ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಮಾಂತರಿಕ್ಷದಲ್ಲೂ ರಾಜ್ಯಕ್ಕೆ ಆಂಧ್ರ ಸ್ಪರ್ಧೆ

Last Updated 13 ಫೆಬ್ರುವರಿ 2011, 19:50 IST
ಅಕ್ಷರ ಗಾತ್ರ

ಯಲಹಂಕ ವಾಯುನೆಲೆ: ಬಂಡವಾಳ ಹೂಡಿಕೆದಾರರನ್ನು ಸೆಳೆಯುವಲ್ಲಿ ರಾಜ್ಯದ ಜೊತೆ ಸ್ಪರ್ಧೆಗೆ ಇಳಿದಿರುವ ಆಂಧ್ರಪ್ರದೇಶ ಇದೀಗ ವೈಮಾಂತರಿಕ್ಷ ಉದ್ಯಮಿಗಳನ್ನೂ ಸೆಳೆಯಲು ಮುಂದಾಗಿದೆ.ಐ.ಟಿ ವಲಯದ ಪ್ರಮುಖ ಕಂಪೆನಿಗಳನ್ನು ತನ್ನತ್ತ ಸೆಳೆಯುವಲ್ಲಿ ಗಮನಾರ್ಹ ಯಶಸ್ಸು ಕಂಡ ಆಂಧ್ರ, ಇದೇ ರೀತಿಯ ನಡೆಯನ್ನು ವೈಮಾಂತರಿಕ್ಷ ವಲಯದಲ್ಲೂ ಮಾಡುತ್ತಿದೆ.

ದೇವನಹಳ್ಳಿಯಲ್ಲಿ ರಾಜ್ಯ ಸರ್ಕಾರವು ವೈಮಾಂತರಿಕ್ಷ ಪಾರ್ಕ್ ಸ್ಥಾಪಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಆಂಧ್ರದಲ್ಲಿಯೂ ಇದೇ ರೀತಿಯ ಪಾರ್ಕ್ ಅನ್ನು ಲೇಪಾಕ್ಷಿ ಗ್ರಾಮದಲ್ಲಿ ಸ್ಥಾಪಿಸಲಾಗುತ್ತಿದೆ. ಪಾರ್ಕ್ ಸ್ಥಾಪಿಸಲು ಆಯ್ಕೆ ಮಾಡಿಕೊಂಡಿರುವ ಸ್ಥಳವು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 70 ಕಿ.ಮೀ ದೂರದಲ್ಲಿದೆ ಎನ್ನುವುದು ಗಮನಾರ್ಹ.

ರಾಜ್ಯ ಸರ್ಕಾರವು ಸುಮಾರು 1,000 ಎಕರೆ ಪ್ರದೇಶದಲ್ಲಿ ಪಾರ್ಕ್ ನಿರ್ಮಿಸುತ್ತಿದ್ದರೆ, ಇದಕ್ಕೆ ಪ್ರತಿಯಾಗಿ ಇಲ್ಲಿ ಸುಮಾರು 2,500 ಎಕರೆ ಭೂಮಿಯನ್ನು ಮೀಸಲಿಡಲಾಗಿದೆ.ಇದಲ್ಲದೇ ವೈಮಾಂತರಿಕ್ಷ ಉದ್ಯಮಗಳಿಗೆ ವಿಶೇಷ ತೆರಿಗೆ ರಿಯಾಯಿತಿಯನ್ನೂ ಆಂಧ್ರ ಸರ್ಕಾರ ಪ್ರಕಟಿಸಿದ್ದನ್ನು ಗಮನಿಸಬಹುದಾಗಿದೆ.ಇದರಿಂದಾಗಿ ಈಗಾಗಲೇ ಸರ್ಕಾರಿ ಸ್ವಾಮ್ಯದ ಪ್ರಮುಖ ಮೂರು ಪ್ರಮುಖ ಕಂಪೆನಿಗಳಾದ ಭಾರತ್ ಡೈನಾಮಿಕ್ಸ್ ಲಿಮಿಟೆಡ್, ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ತಮ್ಮ ಘಟಕಗಳನ್ನು ಅಲ್ಲಿ ಸ್ಥಾಪಿಸಲು ಸಿದ್ಧವಾಗಿವೆ.

‘ಏರೊ ಇಂಡಿಯಾ’ ಪ್ರದರ್ಶನದಲ್ಲಿ ಮಳಿಗೆ ಸ್ಥಾಪಿಸಿದ್ದ ‘ಲೇಪಾಕ್ಷಿ ಏರೊಸ್ಪೇಸ್ ಅಂಡ್ ಡಿಫೆನ್ಸ್ ಕ್ಲಸ್ಟರ್’ನ ವ್ಯವಸ್ಥಾಪಕ ನಿರ್ದೇಶಕ ಎಸ್. ಬಾಲಾಜಿ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿ, ‘ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಪಾರ್ಕ್‌ನಲ್ಲಿ ಘಟಕಗಳನ್ನು ಸ್ಥಾಪಿಸಲು ಅಗತ್ಯವಾದ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಆಸಕ್ತ ಕಂಪೆನಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ’ ಎಂದರು.

‘ಇಲ್ಲಿ 3.4 ಕಿ.ಮೀ ಉದ್ದದ ರನ್‌ವೇ ಸ್ಥಾಪಿಸಲಾಗುವುದು. ಇದು ಪ್ರಮುಖ ಆಕರ್ಷಣೆಯಾಗಲಿದೆ.ಇಲ್ಲಿರುವ ಕಂಪೆನಿಗಳು ಇದರ ಪ್ರಯೋಜನ ಪಡೆಯಬಹುದು. ಲೇಪಾಕ್ಷಿ ಏರೊಸ್ಪೇಸ್ ಸ್ಟೇಷನ್ ಅಂಡ್ ಅಕಾಡೆಮಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ವಿಶ್ವದ ವೈಮಾನಿಕ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲಾಗಿದೆ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT