ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ಕ್ರಿಕೆಟ್ 2011: ವಿಂಡೀಸ್ ತಂಡಕ್ಕೆ ಹಿಂದಿರುಗಿದ ಸರವಣ್

Last Updated 20 ಜನವರಿ 2011, 19:30 IST
ಅಕ್ಷರ ಗಾತ್ರ

ಬ್ರಿಜ್‌ಟೌನ್ (ಪಿಟಿಐ): ಕಳೆದ ಎಂಟು ತಿಂಗಳ ಅವಧಿಯಲ್ಲಿ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಡಿರದ ರಾಮನರೇಶ್ ಸರವಣ್ ಅವರನ್ನು ವಿಶ್ವಕಪ್‌ಗಾಗಿ ರಚಿಸಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಮೂವತ್ತು ಸಂಭವನೀಯ ಆಟಗಾರರ ಪಟ್ಟಿಯಲ್ಲಿದ್ದ ಸರವಣ್ ಅವರು ಅಂತಿಮ ಹದಿನೈದರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಅನುಮಾನವಿತ್ತು. ಆದರೆ ವಿಂಡೀಸ್ ರಾಷ್ಟ್ರೀಯ ಆಯ್ಕೆ ಸಮಿತಿಯು 30 ವರ್ಷ ವಯಸ್ಸಿನ ಕ್ರಿಕೆಟಿಗನಿಗೆ ಸ್ಥಾನ ನೀಡಲು ತೀರ್ಮಾನಿಸಿತು.

ವಿಶ್ವಕಪ್‌ಗಾಗಿ ತಂಡವನ್ನು ಗುರುವಾರ ಪ್ರಕಟಿಸಿದ ಆಯ್ಕೆ ಸಮಿತಿ ಮುಖ್ಯಸ್ಥ ಕ್ಲೈಡ್ ಬಟ್ಸ್ ಅವರು ‘ಕರ್ಟ್ನಿ ಬ್ರೌನ್ ಹಾಗೂ ರಾಬರ್ಟ್ ಹೇನ್ಸ್ ಅವರನ್ನೊಳಗೊಂಡ ಸಮಿತಿಯು ಗಯಾನಾದ ಬ್ಯಾಟ್ಸ್‌ಮನ್‌ಗೆ ಅವಕಾಶ ನೀಡಲು ತೀರ್ಮಾನಿಸಿತು. ಎರಡು ವಿಶ್ವಕಪ್‌ನಲ್ಲಿ ಆಡಿರುವ ಸರವಣ್ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ’ ಎಂದು ಹೇಳಿದರು.

‘ಗಾಯದ ಸಮಸ್ಯೆಯಿಂದ ಮುಕ್ತವಾಗಿರುವ ಸರವಣ್ ಆಡಲು ಸಮರ್ಥರಾಗಿದ್ದಾರೆ. ವಿಶ್ವಕಪ್ ಸಮಯದಲ್ಲಿ ಯಾವುದೇ ದೈಹಿಕ ತೊಂದರೆಗೆ ಒಳಗಾಗದೇ ಆಡುತ್ತಾರೆ ಎನ್ನುವ ವಿಶ್ವಾಸವೂ ಇದೆ’ ಎಂದು ಬಟ್ಸ್ ವಿವರಿಸಿದರು.

‘ಯಾವುದೇ ಕ್ರಿಕೆಟಿಗನಿಗೆ ಗಾಯದ ಸಮಸ್ಯೆ ಕಾಡಬಹುದು. ಅದರೆ ಎಷ್ಟರ ಮಟ್ಟಿಗೆ ಚೇತರಿಸಿಕೊಂಡು ಆಡಲು ಸಜ್ಜಾಗುತ್ತಾರೆ ಎನ್ನುವುದು ಮುಖ್ಯ. ಇದೇ ಅಂಶವನ್ನು ಪರಿಗಣಿಸಿ ಸರವಣ್ ಅವರನ್ನು ಆಯ್ಕೆ ಮಾಡಲಾಯಿತು. ಆಯ್ಕೆ ಸಮಿತಿ ಸದಸ್ಯರು ಪ್ರತ್ಯಕ್ಷವಾಗಿ ಈ ಆಟಗಾರನು ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದ್ದನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ’  ಎಂದು ತಿಳಿಸಿದರು.

ತಂಡ ಇಂತಿದೆ: ಡೇರನ್ ಸ್ಯಾಮಿ (ನಾಯಕ). ಆ್ಯಡ್ರಿನ್ ಭರತ್, ಕಾರ್ಲಟನ್ ಬಗ್, ಸುಲೇಮಾನ್ ಬೆನ್, ಡೇರನ್ ಬ್ರೇವೊ, ಡ್ವೇನ್ ಬ್ರೇವೊ, ಚಂದ್ರಪಾಲ್, ಕ್ರಿಸ್ ಗೇಲ್, ನಿಕಿಟಾ ಮಿಲ್ಲರ್, ಕೀರೊನ್ ಪೊಲಾರ್ಡ್, ರವಿ ರಾಮ್‌ಪಾಲ್, ಕೆಮಾರ್ ರಾಚ್, ಆ್ಯಂಡ್ರೆ ರಸಲ್, ರಾಮನರೇಶ್ ಸರವಣ್.  ಡೆವೊನ್ ಸ್ಮಿತ್. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT