ್ಲಿ ಆಡುವ ಅವಕಾಶ ಅವರಿಗೆ ಸಿಕ್ಕಿದೆ.

ಸಾಧನೆಯ ಹಸಿವು: 2007-08ರ ಅವಧಿಯಲ್ಲಿಯೇ ವಿನಯ್ ಭಾರತ ತಂಡಕ್ಕೆ ಸೇರುವ ನಿರೀಕ್ಷೆ ಕ್ರಿಕೆಟ್‌ಪ್ರೇಮಿಗಳಲ್ಲಿ ಮೂಡಿತ್ತು. ಅದಕ್ಕೆ ಕಾರಣವೂ ಇತ್ತು. ಅವರು 2004-05ರಲ್ಲಿ ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದಲೂ ಹಿಂದಿರುಗಿ ನೋಡಿದ್ದೇ ಇಲ್ಲ. ತಾವಾಡಿದ ಮೊದಲ ಮೂರು ಋತುಗಳಲ್ಲಿಯೂ ತಲಾ 20 ವಿಕೆಟ್ ಗಳಿಸಿ ಗಮನ ಸೆಳೆದರು.

2007-08ರಲ್ಲಿ ರಣಜಿ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ದ್ವಿತೀಯ ಬೌಲರ್ ಆಗಿದ್ದ ವಿನಯ್, ಇಂಡಿಯನ್ ಪ್ರೀಮಿಯರ್ ಲೀಗ್‌ನ ರಾಯಲ್ ಚಾಲೆಂಜರ್ಸ್‌ ತಂಡದ ಗಮನ ಸೆಳೆದರು. ಐಪಿಎಲ್‌ನಲ್ಲಿಯೂ ಮಿಂಚಿದರು. 2009-10ನೇ ಸಾಲಿನಲ್ಲಿ 46 ವಿಕೆಟ್ ಕಬಳಿಸುವ ಮೂಲಕ ಆ ಟೂರ್ನಿಯ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಎನಿಸಿದ್ದರು. ಎಸ್. ಅರವಿಂದ್ ಮತ್ತು ಅಭಿಮನ್ಯು ಮಿಥುನ್ ಅವರ ನೆರವಿನಿಂದ ಕರ್ನಾಟಕವನ್ನು ಆ ವರ್ಷದ ರಣಜಿ  ಟೂರ್ನಿಯ ಫೈನಲ್ ಪ್ರವೇಶಿಸಲೂ ಕಾರಣವಾಗಿದ್ದರು.

ಪ್ರಥಮ ದರ್ಜೆ ಪಂದ್ಯಗಳಲ್ಲಿ ನಿರಂತರವಾಗಿ ವಿಕೆಟ್ ಬೇಟೆಯಾಡುವ ಬೇಟೆಗಾರ ವಿನಯ್. ಪ್ರಸಕ್ತ ಋತುವಿನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿರುವುದು ಅವರ ಮೊನಚಾದ ಬೌಲಿಂಗ್‌ನ ಸಾಮರ್ಥ್ಯವನ್ನು ತೋರಿಸುತ್ತದೆ. ಟೂರ್ನಿಯ ನಡುವೆ ಗಾಯದ ಸಮಸ್ಯೆಯಿಂದ ಒಂದು ಪಂದ್ಯದಿಂದ ಹೊರಗುಳಿದಿದ್ದರು. ಚೇತರಿಸಿಕೊಂಡು ಬಂದ ನಂತರ ವಿಕೆಟ್‌ಗಳ ಭರ್ಜರಿ ಬೇಟೆಯಾಡಿದರು. ಬೆಂಗಳೂರಿನಲ್ಲಿ ಒಡಿಶಾ ವಿರುದ್ಧದ ಪಂದ್ಯದಲ್ಲಿ ಎರಡು ಇನಿಂಗ್ಸ್‌ನಿಂದ ಹತ್ತು ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಕಳೆದ ಪಂದ್ಯದಲ್ಲಿಯೂ ದೆಹಲಿ ವಿರುದ್ಧ ಐದು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಟ್ಟು 271 ವಿಕೆಟ್ ಗಳಿಸಿರುವ ವಿನಯ್‌ಕುಮಾರ್ ಕೆಲವು ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ `ಆಲ್‌ರೌಂಡರ್' ಕೂಡ ಆಗಿದ್ದಾರೆ. ಕರ್ನಾಟಕ ತಂಡಕ್ಕೆ ಒಂದೊಮ್ಮೆ ಬೌಲಿಂಗ್ ಶಕ್ತಿಯಾಗಿದ್ದ ವೆಂಕಟೇಶ್ ಪ್ರಸಾದ್, ದೊಡ್ಡಗಣೇಶ್, ಡೇವಿಡ್ ಜಾನ್ಸನ್ ಅವರ ಸ್ಥಾನವನ್ನು ವಿನಯಕುಮಾರ್ ಸಮರ್ಥವಾಗಿ ತುಂಬಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇನ್‌ಸ್ವಿಂಗರ್, ಲೆಗ್‌ಕಟರ್‌ಗಳನ್ನು ನಿಖರವಾಗಿ ಪ್ರಯೋಗಿಸುವ ಸಾಮರ್ಥ್ಯವನ್ನು ಹಲವು ಬಾರಿ ಪ್ರದರ್ಶಿಸಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಅವಕಾಶಗಳು ಹೆಚ್ಚು ಸಿಗದಿದ್ದರೂ, ಪ್ರಥಮ ದರ್ಜೆಯಲ್ಲಿ ಅವರ ವಿಕೆಟ್ ದಾಹ ತೀರಿಲ್ಲ.

`ಏಳೆಂಟು ತಿಂಗಳು ದೊಡ್ಡ ಅವಧಿಯೇನಲ್ಲ. ಅವಕಾಶ ಸಿಕ್ಕಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳುತ್ತೇನೆ. ದೇಶಕ್ಕಾಗಿ ಆಡುವುದೇ ಒಂದು ದೊಡ್ಡ ಗೌರವ. ಅದನ್ನು ನಿರಂತರವಾಗಿ ಗಳಿಸಿಕೊಳ್ಳಲು ಶ್ರಮಿಸುತ್ತೇನೆ' ಎನ್ನುವ 28 ವರ್ಷದ  ವಿನಯ್, ದಾವಣಗೆರೆಯಿಂದ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದು ಬಂದ ಕಷ್ಟದ ಹಾದಿಯನ್ನೂ ಮರೆತಿಲ್ಲ. ಕ್ರಿಕೆಟ್‌ನ ಮೂರು ಮಾದರಿಗಳಲ್ಲಿಯೂ ಆಡುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ. ಜೊತೆಗೆ ನಿರಾಶೆ, ಹತಾಶೆಗಳನ್ನು ನಿಭಾಯಿಸುವ ಶಕ್ತಿಯನ್ನೂ ವೃದ್ಧಿಸಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT