ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಶಿಕ್ಷಣ ಸಂಸ್ಥೆ ಕಾಯ್ದೆಗೆ ವಿರೋಧ

ಉಡುಪಿಯಲ್ಲಿ ಎಬಿವಿಪಿ ಪ್ರತಿಭಟನೆ
Last Updated 21 ಡಿಸೆಂಬರ್ 2013, 4:28 IST
ಅಕ್ಷರ ಗಾತ್ರ

ಉಡುಪಿ: ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿ­ರುವ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆಯ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಹೋರಾಟ ತೀವ್ರಗೊಳಿಸಿದ್ದು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.

ನಗರದ ಸರ್ವೀಸ್‌ ಬಸ್‌ ನಿಲ್ದಾಣದ ಎದುರು ಜಮಾಯಿಸಿದ್ದ ನಗರದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿ­ಗಳ ಹಿತವನ್ನು ಬಲಿ ನೀಡಲು ಮುಂದಾ­ಗಿರುವ ಉನ್ನತ ಶಿಕ್ಷಣ ಸಚಿವ ಆರ್‌.ವಿ. ದೇಶಪಾಂಡೆ ಈ ಕೂಡಲೇ ರಾಜೀನಾಮೆ ನೀಡ­ಬೇಕು ಎಂದು ಅವರು ಆಗ್ರಹಿಸಿದರು.

ಕಾಯ್ದೆ ಜಾರಿಗೆ ಬಂದರೆ ಬಡ, ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೃತ್ತಿ ಶಿಕ್ಷಣ ಪಡೆಯಲು ಸಾಧ್ಯವಾಗದು. ದುಬಾರಿ ಶುಲ್ಕವನ್ನು ಭರಿಸುವುದು ಅಸಾಧ್ಯ­ವಾಗಲಿದ್ದು ವೃತ್ತಿ ಶಿಕ್ಷಣದ ಆಸೆಯನ್ನೇ ಬಿಡ­ಬೇಕಾಗುತ್ತದೆ. ಸಾಮಾಜಿಕ ನ್ಯಾಯ ಒದಗಿಸಲು ವಿಫಲವಾಗುವ ಮತ್ತು ಶೈಕ್ಷಣಿಕ ಹಕ್ಕನ್ನು ಮೊಟಕುಗೊಳಿಸುವ ಸರ್ಕಾರದ ನೀತಿ ಖಂಡನೀಯ ಎಂದು ಹೇಳಿದರು.

ಈ ಕಾಯ್ದೆ ಜಾರಿಯಾದರೆ ಬಹುತೇಕ ಸರ್ಕಾ­ರಿ ಕೋಟದ ಸೀಟುಗಳು ಖಾಸಗಿ ಕಾಲೇಜು­­­­­­ಗಳ ಪಾಲಾಗಲಿವೆ. ಖಾಸಗಿ ಅನುದಾನ­­ರಹಿತ ಕಾಲೇಜಿ­ನಲ್ಲಿ ಒಂದೇ ಒಂದು ಸರ್ಕಾ­ರಿ ಕೋಟದ ಸೀಟು ಇರುವುದಿಲ್ಲ. ತಮ್ಮ ಪಾಲಿನ ಸೀಟುಗಳನ್ನು ಭರ್ತಿ ಮಾಡಲು ಕಾಮೆಡ್‌– ಕೆಗೆ ಅನುಮತಿ ನೀಡಿದರೆ ಇನ್ನಷ್ಟು ಅಕ್ರಮ ಎಸಗುವ ಸಾಧ್ಯತೆ ಇದೆ.

ಸರ್ಕಾ­ರ ರಚಿಸುವ ಸಮಿತಿ ಪ್ರವೇಶ ಶುಲ್ಕ ನಿಗದಿ ಮಾಡು­ವುದರಿಂದ ಸರ್ಕಾರದ ನಿಯಂತ್ರಣ ಸಂಪೂರ್ಣ­ವಾಗಿ ತಪ್ಪಲಿದೆ. ಆಯಾ ಕಾಲೇಜುಗಳ ಮೂಲ ಸೌಕರ್ಯಕ್ಕೆ ಅನುಗುಣ­ವಾಗಿ ಶುಲ್ಕ ನಿಗದಿ ಮಾಡು­ವುದರಿಂದ ಅಸಮಾನ­ತೆ ಹೆಚ್ಚಾಗ­ಲಿದೆ. ಬಡವರು ಉತ್ತಮ ಸೌಲಭ್ಯಗಳಿ­ರುವ ಕಾಲೇಜು­ಗಳಲ್ಲಿ ಕಲಿಯಲು ಸಾಧ್ಯ­ವಾಗು­ವುದಿಲ್ಲ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿ­ದರು.

ಎಬಿವಿಪಿ ಮುಖಂಡ ಶಶಿರ, ವಿದ್ಯಾರ್ಥಿ ಮುಖಂಡ­ರಾದ ಶ್ರೀನಿವಾಸ ಪೈ, ಶ್ರೀನಿವಾಸ, ಸುಹಾಸ್‌, ವಿಶಾಲ್‌, ಅರ್ಜುನ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT