ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಸಮಸ್ಯೆ ನಿವಾರಣೆಗೆ ಒತ್ತಾಯ

ಚಿಕ್ಕಮಗಳೂರು ಜಿ.ಪಂ. ಸಾಮಾನ್ಯ ಸಭೆ
Last Updated 13 ಡಿಸೆಂಬರ್ 2013, 8:46 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಆಗಾಗ್ಗೆ ವಿದ್ಯುತ್ ಕೈಕೊಡುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಗುರುವಾರ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ್ದು, ಪಕ್ಷಭೇದ ಮರೆತ ಸದಸ್ಯರು ಸಮಸ್ಯೆ ನಿವಾರಣೆಗೆ ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅಧ್ಯಕ್ಷತೆ­ಯಲ್ಲಿ ನಡೆದ ಮುಂದುವರಿದ ಸಭೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ರಾತ್ರಿ10ಗಂಟೆಯ ನಂತರ ವಿದ್ಯುತ್ ನೀಡುತ್ತಿರುವುದರಿಂದ ಗ್ರಾಮ ಪಂಚಾಯಿತಿ ನೀರುಗಂಟಿಗಳು ಟ್ಯಾಂಕಿಗೆ ನೀರು ತುಂಬಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಗುಣಮಟ್ಟದ ವಿದ್ಯುತ್ ನೀಡಲು ಮೆಸ್ಕಾಂ ಎಕ್ಸಿಕ್ಯುಟಿವ್‌ ಎಂಜಿನಿಯರ್ ಮುಂದಾಗ­ಬೇಕೆಂದು ಜಿ.ಪಂ. ಸದಸ್ಯರು ಹೇಳಿದರು.

ಶೃಂಗೇರಿ ತಾಲ್ಲೂಕಿನಲ್ಲಿ 20 ಟ್ರಾನ್ಸ್‌ ಫಾರ್ಮರ್‌ ಅಗತ್ಯವಿದೆ. ಹಲವು ಬಾರಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್ ಸಭೆಯ ಗಮನಕ್ಕೆ ತಂದರು. ಕಿಗ್ಗ, ಕೆರೆಕಟ್ಟೆ, ಬಿದರ­ಗೋಡು ಗ್ರಾಮಗಳ ಸಮಸ್ಯೆಯನ್ನು ತೆರದಿಟ್ಟ ರಂಗನಾಥ್, ಎಎನ್ಎಂ ವಸತಿಗೃಹಕ್ಕೆ ಅನು­ದಾನ ನೀಡಲು ಒತ್ತಾಯಿಸಿದರು.

ಒಳನಾಡು ಪ್ರದೇಶಗಳಲ್ಲಿ ಸಮಸ್ಯೆ ನಿವಾರ­ಣೆಗೆ ದಿನಾಂಕ ನಿಗದಿಪಡಿಸಿ ಜಿಲ್ಲಾಧಿಕಾರಿ­ಗಳೊಂದಿಗೆ ಚರ್ಚಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಭರವಸೆ ನೀಡಿದರು. ‘ಬಸ್ಕಲ್ ಮತ್ತು ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕುಂಬಾರಳ್ಲಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ರಾತ್ರಿ 10ಗಂಟೆ ಮೇಲೆ ವಿದ್ಯುತ್ ನೀಡುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ ಎಂದು ಸವಿತಾರಮೇಶ್ ಹೇಳಿದಾಗ. ಸಿಂಗಲ್ ಫೇಸ್ ವಿದ್ಯುತ್ ನೀಡಲಾಗುತ್ತಿದೆ ಎಂದು ಮೆಸ್ಕಾಂ ಎಂಜಿನಿಯರ್ ಉತ್ತರಿಸಿದರು. ನೀವು ನೀಡುತ್ತಿರುವ ಸಿಂಗಲ್ ಫೇಸ್ ಸೀಮೆ ಎಣ್ಣೆ ದೀಪಕ್ಕಿಂತ ಕಡೆಯಾಗಿದೆ’ ಎಂದು ಸದಸ್ಯರು ಟೀಕಿಸಿದರು.

ಹಚ್ಚಡಮನೆ, ಹಲಸುಮನೆಯಲ್ಲಿ ವಿದ್ಯುತ್ ಸಮಸ್ಯೆ ಇದೆ ಎಂದು ಸದಸ್ಯ ನಿರಂಜನ್, ಕಳಸಾಪುರದಲ್ಲಿರುವ ಸಮಸ್ಯೆಯನ್ನು ಭಾಗ್ಯ ರಂಗನಾಥ್, ಬಣಕಲ್ ಸಮಸ್ಯೆಯನ್ನು ಜ್ಯೋತಿ ಹೇಮಶೇಖರ್, ಮಾವಿನಗುಣಿ, ಮೂಗ್ತಿಹಳ್ಳಿಯ ಸಮಸ್ಯೆ­ಯನ್ನು ಹೇಮಾವತಿ ದೇವೇಗೌಡ ಸಭೆಯ ಮುಂದಿಟ್ಟರು.

ತೇಗೂರು ಮತ್ತು ಕೆ.ಆರ್.­ಪೇಟೆಯಲ್ಲಿ ವಿದ್ಯುತ್ ಕಂಬ ಬದಲಿ­ಸುವಂತೆ ಆ  ಭಾಗದ ಸದಸ್ಯರು ಒತ್ತಾಯಿಸಿ­ದರು. ತೇಗೂರು ಗ್ರಾಮಕ್ಕೆ ನಾಳೆ ಬೆಳಿಗ್ಗೆ 11ಗಂಟೆಗೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಮೆಸ್ಕಾಂ ಎಂಜಿನಿ­ಯರ್ ನೀಡಿದರು. ಬಯಲು ಪ್ರದೇಶದಲ್ಲಿ ಟ್ರಾನ್ಸ್ ಫಾರ್ಮರ್ ಕೊರತೆಯಿಂದ ಕುಡಿ­ಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ನಾಗರಾಜ್ ತಿಳಿಸಿದರೆ, ಬಿಂತ್ರವಳ್ಳಿ ಪಂಚಾಯಿತಿ ವ್ಯಾಪ್ತಿಯ ಬಮ್ಮ ನಗೋಡು, ತಲಮಕ್ಕಿ ಗ್ರಾಮದ ಸಮಸ್ಯೆಯನ್ನು ಅನ್ನಪೂರ್ಣ ಸಭೆಯ ಗಮನಕ್ಕೆ ತಂದರು.

ಬರಮನಹಳ್ಳಿ, ಸಾಗರಕಟ್ಟೆ, ಭಕ್ತನಕಟ್ಟೆ ಗ್ರಾಮಕ್ಕೆ ಟ್ರಾನ್ಸ್ ಫಾರ್ಮರ್ ಬೇಕೆಂದು ಆನಂದಪ್ಪ ಹೇಳಿದರೆ, ಬಿಳವಾಲ, ಸೋಮನ­ಹಳ್ಳಿಯಲ್ಲಿರುವ ಕಬ್ಬಿಣ ವಿದ್ಯುತ್‌ ಕಂಬ ಬದಲಿಸುವಂತೆ ಆ ಭಾಗದ ಸದಸ್ಯೆ ಶಶಿರೇಖಾ ಒತ್ತಾಯಿಸಿದರು. ಮೆಸ್ಕಾಂ ಇಲಾಖೆ ಎಂಜಿನಿ­ಯರ್ ಕೆಲಸವನ್ನು ನಿಧಾನಗತಿಯಲ್ಲಿ ಮುಂದು­ವರಿಸಿದರೆ ಗ್ರಾಮಸ್ಥರಿಂದ ತಕ್ಕ ಪಾಠ ಕಲಿಯ­ಬೇಕಾಗುತ್ತದೆ ಎಂದು ಅಧ್ಯಕ್ಷರು ಎಚ್ಚರಿಸಿದರು.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮಾನವೀಯ ದೃಷ್ಟಿಯಿಂದ ತಾಲ್ಲೂಕು ಪಂಚಾಯಿತಿ ಸಹಾಯಕ ಎಕ್ಸಿಕ್ಯುಟಿವ್ ಎಂಜಿನಿಯರ್‌ ಇಲಾಖೆ ನಿಯಮಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಿಸಿಕೊಳ್ಳುವುದು ಒಳಿತು ಎಂದು ಸದಸ್ಯ ಕೆ.ಆರ್.ಆನಂದ ಸಲಹೆ ನೀಡಿದರು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ ಜನರಿಗೆ ಏನು ಉತ್ತರ ನೀಡಬೇಕೆಂದು ಪ್ರಶ್ನಿಸಿ, ವಿನಾಕಾರಣ ಜನರ ಜತೆ ಆಟವಾಡಲು ಅಧಿಕಾರಿಗಳು ಮುಂದಾಗುವುದು ಒಳ್ಳೆಯದಲ್ಲ ಎಂದರು.

ಹುಣಸಘಟ್ಟ ಪಂಚಾ­ಯಿತಿ ವ್ಯಾಪ್ತಿಯ ನರಸೀಪುರದಲ್ಲಿ ಟ್ರಾನ್ಸ್ ಫಾರ್ಮರ್ ಸುಟ್ಟು ಹೋಗಿದ್ದರೂ ದುರಸ್ತಿ ಪಡಿಸಲು ಅಧಿಕಾರಿಗಳು ಮುಂದಾಗಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ತಿಳಿಸಿದರು. ಭಾವಿಕೆರೆ ಪಂಚಾಯಿತಿಯ ಕಂಚಿಕೆರೆ, ಉಡೆಬೈಲು, ಗಂಜಿಗೆರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಆ ಭಾಗದ ಜನಪ್ರತಿನಿಧಿ ತಿಳಿಸಿದರು.

ಶಾಲೆ ಮತ್ತು ಆಟದ ಮೈದಾನದ ಮೇಲೆ ಹಾದುಹೋಗಿರುವ ವಿದ್ಯುತ್ ಲೈನ್ ತೆರವುಗೊಳಿಸಲು ಕೈಗೊಂಡಿ­ರುವ ಕ್ರಮದ ಬಗ್ಗೆ ಅನಂತ್ ಪ್ರಶ್ನಿಸಿದಾಗ, 33 ಸ್ಥಳಗಳಲ್ಲಿ ವಿದ್ಯುತ್ ಲೈನ್ ತೆರವುಗೊಳಿಸಲು 14 ಲಕ್ಷ ರೂಪಾಯಿ ವೆಚ್ಚದ ಅಂದಾಜು ಪಟ್ಟಿ ತಯಾರಿಸಿ ವಿಶೇಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೆಸ್ಕಾಂ ಎಕ್ಸಿಕ್ಯುಟಿವ್ ಎಂಜಿನಿಯರ್ ಉತ್ತರಿಸಿದರು. ಜಿ.ಪಂ. ಉಪಾ­ಧ್ಯಕ್ಷೆ ಸುಜಾತಾ, ಸಿಇಒ ಕರುಣಾಕರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT