ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿತ್ತೀಯ ಸೇರ್ಪಡೆ ನೀತಿ ಅನಿವಾರ್ಯ: ಜೋಶಿ

Last Updated 8 ಅಕ್ಟೋಬರ್ 2011, 10:15 IST
ಅಕ್ಷರ ಗಾತ್ರ

ಮುಡಿಪು: `ದೇಶ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದ್ದರೂ, ಬಡತನದ ಪ್ರಮಾಣ ಕಡಿಮೆಯಾಗಿಲ್ಲ.  ಗ್ರಾಮೀಣಾಭಿವೃದ್ಧಿ, ಕೃಷಿ ಮೊದಲಾದ ಕ್ಷೇತ್ರಗಳಲ್ಲಿ ನಾವು ಬಹಳಷ್ಟು ಹಿಂದುಳಿದಿದ್ದೇವೆ. ಅಭಿವೃದ್ಧಿ ಮತ್ತು ಬಡತನದ ಅಂತರ ಹೋಗಲಾಡಿಸಬೇಕಾದರೆ ವಿತ್ತೀಯ ಸೇರ್ಪಡೆ ನೀತಿ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ~ ಎಂದು ನಿಟ್ಟೆಯ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯೋನೇಜ್‌ಮೆಂಟ್ ಸ್ಟಡೀಸ್‌ನ ಪ್ರೊ.ಜಿ.ವಿ.ಜೋಶಿ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾಲಯದ ಕಾರ್ಪೋರೇಷನ್ ಬ್ಯಾಂಕ್ ಪೀಠದ ವತಿಯಿಂದ ಮಂಗಳೂರು ವಿ.ವಿ.ಯ  ಹಳೆ ಸೆನೆಟ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಭಾರತದಂತಹ ವೈವಿಧ್ಯಮಯ ದೇಶದ ಅಭಿವೃದ್ಧಿ ಚಟುವಟಿಕೆಗಳಲ್ಲಿ ಕೃಷಿ, ಗ್ರಾಮೀಣ ಸಮಾಜ ಹಾಗೂ  ಬಡವರ ಆಶೋತ್ತರಗಳನ್ನು ಈಡೇರಿಸಿದಲ್ಲಿ ಮಾತ್ರ ನಾವು ನೈಜ ಅಭಿವೃದ್ಧಿ ಕಂಡುಕೊಳ್ಳಲು ಸಾಧ್ಯ~ ಎಂದು ಅವರು ಅಭಿಪ್ರಾಯಪಟ್ಟರು.

`ಭಾರತದಲ್ಲಿ ಅನೇಕ ದೊಡ್ಡ ಕಂಪೆನಿಗಳು, ಕಾರ್ಖಾನೆಗಳು ಸ್ಥಾಪನೆಯಾಗುತ್ತಿವೆ. ಇಂತಹ ಕಂಪೆನಿಗಳು ನೆಲೆಯೂರಿದಾಗ ಆ ಭಾಗದಲ್ಲಿ ಜೀವನ ನಡೆಸುತ್ತಿರುವವರಿಗೆ ಯಾವುದೇ ಸಮರ್ಪಕ ಪರಿಹಾರ ಕ್ರಮಗಳು ಜಾರಿಯಾಗುತ್ತಿಲ್ಲ.
 
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಎಸ್‌ಇಝೆಡ್, ಎಂಆರ್‌ಪಿಎಲ್ ಕಂಪೆನಿಗಳು ಬಂದು ಜಿಲ್ಲೆಯು ತೋರ್ಪಡಿಕೆಗೆ ಅಭಿವೃದ್ಧಿಯಾದಂತೆ ಕಾಣುತ್ತದೆ. ಆದರೆ ಇಲ್ಲಿ ಭೂಮಿ ಕಳೆದುಕೊಂಡ ಕೃಷಿಕರು, ಬಡವರ್ಗದ ಜನರಿಗೆ ಸೂಕ್ತ ಪರಿಹಾರ ಸಿಗದೆ ಸಂಕಷ್ಟದ ಬದುಕು ಎದುರಿಸುತ್ತಿದ್ದಾರೆ. ಇಂತಹ ಅಭಿವೃದ್ಧಿ ನಮಗೆ ಬೇಕೇ ಎಂದು ಅವರು ಪ್ರಶ್ನಿಸಿದರು.

`ಬ್ಯಾಂಕ್‌ಗಳು ವಿತ್ತೀಯ ಸೇರ್ಪಡೆ ನೀತಿಯನ್ನು ಅಳವಡಿಸಿ ಗ್ರಾಮೀಣ ಜನರ, ಕೃಷಿಕರ, ಬಡವರ್ಗದವರಿಗೆ ಪ್ರೋತ್ಸಾಹ ನೀಡಬೇಕಾಗಿದೆ. ದಕ್ಷಿಣ ಆಫ್ರಿಕಾ ದೇಶದಲ್ಲಿ ಈ ಕಲ್ಪನೆಯು ಹುಟ್ಟಿದ್ದು ಬಹಳಷ್ಟು ಪರಿಣಾಮಕಾರಿಯಾಗಿದೆ. ಇಂತಹ ಅಭಿವೃದ್ಧಿ ಪ್ರಕ್ರಿಯೆ ಭಾರತದಲ್ಲೂ ಕ್ರಮಬದ್ಧವಾಗಿ ಅಳವಡಿಕೆಯಾದರೆ  ಮಾತ್ರ ನಾವು ನೈಜ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರೊ.ಪಿ.ಪಕೀರಪ್ಪ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾಲಯದ ಕಾರ್ಪೊರೇಷನ್ ಬ್ಯಾಂಕ್ ಪೀಠದ ಸಂಯೋಜಕ ಪ್ರೊ.ಪಿ.ಎ.ರೇಗೊ, ಅರ್ಥಶಾಸ್ತ್ರ ವಿಭಾಗದ ಡಾ.ಶ್ರಿಪತಿ ಕಲ್ಲೂರಾಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT