ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸ ವೃದ್ಧಿ ಕೊಂಡಿಯಾಗಿ ಮಧ್ಯಸ್ಥಿಕೆ ಕೇಂದ್ರಗಳು

Last Updated 14 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ರಾಮನಗರ: ನ್ಯಾಯಾಲಯದ ಮೇಲೆ ಜನತೆ ಕಳೆದುಕೊಳ್ಳುತ್ತಿರುವ ನಂಬಿಕೆ ಮತ್ತು ವಿಶ್ವಾಸವನ್ನು ಪುನಃ ತರಿಸುವ ಗುರುತರವಾದ ಕಾರ್ಯವನ್ನು ಮಧ್ಯಸ್ಥಿಕೆ/ಸಂಧಾನ ಕೇಂದ್ರಗಳು ಮಾಡಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಆಡಳಿತ ಮಂಡಳಿ ಸದಸ್ಯರಾದ ಸುಭಾಷ್ ಬಿ. ಆದಿ ಹೇಳಿದರು.

ಬೆಂಗಳೂರು ಮಧ್ಯಸ್ಥಿಕೆ/ಸಂಧಾನ ಕೇಂದ್ರ, ರಾಮನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ ಜಂಟಿಯಾಗಿ ನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಸೋಮವಾರ ವಕೀಲರಿಗೆ ಏರ್ಪಡಿಸಿದ್ದ ಮಧ್ಯಸ್ಥಿಕೆ/ಸಂಧಾನ ಕಾರ್ಯಕ್ರಮ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜನಸಂಖ್ಯೆ ಹೆಚ್ಚಾದಂತೆ ಸಿವಿಲ್ ಮತ್ತಿತರ ವ್ಯಾಜ್ಯಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ ನ್ಯಾಯಾಂಗದ ಬಗ್ಗೆ ಜನತೆಯಲ್ಲಿ ಅಪನಂಬಿಕೆ ಮತ್ತು ಅವಿಶ್ವಾಸ ಕೂಡ ಮೂಡುತ್ತಿದೆ. ನ್ಯಾಯಾಲಯಗಳಲ್ಲಿ ತ್ವರಿತವಾಗಿ ವ್ಯಾಜ್ಯಗಳ ವಿಲೇವಾರಿ ಆಗುತ್ತಿಲ್ಲ ಎಂಬ ಬೇಸರವೂ ಜನತೆಯಲ್ಲಿ ಮನೆ ಮಾಡಿದೆ. ಇದನ್ನು ಜನತೆಯ ಮನಸ್ಸಿನಿಂದ ದೂರ ಮಾಡುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ಕೇಂದ್ರಗಳು ಹಾಗೂ ಮಧ್ಯಸ್ಥಿಕೆದಾರರು ಕಾರ್ಯ ನಿರ್ವಹಿಸಬೇಕಿದೆ ಎಂದು ಅವರು ತಿಳಿಸಿದರು.

ಪುರಾವೆಗಳ ಆಧಾರದ ಮೇಲೆ ನ್ಯಾಯಾಲಯಗಳು ನೀಡುವ ತೀರ್ಪುಗಳು ಒಂದು ಕಡೆಯ ಕಕ್ಷಿದಾರರಿಗೆ ತೃಪ್ತಿ ತರಿಸಿದರೆ, ಮತ್ತೊಂದು ಕಡೆಯ ಕಕ್ಷಿದಾರರಿಗೆ ಅತೃಪ್ತಿ ತರಿಸಬಹುದು. ಆದರೆ ಈ ಇಬ್ಬರೂ ಕಕ್ಷಿದಾರರಿಗೆ ನೆಮ್ಮದಿ ತರಿಸುವಂತಹ ನ್ಯಾಯವನ್ನು ಮಧ್ಯಸ್ಥಿಕೆ ಕೇಂದ್ರಗಳು ದೊರಕಿಸಿಕೊಡಲು ಸಾಧ್ಯ ಎಂದರು.

ನ್ಯಾಯ ವಿತರಣೆಯ ವಿಳಂಬದಿಂದಾಗಿಯೇ ಅರ್ಧಕ್ಕರ್ಧ ಕಕ್ಷಿದಾರರು ಸೋತಂತಿರುತ್ತಾರೆ. ಗೆದ್ದವ ಸೋತ, ಸೋತವ ಸತ್ತ ಎಂಬ ಗಾದೆ ಮಾತು ಈಗಲೂ ನಮ್ಮ ನ್ಯಾಯಾಲಯ ವ್ಯವಸ್ಥೆಯಲ್ಲಿ ಮುಂದುವರೆದು ಕೊಂಡು ಬಂದಿರುವುದು ಬೇಸರದ ಸಂಗತಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸದರು. ಈ ಚಿತ್ರಣವನ್ನು ಬದಲಿಸಲು ಹಾಗೂ ಎರಡೂ ಕಕ್ಷಿದಾರರನ್ನು ಒಂದೇ ಮನೋಸ್ಥಿತಿಗೆ ಬರುವಂತೆ ಮಾಡುವ ಕಾರ್ಯ ಮಧ್ಯಸ್ಥಿಕೆದಾರರಿಂದ ಸಾಧ್ಯ.ಇದರಿಂದ ನ್ಯಾಯಾಲಯ ವ್ಯವಸ್ಥೆಯ ಗೌರವ ಮತ್ತು ಘನತೆ ಹೆಚ್ಚುತ್ತದೆ ಎಂದು ಅವರು ತಿಳಿಸಿದರು.

ಮಧ್ಯಸ್ಥಿಕೆ ಕೇಂದ್ರಗಳ ಸ್ಥಾಪನೆಯಿಂದ ವಕೀಲರು ತಮ್ಮ ವೃತ್ತಿಗೆ ತೊಡಕು ಎದುರಾಗುತ್ತದೆ ಎಂದು ಭಾವಿಸುವ ಅಗತ್ಯವಿಲ್ಲ. ಏಕೆಂದರೆ ಇಲ್ಲಿಯೂ ವಕೀಲರ ಪಾತ್ರ ಗಣನೀಯವಾದುದು. ಈ ಮೂಲಕ ನಿಮ್ಮ ವೃತ್ತಿಯೂ ಬೆಳೆಯುತ್ತದೆ, ಜತೆಗೆ ನಿಮ್ಮ ಕೌಶಲ್ಯವೂ ವೃದ್ಧಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.

ಅಮೆರಿಕ ದೇಶದಲ್ಲಿ ಶೇ 98ರಷ್ಟು ವ್ಯಾಜ್ಯಗಳು ನ್ಯಾಯಾಲಯ ಅಥವಾ ಖಾಸಗಿ ಸಂಧಾನ ಕೇಂದ್ರಗಳ ಮೂಲಕ ನಿವಾರಣೆ ಆಗುತ್ತಿದೆ. ಅಲ್ಲಿ ಯಶಸ್ವಿಯಾದುದನ್ನು ಇಲ್ಲಿಯೂ ಯಶಸ್ವಿಯಾಗುವಂತೆ ಮಾಡಬಹುದಲ್ಲ. ಇದರಿಂದ ಕಕ್ಷಿದಾರರಿಗೆ ತೃಪ್ತಿಯಾಗುವಂತಹ ನ್ಯಾಯವನ್ನು ಅವರೇ ಒಂದು ಮನಸ್ಸಿನಿಂದ ಆರಿಸಿಕೊಳ್ಳುವಂತೆ ಮಾಡಬಹುದಲ್ಲಎಂದು ಯುವ ವಕೀಲರು ಹಾಗೂ ಮಧ್ಯಸ್ಥಿಕೆದಾರರನ್ನು ಅವರು ತಿಳಿಸಿದರು.

ಮಧ್ಯಸ್ಥಿಕೆ ಕೇಂದ್ರಗಳ ಕಾರ್ಯ ನಿರ್ವಹಣೆಯಿಂದ ವಕೀಲರು, ನ್ಯಾಯಾಧೀಶರು ಹಾಗೂ ಕಕ್ಷಿದಾರರಿಗೆ ನೆಮ್ಮದಿ ಮತ್ತು ತೃಪ್ತಿ ದೊರೆಯುತ್ತದೆ. ನ್ಯಾಯಾಲಯ ವ್ಯವಸ್ಥೆಯ ಬಗ್ಗೆಯೂ ಜನತೆಯಲ್ಲಿ ನಂಬಿಕೆ ಮತ್ತು ವಿಶ್ವಾಸ ವೃದ್ಧಿಯಾಗುತ್ತದೆ.ಆದ್ದರಿಂದ ಈ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುವಂತೆ ಅವರು ಸಲಹೆ ನೀಡಿದರು.

ಸರ್ಕಾರಿ ವ್ಯಾಜ್ಯಗಳು ಕೂಡ ಮಧ್ಯಸ್ಥಿಕೆ ಕೇಂದ್ರಗಳ ವ್ಯಾಪ್ತಿಗೆ ಬರುತ್ತವೆ. ಭೂಸ್ವಾಧೀನ ಹಾಗೂ ಕೃಷಿಕರ ಸಮಸ್ಯೆಗಳನ್ನು ಪರಿಹರಿಸಲು ಈ ಕೇಂದ್ರಗಳು ವೇದಿಕೆಯಾಗುತ್ತವೆ ಎಂದು ಅವರು ಹೇಳಿದರು.ಬಿಎಂಸಿ ತರಬೇತಿದಾರರಾದ ಶೋಭಾ ಪಾಟೀಲ್ ಅವರು ಮಾತನಾಡಿ, ಕಕ್ಷಿದಾರರನ್ನು ಒತ್ತಾಯಿಸದೆ, ಅವರ ವ್ಯಾಜ್ಯದ ಸಾಧಕ- ಬಾಧಕಗಳನ್ನು ಅವರಿಗೆ ಮನದಟ್ಟು ಮಾಡಿಕೊಡುವುದು ಮಧ್ಯಸ್ಥಿಕೆದಾರರ ಕರ್ತವ್ಯ.

ನ್ಯಾಯಾಲಯ ವ್ಯವಸ್ಥೆ, ವಿಚಾರಣೆ, ಹಣ ಹಾಗೂ ಸಮಯ ವ್ಯಯ ಆಗುವ ಕುರಿತು ಕಕ್ಷಿದಾರರಿಗೆ ವಿವರಿಸುವ ಮೂಲಕ ಎರಡೂ ಕಡೆಯವರು ಒಂದು ಮನೋಸ್ಥಿತಿಗೆ ಬಂದು ಹೊಂದಾಣಿಕೆ ಮಾಡಿಕೊಳ್ಳಲು ಪ್ರೇರೇಪಿಸುವ ಕೆಲಸವನ್ನು ಮಧ್ಯಸ್ಥಿಕೆದಾರರು ಮಾಡಬೇಕು ಎಂದು ತಿಳಿಸಿದರು.

ರಾಮನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ. ರುದ್ರಮುನಿ ಸ್ವಾಗತಿಸಿದರು.ಬಾಲಗಂಗಾಧರನಾಥ ಅಂಧ ಶಾಲೆಯ ಮಕ್ಕಳು ಪ್ರಾರ್ಥನೆ ಸಲ್ಲಿಸಿದರು. ಬೆಂಗಳೂರು ಸಂಧಾನ ಕೇಂದ್ರದ ನಿರ್ದೇಶಕರಾದ ಕೆ.ಎನ್.ಫಣೀಂದ್ರ ಅಧ್ಯಕ್ಷತೆ ವಹಿಸಿದ್ದರು. ಬಿಎಂಸಿ ತರಬೇತಿದಾರರಾದ ಪ್ರಭಾ ಮೂರ್ತಿ, ಶೋಭಾ ಬಾವಿಕಟ್ಟಿ ಹಾಗೂ ರಾಮನಗರ ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ಜಯರಾಮಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT