ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಹಾರ ತಾಣವಾಗಿರುವ ಕೋಟೆ ಕೆರೆ

Last Updated 22 ಆಗಸ್ಟ್ 2011, 8:35 IST
ಅಕ್ಷರ ಗಾತ್ರ

ಬೆಳಗಾವಿ: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಬೆಳಗಾವಿಯಲ್ಲೊಂದು ಸುಂದರವಾದ ವಿಹಾರ ತಾಣದ ಕೊರತೆ ಇತ್ತು. ನಗರದ ಮಧ್ಯದಲ್ಲಿ ದೃಷ್ಟಿ ಬೊಟ್ಟಿನಂತಿರುವ ಕೋಟೆ ಕೆರೆ ಅದನ್ನು ನೀಗಿಸಿದೆ.

ಸುಸಜ್ಜಿತ ವಿಹಾರ ತಾಣವಾಗಿಸುವ ನಿಟ್ಟಿನಲ್ಲಿ ಇನ್ನಷ್ಟು ಕೆಲಸಗಳು ಆಗಬೇಕಿವೆ. ಆದರೂ ಸಂಜೆಯ ವೇಳೆಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಒಂದಷ್ಟು ಹೊತ್ತು ಕಳೆಯಬಹುದಾದಂತಹ ವಾತಾವರಣ ಸೃಷ್ಟಿಯಾಗಿದೆ.

66 ಎಕರೆ ಪ್ರದೇಶದಲ್ಲಿ ಕೋಟೆ ಮುಂದೆ ಹರಡಿಕೊಂಡಿರುವ ಕೆರೆಗೆ ಬೇಲಿ ಹಾಕಿ ಒತ್ತುವರಿ ಆಗದಂತೆ ಭದ್ರ ಪಡಿಸಲಾಗಿದೆ. ಕೆರೆಗೆ ಸೇರುತ್ತಿದ್ದ ಚರಂಡಿ ನೀರು ಬೇರೆಡೆ ಹರಿದು ಹೋಗುವ ವ್ಯವಸ್ಥೆ ಮಾಡಲಾಗಿದೆ.

5.64 ಕೋಟಿ ರೂಪಾಯಿ ಖರ್ಚು ಮಾಡಿ ಕೆರೆಯ ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಾಣ, ವಿದ್ಯುತ್ ದೀಪ ಅಳವಡಿಕೆ, ಸುತ್ತಲೂ ಬೇಲಿ ಹಾಕುವುದು ಸೇರಿದಂತೆ ಹಲವು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.

ಗಣೇಶ ಉತ್ಸವ ಸಂದರ್ಭದಲ್ಲಿ ಬಹಳಷ್ಟು ಜನರು ಗಣೇಶ ಮೂರ್ತಿಗಳನ್ನು ತಂದು ಕೆರೆಯಲ್ಲಿ ಹಾಕುತ್ತಿದ್ದರು. ಇದರಿಂದಾಗಿ ನೀರು ಕಲುಷಿತಗೊಳ್ಳುತ್ತಿತ್ತು. ಅಲ್ಲಿದ್ದ ಮೀನುಗಳ ಜೀವಕ್ಕೂ ಹಾನಿಯಾಗುತ್ತಿತ್ತು. ಇದನ್ನು ತಪ್ಪಿಸಲು ಕೆರೆಗೆ ಹೊಂದಿಕೊಂಡಂತೆಯೇ ಬಾವಿಯೊಂದನ್ನು ನಿರ್ಮಿಸಲಾಗಿದೆ. ಅಲ್ಲಿ ಗಣೇಶ ಮೂರ್ತಿಗಳನ್ನು ಹಾಕಲು ವ್ಯವಸ್ಥೆ ಮಾಡುವ ಮೂಲಕ ನೀರು ಕಲುಷಿತವಾಗುವುದನ್ನು ತಪ್ಪಿಸಲಾಗಿದೆ.

ಕೆರೆಯ ನಿರ್ವಹಣೆಯನ್ನು 15 ವರ್ಷಗಳ ಕಾಲ ದರ್ಶನ ಉದ್ಯೋಗ ಲಿಮಿಟೆಡ್‌ನವರಿಗೆ ವಹಿಸಲಾಗಿದೆ. ಪಾಲಿಕೆಗೆ ಪ್ರತಿ ವರ್ಷ 3 ಲಕ್ಷ ರೂಪಾಯಿ ಪಾವತಿಸಬೇಕು. ಇದು ಮೂರು ವರ್ಷಕ್ಕೊಮ್ಮೆ ಬದಲಾಗುತ್ತದೆ. ಗುತ್ತಿಗೆ ಪಡೆದವರಿಗೆ ಮಕ್ಕಳನ್ನು ಮನರಂಜಿಸುವಂತಹ ಆಟಿಕೆಗಳನ್ನು ಅಳವಡಿಸಲು ಸೂಚಿಸಲಾಗಿತ್ತು.
ಅದರಂತೆ ಅಲ್ಲಿ ರೈಲು, ತಿರುಗುವ ಕಾರು, ಜಾಯಿಂಟ್ ವೀಲ್, ತೂಗುಯ್ಯಾಲೆಯ ಹಡಗು ಸೇರಿದಂತೆ ವಿವಿಧ ಆಟಿಕೆ ಸಾಮಾನುಗಳು ಅಲ್ಲಿವೆ. ಆದರೆ ಒಪ್ಪಂದದಂತೆ ಇನ್ನಷ್ಟು ಕೆಲಸವನ್ನು ಗುತ್ತಿಗೆದಾರರು ಮಾಡಬೇಕಿದೆ.

ಎಂಟಕ್ಕೂ ಹೆಚ್ಚು ಬೋಟುಗಳಿವೆ. ಹಣ ಪಾವತಿಸಿ ಅವುಗಳಲ್ಲಿ ಕುಳಿತು ಕೆರೆಯಲ್ಲಿ ಒಂದು ಸುತ್ತು ಹಾಕಬಹುದಾಗಿದೆ. ಪೆಡಲ್ ಬೋಟುಗಳಲ್ಲಿ ಕುಳಿತುಕೊಂಡು ನೀರಿನ ಮಧ್ಯೆ ಸಂಚರಿಸುವುದರ ಆನಂದವನ್ನು ಸಂಚರಿಸಿಯೇ ಅನುಭವಿಸಬೇಕು.

ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ನೀರಿನಲ್ಲಿಯೇ ಮೂರು ಬೋಟುಗಳನ್ನು ಸೇರಿಸಿ ಹೋಟೆಲ್‌ವೊಂದನ್ನು ತೆರೆಯಲಾಗಿದೆ. 

ಕುಳಿತುಕೊಳ್ಳಲು ಒಂದಷ್ಟು ಕಡೆ ಬೆಂಚ್‌ಗಳನ್ನು ಹಾಕಲಾಗಿದೆ. ಶನಿವಾರ, ಭಾನುವಾರ ಹಾಗೂ ರಜಾ ದಿನಗಳಂದು ಜನಸಂದಣಿ ಹೆಚ್ಚಿರುವುದರಿಂದ ಇನ್ನಷ್ಟು ಬೆಂಚ್ ಹಾಕುವ ಅವಶ್ಯಕತೆ ಇದೆ. ನಾಲ್ಕಾರು ತಿಂಡಿ-ತಿನಿಸಿನ ಅಂಗಡಿಗಳು ತಲೆ ಎತ್ತಿವೆ.

ವಾಕಿಂಗ್ ಟ್ರ್ಯಾಕ್ ನಿರ್ಮಿಸಿದ ಮೇಲೆ ಬೆಳಿಗ್ಗೆ ಹಾಗೂ ಸಂಜೆ ಅಲ್ಲಿ ವಾಕಿಂಗ್ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಮಕ್ಕಳನ್ನು ಕರೆದುಕೊಂಡು ಪೋಷಕರೂ ಆಗಮಿಸುತ್ತಿದ್ದಾರೆ.

ಕೆರೆಯ ಮಧ್ಯದಲ್ಲೊಂದು ದ್ವೀಪವಿದೆ. ಅದನ್ನು ಅಭಿವೃದ್ಧಿ ಪಡಿಸುವ ಮಾತುಗಳು ಆಗಾಗ ಕೇಳಿ ಬರುತ್ತಿವೆ. ಆದರೆ ಇನ್ನೂ ಅಭಿವೃದ್ಧಿಯಾಗಿಲ್ಲ. ಕೆರೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡದೇ ಇರುವುದರಿಂದ ಸೊಳ್ಳೆಗಳ ಹಾವಳಿ ಹೆಚ್ಚಿದೆ. ಅದನ್ನು ತಡೆಯಲು ಸ್ವಚ್ಛತೆಗೆ ಆದ್ಯತೆ ನೀಡುವ ಕೆಲಸ ಆಗಬೇಕಿದೆ. ವಾಹನಗಳ ಪಾರ್ಕಿಂಗ್‌ಗೂ ಸೂಕ್ತ ವ್ಯವಸ್ಥೆಯಿಲ್ಲ. ಆ ಬಗೆಗೂ ಗಮನ ಹರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT