ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಂಗ್ಯ ದಿಗ್ಗಜರ ಚಿತ್ತಾರ

Last Updated 24 ಜನವರಿ 2011, 14:00 IST
ಅಕ್ಷರ ಗಾತ್ರ

ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಗೆ ದಶಮಾನೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಗ್ಯಾಲರಿಯಲ್ಲಿ 50ನೇ ವ್ಯಂಗ್ಯಚಿತ್ರ ಪ್ರದರ್ಶನ ನಡೆಯುತ್ತಿದೆ. 65 ಪ್ರಖ್ಯಾತ ವ್ಯಂಗ್ಯಚಿತ್ರಕಾರರ ಕೌಶಲ್ಯದಲ್ಲಿ ಅರಳಿರುವ ವ್ಯಂಗ್ಯಚಿತ್ರಗಳು ಪ್ರದರ್ಶಿತವಾಗುತ್ತಿವೆ.

ಜಾಗೃತಿ, ನವಿರಾದ ವ್ಯಂಗ್ಯ, ಸಮಸ್ಯೆಗಳ ಸರಮಾಲೆ, ರಾಜಕೀಯ ವಿಡಂಬನೆ ಚಿತ್ರಕಾರರ ಪ್ರಮುಖ ವಸ್ತುಗಳು. ಎಲ್ಲರನ್ನೂ ತೃಪ್ತಿ ಪಡಿಸುವ ಆಯ-ವ್ಯಯವೆಂಬ ಮಾಯಾಜಾಲ, ನಕ್ಸಲರ ಮುಖವಾಡದಲ್ಲಿ ನಡೆಯುವ ಬಡವರ ಶೋಷಣೆ, ದೇವೇಗೌಡರ ರಾಜಕೀಯ ಧೃತರಾಷ್ಟ್ರ ಪ್ರೇಮ, ರಾಜ್ಯದಲ್ಲಿ ರೈತರ ಆತ್ಮಹತ್ಯೆ, ಇದನ್ನು ಅಣಕಿಸುವಂತೆ ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ, ಮಗನೇ ಮುಂದಿನ ಪ್ರಧಾನ ಮಂತ್ರಿ ಕುರ್ಚಿ ನಿನಗೆ ಎನ್ನುವ ಸೋನಿಯಾ ಮಾತೃ ಪ್ರೇಮ. ಬೆಲೆ ಏರಿಕೆ ಪರಿಣಾಮ, ಬೆಂಗಳೂರು ನಗರಿಕರಣಗೊಂಡಂತೆ ನಶಿಸುತ್ತಿರುವ ಪರಿಸರ, ಭ್ರಷ್ಟಾಚಾರದ ಮುಖಗಳು, ನಂದಿ ಕಾರಿಡಾರ್ ಸಮಸ್ಯೆ, ಬಂಗಾರಪ್ಪನವರ ಸೈಕಲ್ ಯಾತ್ರೆ, ಪುಟ್ಟರಾಜ ಗವಾಯಿಗಳ ನಿಧನದ ಶೋಕಾಚರಣೆ ನಡುವೆಯೂ ಹುಬ್ಬಳ್ಳಿ ಕಿಮ್ಸ್ ವೈದ್ಯರ ಗುಂಡು ಪಾರ್ಟಿ ಸೇರಿದಂತೆ ವಿವಿಧ ವೈಶಿಷ್ಟ್ಯ-ವೈಚಿತ್ರಗಳನ್ನು ಮನೋಜ್ಞವಾಗಿ ಬಿಂಬಿಸಿರುವ ವ್ಯಂಗ್ಯಚಿತ್ರಗಳು ಮನಸೆಳೆಯುತ್ತವೆ.

ಆರ್.ಕೆ.ಲಕ್ಷ್ಮಣ್, ಮಾರಿಯೋ ಡಿ ಮಿರಾಂಡ, ಬಾಪು, ವಿ.ಕೆ. ನರೇಂದ್ರ, ವಿ.ಗೋಪಾಲ್, ಯೋಗೀಶ್ ಶೆಟ್ಟಿಗಾರ್, ಪಾಕಿಸ್ತಾನದ ಮಹಮ್ಮದ್ ಚೌರ್, ಚಿತ್ರದುರ್ಗ ಸಂಸದ ನರೇಂದ್ರ ಸ್ವಾಮಿ, ಪ್ರಭಾಕರ ರಾವ್, ವೆಂಕಟರಾವ್, ರಂಗಾ, ಸತೀಶ್ ಆಚಾರ್ಯ, ಪ್ರಶಾಂತ್ ಕುಲಕರ್ಣಿ, ಕೆ.ಆರ್.ಸ್ವಾಮಿ, ಏಸುದಾಸ್, ಕಾಕ, ಕೇಶವ್, ಶ್ರೀಧರ ಹುಂಚ, ಟೋಮ್ಸ್ ಮುಂತಾದವರ ಲೇಖನಿಯಲ್ಲಿ ಹೊಮ್ಮಿದ ಚಿತ್ರಗಳು ಇಲ್ಲಿ ನಗೆ ಉಕ್ಕಿಸುತ್ತವೆ.

ವಿಡಂಬನೆಗಷ್ಟೇ ಇಲ್ಲಿನ ಚಿತ್ರಗಳು ಸೀಮಿತವಾಗಿಲ್ಲ. ಬದುಕಿನ ಬಯಕೆಗಳು, ಭಯಾನಕಗಳು, ಬವಣೆಗಳು ಇಲ್ಲಿ ಚಿತ್ರರೂಪ ಪಡೆದಿವೆ. ಕೆಲವು ಚಿತ್ರಗಳು ವಿಭಿನ್ನ ಭಾವಗಳನ್ನು ಕಟ್ಟಿಕೊಡುತ್ತವೆ. ಪದಗಳಿಲ್ಲದ ಕಾರ್ಟೂನ್‌ಗಳು, ವಿವಿಧ ಭಾವನೆಗಳನ್ನು ಅಭಿವ್ಯಕ್ತಿಸುವ ಒಂದೇ ಚಿತ್ರದಲ್ಲಿನ 1 ಸಾವಿರ ಮುಖಗಳು. ಸಚಿನ್ ತೆಂಡೂಲ್ಕರ್, ಐಪಿಎಲ್ ಸುಗ್ಗಿಯಲ್ಲಿ ದೋನಿ, ಮಹಾರಾಷ್ಟ್ರದ ಮುದಿ ಹುಲಿಯ ಘರ್ಜನೆ, ಭ್ರಷ್ಟಾಚಾರವೆಂಬ ಬೆಕ್ಕಿಗೆ ಗಂಟೆ ಕಟ್ಟಲು ಹೊರಟ ಸಂತೋಷ್ ಹೆಗಡೆ, ಅಮಿತಾಬ್, ಐನ್‌ಸ್ಟೀನ್ ಸಹ ಇಲ್ಲಿನ ವ್ಯಂಗ್ಯಲೋಕದಲ್ಲಿ ಒಂದಾಗಿದ್ದಾರೆ.

ಸ್ಥಳ: ಎಂ.ಜಿ. ರಸ್ತೆ ಟ್ರಿನಿಟಿ ವೃತ್ತದ ಮಿಡ್‌ಫೋರ್ಡ್ ಗ್ಯಾಲರಿ.
 
ಪ್ರದರ್ಶನ ಜ. 29ಕ್ಕೆ ಮುಕ್ತಾಯ.                                                                                        
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT