ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಮಹಿಳೆಯರ ಚಿನ್ನದ ಸರ ಕಿತ್ತು ಪರಾರಿ

Last Updated 19 ಫೆಬ್ರುವರಿ 2011, 19:40 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆ.ಆರ್.ಪುರ, ವೈಟ್‌ಫೀಲ್ಡ್ ಮತ್ತು ಸುಬ್ರಹ್ಮಣ್ಯಪುರ ಠಾಣೆಗಳ ವ್ಯಾಪ್ತಿಯಲ್ಲಿ ಶನಿವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ದುಷ್ಕರ್ಮಿಗಳು ಮಹಿಳೆಯರ 3.50 ಲಕ್ಷ ಮೌಲ್ಯದ ಚಿನ್ನದ ಸರಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಶಾಲಾ ಶಿಕ್ಷಕಿಯೊಬ್ಬರ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಕೆ.ಆರ್.ಪುರದಲ್ಲಿ ನಡೆದಿದೆ.

ಕೆ.ಆರ್.ಪುರ ಸಮೀಪದ ಕೃಷ್ಣನಗರದ ನಿವಾಸಿ ಕಲಾವತಿ ಸರ ಕಳೆದುಕೊಂಡವರು. ಅವರು ಬೆಳಿಗ್ಗೆ 8.30ರ ಸುಮಾರಿಗೆ ಶಾಲೆಗೆ ಹೋಗಲು ಬಸ್ ನಿಲ್ದಾಣಕ್ಕೆ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬೈಕ್‌ನಲ್ಲಿ ಬಂದ ಕಿಡಿಗೇಡಿಗಳು 50 ಗ್ರಾಂ ಚಿನ್ನದ ಸರವನ್ನು ದೋಚಿಕೊಂಡು ಹೋಗಿದ್ದಾರೆ. ಈ ಬಗ್ಗೆ ಅವರು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಕೆ.ಆರ್.ಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ವೈಟ್‌ಫೀಲ್ಡ್: ನಗರದ ನೆಲ್ಲೂರಹಳ್ಳಿ ಕ್ರಾಸ್‌ನ ನಿವಾಸಿ ವಿಮಲಮ್ಮ ಎಂಬುವರ 96 ಗ್ರಾಂ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಿತ್ತುಕೊಂಡು ಹೋಗಿದ್ದಾರೆ.ವಿಮಲಮ್ಮ ಅವರು ಬೆಳಿಗ್ಗೆ 8.30ರ ಸುಮಾರಿಗೆ ಹಾಲು ತರಲು ಮನೆಯಿಂದ ಅಂಗಡಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಈ ಸಂಬಂಧ ಅವರು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ವೈಟ್‌ಫೀಲ್ಡ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸುಬ್ರಹ್ಮಣ್ಯಪುರ: ವಿಳಾಸ ಕೇಳುವ ನೆಪದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕನಕಪುರ ಮುಖ್ಯರಸ್ತೆಯ ದೊಡ್ಡಕಲ್ಲಸಂದ್ರದ ಕುವೆಂಪುನಗರದ ನಿವಾಸಿ ಜಯಮ್ಮ ಎಂಬುವರ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ.

ಜಯಮ್ಮ ಅವರು ಮಧ್ಯಾಹ್ನ ಮನೆಯ ಬಳಿ ನಿಂತಿದ್ದರು. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಕಿಡಿಗೇಡಿಗಳು ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಬಂದು 30 ಗ್ರಾಂ ಸರವ್ನು ದೋಚಿಕೊಂಡು ಹೋಗಿದ್ದಾರೆ. ಈ ಸಂಬಂಧ ಜಯಮ್ಮ ಅವರು ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆ: ದುಷ್ಕರ್ಮಿಗಳು ಇಬ್ಬರು ವ್ಯಕ್ತಿಗಳಿಗೆ ಚಾಕುವಿನಿಂದ ಬೆದರಿಸಿ 2.40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 12 ಸಾವಿರ ನಗದು ಮತ್ತು ಕಾರನ್ನು ದರೋಡೆ ಮಾಡಿದ ಘಟನೆ ಬಸವೇಶ್ವರನಗರ ಸರ್ವಿಸ್ ರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ.ರಾಜಾಜಿನಗರ ಕೈಗಾರಿಕಾ ಪ್ರದೇಶದ ನಿವಾಸಿ ರವಿಕುಮಾರ್ ಮತ್ತು ಅವರ ಸಂಬಂಧಿಕ ಮಂಜುನಾಥ್ ದರೋಡೆಗೆ ಒಳಗಾದವರು.

ಅವರಿಬ್ಬರು ರಾತ್ರಿ 12 ಗಂಟೆ ಸುಮಾರಿನಲ್ಲಿ ಬಸವೇಶ್ವರನಗರ ಸರ್ವಿಸ್ ರಸ್ತೆಯಲ್ಲಿ ತಮ್ಮ ಕಾರಿನಲ್ಲಿ ಕುಳಿತು ಮಾತನಾಡುತ್ತಿದ್ದರು. ಅದೇ ವೇಳೆಗೆ ಅಲ್ಲಿಗೆ ಬಂದ ನಾಲ್ಕು ಮಂದಿ ದುಷ್ಕರ್ಮಿಗಳು ಅವರಿಗೆ ಚಾಕುವಿನಿಂದ ಬೆದರಿಸಿ ಹಲ್ಲೆ ಮಾಡಿ ಚಿನ್ನಾಭರಣ, ಮೊಬೈಲ್‌ಗಳು ಮತ್ತು ಹಣವನ್ನು ಕಿತ್ತುಕೊಂಡರು. ನಂತರ ರವಿಕುಮಾರ್ ಮತ್ತು ಮಂಜುನಾಥ್‌ನನ್ನು ಕಾರಿನಲ್ಲಿ ಎಳೆದೊಯ್ದ ಕಿಡಿಗೇಡಿಗಳು ಸುಮನಹಳ್ಳಿ ಜಂಕ್ಷನ್ ಬಳಿ ಅವರನ್ನು ಕಾರಿನಿಂದ ಕೆಳಗೆ ತಳ್ಳಿ ವಾಹನದೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಬಸವೇಶ್ವರನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಗುವಿನ ಅಜ್ಜಿಯ ವಿಚಾರಣೆ
ರೂಪೇನಾ ಅಗ್ರಹಾರ ಬಳಿಯ ಗುಲ್ಬರ್ಗ ಕಾಲೊನಿಯಿಂದ ರಿಯಾನ್ ಪಾಷಾ ಎಂಬ ಮಗು ಕಾಣೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿವಾಳ ಪೊಲೀಸರು ಮಗುವಿನ ಅಜ್ಜಿ ನೂರ್‌ಜಾನ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಯನ್ನು  ನಡೆಸಿದ್ದಾರೆ.

‘ರಿಯಾನ್‌ನನ್ನು ನೂರ್‌ಜಾನ್ ಅವರು ಅಪಹರಿಸಿದ್ದಾರೆ’ ಎಂದು ಪೋಷಕರು ಸಂಶಯ ವ್ಯಕ್ತಪಡಿಸಿದ್ದರು. ಆ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ರಿಯಾನ್‌ನ ಅಜ್ಜ ಶೌಕತ್ ಅಲಿ ಎಂಬುವರ ಎರಡನೇ ಪತ್ನಿಯಾದ ನೂರ್‌ಜಾನ್ ಅವರು ನಾಗನಾಥಪುರದ ಬಳಿ ಇರುವ ಆಹಾರ ಸಂಸ್ಕರಣಾ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಾರೆ ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.

ರಿಯಾನ್‌ನನ್ನು ನಾನು ಅಪಹರಿಸಿಲ್ಲ.ಮಗುವಿನ ಬಗ್ಗೆ ನನಗೆ ಏನು ಗೊತ್ತಿಲ್ಲ’ ಎಂದು ನೂರ್‌ಜಾನ್ ಆವರಿ ವಿಚಾರಣೆ ವೇಳೆ ಹೇಳಿಕೆಯನ್ನು ಕೊಟ್ಟಿದ್ದಾರೆ.ಅಲ್ಲದೇ ರಿಯಾನ್ ಕಾಣೆಯಾದ ದಿನ ಅವರು ಕಾರ್ಖಾನೆಯಲ್ಲಿ ಕೆಲಸಕ್ಕೆ ಹಾಜರಾಗಿರುವ ಬಗ್ಗೆ ದಾಖಲೆಗಳು ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT