ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ದಂಡ ರೂ 25 ಲಕ್ಷಕ್ಕೆ

ಕಡ್ಡಾಯ ಗ್ರಾಮೀಣ ಸೇವೆ
Last Updated 15 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಕಡ್ಡಾಯ ಗ್ರಾಮೀಣ ಸೇವೆ ಪೂರೈಸದ ಸ್ನಾತಕ ಪದವೀಧರ ವೈದ್ಯರಿಗೆ ರೂ 25 ಲಕ್ಷ, ಸ್ನಾತಕ ಡಿಪ್ಲೊಮಾ ವೈದ್ಯರಿಗೆ ರೂ  15 ಲಕ್ಷ ಮತ್ತು ಪದವೀಧರ (ಎಂಬಿಬಿಎಸ್) ವೈದ್ಯರಿಗೆ ರೂ  10 ಲಕ್ಷ ದಂಡ ವಿಧಿಸಲು ನಿರ್ಧರಿಸಲಾಗಿದೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಯು.ಟಿ. ಖಾದರ್ ಪ್ರಕಟಿಸಿದರು.

ವಿಧಾನ ಪರಿಷತ್‌ನಲ್ಲಿ ಸೋಮವಾರ ಸದಸ್ಯರಾದ ಇ.ಕೃಷ್ಣಪ್ಪ, ಅಲ್ಲಮಪ್ರಭು ಪಾಟೀಲ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದರು.
`ಕಡ್ಡಾಯ ಗ್ರಾಮೀಣ ಸೇವೆ ಪೂರೈಸದ ವೈದ್ಯರಿಗೆ ಸದ್ಯ ರೂ  1 ಲಕ್ಷ ದಂಡ ವಿಧಿಸಲಾಗುತ್ತಿದೆ. ಇದುವರೆಗೆ 900 ವೈದ್ಯರು ತಲಾ ರೂ  1 ಲಕ್ಷ ದಂಡ ಪಾವತಿಸಿ, ಗ್ರಾಮೀಣ ಸೇವೆಯಿಂದ ದೂರ ಉಳಿದಿದ್ದಾರೆ' ಎಂದು ತಿಳಿಸಿದರು. `ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಲು ಮುಂದೆ ಬರುತ್ತಿರುವ ವೈದ್ಯರ ಸಂಖ್ಯೆ ತುಂಬಾ ಕಡಿಮೆ ಪ್ರಮಾಣದಲ್ಲಿದ್ದು, ಉತ್ತೇಜನಕಾರಿಯಾಗಿಲ್ಲ' ಎಂದು ವಿಷಾದಿಸಿದರು.

`ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 600 ತಜ್ಞ ವೈದ್ಯರ  ಹುದ್ದೆಗಳ ನೇರ ನೇಮಕಾತಿಗೆ ಇತ್ತೀಚೆಗೆ ಪ್ರಕ್ರಿಯೆ ಆರಂಭಿಸಲಾಗಿತ್ತು. 252 ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿದ್ದರು. ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳ ನಿಯೋಜನೆಗೆ ಕೌನ್ಸೆಲಿಂಗ್ ನಡೆಸಿದಾಗ 137 ಅಭ್ಯರ್ಥಿಗಳು ಮಾತ್ರ ಸ್ಥಳ ಆಯ್ಕೆ ಮಾಡಿಕೊಂಡರು. ಅವರಲ್ಲಿ 75 ಜನ ಕರ್ತವ್ಯಕ್ಕೆ ಹಾಜರಾಗಿದ್ದಾರೆ' ಎಂದು ವಿವರಿಸಿದರು.

`ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಬಿಬಿಎಸ್ ವಿದ್ಯಾರ್ಹತೆ ಹೊಂದಿರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಒಟ್ಟು 2,586 ಹುದ್ದೆಗಳಿವೆ. ಇತ್ತೀಚೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ 118 ಅಲೋಪತಿ, 52 ಆಯುಷ್ ಸೇರಿದಂತೆ ಒಟ್ಟು 2,290 ವೈದ್ಯಾಧಿಕಾರಿಗಳು ಕರ್ತವ್ಯದ ಮೇಲಿದ್ದಾರೆ. 296 ಹುದ್ದೆಗಳು ಖಾಲಿ ಇವೆ' ಎಂದು ಮಾಹಿತಿ ನೀಡಿದರು.

`ವೈದ್ಯರ ಕೊರತೆ ಇರುವ ಪ್ರದೇಶಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಎಂಬಿಬಿಎಸ್ ಪದವೀಧರರನ್ನು ನೇಮಕ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಆಯಾ ಜಿಲ್ಲೆಗಳ ಅಗತ್ಯಕ್ಕೆ ತಕ್ಕಂತೆ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಮಾಸಿಕ ರೂ  60 ಸಾವಿರದಿಂದ ರೂ 80 ಸಾವಿರ ಮಾಸಿಕ ಗೌರವಧನ ನಿಗದಿ ಮಾಡಲಾಗಿದೆ' ಎಂದು ತಿಳಿಸಿದರು.

`ತಜ್ಞ ವೈದ್ಯರ ಕೊರತೆಯನ್ನು ಹೋಗಲಾಡಿಸಲು ಹಾಲಿ ಇರುವ ವೈದ್ಯಾಧಿಕಾರಿಗಳಿಗೆ ಅರಿವಳಿಕೆ ಹಾಗೂ ಶಸ್ತ್ರ ಚಿಕಿತ್ಸೆ ತರಬೇತಿ ನೀಡಲಾಗುತ್ತಿದೆ. ಆ ಮೂಲಕ ಸ್ತ್ರೀರೋಗ ಮತ್ತು ಅರಿವಳಿಕೆ ತಜ್ಞರ ಕೊರತೆ ನೀಗಿಸಲು ಕ್ರಮ ಜರುಗಿಸಲಾಗುತ್ತಿದೆ' ಎಂದು ಮಾಹಿತಿ ನೀಡಿದರು.

`ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸಿಬ್ಬಂದಿ ಕೊರತೆ ಇದ್ದು, ಅದನ್ನು ಹೋಗಲಾಡಿಸಲು ಈಗಾಗಲೇ 3,579 ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆದಿದೆ. ಆದರೆ, ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಲಭ್ಯವಾಗಿದ್ದರಿಂದ ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಬೇಕಿದೆ. ಆ ಪ್ರಕ್ರಿಯೆ ಮುಗಿಯುವವರೆಗೆ ನೇಮಕಾತಿ ಆದೇಶ ಹೊರಡಿಸಲು ತಡೆಯಾಜ್ಞೆ ಬಂದಿದೆ' ಎಂದು ವಿವರಿಸಿದರು.

`ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ, ಟೆಕ್ನಾಲಜಿಸ್ಟ್, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ, ಅರೆವೈದ್ಯಕೀಯ ಮತ್ತು ಡಿ ಗ್ರೂಪ್ ಹುದ್ದೆಗಳು ಸೇರಿ 1,331 ಸಿಬ್ಬಂದಿ ನೇಮಕಕ್ಕೆ ಹಣಕಾಸು ಇಲಾಖೆಯಿಂದ ಒಪ್ಪಿಗೆ ದೊರೆತಿದೆ. ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಿಬ್ಬಂದಿ ಕೊರತೆ ನೀಗಲಿದೆ' ಎಂದು ಹೇಳಿದರು.

ಡೆಂಗೆ ನಿಯಂತ್ರಣ: ರಾಜ್ಯದಲ್ಲಿ ಡೆಂಗೆ ರೋಗ ಹರಡದಂತೆ ಕ್ರಮ ಕೈಗೊಳ್ಳಲು ರೂ 1.72 ಕೋಟಿ ಬಿಡುಗಡೆ ಮಾಡಲಾಗಿದೆ. ಸೊಳ್ಳೆಗಳ ಸಮೀಕ್ಷೆ ಮತ್ತು ನಿರ್ಮೂಲನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಲಾರ್ವಾನಾಶಕ ಮತ್ತು ಧೂಮ ರಾಸಾಯನಿಕವನ್ನು ಎಲ್ಲ ಜಿಲ್ಲೆಗಳಿಗೆ ವಿತರಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT