ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಕಪ್ ಕ್ರಿಕೆಟ್: ಇಂದು ಉದ್ಘಾಟನೆ

Last Updated 16 ಫೆಬ್ರುವರಿ 2011, 18:55 IST
ಅಕ್ಷರ ಗಾತ್ರ

ಢಾಕಾ:  ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ‘ದಿ ಟೈಗರ್ಸ್’ ಎಂದು ಕರೆಯುತ್ತಾರೆ. ಆ ತಂಡ ಮೈದಾನದಲ್ಲಿ ಗರ್ಜಿಸಲಿ ಬಿಡಲಿ ಜನ ಮಾತ್ರ ಆಟಗಾರರನ್ನು ಬಂಗಾಳದ ಹುಲಿಗಳೆಂದೇ ಭಾವಿಸಿದ್ದಾರೆ. ಮೀರಪುರದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ಯಾವ ಆಟಗಾರನೂ ಇರಲಿಲ್ಲ. ಆದರೆ ಸಾವಿರಾರು ಜನ ಕ್ರಿಕೆಟ್‌ಪ್ರಿಯರ ಜಂಗುಳಿ ಮಾತ್ರ ಸೇರಿತ್ತು. ಅವರ್ಯಾರನ್ನೂ ಕ್ರೀಡಾಂಗಣದೊಳಗೆ ಬಿಡುತ್ತಿರಲಿಲ್ಲ. ಆದರೆ ಜನರ ಉತ್ಸಾಹದ ಕೇಕೆ ಮಾತ್ರ ಮುಗಿಲುಮುಟ್ಟಿತ್ತು. ಕ್ರೀಡಾಂಗಣದ ಮುಂದೆ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.

ಬಾಂಗ್ಲಾದೇಶ ವಿಶ್ವ ಕಪ್ ಕ್ರಿಕೆಟ್ ಪ್ರಶಸ್ತಿಯನ್ನು ಗೆಲ್ಲಲಿಕ್ಕಿಲ್ಲ. ಆದರೆ ಇದೇ ಮೊದಲ ಬಾರಿಗೆ ಆ ದೇಶ ಕೂಡ ವಿಶ್ವ ಕಪ್ ಆತಿಥ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ಜೊತೆ ಭಾಗಿಯಾಗಿದೆ. ವಿಶ್ವ ಕಪ್‌ನ ಮೊದಲ ಪಂದ್ಯ ಶನಿವಾರ (ಫೆ. 19) ಅದರ ದೊಡ್ಡಣ್ಣ ಭಾರತದ ಜೊತೆಯೇ ನಡೆಯಲಿದೆ.

ಪಂದ್ಯ ಶನಿವಾರವಾದರೂ ಉದ್ಘಾಟನೆ ಮಾತ್ರ ಗುರುವಾರ (ಫೆ. 17) ಸಂಜೆ 5 ಗಂಟೆಗೆ (ಭಾರತೀಯ ವೇಳೆ 4.30) ಬಂಗಬಂಧು ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಎಲ್ಲ 14 ತಂಡಗಳ ನಾಯಕರು, ಮ್ಯಾನೇಜರುಗಳು ಇದರಲ್ಲಿ ಭಾಗವಹಿಸುತ್ತಾರೆ. ಭಾರತ ಮತ್ತು ಬಾಂಗ್ಲಾದೇಶ ತಂಡಗಳ ಎಲ್ಲ ಆಟಗಾರರು ಹಾಜರಿರುತ್ತಾರೆ. ಭಾರತ ತಂಡ ಗುರುವಾರ ಬೆಳಿಗ್ಗೆ ಇಲ್ಲಿಗೆ ಬರಲಿದೆ.

ಬಾಂಗ್ಲಾದೇಶ ಸ್ವತಂತ್ರವಾಗಿ ಸರಿಯಾಗಿ 40 ವರ್ಷಗಳಾದವು. ಬಂಗಬಂಧು ಎಂದೇ ಖ್ಯಾತರಾಗಿದ್ದ ಮುಜಿಬುರ್ ರೆಹಮಾನ್ ಅವರ ಸ್ವಾತಂತ್ರ್ಯ ಹೋರಾಟಕ್ಕೆ ಭಾರತ ಬೆಂಬಲ ನೀಡಿದ್ದನ್ನು ಜನ ಮರೆತಿಲ್ಲ. ಅವರಿಗೆ ಭಾರತವೇ ವಿಶ್ವ ಕಪ್ ಗೆಲ್ಲಬೇಕೆಂಬ ಆಸೆ. ಢಾಕಾದ ವಿಮಾನ ನಿಲ್ದಾಣದಲ್ಲಿ ಡಾಲರುಗಳನ್ನು ಬಾಂಗ್ಲಾದೇಶದ ಟಾಕಾಗೆ ಬದಲಿಸುವಾಗಲೇ ಆ ಮಾತು ಬಂತು. ಭಾರತೀಯರ ಜೊತೆ ಹಿಂದೀಯಲ್ಲಿಯೇ ಮಾತನಾಡಲು ಪ್ರಯತ್ನಿಸುವ ಜನ ನಗುತ್ತಲೇ ಸ್ವಾಗತಿಸುತ್ತಾರೆ.

ಪಾಕಿಸ್ತಾನದಿಂದ ಬೇರ್ಪಟ್ಟದ್ದು ನಮಗೆಲ್ಲ ಒಳ್ಳೆಯದೇ ಆಗಿದೆ ಎಂಬ ಅಭಿಪ್ರಾಯವೂ ಕೇಳಿಬರುತ್ತದೆ. 1999 ರಲ್ಲಿ, ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವ ಕಪ್‌ನಲ್ಲಿ ತಮ್ಮ ದೇಶ ಪಾಕಿಸ್ತಾನವನ್ನು ಮಣಿಸಿದ್ದನ್ನು ಜನರು ಹರುಷದಿಂದ ನೆನಪಿಸಿಕೊಳ್ಳುತ್ತಿದ್ದಾರೆ. 2007ರಲ್ಲಿ ಭಾರತವನ್ನು ಸೋಲಿಸಿದ್ದೂ ದೊಡ್ಡ ಸಾಧನೆಯೇ ಎಂಬ ಖುಷಿ ಅವರಲ್ಲಿದೆ. ಆದರೆ ಆ ಗೆಲುವು ಆಕಸ್ಮಿಕವಾಗಿತ್ತು ಎಂದು ಒಪ್ಪಿಕೊಳ್ಳುವ ದೊಡ್ಡತನ ಟ್ಯಾಕ್ಸಿ ಚಾಲಕ ಶಕೀಬ್ ಅವರಲ್ಲಿ ಕಂಡುಬಂತು.

ಢಾಕಾದ ಹಲವು ಕಡೆ ಬಾಂಗ್ಲಾದೇಶದ ಆಟಗಾರರ ಪೋಸ್ಟರುಗಳು ಕಂಡುಬಂದವು. ದೊಡ್ಡ ಬ್ಯಾಟಿನ ಮೇಲೆ ತಂಡಕ್ಕೆ ಶುಭಕೋರುವ ಜನರ ಹಸ್ತಾಕ್ಷರಗಳು ಕಂಡುಬಂದವು. ಕ್ರೀಡಾಂಗಣದ ಹೊರಗೆ ಎಲ್ಲ 14 ರಾಷ್ಟ್ರಗಳ ಧ್ವಜದ ಚಿತ್ರಗಳಿರುವ ಬ್ಯಾಟುಗಳನ್ನೇ ನಿಲ್ಲಿಸಲಾಗಿದೆ.

ಕ್ರೀಡಾಂಗಣದ ಮುಂದೆ ಜನರ ಉತ್ಸಾಹವನ್ನು ನೋಡಿ ಒಂದು ಕ್ಷಣ ಸೊಳ್ಳೆಗಳ ಕಾಟ ಮರೆತುಹೋಯಿತು. ವಿಮಾನ ನಿಲ್ದಾಣದಲ್ಲೇ ಮುತ್ತಿಗೆ ಹಾಕಿದ್ದ ಸೊಳ್ಳೆಗಳು ದಾರಿಯುದ್ದಕ್ಕೂ ಕಾರಿನಲ್ಲೂ ಕಾಡಿದ್ದವು.

ಸೊಳ್ಳೆ ಔಷಧಿ ವಾಸನೆ ಮೂಗಿಗೆ ಬಡಿಯುತ್ತದೆ. ಕ್ರೀಡಾಂಗಣದಲ್ಲಿ ಸೊಳ್ಳೆ ನಿಯಂತ್ರಿಸುವ ಹೊಗೆ ತುಂಬಿಹೋಗಿತ್ತು. ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಾರೋ ಸೊಳ್ಳೆ ಹೊಡೆಯುತ್ತಾರೋ ಗೊತ್ತಾಗುವುದಿಲ್ಲ.

ಗುರುವಾರ ಸಂಜೆ ನಡೆಯುವ ಉದ್ಘಾಟನಾ ಸಮಾರಂಭದ ನಂತರ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ.  ಬಾಂಗ್ಲಾ ಕ್ರಿಕೆಟ್ ಮಂಡಳಿಯ ಅಧಿಕಾರಿಗಳೆಲ್ಲ ಅಂತಿಮ ತಯಾರಿಯಲ್ಲಿ ನಿರತರಾಗಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT