ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಟಿಗಾಗಿ ನೋಟು ಹಗರಣ: ಅಹ್ಮದ್ ಪಟೇಲ್ ಪಾತ್ರ ಬಯಲು

Last Updated 19 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್): ವೋಟಿಗಾಗಿ ನೋಟು ಹಗರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರ ಹೆಸರನ್ನು ಎಳೆಯುವ ಮೂಲಕ ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ವಿಚಾರಣೆಯ ದಿಕ್ಕು ಬದಲಿಸಿದ್ದಾರೆ.

ದೆಹಲಿ ಕೋರ್ಟ್‌ನಲ್ಲಿ ಸೋಮವಾರ ಅಮರ್ ಸಿಂಗ್ ಅವರ ಜಾಮೀನಿಗಾಗಿ ವಾದಿಸಿದ ಅವರು, `2008ರಲ್ಲಿ ನಡೆದ ಈ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಲಂಚ ನೀಡಿದ್ದರು~ ಎಂದು ವ್ಯತಿರಿಕ್ತ ಹೇಳಿಕೆ ನೀಡಿದರು.

ಹಿಂದಿನ ವಿಚಾರಣೆಯಲ್ಲಿ (ಸೆ.12) ಅವರು, ಈ ಹಣ ಬಿಜೆಪಿಯಿಂದ ಬಂದಿರಬಹುದು ಎಂದಿದ್ದರು. ತಮ್ಮ ಪಕ್ಷ `ಕುಟುಕು ಕಾರ್ಯಾಚರಣೆ~ ನಡೆಸಿತ್ತು ಎಂಬ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಅವರ ಹೇಳಿಕೆ ಆಧರಿಸಿ  ಜೇಠ್ಮಲಾನಿ ಹೀಗೆ ಹೇಳಿದ್ದರು.

ಈ ನಡುವೆ ಕೋರ್ಟ್, ಅಮರ್ ಸಿಂಗ್ ಅವರ ಮಧ್ಯಂತರ ಜಾಮೀನು ಅವಧಿಯನ್ನು ಇದೇ ತಿಂಗಳ 27ರವರೆಗೆ ವಿಸ್ತರಿಸಿದೆ.

`ನಾನೇನೂ ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿಲ್ಲ. ಆದರೆ ಪಕ್ಷದ ಕೆಲವು ಪ್ರಭಾವಿ ನಾಯಕರು ಇದರ ಸೂತ್ರಧಾರರು ಎಂದು ಹೇಳುತ್ತಿದ್ದೇನೆ. ಆರೋಪಿಗಳು ನೀಡಿರುವ ಹೇಳಿಕೆಯನ್ನು ಪುರಾವೆ ಎಂದು ಪರಿಗಣಿಸಲಾಗದು. `ಕುಟುಕು ಕಾರ್ಯಾಚರಣೆ~ಯ ದೃಶ್ಯವನ್ನು ನೋಡಿದಾಗ ಅದರಲ್ಲಿ ಎಲ್ಲಿಯೂ ಯಾರ ಮುಖವೂ ಕಾಣುವುದಿಲ್ಲ. ಅಲ್ಲದೆ ಅಮರ್ ಸಿಂಗ್ ಧ್ವನಿಯೂ ಕೇಳಿಸುವುದಿಲ್ಲ. ಹಾಗಾಗಿ ಆರೋಪಿಗಳ ಹೇಳಿಕೆಗಳು ತಾಂತ್ರಿಕವಾಗಿ ಪುರಾವೆಗಳೇ ಅಲ್ಲ~ ಎಂದು ಜೇಠ್ಮಲಾನಿ ವಾದಿಸಿದರು.

ಆರೋಪ ನಿರಾಧಾರ: ಅಹ್ಮದ್ ಪಟೇಲ್ ವಿರುದ್ಧದ ಜೇಠ್ಮಲಾನಿ ಅವರ ಹೇಳಿಕೆಯನ್ನು ಕಾಂಗ್ರೆಸ್ ತಳ್ಳಿಹಾಕಿದೆ. `ಜೇಠ್ಮಲಾನಿ ಅವರದು ಆಧಾರರಹಿತ ಅಸಂಬದ್ಧ ಹೇಳಿಕೆ~ ಎಂದು ಅಹ್ಮದ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ.
ಆರೋಗ್ಯ ಚೇತರಿಕೆ: ಮೂತ್ರನಾಳ ಸೋಂಕಿಗಾಗಿ ಏಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮರ್ ಸಿಂಗ್ ತುಸು ಚೇತರಿಸಿಕೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕುಸಿದ ಹಿಂದೂಸ್ತಾನಿ: ಈ ಮಧ್ಯೆ, ವಿಚಾರಣೆ ವೇಳೆ  ಸಹ ಆರೋಪಿ ಸುಹೇಲ್ ಹಿಂದೂಸ್ತಾನಿ ಕೋರ್ಟ್ ಹಾಲ್‌ನಲ್ಲಿ ಕುಸಿದುಬಿದ್ದರು. ತಕ್ಷಣವೇ ಭದ್ರತಾ ಸಿಬ್ಬಂದಿ ಅವರನ್ನು ಹೊರಗೆ ಕರೆತಂದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT