ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುದ್ದೀಪಗಳಿಂದ ಬೆಳಗಿದ ನಗರ

Last Updated 11 ಅಕ್ಟೋಬರ್ 2012, 9:55 IST
ಅಕ್ಷರ ಗಾತ್ರ

ಬೆಳಗಾವಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹಸ್ತದಿಂದ `ಸುವರ್ಣ ಸೌಧ~ ಉದ್ಘಾಟನೆಯಾಗುವ ಮೂಲಕ ಕರ್ನಾಟಕದ ಎರಡನೇ ರಾಜಧಾನಿ ಎಂದು ಕರೆಸಿಕೊಳ್ಳಲು ಸಜ್ಜಾಗಿರುವ ಬೆಳಗಾವಿ ವಿದ್ಯುತ್ ದೀಪಗಳಿಂದ ಬೆಳಗುತ್ತಿದೆ.

ನಗರಕ್ಕೆ ಗುರುವಾರ ಆಗಮಿಸಲಿರುವ ದೇಶದ ಪ್ರಥಮ ಪ್ರಜೆಯನ್ನು ಸ್ವಾಗತಿಸಲು ಕುಂದಾ ನಗರವು ಸಜ್ಜಾಗಿ ನಿಂತಿದೆ. ಮಂಗಳವಾರ ರಾತ್ರಿಯಿಂದಲೇ ನಗರದ ಪ್ರಮುಖ ಸರ್ಕಾರಿ ಕಚೇರಿಗಳು, ಮುಖ್ಯ ವೃತ್ತ ಹಾಗೂ ಉದ್ಯಾನಗಳು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ.

ಪ್ರಾದೇಶಿಕ ಆಯುಕ್ತರ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಮಹಾನಗರ ಪಾಲಿಕೆ ಸೇರಿದಂತೆ ಸರ್ಕಾರಿ ಕಚೇರಿಗಳಿರುವ ಕಟ್ಟಡಗಳಿಗೆ ಮಂಗಳವಾರ ರಾತ್ರಿಯಿಂದಲೇ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ.

ಬೆಳಗಾವಿಯ ಕಿತ್ತೂರು ಚನ್ನಮ್ಮನ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಸಂಭಾಜಿ ವೃತ್ತ, ಬಸವೇಶ್ವರ ವೃತ್ತ, ಕೋಟೆ ಕೆರೆ ಬಳಿಯ ಅಶೋಕ ವೃತ್ತಗಳಲ್ಲೂ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ.

ಅಂಬೇಡ್ಕರ್ ಉದ್ಯಾನ, ಶಿವಾಜಿ ಉದ್ಯಾನ ಸೇರಿದಂತೆ ನಗರ ಪ್ರಮುಖ ಉದ್ಯಾನಗಳಲ್ಲೂ ದೀಪಗಳಿಂದ ಬೆಳಗಲಾಗುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಬುಧವಾರ ರಾತ್ರಿ ಹಾದು ಹೋದರೆ, ಅಲ್ಲಲ್ಲಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಕಟ್ಟಡಗಳು ಮನ ಸೆಳೆಯುತ್ತಿವೆ.

ಮುಖ್ಯಮಂತ್ರಿಗಳು ಬುಧವಾರ ಸಂಜೆಯೇ ನಗರಕ್ಕೆ ಆಗಮಿಸಿ ಸುವರ್ಣ ಸೌಧದಲ್ಲಿನ ಸಿದ್ಧತೆಯನ್ನು ಪರಿಶೀಲಿಸಿದ್ದಾರೆ. ಮುಖ್ಯಮಂತ್ರಿಗಳು ರಾತ್ರಿ ತಂಗಲಿರುವ ಸರ್ಕ್ಯೂಟ್ ಹೌಸ್ ಅನ್ನೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಹೀಗಾಗಿ ಇಡೀ ನಗರದ ತುಂಬೆಲ್ಲ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಅತ್ತ ಸುವರ್ಣ ಸೌಧವು ಬುಧವಾರ ರಾತ್ರಿ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು. ಉದ್ಘಾಟನೆಗಾಗಿ ಸಜ್ಜಾಗಿ ನಿಂತಿರುವ ಸುವರ್ಣ ಸೌಧವು ನವ ವಧುವಿನಂತೆ ಸಿಂಗರಿಸಿಕೊಂಡಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT