ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಶಿಷ್ಟ್ಯಗಳ ತಾಣದಲ್ಲಿ ಜಾತ್ರೆಯ ಸಂಭ್ರಮ

Last Updated 14 ಜನವರಿ 2011, 10:20 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳವಾದ ತಾಲ್ಲೂಕಿನ ಮೈಲಾಪುರ ವಿಶಿಷ್ಟ ಸಂಪ್ರದಾಯಗಳ ತಾಣ. ಇದೀಗ ಮೈಲಾಪುರದಲ್ಲಿ ಹಬ್ಬದ ವಾತಾವರಣ. ಮೈಲಾಪುರದಲ್ಲಿ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ವೇದಿಕೆ ಸಿದ್ಧವಾಗಿದ್ದು, ವಿವಿಧೆಡೆಗಳಿಂದ ಭಕ್ತರ ಆಗಮನ ಆರಂಭವಾಗಿದೆ.

ಜಿಲ್ಲಾ ಕೇಂದ್ರವಾದ ಯಾದಗಿರಿಯಿಂದ ಕೇವಲ 17 ಕಿ.ಮೀ. ಅಂತರದಲ್ಲಿರುವ ಚಿಕ್ಕ ಊರು ಮೈಲಾಪುರ. ಬೆಟ್ಟದ ಮೇಲಿರುವ ನೈಸರ್ಗಿಕ ಗುಹಾಲಯಗಳಲ್ಲಿ ಪ್ರಮುಖ ದೇವರಾದ ಮೈಲಾರಲಿಂಗನ ದೇವಾಲಯವಿದ್ದು, ಮೈಲಾರಲಿಂಗನಪುರ, ಮಲ್ಲಯ್ಯನಪುರ ಎಂದು ಕರೆಯುವ ಗ್ರಾಮವೇ ಮೈಲಾಪುರ. ಇದು ಹೊಸ ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳವೂ ಹೌದು. ಮೈಲಾರಲಿಂಗ ಅಥವಾ ಮಲ್ಲಯ್ಯನ ದರ್ಶನಕ್ಕೆ ದೂರದ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಬೇರೆ ಬೇರೆ ಜಿಲ್ಲೆಗಳಿಂದಲೂ ಭಕ್ತಾದಿಗಳ ದಂಡು ಹರಿದು ಬರುತ್ತದೆ.

ಮೈಲಾಪುರವನ್ನು ಪ್ರವೇಶಿಸುತ್ತಿದ್ದಂತೆ ಎತ್ತರದ ಬೆಟ್ಟದ ಮೇಲೆ ಇರುವ ಮೈಲಾರಲಿಂಗ ದೇವಾಲಯದ ದರ್ಶನ ದೂರದಿಂದಲೇ ಆಗುತ್ತದೆ. ಫರಸಿ ಹಾಕಿದ ರಸ್ತೆಯ ಅಕ್ಕಪಕ್ಕದಲ್ಲಿ ಪೂಜಾ ಸಾಮಗ್ರಿಗಳ ಅಂಗಡಿಗಳು. ಅಲ್ಲಿಂದ ಹೂವು, ಹಣ್ಣು, ಕಾಯಿ, ಊದಬತ್ತಿ, ಕರ್ಪೂರ ಖರೀದಿಸುವ ಭಕ್ತರು, ಏಳು ಕೋಟಿ ಎನ್ನುತ್ತಲೇ ಬೆಟ್ಟದ ಮೆಟ್ಟಿಲೇರುತ್ತಾರೆ. ಗುಹಾಂತರ ದೇವಾಲಯದಲ್ಲಿರುವ ಮಲ್ಲಯ್ಯನ ದರ್ಶನ ಪಡೆದು, ಭಂಡಾರ ಹಚ್ಚಿಕೊಳ್ಳುವ ಮೂಲಕ ಭಕ್ತಿಯನ್ನು ಸಮರ್ಪಿಸುತ್ತಾರೆ. ಹಾಗೆಯೇ ತುರಂಗಿ ಬಾಲಮ್ಮ, ಗಂಗಿ ಮಾಳಮ್ಮರ ದೇವಾಲಯಗಳಿಗೆ ತೆರಳಿ ದರ್ಶನ ಪಡೆಯುತ್ತಾರೆ.

ಇಲ್ಲಿನ ಎಲ್ಲ ದೇವಾಲಯಗಳು ಗುಹೆಯಲ್ಲಿ ಇರುವುದು ವಿಶೇಷ. ಮಲ್ಲಯ್ಯನ ದೇವಾಲಯ, ತುರಂಗಿ ಮಾಳಮ್ಮ, ಹೆಗ್ಗಣ ಪ್ರಧಾನ ಗುಡಿ, ಗಂಗಿ ಮಾಳಮ್ಮ ದೇವಾಲಯಗಳೆಲ್ಲವೂ ಗುಹೆಯೊಳಗೆ ಇವೆ. ದೊಡ್ಡದಾದ ಬಂಡೆಯ ಕೆಳಗೆ ಈ ಗುಹಾಂತರ ದೇವಾಲಯಗಳಿವೆ. 5 ಅಡಿ ಎತ್ತರವಿರುವ ದೇವಾಲಯಗಳಲ್ಲಿ ಎಲ್ಲರೂ ತಗ್ಗಿಕೊಂಡೇ ಹೋಗಬೇಕು. ಆಕರ್ಷಕ ಕೆತ್ತನೆಗಳಿಂದ ದೇವಾಲಯಗಳ ಸೌಂದರ್ಯ ಇಮ್ಮಡಿಗೊಂಡಿದೆ.

ವೈಶಿಷ್ಟಗಳ ಜಾತ್ರೆ: ಪ್ರತಿ ವರ್ಷದ ಮಕರಸಂಕ್ರಮಣದಂದು ಇಲ್ಲಿ ನಡೆಯುವ ಜಾತ್ರೆ ಅದ್ಭುತ. ಅನೇಕ ಧಾರ್ಮಿಕ ವಿಧಿಗಳು ಭಕ್ತಾದಿಗಳ ನಂಬಿಕೆಯನ್ನು ಪ್ರತಿಬಿಂಬಿಸಿದರೆ, ಹೊಸದಾಗಿ ಬರುವ ಭಕ್ತರಿಗೆ ಆಶ್ಚರ್ಯವನ್ನು ಉಂಟು ಮಾಡುತ್ತದೆ.

‘ಏಳು ಕೋಟಿ ಏಳು ಕೋಟಿ’ ‘ಮಲ್ಲಯ್ಯ ಪರಾಕ್’ ಎಂಬಿತ್ಯಾದಿ ಜಯಘೋಷಗಳೊಂದಿಗೆ ಮಲ್ಲಯ್ಯನ ಬೆಟ್ಟ ಏರುವ ಭಕ್ತರ ಹುಮ್ಮಸ್ಸು ನೋಡುವಂಥದ್ದು. ಒಂದೆಡೆ ಜಯಘೋಷಗಳು ಮುಗಿಲು ಮುಟ್ಟಿದರೆ ಇನ್ನೊಂದೆಡೆ ಭಂಡಾರವನ್ನು ಎಸೆಯುವ ಸಂಭ್ರಮ ಬೇರೆ. ಹೀಗಾಗಿ ಜಾತ್ರೆಯು ಮತ್ತಷ್ಟು ಕಳೆ ಕಟ್ಟುತ್ತದೆ. ಜಾತ್ರೆಯ ಸಮಯದಲ್ಲಿ ಊರಾಚೆ 2-3 ಕಿ.ಮೀ.ಗಳ ವರೆಗೆ ಭಕ್ತರ ಸಾಲು ಕಾಣುತ್ತದೆ. ಅಲ್ಲಿ ಕಾಲಿಡಲೂ ಆಗದಂತಹ ಪರಿಸ್ಥಿತಿ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜಾತ್ರೆಯು ಕಳೆಕಟ್ಟುತ್ತದೆ.

ಮಲ್ಲಯ್ಯನ ಉತ್ಸವ ಮೂರ್ತಿಯನ್ನು ಗುಹೆಯಿಂದ ಗಂಗಾ ಸ್ನಾನಕ್ಕೆ ಕರೆತರಲಾಗುತ್ತದೆ. ಗಂಗಾ ಸ್ನಾನದ ನಂತರ ಮರಳಿ ದೇವಾಲಯಕ್ಕೆ ಬರುವ ಸಂದರ್ಭದಲ್ಲಿ ಅಕ್ಕಪಕ್ಕದ ಬೆಟ್ಟಗಳ ಮೇಲೆ ನಿಂತ ಭಕ್ತಾದಿಗಳು ಹರಕೆ ತೀರಿಸಲು ಕುರಿಯ ಮರಿಗಳನ್ನು ಪಲ್ಲಕ್ಕಿಯ ಮೇಲೆ ಎಸೆಯುತ್ತಾರೆ. ಜೀವಂತ ಕುರಿಗಳನ್ನು ದೇವರಿಗೆ ಅರ್ಪಿಸಿದರೆ, ವರ್ಷ ಪೂರ್ತಿ ತಮ್ಮ ಕುರಿಗಳಿಗೆ ಯಾವುದೇ ರೋಗ ರುಜಿನ ಬರುವುದಿಲ್ಲ ಎಂಬ ನಂಬಿಕೆ ಭಕ್ತರದ್ದು. ಆಡಳಿತ ಇದಕ್ಕೆ ಅವಕಾಶ ಕೊಡುವುದಿಲ್ಲ ಎನ್ನುವ ಭೀತಿಯಿಂದ ಹಲವಾರು ಭಕ್ತರು ಕಂಬಳಿಗಳಲ್ಲಿ ಕುರಿ ಮರಿಗಳನ್ನು ಮುಚ್ಚಿಟ್ಟುಕೊಂಡು ಬರುವುದು ಸಾಮಾನ್ಯ.

ಪಲ್ಲಕ್ಕಿ ಉತ್ಸವ ಮುಂದೆ ಬರುತ್ತಿದ್ದಂತೆ ಕಬ್ಬಿಣದ ಸರಪಳಿ ಹರಿಯುವ ಕಾರ್ಯಕ್ರಮ ಲಕ್ಷಾಂತರ ಭಕ್ತರಲ್ಲಿ ರೋಮಾಂಚನ ಉಂಟು ಮಾಡುತ್ತದೆ. ಎಂತಹ ಗಟ್ಟಿಯಾದ ಕಬ್ಬಿಣದ ಸರಪಳಿಯೂ ಇಲ್ಲಿನ ಕಲ್ಲಿನ ಕಂಬಕ್ಕೆ ಹಾಕಿ ಜಗ್ಗಿದರೆ ಕ್ಷಣಾರ್ಧದಲ್ಲಿಯೇ ತುಂಡರಿಸುತ್ತದೆ. ಇದೂ ಕೂಡ ಇಲ್ಲಿಯ ವಿಶೇಷತೆ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT