ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಹಣ, ಮದ್ಯ, ಅಕ್ಕಿ ವಶ

Last Updated 19 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕೆಜಿಎಫ್: ಇಲ್ಲಿಗೆ ಸಮೀಪದ ಕ್ಯಾಸಂಬಳ್ಳಿ ಸಮೀಪದ ಪೀರವಾಡ ಗ್ರಾಮದ ಟೆಂಪೊ ಸೀನಪ್ಪ ಎಂಬುವವರ ಇಟ್ಟಿಗೆ ಕಾರ್ಖಾನೆಯಲ್ಲಿದ್ದ 4.5 ಟನ್ ಅಕ್ಕಿಯನ್ನು ಚುನಾವಣಾ ವಿಚಕ್ಷಣಾ ದಳದ ಅಧಿಕಾರಿಗಳು ಶುಕ್ರವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ರಾತ್ರಿ 8ರ ವೇಳೆಗೆ ಸ್ಥಳಕ್ಕೆ ತೆರಳಿದ ಅಧಿಕಾರಿಗಳ ತಂಡ ಅಕ್ಕಿ ಪತ್ತೆ ಹಚ್ಚಿ ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಮದ್ಯ ವಶ: ಕೋಲಾರ ಜಿಲ್ಲೆಯಲ್ಲಿ  ಅಬಕಾರಿ ವಿಚಕ್ಷಣಾ ದಳದ ಸಿಬ್ಬಂದಿ ಶುಕ್ರವಾರ  14 ಕಡೆ ದಾಳಿ ಮಾಡಿದ್ದು, ಒಬ್ಬನನ್ನು ಬಂಧಿಸಿದ್ದಾರೆ. 4 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ.

ಕೋಲಾರದಲ್ಲಿ 3, ಶ್ರೀನಿವಾಸಪುರ, ಮುಳಬಾಗಲು ಮತ್ತು ಬಂಗಾರಪೇಟೆಯಲ್ಲಿ ತಲಾ 3, ಮತ್ತು ಮಾಲೂರಿನಲ್ಲಿ 5 ದಾಳಿ ನಡೆದಿದೆ.
ಸೀರೆ ವಶ: ಅಕ್ರಮವಾಗಿ ಸಾಗಿಸುತ್ತಿದ್ದ 2 ಲಕ್ಷ ಮೌಲ್ಯದ 90 ಸೀರೆಗಳನ್ನು ನಗರದ ಬೃಂದಾವನ ವೃತ್ತದಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ಶುಕ್ರವಾರ ಸಂಜೆ ಪೊಲೀಸರು ವಶಪಡಿಸಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ.

ಮುಳಬಾಗಲು ಕಡೆಯಿಂದ ಬಂದ ಟಾಟಾ ಇಂಡಿಕಾ ಕಾರನ್ನು ಪರಿಶೀಲಿಸಿದಾಗ ದಾಖಲೆ ಇಲ್ಲದ ಸೀರೆಗಳು ಪತ್ತೆಯಾದವು. ಕಾರಿನಲ್ಲಿದ್ದ ತಮಿಳುನಾಡು ಮೂಲದ ಶಂಕರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಗಲ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿನಲ್ಲಿ ರೂ 4.51 ಲಕ್ಷ ಪತ್ತೆ
ಉಜಿರೆ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿ ಚೆಕ್‌ಪೋಸ್ಟ್ ಬಳಿ ಶುಕ್ರವಾರ ಚುನಾವಣಾ ಕರ್ತವ್ಯದಲ್ಲಿದ್ದ ಕೃಷಿ ಅಧಿಕಾರಿ ಶೈಲಜಾ ಎ.ಎನ್ ವಾಹನಗಳ ತಪಾಸಣೆ ನಡೆಸಿದಾಗ ಯಾವುದೇ ದಾಖಲೆ ಪತ್ರಗಳಿಲ್ಲದೆ ಸ್ಯಾಂಟ್ರೊ ಕಾರಿನಲ್ಲಿ ಸಾಗಿಸುತ್ತಿದ್ದ 4.51 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿದೆ.

ಕಾರು ಚಿಕ್ಕಮಗಳೂರಿನಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದು ಕಾರಿನಲ್ಲಿದ್ದ ಚಿಕ್ಕಮಗಳೂರಿನ ಆರ್.ಕೆ ಲೋಬೊ ಮತ್ತು ಅವರ ಪತ್ನಿ ಲೀನಾ ಡಿ'ಸೋಜ ಅವರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗದು ಹಣ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ರೂ 35 ಲಕ್ಷ ವಶ
ದೊಡ್ಡಬಳ್ಳಾಪುರ:   ತಾಲ್ಲೂಕಿನ ಗೌರಿ ಬಿದನೂರು ರಸ್ತೆಯ ಗುಂಜೂರು ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ನಾಗರಾಜು ಎಂಬ ವ್ಯಕ್ತಿಯಿಂದ 35 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದಾರೆ.  ನಾಗರಾಜು ಗುರುವಾರ ರಾತ್ರಿ  ಸುಮಾರು 11 ಗಂಟೆ ಸಮಯದಲ್ಲಿ ಓಮ್ನಿ ಕಾರಿನಲ್ಲಿ ಬೆಂಗಳೂರಿನಿಂದ ಗೌರಿಬಿದನೂರು ಕಡೆಗೆ ಈ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ಹಣಕ್ಕೆ ಸೂಕ್ತ ದಾಖಲೆಗಳಿರಲಿಲ್ಲ.

ಚುನಾವಣೆ ಅಧಿಕಾರಿಗಳು ವಾಹನವನ್ನು ತಪಾಸಣೆ ಮಾಡಿದ ಸಂದರ್ಭದಲ್ಲಿ ಕಾರಿನಲ್ಲಿ ಹಣ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಣ ಸಾಗಣೆಗೆ ಬಳಸಿದ್ದ ಕಾರು ಹಾಗೂ ನಾಗರಾಜು ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾರಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ. ಹಣ ಯಾರಿಗೆ ಸೇರಿದ್ದು ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 

ರೂ5.44 ಲಕ್ಷ ವಶ
ಚಿತ್ರದುರ್ಗ:
ಕಾರೊಂದರಲ್ಲಿ ಸಾಗಿ ಸುತ್ತಿದ್ದ 5.44 ಲಕ್ಷ ರೂಪಾಯಿಗಳನ್ನು ಆಂಧ್ರಪ್ರದೇಶದ ಗಡಿಯಲ್ಲಿನ ಪರಶುರಾಂಪುರ ಬಳಿಯ ನಾಗಪ್ಪನಹಳ್ಳಿ ಗೇಟ್‌ನಲ್ಲಿ ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ. ಸೂಕ್ತ ದಾಖಲೆಗಳು ಇರದಿದ್ದ ಕಾರಣ ಹಣವನ್ನು ವಶ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೂ 2.5 ಲಕ್ಷ ವಶ
ತುಮಕೂರು:
ಕುಣಿಗಲ್ ಸಮೀಪದ ಗೊಲ್ಲರಹಟ್ಟಿ ಗ್ರಾಮದ ಬಳಿ ಆಂಧ್ರಪ್ರದೇಶ ಮೂಲದ ವ್ಯಕ್ತಿಗಳು ಮಹೀಂದ್ರ ಬೊಲೆರೋ ವಾಹನದಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದರೂ2.5 ಲಕ್ಷ ಹಣವನ್ನು ಅಧಿಕಾರಿಗಳು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.
ಪಾವಗಡ ಸೇರಿದಂತೆ ಜಿಲ್ಲೆಯ 4 ಕಡೆ ಶುಕ್ರವಾರ ದಾಳಿ ನಡೆಸಿ 48 ಲೀಟರ್ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT