`ನನ್ನ ಸೆಟ್‌ನಲ್ಲಿ ತಂಬಾಕು ಸೇವನೆಯನ್ನು ಸಹಿಸುವುದೇ ಇಲ್ಲ. ಯಾರಾದರೂ ಸಿಗರೇಟು ಸೇದುತ್ತಿದ್ದರೆ, ನನಗೆ ಹೊಗೆ ಸೇವಿಸಲೂ ಆಗದು. ಆ ಕಾರಣಕ್ಕೆ ಸೆಟ್‌ನಿಂದ ಎದ್ದು ಹೊರಗೆ ಹೊರಟು ಬಿಡುತ್ತೇನೆ. ತಾಜಾ ಗಾಳಿ ಸೇವಿಸಲು~ ಎಂದು ಹೇಳಿರುವ ವಿವೇಕ್ ಒಬೆರಾಯ್ ಕ್ಯಾನ್ಸರ್ ರೋಗಿಗಳ ಸಹಾಯ ಸಂಸ್ಥೆಯೊಂದಿಗೆ 10 ವರ್ಷಗಳಿಂದ ಕೈಗೂಡಿಸಿದ್ದಾರೆ.
ಧೂಮಪಾನದಿಂದ ಹೊರ ಬರುವ ಹೊಗೆಯನ್ನೂ ಸೇವಿಸಬಾರದು. ಈ ಕಾರಣಕ್ಕೆ ಸಹ ಕಲಾವಿದರು ಸಿಗರೇಟು ಸೇವಿಸುತ್ತಿದ್ದರೆ, ಅವರ ವ್ಯಾನುಗಳತ್ತಲ್ಲೂ ವಿವೇಕ್ ಸುಳಿಯುವುದಿಲ್ಲವಂತೆ.
ಮೇ 31 ತಂಬಾಕು ರಹಿತ ದಿನ... ಇದಕ್ಕಾಗಿ ಜಾಗೃತಿ ಮೂಡಿಸಲು ವಿವೇಕ್ ಅವರ ತಾಯಿಯೊಂದಿಗೆ ಶ್ರಮಿಸುತ್ತಿದ್ದಾರೆ.
`ನನ್ನಮ್ಮ ಯಾವತ್ತಿದ್ದರೂ ನನ್ನ ಪಾಲಿನ ಹೀರೊ. ಅವರು ಕ್ಯಾನ್ಸರ್ ಆಸ್ಪತ್ರೆಗೆ ಆಗಾಗ ಭೇಟಿ ನೀಡುತ್ತಾರೆ. ಮನೆಯೂಟವನ್ನು ರೋಗಿಗಳಿಗೆ ಉಣಬಡಿಸಿ, ಮಾತನಾಡಿಸಿ, ಅವರೊಂದಿಗೆ ಸ್ವಲ್ಪ ಹೊತ್ತು ಇದ್ದು ಬರುತ್ತಾರೆ~ ಎಂದು ವಿವೇಕ್ ಒಬೇರಾಯ್ ಅಮ್ಮನನ್ನು ಸ್ತುತಿಸುತ್ತಾರೆ.
ಇದು ಕೇವಲ ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದಂತೆ ಅಷ್ಟೇ ಅಲ್ಲ. ಸಮಾಜದ ಹಿತಕ್ಕಾಗಿ ಯಾವುದೇ ಸಂಸ್ಥೆ ಸ್ವಾರ್ಥರಹಿತವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಅಂಥ ಸಂಸ್ಥೆಗಳೊಂದಿಗೆ ತಾವು ಕೈಜೋಡಿಸುವುದಾಗಿ 35ರ ಹರೆಯದ ವಿವೇಕ್ ಹೇಳಿದ್ದಾರೆ.