ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ವಿಸರ್ಜಿಸಿ: ಕಾಂಗ್ರೆಸ್

Last Updated 13 ಡಿಸೆಂಬರ್ 2012, 6:39 IST
ಅಕ್ಷರ ಗಾತ್ರ

ದಾವಣಗೆರೆ: ಬಿಜೆಪಿಯ 15ಕ್ಕೂ ಹೆಚ್ಚು ಶಾಸಕರು ಕೆಜೆಪಿ ಜತೆ ಗುರುತಿಸಿಕೊಂಡಿರುವ ಕಾರಣ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಂಡಿದ್ದು, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕೂಡಲೇ ವಿಧಾನಸಭೆ ವಿಸರ್ಜಿಸಬೇಕು. ಇಲ್ಲದಿದ್ದರೆ, ರಾಜ್ಯಪಾಲರನ್ನು ಭೇಟಿ ಮಾಡಿ ಬಿಜೆಪಿಸರ್ಕಾರ ವಜಾಗೊಳಿಸುವಂತೆ ಕೋರಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹೇಳಿದರು.

ಚನ್ನಗಿರಿ ಪಟ್ಟಣದಲ್ಲಿ ಬುಧವಾರ ನಡೆದ ಜೆ.ಎಚ್. ಪಟೇಲ್ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅವರು ಸುದ್ದಿಗಾರೊಂದಿಗೆ ಮಾತನಾಡಿದರು.ಬಿಜೆಪಿಯಲ್ಲಿ ಆಂತರಿಕ ಗದ್ದಲ ಹೆಚ್ಚಾಗಿದೆ. ಹಲವು ಸಚಿವರು, ಶಾಸಕರು ಕೆಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ರಾಜೀನಾಮೆ ನೀಡಿ ಚುನಾವಣೆಗೆ ಹೋಗಬೇಕು ಎಂದು ಅವರು ಒತ್ತಾಯಿಸಿದರು.

ಬಿಜೆಪಿ ಬಹುಮತ ಕಳೆದುಕೊಂಡಿದ್ದರೂ, ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸುವುದಿಲ್ಲ. ಈ ಬಗ್ಗೆ ಸಿದ್ದರಾಮಯ್ಯ ಹಾಗೂ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪಕ್ಷದ ಶಾಂಸಕಾಂಗ ಸಭೆಯಲ್ಲೇ ಈ ಕುರಿತು ನಿರ್ಧಾರಕ್ಕೆ ಬರಲಾಗಿದೆ ಎಂದು ಪ್ರತಿಕ್ರಿಯಿಸಿದರು.

ಒಂದು ವೇಳೆ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡರೆ ಬೇರೆ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸುವಿರಾ ಎಂಬ ಪ್ರಶ್ನೆಗೆ, ಯಾವುದೇ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸುವ ಕಾರ್ಯಕ್ಕೆ ಹೋಗುವುದಿಲ್ಲ. ಚುನಾವಣೆಯೇ ನಮ್ಮ ಮುಂದಿನ ಗುರಿ ಎಂದು ಸ್ಪಷ್ಟಪಡಿಸಿದರು.

ಕಲುಷಿತಗೊಂಡಿರುವ ಸಮಾಜವನ್ನು ಮತದಾರರು ಮಾತ್ರ ಸರಿಪಡಿಸಲು ಸಾಧ್ಯ. ಬೇರೆ ಯಾರಿಂದಲೂ ಈ ಕಾರ್ಯ ಸಾಧ್ಯವಾಗುವುದಿಲ್ಲ. ಈ ಬಾರಿ ನಡೆಯುವ ಚುನಾಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಕಾಂಗ್ರೆಸ್ ಸರ್ಕಾರ ಭ್ರಷ್ಟಮುಕ್ತ ಆಡಳಿತ ನೀಡುತ್ತದೆ ಎಂಬ ಭರವಸೆಯನ್ನು ಜನತೆಗೆ ನೀಡುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT