ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ನಿಯೋಜನೆ: ಭರವಸೆ

Last Updated 20 ಡಿಸೆಂಬರ್ 2012, 8:52 IST
ಅಕ್ಷರ ಗಾತ್ರ

ಅಂಕೋಲಾ: ಬುಧವಾರ ಸಂಜೆ ಕುಮಟಾಕ್ಕೆ ತೆರಳುತ್ತಿದ್ದ ಆರೋಗ್ಯ ಸಚಿವ ಅರವಿಂದ ಲಿಂಬಾವಳಿಯವರು ಮಾರ್ಗ ಮಧ್ಯದಲ್ಲಿ ದಿಢೀರನೆ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕುಂದು-ಕೊರತೆಗಳನ್ನು ಖುದ್ದಾಗಿ ಪರಿಶೀಲಿಸಿದರು.

ಆರು ವೈದ್ಯರ ಹುದ್ದೆಗಳು ಖಾಲಿಯಿದ್ದು, ರೋಗಿಗಳಿಗೆ ಉಂಟಾಗುತ್ತಿರುವ ಅನಾನುಕೂಲತೆಗಳ ಕುರಿತು ಸಚಿವರ ಗಮನ ಸೆಳೆದ ತಾಲೂಕು ಯುವ ಒಕ್ಕೂಟದ ಉಪಾಧ್ಯಕ್ಷ ಶ್ರೀಪಾದ ನಾಯ್ಕ, `ಶಿರಸಿ, ಕುಮಟಾ ಮುಂತಾದ ಕಡೆಗಳಲ್ಲಿ ಸಮರ್ಪಕ ವೈದ್ಯರು ಸೇವೆಯಲ್ಲಿದ್ದು, ಅಂಕೋಲಾದಲ್ಲಿ ಮಾತ್ರ ಒಬ್ಬರೂ ವೈದ್ಯರು ಇರುವುದಿಲ್ಲ. ಇದನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವ ಸ್ಥಳೀಯ ಜನಪ್ರತಿನಿಧಿಗಳ ಮತ್ತು ಸಚಿವರ ಬೇಜವಾಬ್ದಾರಿತನ ಸಾರ್ವಜನಿಕರ ಸಹನೆಯನ್ನು ಪರೀಕ್ಷಿಸುವಂತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಸ್ಪಂದಿಸಿದ ಸಚಿವರು ಕೂಡಲೇ ವೈದ್ಯರನ್ನು ನಿಯೋಜಿಸುವ ಭರವಸೆಯನ್ನು ನೀಡಿದರಲ್ಲದೇ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಅಂಕೋಲಾಕ್ಕೆ ಗೋಕರ್ಣ ಆಸ್ಪತ್ರೆಯ ಡಾ. ಜಗದೀಶ ನಾಯ್ಕ ಮತ್ತು ಪ್ರಸ್ತುತ ಇಲ್ಲಿಂದ ರಾಜೀನಾಮೆ ನೀಡಿ ಹೋಗಿರುವ ಡಾ. ಸುಮಲತಾ ಅವರನ್ನು, ಮುಂಡಗೋಡದಿಂದ ಮತ್ತೊಬ್ಬ ವೈದ್ಯರನ್ನು ನೇಮಕಗೊಳಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಪ್ಪಣ್ಣ ಕಾಂಬಳೆ, ಪ್ರಮುಖರಾದ ಅನ್ವರ ಮುಲ್ಲಾ ಆಸ್ಪತ್ರೆಗಳ ಸಮಸ್ಯೆಗಳ ಕುರಿತು ಸಚಿವರ ಗಮನ ಸೆಳೆದರು. ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್, ಜಿಲ್ಲಾ ಆರೋಗ್ಯಾಧಿಕಾರಿ ಅಶೋಕಕುಮಾರ, ತಹಶೀಲ್ದಾರ ಜಿ.ಎನ್. ನಾಯ್ಕ, ಡಾ. ಮಹೇಂದ್ರ ನಾಯಕ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಭಾಸ್ಕರ ನಾರ್ವೇಕರ, ಸಹಕಾರಿ ಧುರೀಣ ಆರ್.ಎನ್. ನಾಯಕ, ಪ್ರಮುಖರಾದ ರಂಜನ್ ಹಿಚ್ಕಡ, ಗೋಪು ಅಡ್ಲೂರು ಮುಂತಾದವರು ಉಪಸ್ಥಿತರಿದ್ದರು. ಸಚಿವರು ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸುತ್ತಿರುವಾಗಲೇ ವಿದ್ಯುತ್ ಕಡಿತ ಉಂಟಾಗಿದ್ದರಿಂದ ಟಾರ್ಚ್ ಬೆಳಕಿನಲ್ಲಿ  ತಪಾಸಣೆ ನಡೆಸಿ, ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT