ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಾಪುರ ಕ್ರೀಡಾನಿಲಯ ತಂಡಕ್ಕೆ ಪ್ರಶಸ್ತಿ

ಸೈಕ್ಲಿಂಗ್: ಶೈಲಾಗೆ ನಾಲ್ಕು ಚಿನ್ನ, ರೋಮಾಂಚನ ಮೂಡಿಸಿದ ಕ್ರೈಟೀರಿಯಂ
Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಗದಗ: ಅಜೇಯ ಓಟ ಮುಂದುವರಿಸಿದ ವಿಜಾಪುರ ಸೈಕ್ಲಿಂಗ್ ಕ್ರೀಡಾನಿಲಯ ತಂಡದವರು ಭಾನುವಾರ ಮುಕ್ತಾಯಗೊಂಡ ರಾಜ್ಯ ಮಟ್ಟದ ಎಂಟನೇ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಆರಂಭದಿಂದಲೇ ಪದಕ ಬೇಟೆ ಮಾಡುತ್ತ ಬಂದ ಈ ತಂಡದ ಸೈಕ್ಲಿಸ್ಟ್‌ಗಳು ಎಂಟು ಚಿನ್ನದೊಂದಿಗೆ ಒಟ್ಟು 72 ಪಾಯಿಂಟ್ ಕಲೆ ಹಾಕಿದರು. ಶೈಲಾ ಮಟ್ಯಾಳ ತಂದುಕೊಟ್ಟ ನಾಲ್ಕು ಚಿನ್ನದೊಂದಿಗೆ ಒಟ್ಟು ಐದು ಚಿನ್ನದ ಪದಕಗಳನ್ನು ಬಗಲಿಗೆ ಹಾಕಿಕೊಂಡ ಬಾಗಲಕೋಟೆ ಜಿಲ್ಲಾ ತಂಡ 37 ಪಾಯಿಂಟ್‌ಗಳೊಂದಿಗೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.  

ಭಾನುವಾರ ವಿಜಾಪುರ ಜಿಲ್ಲಾ ತಂಡದವರು ತೀವ್ರ ಪ್ರತಿರೋಧ ಒಡ್ಡಿ ಒಟ್ಟು 11 ಸ್ಪರ್ಧೆಗಳ ಪೈಕಿ ನಾಲ್ಕರಲ್ಲಿ ಚಿನ್ನ ಗೆದ್ದುಕೊಂಡರೂ, ವಿಜಾಪುರ ಕ್ರೀಡಾ ನಿಲಯ ಮತ್ತು ಬಾಗಲಕೋಟೆ ಜಿಲ್ಲಾ ತಂಡವನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ. 

ನಗರ ಮಧ್ಯದಲ್ಲಿ ರೋಮಾಂಚನದ ಅಲೆ ಎಬ್ಬಿಸಿದ ಕ್ರೈಟೀರಿಯಂ ರೇಸ್‌ನಲ್ಲಿ ಪುರುಷ ಹಾಗೂ ಮಹಿಳಾ ವಿಭಾಗಗಳೆರಡರಲ್ಲೂ ವಿಜಾಪುರ ತಂಡದವರು ಪಾರುಪತ್ಯ ಮೆರೆದರು. 30 ಕಿಮೀ ಸ್ಪರ್ಧೆಯಲ್ಲಿ ಲಕ್ಷ್ಮಣ ಕುರಣಿ ಮತ್ತು ಆಸಿಫ್ ಅತ್ತರ್ ಮೊದಲೆರಡು ಪದಕಗಳನ್ನು ಗೆದ್ದುಕೊಂಡರು.

ಪುರುಷರ ಕ್ರೈಟೀರಿಯಂ ಸ್ಪರ್ಧೆ ಸುಮಾರು ಒಂದೂವರೆ ತಾಸು ಕಾಲ ನಗರ ನಿವಾಸಿಗಳಿಗೆ ರೋಮಾಂಚಕಾರಿ ಅನುಭವ ನೀಡಿತು. ಫ್ರೀ ಲ್ಯಾಪ್‌ಗಳಲ್ಲಿ ಕೂಡ ವೀರಾವೇಶದ ಓಟ ಪ್ರದರ್ಶಿಸಿದ 17 ಮಂದಿ ಸೈಕ್ಲಿಸ್ಟ್‌ಗಳು ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜು ದಾಟಿ ಇಳಿಜಾರು ಪ್ರದೇಶದಿಂದ ಕ್ಷಿಪಣಿಯ ವೇಗದಲ್ಲಿ ಮುನ್ನುಗ್ಗುತ್ತಿದ್ದಂತೆ ಪ್ರೇಕ್ಷಕರ ಎದೆಯಲ್ಲಿ ಮಿಂಚು ಹರಿಯಿತು.

ಸ್ಪರ್ಧೆಯ ಆರಂಭದಿಂದಲೇ ಮುನ್ನಡೆಯನ್ನು ಕಾಯ್ದುಕೊಂಡ ಕ್ರೈಟೀರಿಯಂ ಪರಿಣಿತ ಲಕ್ಷ್ಮಣ ಕುರಣಿ ಒಂದು ಮತ್ತು ಮೂರನೇ ಲ್ಯಾಪ್‌ನಲ್ಲಿ ಪೂರ್ಣ ಪಾಯಿಂಟ್ ಗಳಿಸಿದರು. ಇವರಿಗೆ ಸವಾಲಾಗಿ ನಿಂತ ಆಸಿಫ್ ಅತ್ತರ್ ಎರಡು ಮತ್ತು ನಾಲ್ಕನೇ ಲ್ಯಾಪ್‌ನಲ್ಲಿ ಪೂರ್ಣ ಪಾಯಿಂಟ್ ಗಳಿಸಿ ಸ್ಪರ್ಧೆಗೆ ಇನ್ನಷ್ಟು ಜೀವ ತುಂಬಿದರು. ಆದರೆ ಎಲ್ಲ ಲ್ಯಾಪ್‌ಗಳಲ್ಲೂ ಚಾಕಚಕ್ಯತೆ ಪ್ರದರ್ಶಿಸಿದ ಲಕ್ಷಣ 20 ಪಾಯಿಂಟ್ ಗಳಿಸಿ ಚಿನ್ನಕ್ಕೆ ಮುತ್ತು ನೀಡಿದರು. ಆಸಿಫ್ 13 ಪಾಯಿಂಟ್ ಪಡೆದರೆ ಡಬಲ್ ಪಾಯಿಂಟ್ ಇದ್ದ ಅಂತಿಮ ಸುತ್ತಿನಲ್ಲಿ ಮಾತ್ರ ಮುಂದೆ ಸಾಗಿದ ರಾಷ್ಟ್ರೀಯ ಸೈಕ್ಲಿಸ್ಟ್ ಭೀಮಪ್ಪ `ಬಂಪರ್' ಹೊಡೆದರು.

ಮಹಿಳಾ ವಿಭಾಗದ ಕದನ  ಸ್ಪರ್ಧೆಯುದ್ದಕ್ಕೂ ಕುತೂಹಲದಿಂದ ಕೂಡಿತ್ತು. ಬಾಲಕಿಯರ ವಿಭಾಗದ ಟೈಮ್ ಟ್ರಯಲ್‌ನಲ್ಲಿ ಶನಿವಾರ ಬಂಗಾರ ಗಳಿಸಿದ ಬಾಗಲಕೋಟೆಯ ಶೈಲಾ ಮಟ್ಯಾಳ ಅಂತಿಮ ಲ್ಯಾಪ್‌ನಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದರು.  ರಾಷ್ಟ್ರೀಯ ಸೈಕಲ್ ಪಟು ಶೈಲಾ, ಕೊನೆಯ ಹಂತದಲ್ಲಿ ವಾಯುವೇಗದಲ್ಲಿ ಮುನ್ನುಗ್ಗಿ `ಡಬಲ್' ಪಾಯಿಂಟ್ ಬುಟ್ಟಿಗೆ ಹಾಕಿಕೊಂಡು ಸಾಹಿರಾ ಅತ್ತರ್ (8 ಪಾಯಿಂಟ್) ಮತ್ತು ಗೀತಾಂಜಲಿ ಜೋತೆಪ್ಪನವರ (7 ಪಾಯಿಂಟ್) ಅವರನ್ನು ಹಿಂದಿಕ್ಕಿದರು. `ಬ್ಲಾಕಿಂಗ್' ಆರೋಪದ ಹಿನ್ನೆಲೆಯಲ್ಲಿ ಪುರುಷ ಸೈಕ್ಲಿಸ್ಟ್‌ಗಳು ವಾಗ್ವಾದಕ್ಕಿಳಿದ ಘಟನೆಗೂ ಕ್ರೈಟೀರಿಯಂ ಸಾಕ್ಷಿಯಾಯಿತು.

   ಫಲಿತಾಂಶಗಳು: ಪುರುಷರ ವಿಭಾಗ
30 ಕಿಮೀ ಕ್ರೈಟೀರಿಯಂ ರೇಸ್:  ಲಕ್ಷ್ಮಣ ಕುರಣಿ-1, ಆಸಿಫ್ ಅತ್ತರ್-2 (ವಿಜಾಪುರ ಜಿಲ್ಲಾ ತಂಡ), ಭೀಮಪ್ಪ ವಿಜಯನಗರ (ಬೆಳಗಾವಿ)-3; 100 ಕಿಮೀ ಮಾಸ್ ಸ್ಟಾರ್ಟ್: ಯಲಗುರೇಶ ಗಡ್ಡಿ (ವಿಜಾಪುರ)-2, ಶ್ರೀಶೈಲ ಲಾಯಣ್ಣವರ (ಗದಗ)-2, ರಾಮಪ್ಪ (ಬಾಗಲಕೋಟೆ)-3.

ಮಹಿಳೆಯರ ವಿಭಾಗ: 20 ಕಿಮೀ ಕ್ರೈಟೀರಿಯಂ ರೇಸ್:  ಶೈಲಾ ಮಟ್ಯಾಳ (ಬಾಗಲಕೋಟೆ)-1, ಸಾಹಿರಾ ಅತ್ತರ್ (ವಿಜಾಪುರ)-2, ಗೀತಾಂಜಲಿ ಯೋತೆಪ್ಪನವರ (ವಿಜಾಪುರ)-3; 60 ಕಿಮೀ ಮಾಸ್ ಸ್ಟಾರ್ಟ್: ಗೀತಾಂಜಲಿ ಜೋತೆಪ್ಪನವರ-1, ಸಾಹಿರಾ ಅತ್ತರ್ (ವಿಜಾಪುರ)-2, ಸವಿತಾ ಗೌಡರ್ (ಬಾಗಲಕೋಟೆ)-3.

ಬಾಲಕರ ವಿಭಾಗ: 18 ವರ್ಷದೊಳಗಿನವರ 60 ಕಿಮೀ ಮಾಸ್ ಸ್ಟಾರ್ಟ್: ರಾಜು ಕುರಣಿ (ವಿಜಾಪುರ ಕ್ರೀಡಾ ನಿಲಯ)-1, ಸದಾಶಿವ ನಾಡಿಕರ್ (ಬಾಗಲಕೋಟೆ)-2, ಮಲಿಕ್ ಅತ್ತರ್ (ವಿಜಾಪುರ)-3; 14 ವರ್ಷದೊಳಗಿನವರ 10 ಕಿಮೀ ಮಾಸ್ ಸ್ಟಾರ್ಟ್: ರಾಜು ಭಾಟಿ-1, ಆನಂದ ದಂಡಿನ-2 (ಇಬ್ಬರೂ ವಿಜಾಪುರ ಕ್ರೀಡಾ ನಿಲಯ), ಯಂಕಣ್ಣ ಕೆಂಗಲಗಟ್ಟಿ (ಬಾಗಲಕೋಟೆ ಕ್ರೀಡಾನಿಯಲ)-3.  

ಬಾಲಕಿಯರ ವಿಭಾಗ:
18 ವರ್ಷದೊಳಗಿನವರ 40 ಕಿಮೀ ಮಾಸ್ ಸ್ಟಾರ್ಟ್: ರೇಣುಕಾ ದಂಡಿನ (ವಿಜಾಪುರ ಕ್ರೀಡಾ ನಿಲಯ)-1, ಭಾಗ್ಯಶ್ರೀ (ಬಾಗಲಕೋಟೆ)-2, ಶ್ರೀದೇವಿ ನಿಕಂ (ವಿಜಾಪುರ)-3; 16 ವರ್ಷದೊಳಗಿನವರ 20 ಕಿಮೀ ಮಾಸ್ ಸ್ಟಾರ್ಟ್: ಶೈಲಾ ಮಟ್ಯಾಳ (ಬಾಗಲಕೋಟೆ)-1, ಮೇಘಾ ಗೂಗಲ್ -2, ಸಾಹಿರ ಬಾನು ಲೋಧಿ (ಇಬ್ಬರೂ ವಿಜಾಪುರ ಕ್ರೀಡಾ ನಿಲಯ)-3; 14 ವರ್ಷದೊಳಗಿನವರ 10 ಕಿಮೀ ಮಾಸ್ ಸ್ಟಾರ್ಟ್: ಶೈಲಾ ಮಟ್ಯಾಳ (ಬಾಗಲಕೋಟೆ)-1, ಮೇಘಾ ಗೋಗವಾಡ -2, ಆರತಿ ಭಾಟಿ (ಇಬ್ಬರೂ ವಿಜಾಪುರ ಕ್ರೀಡಾನಿಲಯ). 

ಹಿರಿಯರ ವಿಭಾಗ: 10 ಕಿಮೀ ಸೈಕಲ್ ರೇಸ್: ಅಜಿತ್ ಸಾವಂತನವರ-1, ಬಸಪ್ಪ ಹಡಪದ-2 (ಇಬ್ಬರೂ ಬಾಗಲಕೋಟೆ).

ಮುಕ್ತ ವಿಭಾಗ: 20 ಕಿಮೀ ಭಾರತೀಯ ಸೈಕಲ್ ರೇಸ್: ಯಲಗುರೇಶ ಗಡ್ಡಿ (ವಿಜಾಪುರ)-1, ಅಡಿವೆಪ್ಪ ಅವಟಿ (ವಿಜಾಪುರ)-2, ಪ್ರವೀಣ ಮಕ್ಕಳಗೇರಿ (ಬೆಳಗಾವಿ)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT