ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ದರ ಏರಿಕೆ: ಪ್ರತಿಭಟನೆ

Last Updated 8 ಜನವರಿ 2011, 9:50 IST
ಅಕ್ಷರ ಗಾತ್ರ

ಚಿಂತಾಮಣಿ: ರಾಜ್ಯ ಸರ್ಕಾರ ವಿದ್ಯುತ್ ದರ ಏರಿಸಿರುವುದನ್ನು ವಿರೋಧಿಸಿ ಸಿಪಿಐ(ಎಂ) ಪಕ್ಷದ ತಾಲ್ಲೂಕು ಸಮಿತಿಯ ಕಾರ್ಯಕರ್ತರು ಶುಕ್ರವಾರ ಇಲ್ಲಿನ ಬೆಸ್ಕಾಂ ಕಚೇರಿ ಮುಂದೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ಆಹಾರ ಸಾಮಗ್ರಿಗಳು, ತರಕಾರಿಸೇರಿದಂತೆ ಜೀವನಾವಶ್ಯಕವಾದ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದ್ದು ಸಾಮಾನ್ಯ ಜನರು ಜೀವನ ಮಾಡುವುದೇ ದುಸ್ತರವಾಗಿರುವಾಗ ಸರ್ಕಾರವು ವಿದ್ಯುತ್ ದರ ಏರಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿ, ಕೂಡಲೇ ಏರಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನತೆಯ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಬೆಲೆ ಏರಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೈಪೋಟಿ ನಡೆಸುತ್ತಿವೆ. ಕೇಂದ್ರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುತ್ತಿದ್ದರೆ ರಾಜ್ಯ ಸರ್ಕಾರವು ವಿದ್ಯುತ್ ದರವನ್ನು ಏರಿಸುತ್ತಿದೆ. ಇದರಿಂದಾಗಿ ಎಲ್ಲ ವಸ್ತುಗಳ ಬೆಲೆಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿವೆ ಎಂದು ಟೀಕಿಸಿದರು.

ಬೆಸ್ಕಾಂನಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸಿದರೆ ವಿದ್ಯುತ್ ದರವನ್ನು ಹೆಚ್ಚಿಸುವ ಅವಶ್ಯಕತೆ ಇಲ್ಲ, ಇನ್ನೂ ಇಳಿಸಬಹುದು. ಬೆಸ್ಕಾಂ ಸಂಸ್ಥೆಗಳು ಮೊದಲು ವಿದ್ಯುತ್ ಕಳವು ಹಾಗೂ ಸೋರಿಕೆಯ ತಡೆಗಟ್ಟುವುದರ ಕಡೆಗೆ ಗಮನ ನೀಡದೆ ಬೆಲೆ ಏರಿಕೆಯೊಂದೇ ಪರಿಹಾರ ಎಂಬಂತೆ ವರ್ತಿಸುತ್ತಿವೆ ಎಂದು ಆರೋಪಿಸಿದರು.ಪ್ರತಿಭಟನಾಕಾರರು ಪಕ್ಷದ ಮನವಿ ಪತ್ರವನ್ನು ಬೆಸ್ಕಾಂ ಅಧಿಕಾರಿಗಳಿಗೆ ಸಲ್ಲಿಸಿದರು. ಮನವಿಯನ್ನು ಸ್ವೀಕರಿಸಿದ ಅಧಿಕಾರಿಗಳು ತಕ್ಷಣವೇ ಕೇಂದ್ರ ಕಚೇರಿಗೆ ಹಾಗೂ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಮುಕ್ತಾಯಗೊಳಿಸಲಾಯಿತು.

ಪಕ್ಷದ ಕೇಂದ್ರ ಸಮಿತಿಯ ನೀಡಿದ ತುರ್ತು ಕರೆಯಂತೆ ಸಾಂಕೇತಿಕವಾಗಿ ಪ್ರತಿಭಟನೆಯನ್ನು ನಡೆಸಿದ್ದೇವೆ, ಸರ್ಕಾರ ಮಣಿಯದಿದ್ದರೆ ಮುಂದೆ ತೀವ್ರ ಸ್ವರೂಪದ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಪಕ್ಷದ ಮುಖಂಡರದ ಸಿ.ಗೋಪಿನಾಥ್, ಶ್ರೀನಿವಾಸರೆಡ್ಡಿ, ಬಾಬಾಜಾನ್, ಕೃಷ್ಣಾರೆಡ್ಡಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಗುಡಿಬಂಡೆ: ರಸ್ತೆತಡೆ
ಗುಡಿಬಂಡೆ: ಚುನಾವಣೆ ಮುಗಿಯುವ ತನಕ ಸುಮ್ಮನಿದ್ದು, ಈಗ ತಕ್ಷಣ ವಿದ್ಯುತ್ ದರ ಏರಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಆರೋಪಿಸಿ ಸಿಪಿಎಂ ಪಕ್ಷದ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಸ್ವಲ್ಪಕಾಲ ರಸ್ತೆತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ರೈತರಿಗೆ ಉಚಿತವಾಗಿ ವಿದ್ಯುತ್ ಕೊಡುತ್ತೇವೆ ಎಂದು ಸುಳ್ಳುಹೇಳಿ ಅಧಿಕಾರಕ್ಕೆ ಬಂದ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರಕ್ಕೆ ಜೋತು ಬಿದ್ದು ಎಲ್ಲವನ್ನೂ ನುಂಗಿ ಹಾಕುತ್ತ ಮುನ್ನಡೆಯುತ್ತಿದೆ.

ಉಚಿತವಾಗಿ ಬೇಡ ಕನಿಷ್ಠ ಗ್ರಾಮೀಣ ಪ್ರದೇಶದ ಜನರಿಗೆ ಸತತವಾಗಿ 6 ಗಂಟೆಗಳ ವಿದ್ಯುತ್ ನೀಡಲಿ ಸಾಕು. ವಿದ್ಯುತ್ ದರ ಏರಿಸುವುದಿಲ್ಲ ಎಂದು ಪ್ರಮಾಣ ಮಾಡಿ ಚುನಾವಣೆ ಎದುರಿಸಿದ ಈ ಜನವಿರೋಧಿ ಸರ್ಕಾರ ಪುನಃ ಮಾತು ತಪ್ಪಿದೆ, ಪ್ರತಿ ಯೂನಿಟ್‌ಗೆ 30 ಪೈಸೆಯಂತೆ ಹೆಚ್ಚಿಸಿರುವ ದರವನ್ನು ಹಿಂಪಡೆಯದೆ ಹೋದರೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಪಕ್ಷದ ಹಿರಿಯ ಮುಖಂಡ ಹಾಗೂ ಜಿಲ್ಲಾ ಪ್ರಾಂತ ರೈತ ಸಂಘದ ಅಧ್ಯಕ್ಷ ಗಂಗಿರೆಡ್ಡಿ ತಿಳಿಸಿದರು. ತಾಲ್ಲೂಕು ಸಿಪಿಎಂ ಮುಖಂಡರಾದ ಹಳೇಗುಡಿಬಂಡೆ ಲಕ್ಷ್ಮೀನಾರಾಯಣ, ಎವಿಟಿ ನಾರಾಯಣಸ್ವಾಮಿ, ಶಿವಪ್ಪ, ರಾಮಾಂಜಿ, ಈಶ್ವರಪ್ಪ, ನರಸಿಂಹಪ್ಪ ಮೊದಲಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT