ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೃಂಭಣೆಯ ವೈಕುಂಠ ಏಕಾದಶಿ

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವೈಕುಂಠ ಏಕಾದಶಿಯ ಪ್ರಯುಕ್ತ ನಗರದಲ್ಲಿರುವ ವೆಂಕಟರಮಣ ದೇವಸ್ಥಾನಗಳಲ್ಲಿ ಗುರುವಾರ ವಿಶೇಷ ಪೂಜೆ ಮತ್ತು ಪುನಸ್ಕಾರ ಕಾರ್ಯಕ್ರಮ ನಡೆಯಿತು. ಬೆಳಗಿನ ಜಾವದಿಂದಲೇ ದೇವಸ್ಥಾನಗಳಲ್ಲಿ ಭಕ್ತರು ಭಾರಿ ಸಂಖ್ಯೆಯಲ್ಲಿ ಸರದಿ ಸಾಲಿನಲ್ಲಿ ನಿಂತ ದೃಶ್ಯ ಸಾಮಾನ್ಯವಾಗಿತ್ತು.

ವೈಯಾಲಿಕಾವಲ್‌ನಲ್ಲಿರುವ ತಿರುಮಲ ತಿರುಪತಿ ದೇವಸ್ಥಾನ, ಕೆ.ಆರ್.ಮಾರುಕಟ್ಟೆಯ ಕೋಟೆ ವೆಂಕಟರಮಣ ದೇವಸ್ಥಾನ, ದೇವಗಿರಿಯ ಶ್ರೀನಿವಾಸ ದೇವಸ್ಥಾನ, ರಾಜಾಜಿನಗರದಲ್ಲಿರುವ ಇಸ್ಕಾನ್ ದೇವಾಲಯ, ಜೆ.ಪಿ.ನಗರದ ಲಕ್ಷ್ಮಿವೆಂಕಟರಮಣ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ದೇವರ ಮೂರ್ತಿಗೆ ವಿಶೇಷ ಅಭಿಷೇಕ ನಡೆದವು.

ಏಕಾದಶಿಯಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ಪುರಾಣದಲ್ಲಿ ಉಲ್ಲೇಖವಿರುವ ಹಿನ್ನೆಲೆಯಲ್ಲಿ ಕೆಲವು ದೇವಸ್ಥಾನಗಳಲ್ಲಿ ಸಪ್ತಬಾಗಿಲುಗಳನ್ನು ಹೂವಿನಲ್ಲಿ ನಿರ್ಮಿಸಿ, ಅಲಂಕಾರ ಮಾಡಲಾಗಿತ್ತು. ದೇಗುಲಗಳಲ್ಲಿ ವೆಂಕಟರಮಣನ ಸ್ಮರಣೆಯು ಮೊಳಗಿತು.

ಮಹಿಳೆಯರು ಮಡಿಯುಟ್ಟು ಬೆಳ್ಳಂಬೆಳಿಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ದಿನವೀಡಿ ಉಪವಾಸವಿದ್ದು ವ್ರತಾಚರಣೆ ನಡೆಸಿದರು. ಜನರು ಸರತಿ ಸಾಲಿನಲ್ಲಿ ನಿಂತು ವೆಂಕಟರಮಣನ ದರ್ಶನ ಪಡೆದರು. ಮಧ್ಯಾಹ್ನದ ವೇಳೆಗೆ ಭಕ್ತರ ಸಂಖ್ಯೆ ಹೆಚ್ಚಾಯಿತು. ಕೆಲವು ದೇವಸ್ಥಾನಗಳಲ್ಲಿ ಭಕ್ತರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ವಿವಿಧ ಮಂತ್ರ ಘೋಷಗಳ ನಡುವೆ ಸಾಮೂಹಿಕ ಪ್ರಾರ್ಥನೆ ಜರುಗಿತು. ಬಹುತೇಕ ದೇವಸ್ಥಾನದಲ್ಲಿ ಲಾಡು, ಇತರೆ ಪ್ರಸಾದಗಳನ್ನು ವಿತರಿಸಲಾಯಿತು.

ವೆಂಕಟರಮಣನ ಕುರಿತು  ಕೀರ್ತನೆ, ದೇವರನಾಮ ಗಾಯನ ಕಾರ್ಯಕ್ರಮಗಳು ನಡೆದವು. ಚಿಣ್ಣರು ಗೋವಿಂದನ ಕುರಿತು ಸ್ತೋತ್ರ ಪಠಿಸಿದರು. ಇಸ್ಕಾನ್ ದೇವಸ್ಥಾನದಲ್ಲಿ ವೆಂಕಟರಮಣ ಮೂರ್ತಿಯು ವಜ್ರಾಂಗಿ ಅಲಂಕಾರದಿಂದ ಕಂಗೊಳಿಸಿತು. ಸಾಮೂಹಿಕ ನಾರಾಯಣನ ಭಜನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT