ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ್ ಕೈಗಾರಿಕಾ ಕೇಂದ್ರ ಮುಚ್ಚುವ ಭೀತಿ

Last Updated 26 ಆಗಸ್ಟ್ 2011, 8:55 IST
ಅಕ್ಷರ ಗಾತ್ರ

ತರೀಕೆರೆ: ಜಿಲ್ಲೆಯ ಏಕೈಕ ಬೃಹತ್ ಕೈಗಾರಿಕಾ ಕೇಂದ್ರವಾಗಿರುವ ವಿಜ್ಞಾನ್ ಕೈಗಾರಿಕಾ ಕೇಂದ್ರವನ್ನು ಬೆಮಲ್ ಆಡಳಿತಕ್ಕೆ ಸಂಪೂರ್ಣವಾಗಿ ವಹಿಸುವಂತೆ ಈಗಾಗಲೇ ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರನ್ನು ಭೇಟಿ ಮಾಡಿ ತಿಳಿಸಲಾಗಿದೆ. ಬೆಮಲ್‌ನ ಆಡಳಿತ ಮಂಡಳಿಯ ಮಲತಾಯಿ ಧೋರಣೆಯಿಂದ ಧರಣಿ ನಡೆಸುವ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಎಂ.ಎಲ್.ಮೂರ್ತಿ ತಿಳಿಸಿದರು.

ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವಿಜ್ಞಾನ್ ಇಂಡಸ್ಟ್ರೀಸ್ ಮುಂಭಾಗದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಧರಣಿಯಲ್ಲಿ ಅವರು ಮಾತನಾಡಿದರು. ಸುಪ್ರೀಂಕೋರ್ಟ್ ಆದೇಶದಂತೆ ಜಿಲ್ಲೆಯ ಮತ್ತೊಂದು ಬೃಹತ್ ಉದ್ದಿಮೆ ಕುದುರೆಮುಖ ಕೈಗಾರಿಕೆ ಮುಚ್ಚಿಹೋಗಿದ್ದು, ತರೀಕೆರೆಯ ವಿಜ್ಞಾನ್ ಇಂಡಸ್ಟ್ರೀಸ್‌ನ್ನು  ಮುಚ್ಚಲು ಬಿಡುವುದಿಲ್ಲ, ಬೀದಿಗಿಳಿದು ಆಡಳಿತ ಮಂಡಳಿಯ ವಿರುದ್ಧ ಹೋರಾಟ ಮಾಡಲಾಗುವುದು ಎಂದರು.

ಕುದುರೆಮುಖ ಕೈಗಾರಿಕೆಯನ್ನು ಪುನರ್ ಚಾಲನೆಗೊಳಿಸಲು ಬಳ್ಳಾರಿ ಜಿಲ್ಲೆಯ ರಮಣದುರ್ಗ ಬೆಟ್ಟದಲ್ಲಿ ಗಣಿಗಾರಿಕೆ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿ ಕಾರ್ಮಿಕರ ನೆರವಿಗೆ ಬರಬೇಕು.  ಕುದುರೆಮುಖ ಮತ್ತು ತರೀಕೆರೆಯ ವಿಜ್ಞಾನ್ ಕೈಗಾರಿಕೆಗೆ ಪುನಶ್ಚೇನ ನೀಡುವುದಾಗಿ ಭರವಸೆ ನೀಡಿದ್ದ ಸಂಸದ ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದು, ಅವರು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಚಿನ್‌ಮಿಗಾ ಮಾತನಾಡಿ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಬೆಮಲ್ ಆಡಳಿತಕ್ಕೆ ವಿಜ್ಞಾನ್ ಕೈ ಗಾರಿಕಾ ಸಂಸ್ಥೆಯನ್ನು ವಿಲೀನಗೊಳಿಸಲು ಕೇಂದ್ರದ ನಾಯಕರಿಗೆ ಜಿಲ್ಲೆಯ ನಾಯಕರು ಇಲ್ಲಿನ ಕಾರ್ಮಿಕರ ಸ್ಥಿತಿಗತಿ ಮತ್ತು ಆರ್ಥಿಕವಾಗಿ ಅನುಭವಿಸುವ ಸಂಕಷ್ಟಗಳನ್ನು ಮನವರಿಕೆ ಮಾಡಿಕೊಡಬೇಕು. ಕಾರ್ಮಿಕರ ಬಗ್ಗೆ ಕನಿಷ್ಠ ಸೌಜನ್ಯ ತೋರದ ಬೆಮಲ್ ಆಡಳಿತ ಮಂಡಳಿಗೆ ತಕ್ಕಪಾಠ ಕಲಿಸಬೇಕು ಎಂದರು.

ಕೆಪಿಸಿಸಿ ಸದಸ್ಯ ಟಿ.ವಿ.ಶಿವಶಂಕರಪ್ಪ, ಮಾಜಿ ಶಾಸಕ ಎಸ್.ಎಂ.ನಾಗರಾಜ್, ಟಿ.ಎಚ್.ಶಿವಶಂಕರಪ್ಪ, ನೀಲಕಂಠಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ.ಕುಮಾರ್, ಮಾಜಿ ಅಧ್ಯಕ್ಷ ಕೆ.ಆರ್.ಧ್ರುವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್‌ಘನಿ ಅನ್ವರ್, ಮುಖಂಡರಾದ ಟಿ.ಆರ್.ನಾಗರಾಜ್, ಜಿ.ಎಚ್.ಶ್ರೀನಿವಾಸ್, ಆರ್.ಮಂಜುನಾಥ್, ಕುವೆಂಪು ವಿವಿಯ ಎನ್‌ಎಸ್‌ಯುಐ ನ ಪ್ರಧಾನ ಕಾರ್ಯದರ್ಶಿ ವಿನಯ್, ವಿಜ್ಞಾನ್ ಇಂಡಸ್ಟ್ರೀಸ್ ಮಜ್ದೂರ್ ಸಂಘ  ಅಧ್ಯಕ್ಷ ಸಿ.ಗೋವಿಂದನ್, ಪದಾಧಿದಿಕಾರಿಗಳಾದ ಜಿ.ಕುಮಾರ್, ಹನುಮಂತಪ್ಪ ಮತ್ತು ಪುರಸಭೆಯ ಸದಸ್ಯರು, ತರೀಕೆರೆಯ ನಾಗರೀಕರು ಹಾಗೂ ಗುತ್ತಿಗೆ ಕಾರ್ಮಿಕರು ಧರಣಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT