ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶಿಷ್ಟ ವಾಲ್ಮೀಕಿ ಭವನ ನಿರ್ಮಾಣ: ರಾಮದಾಸ್

Last Updated 12 ಅಕ್ಟೋಬರ್ 2011, 6:45 IST
ಅಕ್ಷರ ಗಾತ್ರ

ಮೈಸೂರು:  `ರಾಮಾಯಣ ಮತ್ತು ಮಹರ್ಷಿ ವಾಲ್ಮೀಕಿ ಜೀವನ ಕುರಿತು ಸಮಾಜಕ್ಕೆ ಅರಿವು ಮೂಡಿಸುವ ಸಲುವಾಗಿ ನಗರದಲ್ಲಿ ಸುಸಜ್ಜಿತ ವಾಲ್ಮೀಕಿ ಭವನ ನಿರ್ಮಾಣಕ್ಕೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಮಂಗಳವಾರ ತಿಳಿಸಿದರು.

ಕಲಾಮಂದಿರದಲ್ಲಿ ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲೆಯ ಎಲ್ಲ ನಾಯಕ ಜನಾಂಗದ ಸಂಘ ಸಂಸ್ಥೆಗಳು ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

`ವಿಜಯನಗರದ ಎರಡನೇ ಹಂತದಲ್ಲಿ ನಿವೇಶನವನ್ನು ಗುರುತಿಸಲಾಗಿದ್ದು, 5 ಕೋಟಿ ರೂಪಾಯಿ ವೆಚ್ಚದಲ್ಲಿ ವಾಲ್ಮೀಕಿ ಭವನವನ್ನು ನಿರ್ಮಿಸಲಾಗುತ್ತದೆ. ಇನ್ನೆರಡು ತಿಂಗಳಲ್ಲಿ ವಾಲ್ಮೀಕಿ ಮತ್ತು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಶಿಲಾನ್ಯಾಸವನ್ನು ನೆರವೇರಿಸಲಿದ್ದಾರೆ~ ಎಂದು ಹೇಳಿದರು.

`ವಾಲ್ಮೀಕಿ ಭವನವನ್ನು ವಿಶಿಷ್ಟವಾಗಿ ರೂಪಿಸಲಾಗುವುದು. ಭವನದ ಗೋಡೆಗಳ ಮೇಲೆ ರಾಮಾಯಣದ ಏಳು ಕಾಂಡಗಳಲ್ಲಿರುವ ಅಂಶಗಳನ್ನು ಚಿತ್ರಿಸಲಾಗುವುದು. ರಾಮಾಯಣದ ವಿಚಾರಗಳು, ಮೌಲ್ಯಗಳು, ವಾಲ್ಮೀಕಿ ಜೀವನ ಕುರಿತು ಆಡಿಯೋ ಮತ್ತು ವಿಡಿಯೋ ಮುಖಾಂತರ  ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಮಾಜಕ್ಕೆ ತಿಳಿಸಿಕೊಡಲಾಗುವುದು~ ಎಂದರು.

`ರಾಮಾಯಣದಂತಹ ಮಹಾಕಾವ್ಯವನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಒಂದು ಜಾತಿಗೆ  ಸೀಮಿತಗೊಳಿಸಬಾರದು. ರತ್ನಾಕರ ವಾಲ್ಮೀಕಿ ಆಗಿದ್ದು ಆಕಸ್ಮಿಕ.

ಇಂತಹ ಆಕಸ್ಮಿಕಗಳು ಎಲ್ಲರ ಬದುಕಿನಲ್ಲಿಯೂ ಘಟಿಸಬೇಕು. ನಾವುಗಳು ಕೂಡ ಒಳ್ಳೆಯ ರೀತಿಯಲ್ಲಿ ಬದಲಾಗಬೇಕು. ವಾಲ್ಮೀಕಿ ಮಾನವತಾವಾದಿ, ಪರಿಸರವಾದಿ, ಖಗೋಳಶಾಸ್ತ್ರಜ್ಞ, ಭೂಗೋಳಶಾಸ್ತ್ರಜ್ಞ ಕೂಡ ಆಗಿದ್ದರು~ ಎಂದರು.

ವಿಧಾನ ಪರಿಷತ್ ಸದಸ್ಯ ಚಿಕ್ಕಮಾದು ಮಾತನಾಡಿ, `ನಾಯಕ ಜನಾಂಗದ ಎಲ್ಲ ಉಪ ಜಾತಿಗಳು ಒಟ್ಟಾಗಬೇಕು. ಆ ಮೂಲಕ ಸಾಮಾಜಿಕ ನ್ಯಾಯಕ್ಕೆ ಹೋರಾಟಬೇಕು. ತಮ್ಮಲ್ಲಿರುವ ಕೀಳರಿಮೆಯನ್ನು ತೊರೆಯಬೇಕು. ನಾವು ಎಷ್ಟೇ ಜಾತ್ಯತೀತರೂ ಎಂದುಕೊಂಡರು ಸಮಾಜ ವ್ಯಕ್ತಿಯನ್ನು ಜಾತಿಯಿಂದಲೇ ಗುರುತಿಸುತ್ತದೆ~ ಎಂದ ಅವರು, `ಸಮಾರಂಭದಲ್ಲಿ ಮಹಾತ್ಮಗಾಂಧಿಯನ್ನು ನೆನಪಿಸಿಕೊಳ್ಳಬೇಕು. ಅವರು ವಾಲ್ಮೀಕಿಯ ರಾಮರಾಜ್ಯ ಪರಿಕಲ್ಪನೆಗೆ ಜೀವ ಕೊಟ್ಟರು~ ಎಂದು ಹೇಳಿದರು.

ಶಾಸಕ ಎಚ್.ಎಸ್.ಶಂಕರಲಿಂಗೇಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಾಸಕರಾದ ತನ್ವೀರ್ ಸೇಟ್, ಎಂ.ಸತ್ಯನಾರಾಯಣ, ಸಿದ್ದರಾಜು, ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುನೀತಾವೀರಪ್ಪಗೌಡ, ಮುಡಾ ಅಧ್ಯಕ್ಷ ಎಲ್.ನಾಗೇಂದ್ರ, ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ, ಜಿಲ್ಲಾ ಪಂಚಾಯಿತಿ ಸಿಇಓ ಜಿ.ಸತ್ಯವತಿ, ಮುಡಾ ಆಯುಕ್ತ ಡಾ.ಸಿ.ಜೆ.ಬೆಟ್‌ಸೂರ್‌ಮಠ ಇದ್ದರು. ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್ ಸ್ವಾಗತಿಸಿದರು.

`ವಾಲ್ಮೀಕಿ ಆಶ್ರಮ ನಿರ್ಮಿಸಲಿ~
ಮೈಸೂರು: `ರಾಜ್ಯ ಸರ್ಕಾರ ಪ್ರತಿ ಜಿಲ್ಲಾ ಕೇಂದ್ರದಲ್ಲಿಯೂ ವಾಲ್ಮೀಕಿ ಆಶ್ರಮವನ್ನು ನಿರ್ಮಿಸಿ, ಅವುಗಳನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸಬೇಕು~ ಎಂದು ಧಾರವಾಡ ವಿವಿಯ ಕನ್ನಡ ಪ್ರಾಧ್ಯಾಪಕಿ ಸುಕನ್ಯಾ ಮಾರುತಿ ಸಲಹೆ ನೀಡಿದರು.

ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಅವರು, `ಸರ್ಕಾರ ವಾಲ್ಮೀಕಿ ಸಮುದಾಯ ಭವನ ನಿರ್ಮಿಸುವ ಉದ್ದೇಶ ಹೊಂದಿದೆ. ಈಗಾಗಲೇ ರಾಜ್ಯದ ತುಂಬ ಭವನಗಳು ಇವೆ. ಅವುಗಳು ಮದುವೆ ಮಂಟಪಗಳಾಗಿವೆ. ಆದ್ದರಿಂದ ವಾಲ್ಮೀಕಿ ಹೆಸರಿನಲ್ಲಿ ಭವನ ನಿರ್ಮಿಸುವುದು ಸೂಕ್ತವಲ್ಲ. ಬದಲಿಗೆ ಆಶ್ರಮವನ್ನು ನಿರ್ಮಿಸಿ, ಅವುಗಳು ಜ್ಞಾನ ಸೃಷ್ಟಿಸುವ ಕೇಂದ್ರಗಳನ್ನಾಗಿ ಮಾಡಬೇಕು~ ಎಂದು ಹೇಳಿದರು.

ವಾಲ್ಮೀಕಿ ಜಯಂತಿಯು ಜನಾಂಗವನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತದೆ. ಆದರೆ ಇಂತಹ ವೇದಿಕೆಯಲ್ಲಿ ವಾಲ್ಮೀಕಿ ಭಜನೆ ಮಾಡಲು ಬಳಸಿಕೊಳ್ಳಬಾರದು. ಅದಕ್ಕೆ ಬೇರೆಯದೇ ವೇದಿಕೆಗಳು ಇವೆ. ಇಲ್ಲಿ ಜನಾಂಗದ ಕುಂದುಕೊರತೆಗಳ ಮೇಲೆ ಬೆಳಕು ಚೆಲ್ಲಬೇಕು. ಜನಾಂಗದಲ್ಲಿ ಸಾಕಷ್ಟು ಮಂದಿ ಅಧಿಕಾರಿಗಳು ಇದ್ದಾರೆ.

ಆದರೆ ಅವರು ಜನಾಂಗದ ಇತರರನ್ನು ಮುಂದೆ ಕರೆದೊಯ್ಯುವ ಕೆಲಸ ಮಾಡುತ್ತಿಲ್ಲ. ಕೆಲವು ಜಾತಿಗಳನ್ನು ನೋಡಿಯಾದರೂ ನಾವು ಕಲಿಯಬೇಕು~ ಎಂದರು.

`ನಾಯಕ ಜನಾಂಗಕ್ಕೆ ಸರ್ಕಾರ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಿಲ್ಲ. ಈ ಜನಾಂಗದಲ್ಲಿಯೂ ಸಾಕಷ್ಟು ಅರ್ಹರು ಇದ್ದಾರೆ. ವಿವಿಧ ಅಕಾಡೆಮಿಗಳು, ನಿಗಮ, ಮಂಡಳಿಗಳು ಹಾಗೂ ವಿಶ್ವವಿದ್ಯಾನಿಲಯಗಳಿಗೆ ನೇಮಕ ಮಾಡುವಲ್ಲಿ ನಿರ್ಲಕ್ಷ್ಯ ತೋರಿಸಲಾಗುತ್ತಿದೆ~ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕಾರಣಿಗಳ ಕುಣಿತ!
ಮೈಸೂರು: ವಾಲ್ಮೀಕಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಅಡ್ಡಪಲ್ಲಕ್ಕಿ ಮೆರವಣಿಗೆಯಲ್ಲಿ ರಾಜಕಾರಣಿಗಳು ಮೈಚಳಿ ಬಿಟ್ಟು ಕುಣಿದು ಕುಪ್ಪಳಿಸುವ ಮೂಲಕ ಗಮನ ಸೆಳೆದರು.

ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಬಳಿ ಮೆರವಣಿಗೆಗೆ ಚಾಲನೆ ದೊರೆಯಿತು. ಈ ಸಂದರ್ಭದಲ್ಲಿ ಹಾಜರಿದ್ದ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ಉಪ ಮೇಯರ್ ಎಂ.ಜೆ.ರವಿಕುಮಾರ್ ತಮಟೆ ಏಟಿಗೆ ಕುಣಿದು ಕುಪ್ಪಳಿಸಿದರು.

ಆರಂಭದಲ್ಲಿ ಜಿ.ಟಿ.ದೇವೇಗೌಡ ಸಂಕೋಚದಿಂದಲೇ ಹೆಜ್ಜೆ ಹಾಕಲು ಶುರು ಮಾಡಿದರು. ನಂತರ ಜೋರಾಗಿ ಹೆಜ್ಜೆ ಹಾಕಿದವರು ಪಕ್ಕದಲ್ಲಿಯೇ ಇದ್ದ ಸಿದ್ದರಾಜು ಅವರ ಕೈ ಹಿಡಿದು ಕುಣಿಯಲು ಆಹ್ವಾನಿಸಿದರು. ಸಿದ್ದರಾಜು ಉಪ ಮೇಯರ್ ರವಿಕುಮಾರ್ ಕೈ ಹಿಡಿದುಕೊಂಡರು. ಆ ಮೇಲೆ ಮೂವರು ಒಟ್ಟಾಗಿ ಕುಣಿದು ಸಾರ್ವಜನಿಕರಿಗೆ ಮನರಂಜನೆ ನೀಡಿದರು. ಈ ಮೆರವಣಿಗೆಯಲ್ಲಿ ದೊಳ್ಳು ಕುಣಿತ, ಪೂಜಾ ಕುಣಿತ, ಬೀಸು ಕಂಸಾಳೆ, ವೀರಗಾಸೆ ಕುಣಿತ ಸಹ ಇದ್ದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT