ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷಕ್ಕೆ ಲಾಭವಾದರೆ ನಾವು ಹೊಣೆಯಲ್ಲ

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹಿಸ್ಸಾರ್ (ಹರಿಯಾಣ) (ಪಿಟಿಐ): `ಹಿಸ್ಸಾರ್ ಉಪಚುನಾವಣೆಯಲ್ಲಿ ನಾವು ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿಲ್ಲ. ಒಂದು ವೇಳೆ ಅಣ್ಣಾ ತಂಡ ನಡೆಸುತ್ತಿರುವ ಆಂದೋಲನದಿಂದ ವಿರೋಧ ಪಕ್ಷಕ್ಕೆ ಲಾಭವಾದರೆ ಅದಕ್ಕೆ ನಾವು ಹೊಣೆ ಅಲ್ಲ~ ಎಂದು ತಂಡದ ಸದಸ್ಯ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

`ನಾವು ವ್ಯವಸ್ಥಿತ ಬದಲಾವಣೆಗಾಗಿ ಹೋರಾಟ ನಡೆಸುತ್ತಿದ್ದೇವೆ. ಯಾರ ಪರವಾಗಿಯೂ ಪ್ರಚಾರ ಮಾಡುತ್ತಿಲ್ಲ. ಚುನಾವಣೆಯಲ್ಲಿ ಇಂಥದ್ದೇ ಅಭ್ಯರ್ಥಿಗೆ ಮತ ಹಾಕಿ ಎಂದು ಸಾರ್ವಜನಿಕರನ್ನು ಕೇಳುತ್ತಿಲ್ಲ. ಇದಕ್ಕೆ ಕಾಂಗ್ರೆಸ್ ಬೆಲೆ ತೆರಬೇಕಾಗುತ್ತದೆ. ಲೋಕಪಾಲ್ ಮಸೂದೆಯನ್ನು ಜಾರಿಗೆ ತರುವುದಾಗಿ ಕಾಂಗ್ರೆಸ್ ಪಕ್ಷ ಘೋಷಿಸಿದರೆ ನಾವು ಆ ಪಕ್ಷದ ವಿರುದ್ಧ ನಡೆಸುತ್ತಿರುವ ಪ್ರಚಾರಾಂದೋಲನವನ್ನು ಕೈಬಿಡುತ್ತೇವೆ~ ಎಂದು ಅವರು ಸೋಮವಾರ ರಾತ್ರಿ ಸುದ್ದಿಗಾರರಿಗೆ ತಿಳಿಸಿದರು.

ಅಣ್ಣಾ ರಾಷ್ಟ್ರಪತಿ ಹುದ್ದೆ ಆಕಾಂಕ್ಷಿಯಾಗಿದ್ದಾರೆ ಎಂಬ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಹೇಳಿಕೆಯಲ್ಲಿ ಹುರುಳಿಲ್ಲ. ಇದೊಂದು ಅಸಂಬದ್ಧ ಹಾಗೂ ಅರ್ಥವಿಲ್ಲದ ಹೇಳಿಕೆ ಎಂದರು.

ಹಿಸ್ಸಾರ್ ಮತದಾರರು ಚುನಾವಣೆಯಲ್ಲಿ ಕೇವಲ ಇಬ್ಬರು ಅಥವಾ ಮೂವರು ಅಭ್ಯರ್ಥಿಗಳಿಗೆ ತಮ್ಮ ಆಯ್ಕೆ ಸೀಮಿತಗೊಳಿಸಬಾರದು. ಕಣದಲ್ಲಿ ಕಾಂಗ್ರೆಸ್ಸೇತರ 39 ಅಭ್ಯರ್ಥಿಗಳೂ ಇದ್ದಾರೆ ಎಂದು ಕೇಜ್ರಿವಾಲ್ ಹೇಳಿದರು.
 ಐಎನ್‌ಎಲ್‌ಡಿ ಅಥವಾ ಎಚ್‌ಸಿಜೆ- ಬಿಜೆಪಿ ಅಭ್ಯರ್ಥಿಗಳು ಸಚ್ಚಾರಿತ್ರ್ಯವುಳ್ಳವರೇ ಎಂಬ ಪ್ರಶ್ನೆಗೆ, `ಚೌಟಾಲ ಅಥವಾ ಬಿಷ್ಣೋಯ್ ಅವರು ಬೇರೆಯವರಿಗಿಂತ ಒಳ್ಳೆಯವರು ಎಂದು ನಾವು ಎಂದೂ ಹೇಳಿಲ್ಲ. ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ ಉಳಿದ 39 ಅಭ್ಯರ್ಥಿಗಳಲ್ಲಿ ಒಬ್ಬರನ್ನು ಆಯ್ಕೆ ಮಾಡುವಂತೆ ನಾವು ಹಿಸ್ಸಾರ್ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ~ ಎಂದು ಕೇಜ್ರಿವಾಲ್ ಪ್ರತಿಕ್ರಿಯಿಸಿದರು.

ಅಣ್ಣಾ ತಂಡದಲ್ಲಿ ಭಿನ್ನಮತ ಇರುವ ಬಗ್ಗೆ ಕೇಳಿಬರುತ್ತಿರುವ ಮಾತುಗಳನ್ನು ಅಲ್ಲಗಳೆದ ಕೇಜ್ರಿವಾಲ್, `ತಂಡದ ಪ್ರಮುಖ ಸದಸ್ಯ ಪ್ರಶಾಂತ್ ಭೂಷಣ್ ಪ್ರವಾಸದಲ್ಲಿರುವ ಕಾರಣ ಅವರು ಹಿಸ್ಸಾರ್‌ನಲ್ಲಿ ಪ್ರಚಾರ ಕೈಗೊಳ್ಳಲು ಸಾಧ್ಯವಾಗಿಲ್ಲ~ ಎಂದು ಸ್ಪಷ್ಟಪಡಿಸಿದರು.

ಚುನಾವಣೆಯಲ್ಲಿ ಸ್ವತಃ ಕೇಜ್ರಿವಾಲ್ ಸ್ಪರ್ಧಿಸಬೇಕು ಎಂದು ಕೆಲವು ಕಾಂಗ್ರೆಸ್ ಮುಖಂಡರು ನೀಡಿದ ಸಲಹೆಗೆ. `ಕಾಂಗ್ರೆಸ್ ಪಕ್ಷದವರು ತಮ್ಮ ಹೊಣೆಗಾರಿಕೆಯನ್ನು ತ್ಯಜಿಸಿ ರಾಜೀನಾಮೆ ನೀಡಿದರೆ ಆಗ ನಾವು ಹೋರಾಟ ಮಾಡಬೇಕೇ ಅಥವಾ ಬೇಡವೇ ಎನ್ನುವುದನ್ನು ನಿರ್ಧರಿಸುತ್ತೇವೆ~ ಎಂದು ಹೇಳಿದರು.

ಅಣ್ಣಾ ತಂಡಕ್ಕೆ ಆರ್‌ಎಸ್‌ಎಸ್ ಸಂಪರ್ಕ ಇದೆ ಎಂಬ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಕೇಜ್ರಿವಾಲ್ ಹರಿಹಾಯ್ದರು. `ಅವರು ಇಂತಹ ಆರೋಪಕ್ಕೆ ಪೂರಕವಾದ ಸಾಕ್ಷ್ಯ ಒದಗಿಸಲಿ, ನಮ್ಮದು ಜನರ ಚಳವಳಿಯಾದ್ದರಿಂದ ಎಡ, ಬಲ, ಆರ್‌ಎಸ್‌ಎಸ್, ಬಿಜೆಪಿ ಇತ್ಯಾದಿ ಎಲ್ಲ ಕಡೆಯ ಜನರೂ ಅಣ್ಣಾ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಹಾಗೆಂದ ಮಾತ್ರಕ್ಕೆ ನಮ್ಮ ತಂಡಕ್ಕೆ ರಾಜಕೀಯ ಬೆಂಬಲ ಇದೆ ಎಂದು ಹೇಳುವುದು ಆಧಾರರಹಿತ~ ಎಂದು ಟೀಕಿಸಿದರು.

ಹಿಸ್ಸಾರ್‌ನಲ್ಲಿ ಪ್ರಚಾರ ಅಂತ್ಯ`ಅಣ್ಣಾಗಿರಿ~ಗೆ ಕಾಂಗ್ರೆಸ್ ಆತಂಕ
ಹಿಸ್ಸಾರ್ ಲೋಕಸಭಾ ಉಪಚುನಾವಣೆ ಪ್ರಚಾರ ಮಂಗಳವಾರ ಸಂಜೆ ಅಂತ್ಯಗೊಂಡಿದ್ದು, ತ್ರಿಕೋನ ಸ್ಪರ್ಧೆಯ ಜತೆಗೆ `ಅಣ್ಣಾಗಿರಿ~ಯೂ ಕಾಂಗ್ರೆಸ್‌ಗೆ ಭಾರಿ ಸವಾಲು ತಂದೊಡ್ಡಿದೆ.

ಇದೇ 13ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜೈ ಪ್ರಕಾಶ್, ಬಿಜೆಪಿ- ಎಚ್‌ಜೆಸಿಯ (ಹರಿಯಾಣ ಜನಹಿತ ಕಾಂಗ್ರೆಸ್) ಕುಲ್‌ದೀಪ್ ಬಿಷ್ಣೋಯ್ ಹಾಗೂ ಪ್ರಮುಖ ವಿರೋಧ ಪಕ್ಷ ಐಎನ್‌ಎಲ್‌ಡಿಯ ಅಜಯ್ ಸಿಂಗ್ ಚೌಟಾಲ ಪೈಪೋಟಿ ನಡೆಸಿದ್ದಾರೆ. ಇವರ ಜೊತೆಗೆ ಸಣ್ಣ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ.

ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ಜೈ ಪ್ರಕಾಶ್ ಪರವಾಗಿ ಕಳೆದ 15 ದಿನಗಳಿಂದಲೂ ಭರದ ಪ್ರಚಾರ ನಡೆಸಿದ್ದರು. ಹೈಕಮಾಂಡ್ ಮನವೊಲಿಸಿ ಜೈಪ್ರಕಾಶ್ ಅವರನ್ನು ಕಣಕ್ಕಿಳಿಸಿದ್ದಕ್ಕಾಗಿ ಇದೀಗ ಅವರ ಗೆಲುವು ಹೂಡಾಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಇದೇ ವೇಳೆ ಬಿಷ್ಣೋಯ್ ಹಾಗೂ ಚೌಟಾಲಾಗೂ ಇದು ಮಹತ್ವದ ಚುನಾವಣೆಯಾಗಲಿದೆ.

ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕದಿರುವಂತೆ ಅಣ್ಣಾ ತಂಡ ನಡೆಸಿದ ಪ್ರಚಾರ ಪಕ್ಷಕ್ಕೆ ದೊಡ್ಡ ಆತಂಕ ತಂದಿದೆ. ಹರಿಯಾಣ, ದೆಹಲಿ ಹಾಗೂ ರಾಜಸ್ತಾನ ರಾಜ್ಯಗಳ ಮುಖ್ಯಮಂತ್ರಿಗಳು ಸೋಮವಾರ ನಡೆದ ರ‌್ಯಾಲಿಯಲ್ಲಿ ಅಣ್ಣಾ ತಂಡದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಅಣ್ಣಾ ತಂಡ ವಿರೋಧ ಪಕ್ಷದ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಕಟಕಿಯಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT