ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ವಿದೇಶಿ ಸೇಬು ಬದಲು ಸ್ಥಳೀಯ ಹಣ್ಣುಗಳನ್ನೇ ಬಳಸಿ'

Last Updated 1 ಜುಲೈ 2013, 19:51 IST
ಅಕ್ಷರ ಗಾತ್ರ

ಯಲಹಂಕ: `ಮುಂದಿನ ದಿನಗಳಲ್ಲಿ ನಗರಗಳಲ್ಲಿ ಕಡಿಮೆ ಜಾಗದಲ್ಲಿ ನಮಗೆ ಬೇಕಾದ ಆಹಾರ ಪದಾರ್ಥಗಳನ್ನು ನಾವೇ ಬೆಳೆದು ಉಪಯೋಗಿಸುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಉತ್ತಮ ಪರಿಸರ ಹಾಗೂ ಆರೋಗ್ಯ ಕಾಪಾಡಿಕೊಳ್ಳಬಹುದು' ಎಂದು ಅರ್ಕಾವತಿ ಮತ್ತು ಕುಮುದ್ವತಿ ನದಿ ಪುನಶ್ಚೇತನ ಸಮಿತಿಯ ಅಧ್ಯಕ್ಷ ಎಚ್.ಆರ್.ಜಯರಾಂ ಹೇಳಿದರು.

ದೊಡ್ಡಬೊಮ್ಮಸಂದ್ರದಲ್ಲಿ ವ್ಯಾಸ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, `ರಾಸಾಯನಿಕಗಳು ಮತ್ತು ಕಲುಷಿತ ನೀರನ್ನು ಉಪಯೋಗಿಸಿ ಬೆಳೆಯುವ ಆಹಾರ ಪದಾರ್ಥಗಳನ್ನು ದೂರವಿಟ್ಟು, ನಮ್ಮ ಮನೆಯ ಅಂಗಳದಲ್ಲಿ ಸಾವಯವ ಗೊಬ್ಬರವನ್ನು ಬಳಸಿ, ಶ್ರೇಷ್ಠವಾದ ಆಹಾರವನ್ನು ಉತ್ಪಾದನೆ ಮಾಡಿಕೊಳ್ಳಬೇಕು' ಎಂದರು.

`ನ್ಯೂಜಿಲೆಂಡ್ ಹಾಗೂ ಅಮೆರಿಕದ ಸೇಬು ಮತ್ತಿತರ ಹಣ್ಣುಗಳನ್ನು ಆಮದು ಮಾಡಿಕೊಂಡು ತಿನ್ನುವ ಅವಶ್ಯಕತೆಯಿಲ್ಲ. ಬದಲಾಗಿ ಸ್ಥಳೀಯವಾಗಿ ಆಯಾ ಕಾಲಕ್ಕೆ ತಕ್ಕಂತೆ ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ತಿನ್ನಬೇಕು. ನಮ್ಮ ದೇಶದಲ್ಲಿ ಹೆಚ್ಚಾಗಿ ಗೋಧಿ ಮತ್ತು ಅಕ್ಕಿಯನ್ನು ಉಪಯೋಗಿಸಲಾಗುತ್ತಿದ್ದು, ಇದನ್ನು ಬಿಟ್ಟು ರಾಗಿ, ನವಣೆ, ಹುರುಳಿ ಮತ್ತಿತರ ತೃಣಧಾನ್ಯಗಳನ್ನು ಬೆಳೆದು ತಿನ್ನುವುದನ್ನು ರೂಢಿಸಿಕೊಳ್ಳಬೇಕು' ಎಂದರು.

ಪ್ರಾಚಾರ್ಯರಾದ ಬಿ.ಭಾವನಾ ಮಾತನಾಡಿ, `ತರಕಾರಿ ಉದ್ಯಾನದಲ್ಲಿ ನೆಟ್ಟಿರುವ ಸಸಿಗಳನ್ನು ಮಕ್ಕಳೇ ನಿರ್ವಹಣೆ ಮಾಡಲಿದ್ದು, ಮೂರು ತಿಂಗಳ ನಂತರ ಇಲ್ಲಿ ಬೆಳೆದ ತರಕಾರಿಗಳನ್ನು ಪ್ರದರ್ಶಿಸಲು ಹಸಿರುಸಂತೆ (ಮಾರುಕಟ್ಟೆ) ಏರ್ಪಡಿಸಲಾಗುವುದು. ಆಗ ಪೋಷಕರು ಬಂದು ತಮ್ಮ ಮಕ್ಕಳು ಬೆಳೆದಿರುವ ತರಕಾರಿಗಳನ್ನು ಮನೆಗೆ ಕೊಂಡೊಯ್ಯಬಹುದು' ಎಂದರು. ಶಾಲೆಯ ನಿರ್ದೇಶಕಿ ರೇವತಿರಾಜು ಉಪಸ್ಥಿತರಿದ್ದರು.

ಕನ್ನಡ ಮಂದಿರಕ್ಕೆ ಶಿಲಾನ್ಯಾಸ
ಯಲಹಂಕ: ಸರ್ವಜ್ಞನಗರ ವಿಧಾನ ಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ಕಾಚರಕನಹಳ್ಳಿಯ ಕೋದಂಡರಾಮ ದೇವಸ್ಥಾನದ ಆವರಣದಲ್ಲಿ ಕವಿ ಸರ್ವಜ್ಞ ಕನ್ನಡ ಮಂದಿರದ ನಿರ್ಮಾಣಕ್ಕೆ ಹಿರಿಯ ಲೇಖಕ ಡಾ.ಎಂ.ಎ. ಜಯಚಂದ್ರ ಈಚೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಕಸಾಪ ನಗರ ಜಿಲ್ಲಾ ಘಟಕದ ಅಧ್ಯಕ್ಷ ಟಿ.ತಿಮ್ಮೇಶ್, ` ರೂ30 ಲಕ್ಷ ವೆಚ್ಚದಲ್ಲಿ ಈ ಮಂದಿರ ನಿರ್ಮಾಣವಾಗುತ್ತಿದ್ದು, ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸ ಲಾಗುವುದು' ಎಂದರು.

ಶತಮಾನೋತ್ಸವ: `ಮುಂದಿನ ವರ್ಷ ನಗರ ಘಟಕವು ಶತಮಾನ ಸಂಭ್ರಮ  ಆಚರಿಸಲಿದ್ದು, ಬೆಂಗಳೂರಿನ 28 ಕ್ಷೇತ್ರಗಳಲ್ಲಿಯೂ ಇಂತಹ ಭವನ ನಿರ್ಮಾಣ ಮಾಡಬೇಕೆಂಬ ಕನಸಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ' ಎಂದರು.

ಪ್ರತಿಭಾ ಪುರಸ್ಕಾರ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಬಿಬಿಎಂಪಿ ಶಿಕ್ಷಣ ಮತ್ತು ಕ್ರೀಡಾ ಸಮಿತಿಯ ಅಧ್ಯಕ್ಷ ಬಿ.ಗೋವಿಂದರಾಜ್, ಶ್ರೀರಾಮ ಚೈತನ್ಯವರ್ಧಿನಿ ಸಭಾ ಅಧ್ಯಕ್ಷ ಎಂ.ಎನ್.ರೆಡ್ಡಿ, ಬಿಬಿಎಂಪಿ ಸದಸ್ಯ ಎಂ.ಸಿ.ಶ್ರೀನಿವಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT