ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮೆ ವ್ಯವಸ್ಥೆಬದಲಾಗಲಿ

Last Updated 14 ಮಾರ್ಚ್ 2011, 6:50 IST
ಅಕ್ಷರ ಗಾತ್ರ

ವಿಜಾಪುರ: ‘ಭಾರತ ದೇಶದಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರು ಸೇರಿದಂತೆ ಪ್ರತಿಯೊಬ್ಬ ನಾಗರಿಕರಿಗೆ ವೈದ್ಯಕೀಯ ಸೌಲಭ್ಯ ಒದಗಿಸಲು ದೇಶದಲ್ಲಿ ವಿದೇಶಿ ಮಾದರಿಯಲ್ಲಿ ವಿಮೆ ವ್ಯವಸ್ಥೆ ಜಾರಿಗೊಳಿಸಬೇಕಾದ ಅಗತ್ಯವಿದೆ’ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.ನಗರದ ಡಾ. ಬಿದರಿ ಅಶ್ವಿನಿ ಮಕ್ಕಳ ಆಸ್ಪತ್ರೆಯ ನವೀಕರಿಸಿದ ಮತ್ತು ವಿಸ್ತರಿಸಿದ ಕಟ್ಟಡ ಹಾಗೂ ಆಸ್ಪತ್ರೆಯ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.

ವಿದೇಶದಲ್ಲಿ ಶ್ರೀಮಂತ, ಬಡವ ಭೇದವಿಲ್ಲದೆ ಯಾವುದೇ ವ್ಯಕ್ತಿಯೂ ಆಸ್ಪತ್ರೆಯಲ್ಲಿ ಹಣ ನೀಡದೇ ಚಿಕಿತ್ಸೆ ಪಡೆಯುತ್ತಾರೆ. ಅಲ್ಲಿನ ವಿಮಾ ಕಂಪನಿಗಳೊಂದಿಗೆ ಆಸ್ಪತ್ರೆಗಳು ಒಪ್ಪಂದ ಮಾಡಿಕೊಂಡು ಗುಣಮಟ್ಟದ ಚಿಕಿತ್ಸೆ ನೀಡುತ್ತಿವೆ. ಈ ಮಾದರಿ ರಾಜ್ಯ ಮತ್ತು ದೇಶದಲ್ಲೂ ಜಾರಿಗೊಳ್ಳಬೇಕು. ಇದರಿಂದ ಬಡವರು, ಶ್ರೀಮಂತರು ಎನ್ನದೇ ಎಲ್ಲ ವರ್ಗದ ಜನರಿಗೂ ಗುಣಮಟ್ಟದ ಚಿಕಿತ್ಸೆ ದೊರೆಯುತ್ತದೆ. ಈ ನಿಟ್ಟಿನಲ್ಲಿ ವಿಜಾಪುರದ ಬಿಎಲ್‌ಡಿಇ ಸಂಸ್ಥೆಯಂತಹ ಆಸ್ಪತ್ರೆಗಳು ಕಾರ್ಯೋನ್ಮುಖ ಆಗಬೇಕಿದೆ ಎಂದರು.

ವ್ಯಕ್ತಿ ಸರಳತೆ, ಸರ್ವರೊಂದಿಗೂ ಹೊಂದಿಕೊಳ್ಳುವ ಸ್ವಭಾವ, ಸಾಧಿಸುವ ಛಲ ಹೊಂದಿದ್ದರೆ ಜೀವನದಲ್ಲಿ ಯಶಸ್ವಿಯಾಗುತ್ತಾನೆ ಎಂಬುದಕ್ಕೆ ಡಾ.ಎಲ್.ಎಚ್. ಬಿದರಿ ಉದಾಹರಣೆ. 25 ವರ್ಷಗಳ ಹಿಂದೆ ಚಿಕ್ಕ ಆಸ್ಪತ್ರೆ ಆರಂಭಿಸಿದ ಡಾ.ಬಿದರಿ ಅವರು ಇಂದು ರಾಜ್ಯದಲ್ಲಿಯೇ ಮಾದರಿಯಾದ ಮಕ್ಕಳ ಆಸ್ಪತ್ರೆಯನ್ನು ನಿರ್ವಹಿಸುತ್ತಿದ್ದಾರೆ. ಇದಕ್ಕೆ ಪರಿಶ್ರಮ ದೊಡ್ಡದು ಎಂದರು.

ಡಾ.ಬಿದರಿ ಅವರು ಕೇವಲ ತಮ್ಮ ಆಸ್ಪತ್ರೆಯನ್ನು ನಿರ್ವಹಿಸುವುದು ಮಾತ್ರ ಕಾರ್ಯ ಎಂದುಕೊಂಡಿಲ್ಲ. ಡಾ. ಬಿದರಿ, ಡಾ. ದೇವಿಶೆಟ್ಟಿ ಮುಂತಾದ ವೈದ್ಯರ ಸಲಹೆಯಿಂದ ‘ಯಶಸ್ವಿನಿ’ ಯೋಜನೆ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ ಎಂದು ಹೇಳಿದರು.ಧಾರವಾಡದ ಎಸ್.ಡಿ.ಎಂ. ಕಾಲೇಜು ವೈದ್ಯಕೀಯ ನಿರ್ದೇಶಕ ಡಾ. ನಿರಂಜನಕುಮಾರ, ಪ್ರತಿಯೊಬ್ಬ ವ್ಯಕ್ತಿ ಉತ್ತಮ ನಾಗರಿಕನಾಗಲು ಆರೋಗ್ಯ ಮತ್ತು ಶಿಕ್ಷಣ ಅವಶ್ಯ. ಇವು ದೇಶದ ಪ್ರಗತಿಗೂ ಪೂರಕವಾಗಿವೆ ಎಂದರು.

ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ, ಮಕ್ಕಳ ಸೇವೆ ಎಂಬುದು ದೇಶದ ಸೇವೆ ಇದ್ದಂತೆ. ವೈದ್ಯರು ವೈದ್ಯರಾಗದೇ ರೋಗಿಗಳ ಗೆಳೆಯರಾಗಬೇಕು. ರೋಗಿಗಳ ಮುಖದಲ್ಲಿ ಸಂತೋಷ ಮೂಡಿಸುವ ಚೇತನಗಳಾಗಬೇಕು. ಆಸ್ಪತ್ರೆಗೆ ಬರುವ ರೋಗಿಗಳಿಗೆ ನಗುಮುಖದಿಂದ ಚಿಕಿತ್ಸೆ ನೀಡಿದರೆ, ರೋಗಿಗಳ ಅರ್ಧದಷ್ಟು ರೋಗ ಗುಣಮುಖವಾಗತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಡಾ.ಅಶ್ವಿನಿ ಮಕ್ಕಳ ಆಸ್ಪತ್ರೆಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್‌ಗಳು ಹಾಗೂ ಆಯಾಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಶಾಸಕ ಅಪ್ಪು ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಂ.ಬಿ. ಪಾಟೀಲ, ವಿಠ್ಠಲ ಕಟಕಧೋಂಡ, ರಮೇಶ ಭೂಸನೂರ, ಶ್ರೀಕಾಂತ ಕುಲಕರ್ಣಿ, ಸಿ.ಎಸ್. ನಾಡಗೌಡ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ (ಯತ್ನಾಳ), ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಎನ್.ಎಸ್. ಖೇಡ ಮುಂತಾದವರು ವೇದಿಕೆಯ ಮೇಲಿದ್ದರು.
ಡಾ. ಯೋಗೆಪ್ಪನವರ ಸ್ವಾಗತಿಸಿದರು. ಪ್ರೊ.ಎಸ್.ಜಿ. ತಾಳಿಕೋಟಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಚ್. ಬಿದರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT