ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಿ ವಿಪರೀತ

Last Updated 19 ಫೆಬ್ರುವರಿ 2011, 15:55 IST
ಅಕ್ಷರ ಗಾತ್ರ

ಚಿತ್ರ:  ವೀರಬಾಹು
ಸತ್ಯ ಹರಿಶ್ಚಂದ್ರನ ಕಥೆಯನ್ನು ನೆನಪಿಸುವ ಶೀರ್ಷಿಕೆ, ಎಸ್.ಮಹೇಂದರ್ ನಿರ್ದೇಶನ ಹಾಗೂ ವಿಜಯ್ ವರ್ಚಸ್ಸಿನ ಕಾರಣದಿಂದಾಗಿ ಕುತೂಹಲ ಕೆರಳಿಸಿದ್ದ ‘ವೀರಬಾಹು’ ಚಿತ್ರ ತನ್ನ ಚರ್ವಿತ ಚರ್ವಣ ಕಥೆ ಹಾಗೂ ನಿರೂಪಣೆಯಿಂದಾಗಿ ನಿರಾಸೆ ಉಂಟುಮಾಡುತ್ತದೆ.

ಸ್ಮಶಾನದಲ್ಲಿ ಸಿಕ್ಕ ಅನಾಥ ಮಗುವೊಂದನ್ನು ಅಲ್ಲಿ ಗುಂಡಿ ತೆಗೆಯುವ ವ್ಯಕ್ತಿ ಸಾಕಿಕೊಳ್ಳುತ್ತಾನೆ. ಬೆಳೆದ ಮಗು ಅರ್ಚಕರ ಮಗಳನ್ನು ಪ್ರೀತಿಸಿ ಮೈಮೇಲೆ ಆಪತ್ತು ಎಳೆದುಕೊಳ್ಳುವುದು ಚಿತ್ರದ ಕಥೆ. ಈ ಕಥನಕ್ಕೆ ಪೂರಕವಾಗಿ ಸಾರಾಯಿ ಅಂಗಡಿ, ನಾಯಕಸಾನಿಯರ ಮನೆ, ಹುಡುಗರ ಗುಂಪು, ಮಡಿ ಮೈಲಿಗೆಯ ದೈನಿಕ- ಇವೆಲ್ಲವನ್ನು ಒಳಗೊಂಡ ಗ್ರಾಮೀಣ ಪರಿಸರವೊಂದನ್ನು ಮಹೇಂದರ್ ಸೃಷ್ಟಿಸಿದ್ದಾರೆ.

ಆದರೆ ಈ ಸೃಷ್ಟಿ ಶಿಥಿಲವಾಗಿದ್ದು, ಸಿನಿಮಾದ ಹಾಡುಗಳು ಹಾಗೂ ಒಂದು ದೃಶ್ಯದಲ್ಲಿ ಕಾಣಿಸುವ ತೆಳುಹೊಟ್ಟೆಯ ಕಂಪ್ಯೂಟರ್ ಹೊರತುಪಡಿಸಿದರೆ ಇಡೀ ಸಿನಿಮಾ ಯಾವುದೋ ಕಾಲದಲ್ಲಿ ನಡೆಯುತ್ತಿರುವಂತೆ ಅನ್ನಿಸುತ್ತದೆ.

ನಾಯಕ ಅಸಹಾಯ ಶೂರ. ನಾಯಕಿ ಅಪ್ರತಿಮ ಚೆಲುವೆ. ಆಕೆಯ ತಂದೆ ಸನಾತನಿ. ಸಾರಾಪು ಅಂಗಡಿ ಮಾಲೀಕ ಖಳ. ಪೊಲೀಸ್ ಅಧಿಕಾರಿ ದುಷ್ಟ. ವೇಶ್ಯಾವಾಟಿಕೆ ಮಾಲೀಕಳು ಮಾನವತಾವಾದಿ- ಹೀಗೆ, ಸಿನಿಮಾದಲ್ಲಿನ ಬಹುತೇಕ ಪಾತ್ರಗಳು ಕಪ್ಪು ಬಿಳುಪು ಮಾದರಿಯವು.

‘ಸ್ಮಶಾನದಲ್ಲಿ ದೊರೆಯುವ ಬದಲು ದೇವಸ್ಥಾನದಲ್ಲಿ ದೊರೆತಿದ್ದರೆ ಪೂಜಾರಿ ಆಗುತ್ತಿದ್ದೆನೇನೊ?’ ಎಂದು ಚಿತ್ರದ ಕೊನೆಯಲ್ಲಿ ನಾಯಕ ತನಗೆ ತಾನೇ ಹೇಳಿಕೊಳ್ಳುತ್ತಾನೆ. ಸಮಾಜದ ಆತ್ಮಸಾಕ್ಷಿಯನ್ನು ಕಲಕಬೇಕಾಗಿದ್ದ ಈ ಮಾತು ನಿರ್ದೇಶಕರು ಕಟ್ಟಿರುವ ಪೊಳ್ಳು ಕಥನದಲ್ಲಿ ಕ್ಲೀಷೆಯಾಗುತ್ತದೆ.

ಚಿತ್ರದುದ್ದಕ್ಕೂ ಅಸಹಜವೂ ಏಕಮುಖವೂ ಆಗಿ ಬಿಂಬಿತಗೊಳ್ಳುವ ನಾಯಕನ ಪ್ರೇಮ ಒಮ್ಮೆಗೇ ಇಮ್ಮುಖವಾಗುವುದು ಅನುಕೂಲ ಸಿಂಧು ಅಂತ್ಯವೆನ್ನಿಸುತ್ತದೆ. ನಾಯಕನ ಬಗ್ಗೆ ನೋಡುಗರಲ್ಲಿ ಅನುಕಂಪ ಮೂಡಿಸಲು ಪ್ರಯತ್ನಿಸುವ ನಿರ್ದೇಶಕರು, ಇನ್ನೊಂದು ಕಡೆ ನಾಯಕನಿಂದ ಮಾರಣಹೋಮ ಮಾಡಿಸುತ್ತಾರೆ. ಕ್ಲೈಮ್ಯಾಕ್ಸ್‌ನಲ್ಲಿ ಹೂತ ದೇಹ ಹೊರತೆಗೆದು ಬಡಬಡಿಸುವ ನಾಯಕನ ನಡವಳಿಕೆ ಸಿನಿಮಾದಲ್ಲಿನ ಇನ್ನೊಂದು ಅತಿರೇಕ.

ಸಿನಿಮಾದ ಮುಖ್ಯ ಸಮಸ್ಯೆ ಇರುವುದು ‘ವೀರಬಾಹು’ ಎನ್ನುವ ಶೀರ್ಷಿಕೆಗೆ ತಕ್ಕನಾಗಿ ಕಥೆ ಹೊಸೆಯಲು ಹೊರಟಿರುವುದರಲ್ಲಿ. ಇಲ್ಲಿನ ನಾಯಕ ಸ್ಮಶಾನದಲ್ಲಿ ಇರುವ ಬದಲು ಮಾಂಸದಂಗಡಿಯಲ್ಲಿ ಇದ್ದಿದ್ದರೂ ಕಥೆಯ ಪರಿಣಾಮದಲ್ಲಿ ವ್ಯತ್ಯಾಸವೇನೂ ಆಗುತ್ತಿರಲಿಲ್ಲ. ಸ್ಮಶಾನದ ಮೌನ, ನೀರವತೆ, ಕತ್ತಲು ಹಾಗೂ ಕಿಡಿ ಸಿನಿಮಾದಲ್ಲಿ ಸಂಪೂರ್ಣ ನಾಪತ್ತೆಯಾಗಿದೆ.

ಫೈಟಿಂಗ್ ದೃಶ್ಯಗಳಲ್ಲಿ ಎದೆಸೆಟೆದು ನಿಲ್ಲುವ ವೀರಬಾಹು (ವಿಜಯ್), ಉಳಿದಂತೆ ಬೆನ್ನುಲುಬಿಲ್ಲದಂತೆ ನಡೆಯುವುದು, ಪೆದ್ದುಪೆದ್ದಾಗಿ ವರ್ತಿಸುವುದು ತಮಾಷೆಯಾಗಿದೆ. ಹಾಗೆ ನೋಡಿದರೆ, ವೀರಬಾಹುವನ್ನು ಸಾಕುವ ರಂಗಾಯಣ ರಘು ಅವರ ಪಾತ್ರ ಹಾಗೂ ನಟನೆಯೇ ಹೆಚ್ಚು ಪ್ರಬುದ್ಧ. ನಿಧಿ ಸುಬ್ಬಯ್ಯ ಬಸವಳಿದಂತೆ ಕಾಣಿಸುತ್ತಾರೆ.

ಛಾಯಾಗ್ರಹಣ ಹಾಗೂ ಸಂಭಾಷಣೆ ಚಿತ್ರದ ಗಮನಾರ್ಹ ಸಂಗತಿಗಳು. ಸಂಭಾಷಣೆಕಾರ ಎಂ.ಎಸ್.ರಮೇಶ್‌ರ ಕೆಲವು ಮಾತುಗಳಿಗೆ ಸಿಳ್ಳೆ ಗಿಟ್ಟುತ್ತದೆ. ಹಳೆಯ ಕಥಾನಕದ ಮೂಡ್ ಕಟ್ಟಿಕೊಡುವಲ್ಲಿ ಛಾಯಾಗ್ರಾಹಕ ಅನಂತ ಅರಸ್ ಪರಿಣಾಮಕಾರಿಯಾಗಿದ್ದಾರೆ. ಹರಿಕೃಷ್ಣರ ಸಂಗೀತ ಸಾಧಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT