ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಚ್ಚದ ಮೇಲೆ ನಿಗಾ ಇರಲಿ: ಡಿಸಿ

Last Updated 13 ಏಪ್ರಿಲ್ 2013, 4:33 IST
ಅಕ್ಷರ ಗಾತ್ರ

ಹಾಸನ: ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಮಾಡುವ ಖರ್ಚು ವೆಚ್ಚದ ಮೇಲೆ ನಿಗಾ ಇಡುವಂತೆ ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್ ಚುನಾವಣಾ ವೆಚ್ಚ ವೀಕ್ಷಕರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬುಧವಾರ ರಾತ್ರಿ ಚುನಾವಣಾ ವೆಚ್ಚಗಳ ಪರಿಶೀಲನೆಗಾಗಿ ಸ್ಥಳೀಯವಾಗಿ ನೇಮಕವಾಗಿರುವ ಜಿಲ್ಲೆ ಹಾಗೂ ಕ್ಷೇತ್ರಮಟ್ಟದ ಲೆಕ್ಕಪತ್ರ ಅಧಿಕಾರಿ ಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ಸೂಚನೆ ನೀಡಿದರು.

ಆಯೋಗದಿಂದ ನೇಮಕಗೊಂಡು ಜಿಲ್ಲೆಗೆ ಬಂದಿರುವ ಖರ್ಚು ವೆಚ್ಚ ವೀಕ್ಷಕರು ಜಿಲ್ಲಾಡಳಿತ ಈವರೆಗೆ ಮಾಡಿಕೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದರು.

`ಈಗಾಗಲೇ ಕರಪತ್ರ, ಬ್ಯಾನರ್, ಫ್ಲೆಕ್ಸ್, ಕುರ್ಚಿ, ನೀರು, ಊಟ, ವೇದಿಕೆ, ಶಾಮಿಯಾನ, ಧ್ವನಿವರ್ಧಕ ಮತ್ತಿತರ ಪ್ರಮುಖವಾಗಿ ಚುನಾವಣೆ ಸಂದರ್ಭ ಬಳಸುವ ವಸ್ತು ಮತ್ತು ಸೇವೆಗಳಿಗೆ ಅಂದಾಜು ಐಟಂವಾರು ವೆಚ್ಚವನ್ನು ನಿಗದಿಪಡಿಸಿ ಲೆಕ್ಕ ಪತ್ರ ಅಧಿಕಾರಿಗಳಿಗೆ ನೀಡಲಾಗಿದೆ. ಇದರ ಆಧಾರದಲ್ಲಿ ಅಭ್ಯರ್ಥಿಗಳು ನೀಡುವ ವೆಚ್ಚದ ಬಿಲ್ಲುಗಳನ್ನು ತಾಳೆ ಹಾಕಿ ನೋಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ರಾಜಕೀಯ ಪ್ರತಿನಿಧಿಗಳು ಪಾಲ್ಗೊಳ್ಳುವ ಪ್ರತಿಯೊಂದು ಸಭೆ ಸಮಾರಂಭದ ಚಿತ್ರೀಕರಣ ಮಾಡಿಕೊಳ್ಳಲು ತಂಡ ರಚಿಸಲಾಗಿದೆ. ಇವುಗಳ ವೀಕ್ಷಣೆಗೂ ತಂಡವನ್ನು ನಿಯೋಜಿಸಲಾಗಿದೆ. ಸಭೆ ಸಮಾರಂಭದಲ್ಲಿ ಬಳಸಲಾಗುವ ಸಾಧನ ಸಲಕರಣೆಗಳನ್ನು ವಿಡಿಯೋದಲ್ಲಿಯೂ ವೀಕ್ಷಿಸಿ ಆ ಕಾರ್ಯಕ್ರಮದ ವೆಚ್ಚವನ್ನು ಅಂದಾಜಿಸಬಹುದು ಎಂದು ಜಿಲ್ಲಾಧಿಕಾರಿ ನುಡಿದರು.

ಹಬ್ಬ ಅಥವಾ ಧಾರ್ಮಿಕ ಆಚರಣೆಗಳಿಗೆ ಚುನಾವಣಾ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ಆದರೆ ಇದರ ಹೆಸರಿನಲ್ಲಿ ಅಕ್ರಮ ನಡೆಯದಂತೆ ನೋಡಬೇಕು. ಮದುವೆ ನಾಮಪಕರಣಗಳಿಗೆ ಅನುಮತಿ ಅಗತ್ಯವಿಲ್ಲ. ಆದರೆ ರಾಜಕಾರಣಿಗಳು ಆಗಮಿಸಿ ಆಮಿಷ ವೊಡ್ಡುವುದು, ಮತದಾರರ ಓಲೈಕೆ ಪ್ರಯತ್ನಗಳಾದರೆ ಆ ಬಗ್ಗೆ ಕ್ರಮ ವಹಿಸಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚಾರ ನಡೆಸಲು ಜಿಲ್ಲಾ ಮಟ್ಟದ ಮಾಧ್ಯಮ ದೃಢೀಕರಣ ಮತ್ತು ನಿರ್ವಹಣಾ ಸಮಿತಿಯಿಂದ ಕಡ್ಡಾಯವಾಗಿ ಅನು ಮೋದನೆ ಪಡೆಯಬೇಕಾಗುತ್ತದೆ. ಮೊಬೈಲ್‌ಗಳಿಗೆ ಬಲ್ಕ್ ಎಸ್.ಎಂ.ಎಸ್. ಕಳುಹಿಸುವ ಮುನ್ನ ಹಾಗೂ ಇಂಟರ್‌ನೆಟ್ ಮೂಲಕ ಪ್ರಚಾರ ಮಾಡಬೇಕಾದರೂ ಈ ಸಮಿತಿಯಿಂದ ಅನುಮತಿ ಪಡೆಯಬೇಕು ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಇಲಾಖೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.
`ಜಿಲ್ಲೆಯಲ್ಲಿ ಅನುಮಾನಸ್ಪದವಾಗಿ ಓಡಾಡುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಚುರುಕು ಗೊಳಿಸಲಾಗುವುದು' ಎಂದರು.

ಕೇಂದ್ರ ಚುನಾವಣಾ ಆಯೋಗ ನೇಮಿಸಿರುವ  ವೆಚ್ಚ ವೀಕ್ಷಕರುಗಳಾದ ಆರ್.ಕೆ. ಪಾಂಡೆ (ಶ್ರವಣಬೆಳಗೊಳ, ಅರಕಲಗೂಡು, ಸಕಲೇಶಪುರ ಕ್ಷೇತ್ರ) ಎಸ್.ಕೆ. ವಿಮಲನಾಥನ್ (ಅರಸೀಕೆರೆ ಕ್ಷೇತ್ರ) ಸತ್ಯಜಿತ್ ಸಿಂಗ್ (ಹಾಸನ ಮತ್ತು ಬೇಲೂರು ಕ್ಷೇತ್ರ ಮತ್ತು ರವೀಂದ್ರ ಸಿಂಧು (ಹೊಳೆನರಸೀಪುರ ಕ್ಷೇತ್ರ), ಸಭೆಯಲ್ಲಿ ಹಾಜರಿದ್ದು ಲೆಕ್ಕಪತ್ರ ನಿರ್ವಹಣೆಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎನ್.ಗೋಪಾಲ ಕೃಷ್ಣ ಏಳು ಕ್ಷೇತ್ರಗಳ ಚುನಾವಣಾಧಿಕಾರಿಗಳು, ತಹಶೀಲ್ದಾರರು, ಲೆಕ್ಕಪತ್ರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT