ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ತರಣೆ ಹಾದಿಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ...

Last Updated 1 ಮೇ 2012, 19:30 IST
ಅಕ್ಷರ ಗಾತ್ರ

ಛೋಟಾ ಮುಂಬೈ, ವಾಣಿಜ್ಯ ನಗರಿ... ಹೀಗೆ ಗುರುತಿಸಿಕೊಂಡಿರುವ ಹುಬ್ಬಳ್ಳಿ, `ಲೋಹದ ಹಕ್ಕಿ~ಗಳ ಮೂಲಕ ಉತ್ತರ ಕರ್ನಾಟಕ ಪ್ರವೇಶಿಸಲು ಹೆಬ್ಬಾಗಿಲು. ಇಡೀ ಉತ್ತರ ಕರ್ನಾಟಕ ಭಾಗದ ವಾಣಿಜ್ಯ-ಪ್ರವಾಸೋದ್ಯಮ ಅಭಿವೃದ್ಧಿ ದಿಸೆಯಲ್ಲಿ ಇಲ್ಲಿನ ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಬೇಕೆನ್ನುವುದು ಬಹಳ ವರ್ಷಗಳ ಕನಸು. ಕೊನೆಗೂ ಇದು ಸಾಕಾರಗೊಳ್ಳುವ ಹಾದಿಯಲ್ಲಿ ಮೊದಲ ಹೆಜ್ಜೆ ಇಟ್ಟಿದೆ.

`ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಎರಡು ವರ್ಷದೊಳಗೆ ಇಲ್ಲಿ ಬೋಯಿಂಗ್ ವಿಮಾನ ಭೂ ಸ್ಪರ್ಶ ನಿರೀಕ್ಷೆ ಇದೆ~ ಎನ್ನುತ್ತಾರೆ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ದೇಶಕ ಕೆ.ಎಂ.ಬಸವರಾಜು.

ವಿಮಾನ ನಿಲ್ದಾಣ ಮೇಲ್ದರ್ಜೆ ಪ್ರಕ್ರಿಯೆ ಕುರಿತು ಅವರ ನೀಡಿದ ವಿವರ ಇಲ್ಲಿದೆ;
`ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಹೊಸ ರೂಪು ನೀಡುವ ನಿಟ್ಟಿನಲ್ಲಿ ಮತ್ತು ಆ ಮೂಲಕ ಮೇಲ್ದರ್ಜೆಗೇರಿಸಲು ವ್ಯವಸ್ಥಿತ ರೂಪುರೇಷೆಗೆ ಅಂತಿಮ ಸ್ಪರ್ಶ ನೀಡಲಾಗಿದೆ.

ಈಗಾಗಲೇ ಅಂದಾಜು ರೂ 150 ಕೋಟಿ ಯೋಜನಾ ವೆಚ್ಚಕ್ಕೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ಅನುಮೋದನೆ ನೀಡಿ ಹಣವನ್ನೂ ಬಿಡುಗಡೆ ಮಾಡಿದೆ. 5 ವರ್ಷದೊಳಗೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ. ಯೋಜನೆಯ ಮೊದಲ ಹಂತದಲ್ಲಿ ರೂ 7.50 ಕೋಟಿ ವೆಚ್ಚದ 9 ಕಿ.ಮೀ. ಉದ್ದದ ಆವರಣ ಗೋಡೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ~.



ವಿಮಾನ ನಿಲ್ದಾಣ ವಿಸ್ತರಣೆಗೆ ಅಗತ್ಯವಾದ ಭೂ ಸ್ವಾಧೀನ ಪ್ರಕ್ರಿಯೆ ಅಂತಿಮ ಹಂತ ಪಡೆಯಲು 15 ವರ್ಷಕ್ಕೂ ಹೆಚ್ಚು ಅವಧಿ ತಗುಲಿದೆ. 369 ಎಕರೆ ಭೂಮಿ ಮೊದಲೇ ಇತ್ತು. ಹೆಚ್ಚುವರಿಯಾಗಿ 615 ಎಕರೆ ಜಮೀನು ನೀಡುವಂತೆ ಬೇಡಿಕೆ ಸಲ್ಲಿಸಲಾಗಿತ್ತು. ಸುತ್ತ ಜನವಸತಿ ಪ್ರದೇಶ ಮತ್ತಿತರ ಕಾರಣಗಳಿಗಾಗಿ ನಾಲ್ಕು ಬಾರಿ ವಿಮಾನ ನಿಲ್ದಾಣ ವಿಸ್ತರಣೆ ನಕ್ಷೆ ಬದಲಾಯಿಸಲಾಗಿತ್ತು. ಸರ್ಕಾರ ಕಳೆದ ಜು. 14ರಂದು 450 ಎಕರೆ ಮತ್ತು ಅ. 30ರಂದು 165 ಎಕರೆ ಭೂಮಿಯನ್ನು  ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ ಮೂಲಕ ರೈತರಿಂದ ಸ್ವಾಧೀನಪಡಿಸಿಕೊಂಡು ಎಎಐಗೆ ಹಸ್ತಾಂತರಿಸಿದೆ. 10 ಎಕರೆ ಪ್ರದೇಶದಲ್ಲಿ 3-4 ಮನೆಗಳಿದ್ದು, ಪರಿಹಾರಧನ ವಿವಾದ ಕೋರ್ಟಿನಲ್ಲಿದೆ. ಇದೀಗ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿರುವುದರಿಂದ ಜಿಲ್ಲಾಡಳಿತ ಈ ವಿವಾದವನ್ನು ಮುಂದಿನ 2 ತಿಂಗಳಿನೊಳಗೆ ಪರಿಹರಿಸಿಕೊಡಬೇಕಾಗಿದೆ.

`ಇತ್ತೀಚೆಗೆ ದೇಶದಾದ್ಯಂತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಣ್ಣ ವಿಮಾನ ಬಳಕೆ ಕಡಿಮೆಯಾಗಿದೆ. ಹೀಗಾಗಿ ಬೋಯಿಂಗ್ ವಿಮಾನಗಳಿಗೆ ಪೂರಕ ವಿಮಾನ ನಿಲ್ದಾಣ, ರನ್ ವೇ ನಿರ್ಮಾಣ ಅನಿವಾರ್ಯ. ಸದ್ಯ ಇಲ್ಲಿನ ರನ್‌ವೇ 5,400 ಅಡಿ ಇದೆ. ಬೋಯಿಂಗ್ ಭೂ ಸ್ಪರ್ಶಕ್ಕಾಗಿ ಇದನ್ನು 7,500 ಅಡಿಗೆ ವಿಸ್ತರಿಸಬೇಕಿದೆ. ಈ ಕಾಮಗಾರಿಗೆ ರೂ 90 ಕೋಟಿ ವೆಚ್ಚ ಅಂದಾಜು ಮಾಡಲಾಗಿದ್ದು 2014ರೊಳಗೆ ಈ ಕೆಲಸ ಪೂರ್ಣಗೊಳ್ಳಲಿದೆ. ಕಂಟ್ರೋಲ್ ಟವರ್ ಕಟ್ಟಡ ಮತ್ತು ಹೊಸ ಟರ್ಮಿನಲ್ ಕಟ್ಟಡಕ್ಕೆ ಅಂದಾಜು ಒಟ್ಟು 40- 45 ಕೋಟಿ ವೆಚ್ಚವಾಗಲಿದೆ.

`ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಮೂರು ಹಂತಗಳಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿಸಲು ಎಎಐ ಉದ್ದೇಶಿಸಿದೆ. ಮೊದಲ ಹಂತದ ಕಾಮಗಾರಿಯಲ್ಲಿ ರನ್‌ವೇ 7,500 ಅಡಿಗೆ ವಿಸ್ತರಿಸಲಾಗುವುದು. ನಂತರದ ಹಂತದಲ್ಲಿ 9 ಸಾವಿರ ಅಡಿ, ಈ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಉದ್ದೇಶದಿಂದ ಅಂತಿಮವಾಗಿ 10 ಸಾವಿರ ಅಡಿ ವಿಸ್ತರಿಸುವ ಗುರಿಯಿದೆ. ಈ ಉದ್ದೇಶದಿಂದ ಮೊದಲ ಹಂತದಲ್ಲೇ ಹೊಸ ಟ್ಯಾಕ್ಸಿ ವೇ, ಮೇಲ್ಛಾವಣಿ, ಅಗ್ನಿಶಾಮಕ ಠಾಣೆ, ದೇಶೀಯ ವಿಮಾನಗಳ(ಡೊಮೆಸ್ಟಿಕ್) ಟರ್ಮಿನಲ್ ನಿರ್ಮಿಸಲಾಗುವುದು~ ಎಂದರು.
`ಇಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಿದೆ. ಆದರೆ ವಿಮಾನ ಯಾನ ನಿಯಮಿತವಾಗಿಲ್ಲದೇ ಇರುವುದರಿಂದ ಪ್ರಯಾಣಿಕರು ಬೇಸತ್ತ್ದ್ದಿದು, ಸಂಚಾರಕ್ಕೆ ರೈಲು ಪ್ರಯಾಣ ಅವಲಂಬಿಸಿದ್ದಾರೆ. ನಿಯಮಿತ ಯಾನ ಆರಂಭಗೊಂಡರೆ ಪ್ರಯಾಣಿಕರ ದಟ್ಟಣೆ ಖಚಿತ~.

`ಸದ್ಯ ಕಿಂಗ್‌ಫಿಶರ್ ಏರ್‌ಲೈನ್ಸ್ ಮಾತ್ರ ದಿನಾ ಸಂಜೆ ಬೆಂಗಳೂರು- ಹುಬ್ಬಳ್ಳಿ ಮಧ್ಯೆ ಸಂಚಿಸುತ್ತಿದೆ. ಕಿಂಗ್‌ಫಿಶರ್ ಮುಂಬೈ-ಹುಬ್ಬಳ್ಳಿ-ಬೆಂಗಳೂರು ಸಂಚಾರ ಸದ್ಯ ಸ್ಥಗಿತಗೊಳಿಸಿದ್ದು, ಶೀಘ್ರವೇ ಪುನರಾರಂಭಿಸಲಿದೆ. ಟಿಕೆಟ್ ಬುಕ್ಕಿಂಗ್ ಕೂಡ ಆರಂಭಗೊಂಡಿದೆ. ಉಳಿದಂತೆ ಖಾಸಗಿ ವಿಮಾನಗಳು ಈ ನಿಲ್ದಾಣ ಬಳಸುತ್ತಿವೆ~.`ಈ ಮಧ್ಯೆ ಸ್ಪೈಸ್ ಜೆಟ್ ವಿಮಾನ ಕಂಪನಿ ತನ್ನ ಬೋಂಬೆಡೇರ್ ವಿಮಾನ ಸಂಚಾರವನ್ನು ಇಲ್ಲಿಂದ ಆರಂಭಿಸಲು ಉತ್ಸುಕವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಮೀಕ್ಷೆಯನ್ನೂ ನಡೆಸಿದೆ. ನಾಗರಿಕ ವಿಮಾನ ಯಾನ ಕ್ಷೇತ್ರಕ್ಕೆ ಹೊಸತಾಗಿ ಬರಲಿರುವ ಪೆಗಾಸುಸ್ ಏರ್‌ಲೈನ್ಸ್ ಕೂಡಾ ಚೊಚ್ಚಲ ವಿಮಾನ ಸಂಚಾರವನ್ನು ಹುಬ್ಬಳ್ಳಿಯಿಂದ ಆರಂಭಿಸಲು ಅವಕಾಶ ಕೋರಿ ಪತ್ರ ಬರೆದಿದೆ~.

`ಹೀಗೆ ಎಲ್ಲವೂ ಕಾರ್ಯರೂಪಕ್ಕೆಗೊಂಡರೆ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಜನರಿಗೆ ವಿಮಾನ ಯಾನ ಸುಲಭವಾಗಿ ಕೈಗೆಟುಕುವ ಕುಸುಮ ಆಗುವುದು ಖಚಿತ~ ಎನ್ನುವ ವಿಶ್ವಾಸ ಬಸವರಾಜು ಅವರದು.

ಸಾಕಾರದ  ನಿರೀಕ್ಷೆಯಲ್ಲಿ...
ಸದ್ಯ ಹುಬ್ಬಳ್ಳಿ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಾಗಿರುವ ಕೆ.ಎಂ.ಬಸವರಾಜು ಅವರಿಗೆ, ಈ ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಬೇಕೆಂಬ ಬಗ್ಗೆ ವಿಶೇಷ ಕಾಳಜಿ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ದಾಖಲೆ ಪತ್ರ, ಪತ್ರ ವ್ಯವಹಾರಗಳಿಗೆ ಆದ್ಯತೆ ನೀಡಿ ಕೆಲಸ ಮಾಡುವ ಅವರು, ಇಡೀ ಯೋಜನೆಯ ಸಾಕಾರ ನಿರೀಕ್ಷೆಯಲ್ಲಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿ ಬೆಳದ ಬಸವರಾಜು, ಬಿಇ (ಎಲೆಕ್ಟ್ರಿಕಲ್) ಮತ್ತು ಎಂಬಿಎ ಪದವೀಧರ. 1996ರ ಏ. 13ರಂದು ಭೋಪಾಲ್ ವಿಮಾನ ನಿಲ್ದಾಣದಲ್ಲಿ ವ್ಯವಸ್ಥಾಪಕರಾಗಿ ಎಎಐ ಸೇರಿದ ಇವರು, ಮಂಗಳೂರು, ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದರು. 2006ರಿಂದ ನಿಯಂತ್ರಕರಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದ ಅವರು, 2011 ಜೂನ್‌ನಿಂದ ನಿರ್ದೇಶಕರಾಗಿದ್ದಾರೆ.

`ಪರಿಹಾರಧನ ವಿವಾದ ಜೀವಂತ~
ವಿಮಾನ ನಿಲ್ದಾಣ ವಿಸ್ತರಣೆಯ ಭೂಸ್ವಾಧೀನ ವಿವಾದ ಪೂರ್ಣ ಬಗೆಹರಿದಿಲ್ಲ. 2007ರಲ್ಲಿ ಸ್ವಾಧೀನಪಡಿಸಿಕೊಂಡ ನಿವೇಶನಗಳಿಗೆ 2008ರಲ್ಲಿ ಪರಿಹಾರ ಧನ ನಿರ್ಧರಿಸಲಾಗಿದ್ದು, ಆ ಮೊತ್ತವನ್ನು 2011ರಲ್ಲಿ ವಿತರಿಸಿದ್ದು ಯಾವ ನ್ಯಾಯ. ಈ ನಿಟ್ಟಿನಲ್ಲಿ ಹೋರಾಟ ಇನ್ನೂ ಮುಂದುವರಿಯಲಿದೆ~

ರಘೋತ್ತಮ ಎನ್. ಕುಲಕರ್ಣಿ,ಹುಬ್ಬಳ್ಳಿ ವಿಮಾನ ನಿಲ್ದಾಣ ಸಂತ್ರಸ್ತರ ಒಕ್ಕೂಟದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT