ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರೂ ಇಲ್ಲ, ಔಷಧಿಯೂ ಇಲ್ಲ...

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮಡಿಕೇರಿ: ಉತ್ತಮ ಕಟ್ಟಡ, ಡಯಾಲಿಸಿಸ್, ಪ್ರಯೋಗಾಲಯ, ಐಸಿಯು ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದರೂ ಇಲ್ಲಿನ ಕೊಡಗು ಜಿಲ್ಲಾ ಆಸ್ಪತ್ರೆಯು ವೈದ್ಯರ ಕೊರತೆಯಿಂದ ತೀವ್ರವಾಗಿ ಬಳಲುತ್ತಿದೆ.

ಕಾಫಿ ತೋಟದ ಕಾರ್ಮಿಕರು ಸೇರಿದಂತೆ ಮಧ್ಯಮ ವರ್ಗದ ಜನರು ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಆದರೆ 410 ಹಾಸಿಗೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲು ಈಗಿರುವ ವೈದ್ಯರು ಪರದಾಡುವಂತಾಗಿದೆ.

ತಜ್ಞ ವೈದ್ಯರು ಸೇರಿದಂತೆ 36 ವೈದ್ಯರು ಇರಬೇಕಾದ ಜಾಗದಲ್ಲಿ ಕೇವಲ 19 ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಚರ್ಮರೋಗ ತಜ್ಞರು, ಮಕ್ಕಳ ತಜ್ಞರ ಕೊರತೆ ತೀವ್ರವಾಗಿ ಕಾಡುತ್ತಿದೆ. ವೈದ್ಯರ ನೇಮಕಕ್ಕಾಗಿ ಹಲವು ಬಾರಿ ಜಾಹೀರಾತು ನೀಡಿದರೂ ಯಾರೂ ಬರುತ್ತಿಲ್ಲ ಎನ್ನುವುದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮುತ್ತಪ್ಪ ಅವರ ಅಳಲು.



ಆಶಾಕಿರಣ: ಮಡಿಕೇರಿ ಹೊರವಲಯದಲ್ಲಿ ಹೊಸ­ದಾಗಿ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾ­ಣವಾಗುತ್ತಿದ್ದು, ಮುಂದಿನ ಎರಡು ವರ್ಷ­ದಲ್ಲಿ ಕಾಲೇಜು ಆರಂಭವಾಗುವ ಲಕ್ಷಣ­ಗಳಿವೆ. ಈ ಆಸ್ಪತ್ರೆಯನ್ನು ಅಧ್ಯಯನಕ್ಕಾಗಿ ಬಳ­ಸು­ವುದರಿಂದ ಕಾಲೇಜಿನ ಪ್ರೊಫೆಸರ್‌ಗಳು ಹಾಗೂ ತಜ್ಞ ವೈದ್ಯರ ಸೇವೆ ಇಲ್ಲಿ ದೊರೆಯ­ಲಿದೆ. ಆಗ, ವೈದ್ಯರ ಕೊರತೆ ನೀಗಬಹುದು ಎನ್ನುವ ಆಶಯ­ವನ್ನು ಆಸ್ಪತ್ರೆಯ ಆಡಳಿತ ಮಂಡಳಿ ಹೊಂದಿದೆ.

ಔಷಧಿಗಳ ಕೊರತೆ: ಇಲ್ಲಿನ ವೈದ್ಯರು ಔಷಧಿ­ಗಳನ್ನು ಹೊರಗಿನ ಅಂಗಡಿಗಳಿಂದ ಖರೀದಿಸು­ವಂತೆ ಚೀಟಿ ಬರೆದುಕೊಡುತ್ತಾರೆ ಎಂದು ಕೆಲವು ರೋಗಿಗಳು ಆರೋಪಿಸುತ್ತಾರೆ. ಕೆಮ್ಮು, ಜ್ವರ, ಶೀತ ಹೊರತುಪಡಿಸಿದರೆ ಇತರ ರೋಗಗಳಿಗೆ ಔಷಧಿಗಳ ಕೊರತೆ ತೀವ್ರವಾಗಿ ಕಾಡುತ್ತಿದೆ.

‘ಆಸ್ಪತ್ರೆಯಲ್ಲಿ ಸಮರ್ಪಕ ಔಷಧಿಗಳು ಇಲ್ಲದಿರುವುದೇ ಬಹುದೊಡ್ಡ ಕೊರತೆಯಾಗಿದೆ. ತಾವು ಬೇಡಿಕೆ ಸಲ್ಲಿಸಿದ ಪಟ್ಟಿಯಂತೆ ಔಷಧಿಗಳನ್ನು ಪೂರೈಸಲಾಗುತ್ತಿಲ್ಲ. ಹೀಗಾಗಿ, ಕೆಲವೊಮ್ಮೆ ಅನಿವಾರ್ಯವಾಗಿ ಅಂಗಡಿಗಳಿಂದ ಖರೀದಿಸುವಂತೆ ಹೇಳುತ್ತೇವೆ’ ಎಂದು ಹೆಸರು ಹೇಳಲು ಇಚ್ಛಿಸದ ವೈದ್ಯರು ಪ್ರತಿಕ್ರಿಯಿಸುತ್ತಾರೆ.

ಆಧುನೀಕರಣಕ್ಕೆ ಒತ್ತು: ಸ್ವಚ್ಛತಾ ಸಿಬ್ಬಂದಿ ಕೊರತೆಯ ನಡುವೆಯೂ ಆಸ್ಪತ್ರೆಯಲ್ಲಿ ತಕ್ಕ­ಮಟ್ಟಿಗೆ ಸ್ವಚ್ಛತೆಯನ್ನು ಕಾಪಾಡಿ ಕೊಳ್ಳಲಾಗಿದೆ. ಆಸ್ಪತ್ರೆಯ ಆಧುನೀಕರಣಕ್ಕಾಗಿ ಕಳೆದ ವರ್ಷ ಸರ್ಕಾರ  ರೂ 4 ಕೋಟಿ ಮಂಜೂರು ಮಾಡಿತ್ತು. ಶಸ್ತ್ರಚಿಕಿತ್ಸೆ  ಕೊಠಡಿಯ ಆಧುನೀಕರಣ, ಟೈಲ್ಸ್‌ ­ಅಳವಡಿಕೆ ಸೇರಿ­ದಂತೆ ಕಟ್ಟಡಕ್ಕೆ ಹೊಸ ರೂಪ ನೀಡುವ  ಕಾಮಗಾರಿ­ ಈಗಲೂ ನಡೆಯುತ್ತಿವೆ.

ಜಿಲ್ಲಾ ಆಸ್ಪತ್ರೆಯ ಮುಖ್ಯ ಕಟ್ಟಡ ಹಾಗೂ ಅದರ ಎದುರಿಗೆ ಇರುವ ಮಕ್ಕಳ ಮತ್ತು ಹೆರಿಗೆ ವಿಭಾಗದ ಕಟ್ಟಡಕ್ಕೆ ಸಂಪರ್ಕ ಕಲ್ಪಿಸುವ ಅಂಡರ್‌ ಪಾಸ್‌ ಕಾಮಗಾರಿಯು ರೂ 1ಕೋಟಿ ವೆಚ್ಚದಲ್ಲಿ ಇತ್ತೀಚೆಗೆ ಪೂರ್ಣಗೊಂಡಿದೆ. ರಕ್ತ, ಮೂತ್ರ ಸೇರಿದಂತೆ ವಿವಿಧ ಪರೀಕ್ಷೆ ಕೈಗೊಳ್ಳಲು ಸ್ಥಾಪಿಸ­ಲಾಗಿರುವ ಪ್ರಯೋಗಾಲಯ ಹಾಗೂ ಡಯಾ­ಲಿಸಿಸ್‌ ಘಟಕಗಳ ಪ್ರಯೋಜನವನ್ನು ಸಾಕಷ್ಟು ಸಂಖ್ಯೆಯಲ್ಲಿ ಪಡೆದುಕೊಳ್ಳುತ್ತಿದ್ದಾರೆ.

ಲೋಕಾಯುಕ್ತ ಭಾಸ್ಕರ್‌ರಾವ್‌ ಇತ್ತೀಚೆಗೆ ವೈದ್ಯರ ಸಭೆಯೊಂದನ್ನು ಕರೆದಿದ್ದರು. ‘ಹಲವು ಜನ ವೈದ್ಯರನ್ನು ಲಂಚ ಪಡೆಯುವಾಗ ಹಿಡಿದು ಸಸ್ಪೆಂಡ್‌ ಮಾಡಿದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಯನ್ನು ಹೇಗೆ ಸರಿಪಡಿಸಬಹುದು’ ಎಂದು ಅವರು ನಮ್ಮನ್ನು ಕೇಳಿದ್ದರು.  ಎಲ್ಲ ಅಂಶಗಳನ್ನು ನಾನು ಅವರ ಗಮನಕ್ಕೆ ತಂದಿದ್ದೇನೆ. ಮುಂದಿನ ಕ್ರಮ ಕೈಗೊಳ್ಳ ಬೇಕಾಗಿರುವುದು ಸರ್ಕಾರಕ್ಕೆ ಬಿಟ್ಟಿದ್ದು.

– ಡಾ.ಮುತ್ತಪ್ಪ
ಜಿಲ್ಲಾ ಶಸ್ತ್ರಚಿಕಿತ್ಸಕರು


‘ಸರ್ಕಾರದ ನೀತಿ ಬದಲಾಗಲಿ’
ಸರ್ಕಾರಿ ವೈದ್ಯರಿಗೆ ಸೇವಾ ಮನೋಭಾವ ಇಲ್ಲ ಎನ್ನುವ ಹಣೆಪಟ್ಟಿ ಕಟ್ಟುವ ಬದಲು, ಇಂದಿನ ಅವ್ಯವಸ್ಥೆಗೆ ಏನು ಕಾರಣ ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎನ್ನುತ್ತಾರೆ ಕೊಡಗು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮುತ್ತಪ್ಪ. 

ಅವರು ತಮ್ಮ ಅನಿಸಿಕೆಗಳನ್ನು ‘ಪ್ರಜಾವಾಣಿ’ಗೆ ವ್ಯಕ್ತಪಡಿಸಿದ್ದು ಹೀಗೆ...

‘ಆಸ್ಪತ್ರೆಗಳ ಜೀವಾಳವಾಗಿರುವ ವೈದ್ಯರ ಸಂಕಷ್ಟಗಳನ್ನು ಆಲಿಸದೇ ಕೇವಲ ಆಸ್ಪತ್ರೆಗಳ ಅವ್ಯವಸ್ಥೆ ಬಗ್ಗೆ ಮಾತನಾಡಿದರೆ ಏನೂ ಪ್ರಯೋಜನವಾಗದು. ನಾನು ಈ ವೃತ್ತಿಗೆ ಬರುವ ಸಮಯದಲ್ಲಿ ಸಾಕಷ್ಟು ಸ್ಪರ್ಧೆ ಇರುತ್ತಿತ್ತು. ಎಷ್ಟೋ ವೈದ್ಯರು ‘ಶಿಫಾರಸ್ಸು’ ಮಾಡಿಸಿ ಸೇವೆಗೆ ಸೇರಿದ್ದರು. ನಾನೀಗ ನಿವೃತ್ತಿ ಅಂಚಿಗೆ ಬಂದು ನಿಂತಿದ್ದೇನೆ. ಈಗಿನ ಪರಿಸ್ಥಿತಿಯಲ್ಲಿ ಜಾಹೀರಾತು ನೀಡಿದರೂ ಯಾವ ವೈದ್ಯರೂ ಬರುತ್ತಿಲ್ಲ. ಕೇವಲ 20 ವರ್ಷಗಳ ಅವಧಿಯಲ್ಲಿ ಪರಿಸ್ಥಿತಿ ಇಷ್ಟೊಂದು ಹದಗೆಡಲು ಏನು ಕಾರಣ ಎನ್ನುವುದರ ಬಗ್ಗೆ ಚಿಂತಿಸಬೇಕಾಗಿದೆ’.

 ವೈದ್ಯರಿಗೆ ಉತ್ತಮ ಸಂಬಳ, ಹೆಚ್ಚುವರಿ ಭತ್ಯೆಗಳ ಸೌಲಭ್ಯ, ಉತ್ತಮ ವಸತಿಗೃಹಗಳ ವ್ಯವಸ್ಥೆ, ಶಸ್ತ್ರಚಿಕಿತ್ಸೆಗೆ ಅಗತ್ಯವಿರುವಂತಹ ಉಪಕರಣ, ಔಷಧಿಗಳ ಸಮರ್ಪಕ ಪೂರೈಕೆ ಹಾಗೂ ಕೆಲಸದ ಒತ್ತಡ ಬೀಳದಂತೆ ತಡೆಯಲು ಸಮರ್ಪಕ ಸಂಖ್ಯೆಯಲ್ಲಿ ವೈದ್ಯರನ್ನು ನೇಮಕಾತಿ ಮಾಡಿಕೊಳ್ಳಬೇಕು. ಈ ಮೂಲಕ ಪುನಃ ಸರ್ಕಾರಿ ಸೇವೆಯತ್ತ ವೈದ್ಯರನ್ನು ಆಕರ್ಷಿಸಬಹುದು.

ಕಚೇರಿ ಕೆಲಸದ ಅವಧಿ ಮುಗಿದ ನಂತರ ಖಾಸಗಿಯಾಗಿಯೂ ಪ್ರಾಕ್ಟೀಸ್‌ ಮಾಡಲು ಸರ್ಕಾರಿ ವೈದ್ಯರಿಗೆ ಅವಕಾಶ ನೀಡಲಾಗಿದೆ.  ಗ್ರಾಮೀಣ ಪ್ರದೇಶಗಳಲ್ಲಿ ಅದು ಸಾಧ್ಯವೇ? ಖಾಸಗಿ ಪ್ರಾಕ್ಟೀಸ್‌ ಅವಕಾಶವನ್ನು ತಕ್ಷಣದಿಂದಲೇ ಹಿಂದಕ್ಕೆ ಪಡೆದು, ವೈದ್ಯರಿಗೆ ಎನ್‌ಪಿಎ (ನಾನ್‌–ಪ್ರಾಕ್ಟೀಸ್‌ ಅಲೊಯನ್ಸ್‌) ನೀಡಲಿ. 

ನಗರ ಪ್ರದೇಶಗಳ ವೈದ್ಯರಿಗೆ ಹೆಚ್ಚಿನ ಪ್ರಮಾಣದಲ್ಲಿ ನಗರ ಭತ್ಯೆ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶಗಳ ವೈದ್ಯರಿಗೆ ಭತ್ಯೆ ಅತ್ಯಂತ ಕಡಿಮೆಯಾಗಿರುತ್ತದೆ.  ಸರ್ಕಾರದ ನೀತಿಗಳು ನಗರ ಕೇಂದ್ರೀಕೃತವಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ಯಾರು ತಾನೇ ಮುಂದಾಗುತ್ತಾರೆ?

ವಿಶ್ವ ಆರೋಗ್ಯ ಸಂಸ್ಥೆಯಿಂದ (ಡಬ್ಲು.ಎಚ್‌.ಓ) ಕೋಟ್ಯಂತರ ರೂಪಾಯಿ ಸಾಲ ಪಡೆದು ಆಸ್ಪತ್ರೆ ಆಧುನೀಕರಣಗೊಳಿಸಲಾಗುತ್ತಿದೆ. ವೈದ್ಯರ ನೇಮಕಾತಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಕೆಲವು ವರ್ಷಗಳ ನಂತರ ವೈದ್ಯರು ಸಿಗದೇ  ಆಸ್ಪತ್ರೆ  ಮುಚ್ಚಿದರೂ ಆಶ್ಚರ್ಯವಿಲ್ಲ.

ಆಸ್ಪತ್ರೆಯ ಸ್ವಚ್ಛತೆಯನ್ನು ಮಾಡಬೇಕಾದ ಗ್ರೂಪ್ ‘ಡಿ’ ಸಿಬ್ಬಂದಿಯ ಕೊರತೆ ಸಾಕಷ್ಟಿದೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಿ ಎಂದು ಹಲವು ಬಾರಿ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಇದಕ್ಕೂ ವೈದ್ಯರನ್ನು ಹೊಣೆ ಮಾಡಿದರೆ ಹೇಗೆ?

ಔಷಧಿಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಸಾಕಷ್ಟು ಜಟಿಲ ಮಾಡಲಾಗಿದೆ. ನಮಗೆ ಅವಶ್ಯಕತೆ ಇರುವ ಔಷಧಿಗಳ ಪಟ್ಟಿಯನ್ನು ಕಳುಹಿಸಿಕೊಡುತ್ತೇವೆ. ಆದರೆ, ಹಲವು ಬಾರಿ ನಮ್ಮ ಬೇಡಿಕೆಗೆ ತಕ್ಕಂತೆ ಔಷಧಿಗಳು ಇರುವುದಿಲ್ಲ. ಇಂತಹ ಸ್ಥಿತಿಯಲ್ಲಿ ವೈದ್ಯರು ಏನು ಮಾಡಬೇಕು?

ಖಾಸಗಿಯಾಗಿ ಕ್ಲಿನಿಕ್‌ ನಡೆಸಿ ಲಕ್ಷಾಂತರ ರೂಪಾಯಿ ಗಳಿಸುವುದನ್ನು ಬಿಟ್ಟು ಕೆಲವು ವೈದ್ಯರು ನಿಜವಾದ ಆಸಕ್ತಿಯನ್ನಿಟ್ಟುಕೊಂಡು ಸರ್ಕಾರಿ ಸೇವೆಗೆ ಬಂದಿದ್ದನ್ನು ನಾನು ನೋಡಿದ್ದೇನೆ. ಆದರೆ, ಕೆಲವೇ ದಿನಗಳಲ್ಲಿ ಇಲ್ಲಿರುವ ಅವ್ಯವಸ್ಥೆಯನ್ನು ಕಂಡು ರೋಸಿಹೋದ ಇದೇ ವೈದ್ಯರು ರಾಜೀನಾಮೆ ಕೊಟ್ಟಿದ್ದನ್ನು ಕೂಡ ನೋಡಿದ್ದೇನೆ. ಒಟ್ಟಾರೆಯಾಗಿ ಸರ್ಕಾರಿ ವೈದ್ಯಕೀಯ ವ್ಯವಸ್ಥೆಗೆ ಕಾಯಕಲ್ಪ ನೀಡದೇ ವೈದ್ಯರನ್ನು ದೂಷಿಸಿ ಪ್ರಯೋಜನವಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT