ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಗಿಗಳ ಮೇಲಿದೆ ನಿರೀಕ್ಷೆಯ ಹೊರೆ

ರಣಜಿ: ಕರ್ನಾಟಕ–ಮುಂಬೈ ನಡುವೆ ನಾಳೆ ಪಂದ್ಯ, ಮಿಥುನ್‌, ಶರತ್‌ ಮೇಲೆ ಹೆಚ್ಚಿದ ಭರವಸೆ
Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸತತ ಮೂರು ಪಂದ್ಯಗಳ ಗೆಲುವಿನ ಓಟದೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕರ್ನಾಟಕ ತಂಡದ ಯಶಸ್ಸಿನಲ್ಲಿ ವೇಗದ ಬೌಲರ್‌ಗಳ ಪಾತ್ರ ಬಹುಮುಖ್ಯವಾಗಿದೆ. ಆತಿಥೇಯರ ವೇಗದ ಶಕ್ತಿಗೆ ಈಗ ನಿಜವಾದ ಸವಾಲು ಎದುರಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಿಸೆಂಬರ್‌ 22ರಿಂದ ಕರ್ನಾಟಕ ಮತ್ತು ಹಾಲಿ ಚಾಂಪಿಯನ್‌ ಮುಂಬೈ ತಂಡಗಳ ನಡುವೆ ‘ಎ’ ಗುಂಪಿನ ರಣಜಿ ಪಂದ್ಯ ನಡೆಯಲಿದೆ. 40 ಸಲ ರಣಜಿ ಟ್ರೋಫಿ ಗೆದ್ದಿರುವ ಮುಂಬೈ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಕರ್ನಾಟಕದ ವೇಗದ ಬೌಲರ್‌ಗಳು ಹೇಗೆ ಸವಾಲು ಒಡ್ಡಲಿದ್ದಾರೆ ಎನ್ನುವ ಕುತೂಹಲವಿದೆ. ಸತತ ಮೂರು ಪಂದ್ಯಗಳಲ್ಲಿ ಗೆಲುವು ಪಡೆದಿರುವ ವಿನಯ್‌ ಬಳಗ ನಾಲ್ಕನೇ ಜಯದ ಮೇಲೆ ಕಣ್ಣು ಇಟ್ಟಿದೆ. ಅದಕ್ಕಾಗಿ ಆಟಗಾರರು ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು.

2011–12ರಲ್ಲಿ ಮುಂಬೈನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯ ಡ್ರಾ ಕಂಡಿತ್ತಾದರೂ, ಕರ್ನಾಟಕ ಇನಿಂಗ್ಸ್‌್ ಮುನ್ನಡೆ ಗಳಿಸಿತ್ತು. ಅದಕ್ಕೂ ಮೊದಲು 2010ರಲ್ಲಿ ಮೈಸೂರಿನಲ್ಲಿ ನಡೆದ  ಫೈನಲ್‌ ಪಂದ್ಯದಲ್ಲಿ ಮುಂಬೈ ತಂಡ ಕರ್ನಾಟಕವನ್ನು ಬಗ್ಗುಬಡಿದು ಟ್ರೋಫಿ ಎತ್ತಿ ಹಿಡಿದಿತ್ತು.

ವೇಗಿಗಳ ಮೇಲೆ ನಿರೀಕ್ಷೆ
ಮುಂಬೈ ತಂಡದಲ್ಲಿ ವಾಸೀಂ ಜಾಫರ್‌, ಆದಿತ್ಯ ತಾರೆ, ಸೂರ್ಯ ಕುಮಾರ್‌ ಯಾದವ್‌ ಅವರಂಥ ಬಲಿಷ್ಠ ಬ್ಯಾಟ್ಸ್‌ಮನ್‌ಗಳು ಇದ್ದಾರೆ. ಇವರನ್ನು ಕಟ್ಟಿ ಹಾಕುವ ಸವಾಲು ಆತಿಥೇಯರ ವೇಗಿಗಳ ಮುಂದಿದೆ.

ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವ ಹೊಂದಿರುವ ಅಭಿಮನ್ಯು ಮಿಥುನ್‌ ತಮ್ಮ ಜವಾಬ್ದಾರಿಗೆ ತಕ್ಕಂತೆ ಬೌಲ್‌ ಮಾಡಿದ್ದಾರೆ. ಆರು ಪಂದ್ಯಗಳಿಂದ ಬಲಗೈ ವೇಗಿ 26 ವಿಕೆಟ್‌ ಕಬಳಿಸಿದ್ದು ಇದಕ್ಕೆ ಸಾಕ್ಷಿ.

ಮಿಥುನ್‌ ಅಂತರರಾಷ್ಟ್ರೀಯ ಪಂದ್ಯವನ್ನಾಡಿ ಎರಡು ವರ್ಷಗಳೇ ಕಳೆದಿವೆ. ಈ ವೇಗಿ ರಾಷ್ಟ್ರೀಯ ತಂಡಕ್ಕೆ ಮರಳುವ ಗುರಿ ಹೊಂದಿದ್ದಾರೆ. ಅದಕ್ಕಾಗಿ ಈ ವರ್ಷದ ಐಪಿಎಲ್‌ ಮುಗಿದ ನಂತರ ದಿಂದ ಅವರು ಸಾಕಷ್ಟು ಬೌಲಿಂಗ್‌ ಅಭ್ಯಾಸ ನಡೆಸಿದ್ದಾರೆ.

‘ಐಪಿಎಲ್‌ ನಂತರ ರಣಜಿಗೆ ಸಜ್ಜಾಗಲು ಅಭ್ಯಾಸದಲ್ಲಿ ತೊಡಗಿದೆ. ರಣಜಿ ಆರಂಭಕ್ಕೂ ಮುನ್ನ ನಾನು ಹೇಗೆ ಅಂದುಕೊಂಡಿದ್ದೇನೋ ಅದೇ ರೀತಿ ಬೌಲ್‌ ಮಾಡುತ್ತಿದ್ದೇನೆ. ರಾಷ್ಟ್ರೀಯ ತಂಡಕ್ಕೆ ಮರಳಬೇಕೆನ್ನುವ ಗುರಿಯಿದೆ. ಅದಕ್ಕಾಗಿ ಆಲೂರು ಕ್ರೀಡಾಂಗಣದ ನೆಟ್‌ನಲ್ಲಿ ವಿಶೇಷ ಅಭ್ಯಾಸ ನಡೆಸಿದ್ದೇನೆ’ ಎಂದು ಮಿಥುನ್‌  ‘ಪ್ರಜಾವಾಣಿ’ ಜೊತೆ ತಮ್ಮ ಯಶಸ್ಸಿನ ಗುಟ್ಟನ್ನು ಹಂಚಿಕೊಂಡರು.

‘ರಣಜಿ ಟೂರ್ನಿ ಮುಗಿದ ನಂತರ ಹೊಸ ಕೋಚ್‌ ಬಳಿ ತರಬೇತಿ ಪಡೆಯಲು ನಿರ್ಧರಿಸಿದ್ದೇನೆ’ ಎಂದೂ ಅವರು ಹೇಳಿದರು.

ನಾಯಕ ವಿನಯ್‌ ಕುಮಾರ್‌, ಎಚ್‌.ಎಸ್‌. ಶರತ್‌, ರೋನಿತ್‌ ಮೋರೆ, ಎಸ್‌.ಅರವಿಂದ್‌, ಆಲ್‌ರೌಂಡರ್‌ ಸ್ಟುವರ್ಟ್‌ ಬಿನ್ನಿ ಅವರನ್ನೊಳ ಗೊಂಡ ಕರ್ನಾಟಕ ವೇಗದ ಬೌಲಿಂಗ್‌ ವಿಭಾಗ ಆರು ಪಂದ್ಯಗಳಲ್ಲಿಯೂ ಮಿಂಚಿದೆ.

ಪಾಯಿಂಟ್‌ ಪಟ್ಟಿಯಲ್ಲಿ ಮುಂಬೈ ತಂಡ ಎರಡನೇ ಸ್ಥಾನದಲ್ಲಿದೆ. ಬಲಿಷ್ಠ ತಂಡಗಳ ನಡುವಿನ ಈ ಪೈಪೋಟಿ ಕುತೂಹಲಕ್ಕೂ ಕಾರಣವಾಗಿದೆ.
ಮೂರು ವರ್ಷಗಳ ಹಿಂದೆ ಮುಂಬೈ ತಂಡ ರಣಜಿ ಪಂದ್ಯವನ್ನಾಡಲು ಮೈಸೂರಿಗೆ ಬಂದಾಗ ವಾಸೀಂ ಜಾಫರ್‌ ನಾಯಕರಾಗಿದ್ದರು. ಈ ಸಲವೂ ಅವರೇ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ತಂಡ ಹೋದ ಪಂದ್ಯದಲ್ಲಿ ಒಡಿಶಾ ಎದುರು ಡ್ರಾ ಸಾಧಿಸಿತ್ತು.

ಆತಿಥೇಯರು ಮೊದಲ ಮೂರು ಪಂದ್ಯಗಳಲ್ಲಿ ಗೆಲುವು ಪಡೆದು ನಂತರದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದರು. ಒಡಿಶಾ, ಹರಿಯಾಣ ಮತ್ತು ಪಂಜಾಬ್‌ ಎದುರಿನ ಪಂದ್ಯದಲ್ಲಿ ಕರ್ನಾಟಕ ಗೆಲುವು ಸಾಧಿಸಿತ್ತು. ರಾಜ್ಯ ತಂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವುದು ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT