ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ವಿಳಂಬ: ದೂರವಾಣಿ ಸೇವೆ ವ್ಯತ್ಯಯ

ಬಿಎಸ್‌ಎನ್‌ಎಲ್ ಗುತ್ತಿಗೆ ಕಾರ್ಮಿಕರ ಗೋಳು
Last Updated 14 ಜುಲೈ 2013, 7:34 IST
ಅಕ್ಷರ ಗಾತ್ರ

ಕೊಪ್ಪಳ: ಬಿಎಸ್‌ಎನ್‌ಎಲ್ ಗುತ್ತಿಗೆ ಕಾರ್ಮಿಕರ ವೇತನ ಪಾವತಿ ವಿಳಂಬದಿಂದಾಗಿ ಕೊಪ್ಪಳ- ರಾಯಚೂರು ಜಿಲ್ಲೆಯ ದೂರವಾಣಿ ಸೇವೆ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ.

ಗುತ್ತಿಗೆದಾರರು ಕಾರ್ಮಿಕರಿಗೆ ಸಕಾಲದಲ್ಲಿ ವೇತನ ನೀಡದಿರುವುದು, ಈ ಹಿಂದಿನ ಗುತ್ತಿಗೆದಾರರು ಕಾರ್ಮಿಕ ಸೌಲಭ್ಯಗಳನ್ನು ಒದಗಿಸದಿರುವ ಕಾರಣದಿಂದ ಹಲವೆಡೆ ಕಾರ್ಮಿಕರು ಧರಣಿ, ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಗ್ರಾಹಕರಿಗೆ ಸ್ಪಂದಿಸಲು ಸಂಸ್ಥೆಯ ಎಂಜಿನಿಯರ್‌ಗಳು ಅಸಹಾಯಕರಾಗಿದ್ದಾರೆ.

ಸಂಪರ್ಕ ಕಡಿತ: ಕೊಪ್ಪಳದಲ್ಲಿ ರಸ್ತೆ ಅಗೆತದ ಪರಿಣಾಮ ಶುಕ್ರವಾರ 400ಕ್ಕೂ ಹೆಚ್ಚು ದೂರವಾಣಿ ಸಂಪರ್ಕ ಕಡಿತಗೊಂಡಿದೆ. ಅದನ್ನು ಸರಿಪಡಿಸಲು ಕನಿಷ್ಠ  ಮೂರರಿಂದ ನಾಲ್ಕು ದಿನ ಕಾಲಾವಕಾಶ ಬೇಕು ಎಂದು ಇಲ್ಲಿನ ಎಂಜಿನಿಯರ್‌ಗಳು ತಿಳಿಸಿದ್ದಾರೆ.

ಇದಕ್ಕೆ ಕಾರ್ಮಿಕರ ಅಸಹಕಾರವೂ ಕಾರಣವಾಗಿದೆ. ಯಲಬುರ್ಗ, ಕುಷ್ಟಗಿ ತಾಲ್ಲೂಕುಗಳಲ್ಲಿ ನಿರಂತರವಾಗಿ ಕಾರ್ಮಿಕರು ಧರಣಿ ನಡೆಸುತ್ತಿದ್ದಾರೆ. ಇಲ್ಲಿಯೂ ಸೇವೆ ವ್ಯತ್ಯಯವಾಗಿದೆ. ಅದರಲ್ಲೂ ಬ್ರಾಡ್‌ಬ್ಯಾಂಡ್ (ಇಂಟರ್‌ನೆಟ್) ಸೇವೆ ಮೇಲೆ ತೀವ್ರ ಪರಿಣಾಮ ಬೀರಿದ್ದು, ಬ್ಯಾಂಕ್, ಮಾಧ್ಯಮ ಸಂಸ್ಥೆಗಳು, ವ್ಯಾಪಾರಿಗಳು, ಆನ್‌ಲೈನ್ ಟಿಕೆಟ್ ಬುಕ್ಕಿಂಗ್, ಎಟಿಎಂ ಎಲ್ಲ ಸೇವೆಗಳೂ ಅಕ್ಷರಶಃ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಲಾಭ ಪಡೆದ ಖಾಸಗಿ ಸಂಸ್ಥೆಗಳು ತಮ್ಮ ಸೇವೆ ಕಲ್ಪಿಸುವಲ್ಲಿ ಗ್ರಾಹಕರ ಮನವೊಲಿಸುತ್ತಿವೆ.

ಸಮಸ್ಯೆ ಜಿಲ್ಲೆಗಷ್ಟೇ ಸೀಮಿತವಾಗಿಲ್ಲ: ರಾಯಚೂರು ಜಿಲ್ಲೆಯ ಲಿಂಗಸೂಗೂರು, ಸಿಂಧನೂರು, ದೇವದುರ್ಗ ವ್ಯಾಪ್ತಿಯ ಕಾರ್ಮಿಕರೂ ಪ್ರತಿಭಟನೆ ನಡೆಸುತ್ತಿದ್ದು ಗುತ್ತಿಗೆದಾರರ ವಿರುದ್ಧ ಸಿಡಿದೆದ್ದಿದ್ದಾರೆ. ಖಾಸಗಿ ಟೆಲಿಕಾಂ ಸಂಸ್ಥೆಗಳ ಸಂಪರ್ಕ ಪಡೆದಿರುವ ಸೈಬರ್‌ಕೆಫೆ ಮಾಲೀಕರು ಗ್ರಾಹಕರ ಅಸಹಾಯಕತೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಬಳಕೆದಾರರು ದೂರಿದ್ದಾರೆ.

ತುಂಡುಗುತ್ತಿಗೆ ಪರಿಣಾಮ: ಕೊಪ್ಪಳ ನಗರದಲ್ಲಿ ಒಟ್ಟು 20 ಮಂದಿ ಕಾರ್ಮಿಕರ ಪೈಕಿ 12 ಮಂದಿಯನ್ನು ಹುಬ್ಬಳ್ಳಿ ಮೂಲದ ಗುತ್ತಿಗೆದಾರರು ವಹಿಸಿಕೊಂಡಿದ್ದಾರೆ. ಇವರಿಗೆ ಸರಿಯಾಗಿ ವೇತನ ದೊರೆಯುತ್ತಿದೆ. 8 ಮಂದಿಯನ್ನು ದಾವಣಗೆರೆಯ ಜೆಮಿನಿ ಸೆಕ್ಯೂರಿಟೀಸ್ ಸಂಸ್ಥೆ ಗುತ್ತಿಗೆ ವಹಿಸಿಕೊಂಡಿದೆ. ಇದರಲ್ಲಿ ಹಲವು ಮಂದಿಗೆ ಕಳೆದ 2 ತಿಂಗಳಿನಿಂದ ವೇತನ ಸಿಕ್ಕಿಲ್ಲ. ಕುಷ್ಟಗಿ, ಯಲಬುರ್ಗ, ಲಿಂಗಸೂಗೂರು, ಸಿಂಧನೂರಿನಲ್ಲಿಯೂ ಕೆಲವು ಕಾರ್ಮಿಕರು ಹುಬ್ಬಳ್ಳಿ ಗುತ್ತಿಗೆದಾರರಿಗೆ ಸೇರಿದ್ದರೆ, ಹಲವರು ದಾವಣಗೆರೆಯ ಗುತ್ತಿಗೆದಾರರಿಂದ ನೇಮಕಗೊಂಡವರು. ಎರಡೂ ಏಜೆನ್ಸಿಯ ಕಾರ್ಮಿಕರು ಜತೆಗೇ ಕೆಲಸ ಮಾಡುತ್ತಿದ್ದರೂ ಪರಸ್ಪರ ಒಗ್ಗಟ್ಟಾಗದಂತೆ ಈ ರೀತಿ ಹಂಚಿಕೆ ಮಾಡಲಾಗಿದೆ ಎಂದು ಗುತ್ತಿಗೆ ಕಾರ್ಮಿಕರ ಸಂಘದ ಕಾರ್ಯದರ್ಶಿ ಗುರುರಾಜ್ ಆರೋಪಿಸಿದರು.
ಕಳೆದ 20 ವರ್ಷಗಳಿಂದ ದುಡಿಯುತ್ತಿದ್ದೇವೆ. ರೂ. 4,500 ವೇತನವಿದೆ. ಅದನ್ನೂ ಸರಿಯಾಗಿ ಕೊಡದಿದ್ದರೆ ನಾವು ಹೇಗೆ ಬದುಕಬೇಕು ಎಂದು ಪ್ರಶ್ನಿಸುತ್ತಾರೆ ಕಾರ್ಮಿಕ ಕಾಸಿಂ ಸಾಬ್.

ಬಿಎಸ್‌ಎನ್‌ಎಲ್‌ನಿಂದಲೂ ವಿಳಂಬ:ಕಾರ್ಮಿಕರ ವೇತನವನ್ನು ಆನ್‌ಲೈನ್ ಮೂಲಕ ಬೆಂಗಳೂರಿನಿಂದಲೇ ಪಾವತಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲ ಮಾಹಿತಿಯನ್ನು ಕಂಪ್ಯೂಟರ್‌ಗೆ ವರ್ಗಾಯಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ. ಆದರೆ, ಇದೀಗ ಎಲ್ಲವನ್ನೂ ಸರಿಪಡಿಸಲಾಗಿದ್ದು ವೇತನದ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸಲಾಗಿದೆ. ಕೆಲಕಾಲ ವಿಳಂಬ ಆಗಿರಬಹುದು. ಅದಕ್ಕೆ ಕಾರ್ಮಿಕರೂ ಸಹಕರಿಸಬೇಕು. ರಾಜ್ಯದ ಬೇರೆ ಭಾಗಗಳಲ್ಲಿಯೂ ಇದೇ ಸ್ವರೂಪದ ಸಮಸ್ಯೆಯಿದೆ ಎಂದು ರಾಯಚೂರು ಬಿಎಸ್‌ಎನ್‌ಎಲ್ ವಿಭಾಗೀಯ ಎಂಜಿನಿಯರ್ ಪ್ರಹ್ಲಾದ ಆಚಾರ್ಯ ಹೇಳಿದರು.

ತಾಂತ್ರಿಕ ಕಾರಣ ಏನೇ ಇದ್ದರೂ ಗುತ್ತಿಗೆದಾರರು ಸಕಾಲಕ್ಕೆ ವೇತನ ಪಾವತಿಸಬೇಕು. ಅವರಿಗೆ ಮುಂದೆ ಬಿಎಸ್‌ಎನ್‌ಎಲ್ ಹಣ ನೀಡುತ್ತದೆ. ಅದಕ್ಕೆ ನಮ್ಮನ್ನೇಕೆ ಸತಾಯಿಸಬೇಕು ಎಂಬುದು ಕಾರ್ಮಿಕರ ಪ್ರಶ್ನೆ.

ಜುಲೈ 15ರಂದು ಮಾತುಕತೆ: ಸಮಸ್ಯೆ ಜಟಿಲಗೊಳ್ಳುತ್ತಿದೆ. ಸಂಸ್ಥೆಯ ಇಡೀ ಕಾರ್ಯಜಾಲ ಗುತ್ತಿಗೆ ಕಾರ್ಮಿಕರ ಕೆಲಸದ ಮೇಲೆ ಅವಲಂಬಿತವಾಗಿದೆ. ಅದಕ್ಕಾಗಿ ಕಾರ್ಮಿಕ ಮುಖಂಡರು, ಗುತ್ತಿಗೆದಾರರು ಮತ್ತು ಸಂಸ್ಥೆಯ ಹಿರಿಯ ಅಧಿಕಾರಿಗಳ ಜತೆ ಜುಲೈ 15ರಂದು ರಾಯಚೂರಿನಲ್ಲಿ ಮಾತುಕತೆ ನಡೆಯಲಿದೆ ಎಂದು ನಗರದ ಬಿಎಸ್‌ಎನ್‌ಎಲ್ ಎಂಜಿನಿಯರೊಬ್ಬರು `ಪ್ರಜಾವಾಣಿ' ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT