ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ ಸಂದೇಶ ಸಾರುವ `ಕ್ರಿಸ್‌ಮಸ್'

Last Updated 25 ಡಿಸೆಂಬರ್ 2012, 7:01 IST
ಅಕ್ಷರ ಗಾತ್ರ

ಬೆಳಗಾವಿ: ಶಾಂತಿ ಸಂದೇಶ ಸಾರಿದ ಏಸು ಕ್ರಿಸ್ತನನ್ನು ಡಿ. 24ರಂದು ಮಧ್ಯರಾತ್ರಿ ಆರಾಧಿಸಲು ಬೆಳಗಾವಿ ನಗರದ ಚರ್ಚ್‌ಗಳೆಲ್ಲ ವಿದ್ಯುತ್ ದೀಪಗಳಿಂದ ಸಿಂಗರಿಸಿಕೊಂಡಿದೆ. ದೇವ ಮಾನವನಾದ ಏಸು ಕ್ರಿಸ್ತನ ಜನ್ಮದಿನವನ್ನು ಆಚರಿಸಲು ಕ್ರಿಶ್ಚನ್ ಬಾಂಧವರ ಮನ ಸಂಭ್ರಮದಿಂದ ನಲಿಯುತ್ತಿದ್ದು, ಎಲ್ಲರ ಮನೆಗಳು `ನಕ್ಷತ್ರ'ಗಳಿಂದ ಮಿನುಗುತ್ತಿದ್ದವು.

ಕಳೆದ ಒಂದು ವಾರದಿಂದಲೇ ಯುವಕರ, ಮಕ್ಕಳ ಗುಂಪು ಕ್ರಿಶ್ಚನ್ನರ ಮನೆ ಮನೆಗೆ ತೆರಳಿ ದೇವ ಮಾನವ ಉದಯಿಸಲಿರುವ ಸಂದೇಶವನ್ನು ಮುಟ್ಟಿಸುತ್ತಿದ್ದವು. ಸಂಜೆಯಾಗುತ್ತಿದ್ದಂತೆ ಎಲ್ಲರ ಮನೆಗಳಲ್ಲೂ ಏಸು ಕ್ರಿಸ್ತನನ್ನು ಸ್ವಾಗತಿಸಲು `ಕ್ರಿಸ್‌ಮಸ್ ಕ್ಯಾರಲ್ಸ್' (ಗೀತೆ) ಹಾಡು ತೇಲಿ ಬರುತ್ತಿದ್ದವು. ಏಸು ಕ್ರಿಸ್ತನನ್ನು ಬರಮಾಡಿಕೊಳ್ಳಲು ಮನಸ್ಸು ತವಕಿಸುತ್ತಿದೆ. `ಕ್ರಿಸಮಸ್ ಟ್ರೀ' ಹಾಗೂ    `ಸಂತಾ ಕ್ಲಾಸ್'ನ ವೇಷಭೂಷಣಗಳು ಹಬ್ಬಕ್ಕೆ ಮೆರುಗು ನೀಡುತ್ತಿದ್ದವು. ಹೀಗಾಗಿ ಸೋಮವಾರ ರಾತ್ರಿ ಕ್ರಿಶ್ಚಿಯನ್ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿ ಸಲು ಅತ್ಯುತ್ಸಾಹದಿಂದ   ಚರ್ಚ್‌ಗಳತ್ತ ಹೆಜ್ಜೆ ಹಾಕುತ್ತಿದ್ದರು.

ಬೆಥ್ಲೆಹೆಮ್ ಗ್ರಾಮದ ಬಡ ಕುರಿಗಾಹಿಯಾಗಿದ್ದ ಮೇರಿ ಹಾಗೂ ಜೋಸೆಫ್ ದಂಪತಿಗೆ ಡಿಸೆಂಬರ್ 24ರಂದು ಮಧ್ಯರಾತ್ರಿ ಜನಿಸಿದ ಮಗುವೇ ಜಗತ್ತಿಗೆ ಶಾಂತಿ ಸಂದೇಶ ಸಾರಿದ ಏಸು ಕ್ರಿಸ್ತ. ಗುಡಿಸಲಿನಲ್ಲಿ ಏಸು ಕ್ರಿಸ್ತನ ಜನನ ಆಗುತ್ತಿದ್ದಂತೆ ಆಕಾಶದಲ್ಲಿ `ನಕ್ಷತ್ರ'ವೊಂದು ಹುಟ್ಟಿಕೊಂಡು ಪ್ರಕಾಶಮಾನವಾಗಿ ಮಿನುಗಿದ್ದರಿಂದಲೇ ಏಸು ಕ್ರಿಸ್ತನ ಜನ್ಮದಿನದ ಸಂದರ್ಭದಲ್ಲಿ ಕ್ರಿಶ್ಚನ್ ಬಾಂಧವರು ತಮ್ಮ ಮನೆಗಳನ್ನು ಬಣ್ಣ- ಬಣ್ಣದ ನಕ್ಷತ್ರಗಳಿಂದ ಹಾಗೂ ದೀಪಗಳಿಂದ ಅಲಂಕಾರ ಮಾಡುತ್ತಾರೆ. `ಕ್ರಿಸ್‌ಮಸ್' ಅನ್ನು ದೀಪಗಳ ಹಬ್ಬದಂತೆ ಸಂಭ್ರಮದಿಂದ ಆಚರಿಸುತ್ತಾರೆ.

`ಕ್ರಿಸ್‌ಮಸ್'ಗೆ ನಾಲ್ಕು ವಾರ ಇರುವಾಗಲೇ ಪೂರ್ವ ಸಿದ್ಧತೆ ಶುರುವಾಗುತ್ತದೆ. ಇದು ಏಸು ಕ್ರಿಸ್ತನ ಆಗಮನ ಕಾಲವಾಗಿದೆ. ಡಿಸೆಂಬರ್‌ನ ಪ್ರತಿ ಭಾನುವಾರ ಚರ್ಚ್‌ನಲ್ಲಿ ನಡೆಯುವ ಪ್ರಾರ್ಥನೆ ಸಂದರ್ಭದಲ್ಲಿ ಏಸು ಕ್ರಿಸ್ತನ ಜನ್ಮ ದಿನವನ್ನು ಆಚರಿಸಲು ಸಿದ್ಧರಾಗುವಂತೆ ಸಂದೇಶ ನೀಡಲಾಗುತ್ತದೆ. ಒಂದು ವಾರ ಇರುವಾಗ ಯುವಕರು ಹಾಗೂ ಮಕ್ಕಳ ಗುಂಪು ಕ್ರಿಶ್ಚನ್ನರ ಮನೆ ಮನೆಗೆ ಹೋಗಿ `ಕ್ರಿಸ್‌ಮಸ್ ಕ್ಯಾರಲ್ಸ್' ಹಾಡುವ ಮೂಲಕ ಏಸು ಕ್ರಿಸ್ತನ ಜನ್ಮ ದಿನ ಆಚರಿಸಲು ಸಜ್ಜಾಗುವಂತೆ ಪ್ರೇರೇಪಿಸುತ್ತಾರೆ.

`ಕ್ರಿಸ್‌ಮಸ್ ಹಬ್ಬವು ಶಾಂತಿ, ಪ್ರೀತಿ- ವಿಶ್ವಾಸದಿಂದ ಬದುಕಬೇಕು ಎಂಬ ಸಂದೇಶವನ್ನು ಸಾರುತ್ತದೆ. ಹಬ್ಬಕ್ಕಾಗಿ ಪ್ರತಿಯೊಬ್ಬರ ಮನೆಯಲ್ಲೂ ಲಾಡು, ಕರ್ಜಿಕಾಯಿ, ಚಕ್ಕುಲಿಯಂತಹ ತಿನಿಸುಗಳನ್ನು ಸಿದ್ಧಪಡಿಸಿದ್ದೇವೆ. ಇಂದು (ಡಿ. 24) ಇವುಗಳನ್ನು ಪರಸ್ಪರ ಹಂಚಿಕೊಳ್ಳುತ್ತೇವೆ. ಮಧ್ಯರಾತ್ರಿ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಏಸು ಕ್ರಿಸ್ತನ ಜನ್ಮದಿನದ ಖುಷಿಯಲ್ಲಿ ಬಂಧು- ಮಿತ್ರರೆಲ್ಲರೂ ಕೇಕ್‌ಗಳನ್ನು ಪರಸ್ಪರ ಹಂಚಿಕೊಂಡು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ' ಎನ್ನುತ್ತಾರೆ ಬೆಳಗಾವಿಯ ಕಪಿಲೇಶ್ವರ ಕಾಲೋನಿ ನಿವಾಸಿ ಡೆನಿಸ್ ಡಿಸೋಜಾ.

`ಕ್ರಿಸ್‌ಮಸ್‌ಗೆ ನಾಲ್ಕೈದು ದಿನಗಳಿರುವಾಗಲೇ ಮನೆಯಲ್ಲಿ ಕ್ರಿಬ್ (ಗೋಂದಳಿ) ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳುತ್ತೇವೆ. ಬಾಲ ಏಸು, ಮೇರಿ, ಜೋಸೆಫ್, ಕುರಿಗಳ ಮೂರ್ತಿಗಳನ್ನೆಲ್ಲ ಸೇರಿಸಿ ಕ್ರಿಬ್ ಮಾಡುತ್ತಾರೆ. ಪುಟ್ಟ ಗುಡಿಸಲನ್ನೂ ನಿರ್ಮಿಸಿ, `ಕ್ರಿಸ್‌ಮಸ್ ಟ್ರಿ'ಯನ್ನು ಇಟ್ಟು ಅಲಂಕಾರ ಮಾಡುತ್ತೇವೆ. ಡಿ. 24ರಂದು ರಾತ್ರಿ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಮುಗಿಸಿ ಬಂದ ಬಳಿಕ ಕ್ರಿಬ್‌ನಲ್ಲಿ ಬಾಲ ಏಸುವನ್ನು ಪ್ರತಿಷ್ಠಾಪಿಸುತ್ತೇವೆ' ಎಂದು ಹಬ್ಬದ ಆಚರಣೆಯ ಕುರಿತು ಡಿಸೋಜಾ ವಿವರಿಸಿದರು.

`ಡಿ. 24ರಂದು ರಾತ್ರಿ ಸುಮಾರು 11 ಗಂಟೆಗೆ ಎಲ್ಲ ಕ್ರಿಶ್ಚನ್ ಬಾಂಧವರು ಚರ್ಚ್‌ಗಳಿಗೆ ಆಗಮಿಸಿ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಮೊದಲಿಗೆ `ಬೈಬಲ್' ವಾಚಿಸಲಾಗುತ್ತದೆ. ಬಳಿಕ ಗೋಧಿ ರೊಟ್ಟಿ ಹಾಗೂ ದ್ರಾಕ್ಷಾ ರಸದ ರೂಪದಲ್ಲಿ ಮಹಾಪ್ರಸಾದವನ್ನು ಸ್ವೀಕರಿಸುವ ಮೂಲಕ ಏಸು ಕ್ರಿಸ್ತನನ್ನು ಹೃದಯದಲ್ಲಿ ತುಂಬಿಕೊಳ್ಳುವ ಸಂಸ್ಕಾರ ನಡೆಯುತ್ತದೆ. ಬಳಿಕ ದೇವರಿಗೆ ಕೃತಜ್ಞತೆ ಸಲ್ಲಿಸಿ, ಶಾಂತಿ, ಸಂತೋಷಕ್ಕಾಗಿ ಪ್ರಾರ್ಥಿಸಲಾಗುತ್ತದೆ. ಎಲ್ಲರೂ ಸೇರಿಕೊಂಡು ಕ್ರಿಸ್‌ಮಸ್ ಕ್ಯಾರಲ್ಸ್ ಹಾಡುತ್ತಾರೆ. ಡಿ. 25ರಂದು ಬೆಳಿಗ್ಗೆ 8 ಗಂಟೆಗೆ ಮತ್ತೆ ಇದೇ ರೀತಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ” ಎಂದು ಬಿಷಪ್ ಪೀಟರ್ ಮಚಾಡೊ `ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

ಕ್ರಿಸ್‌ಮಸ್ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಲು ಬೆಳಗಾವಿ ನಗರದ ಫಾತಿಮಾ ಕಥಡ್ರಲ್ ಚರ್ಚ್, ಐ.ಸಿ. ಚರ್ಚ್, ಸೇಂಟ್ ಅಂಥೋನಿ ಚರ್ಚ್, ಮೌಂಟ್ ಕಾರ್ಮಲ್ ಚರ್ಚ್, ಸೇಂಟ್ ಮೇರಿ ಚರ್ಚ್, ಸೇಂಟ್ ಜಾನ್ ಮರಾಠಿ ಮೆಥಡಿಸ್ಟ್ ಚರ್ಚ್ ಸೇರಿದಂತೆ ಹಲವು ಚರ್ಚ್‌ಗಳು ಸೋಮವಾರ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು.

ಡಿ. 24ರಂದು ರಾತ್ರಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಕ್ರಿಶ್ಚನ್ ಬಾಂಧವರು ಮನೆಯಲ್ಲಿ ಮಾಡಿರುವ ಸಿಹಿ ತಿನಿಸುಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಬಳಿಕ ನಡೆಯುವ ಸಂತೋಷ ಕೂಟದಲ್ಲಿ (ಪಾರ್ಟಿ) ಕ್ರಿಸ್‌ಮಸ್ ವಿಶೇಷ ಸಂಗೀತಗಳಿಗೆ ಹೆಜ್ಜೆ ಹಾಕುತ್ತ ಮೈಮರೆಯುತ್ತಾರೆ.

ಡಿ. 24ರಂದು ರಾತ್ರಿ ಮೇರಿಗೆ ಜನಿಸಿದ ಆ ಮುಗುವಿಗೆ ಎಂಟು ದಿನಗಳ ಬಳಿಕ ಏಸು ಕ್ರಿಸ್ತ ಎಂದು ನಾಮಕರಣ ಮಾಡಲಾಗಿದೆ. ಹೀಗಾಗಿ ಕ್ರಿಸ್‌ಮಸ್ ಹಬ್ಬವನ್ನು ಕ್ರಿಶ್ಚನ್ ಬಾಂಧವರು ಒಂದು ವಾರ ಆಚರಿಸುತ್ತಾರೆ. ಜನವರಿ 1 ಅನ್ನು ಹೊಸ ವರ್ಷದ ಆರಂಭ ಎಂದು ಪರಿಗಣಿಸುತ್ತಾರೆ.

ಹೀಗಾಗಿ ಕ್ರಿಸ್‌ಮಸ್ ಜೊತೆಗೆ ಡಿಸೆಂಬರ್ 31ರ ಮಧ್ಯರಾತ್ರಿ `ಹಳೆ ಮನುಷ್ಯ'ನನ್ನು ದಹಿಸುವುದರೊಂದಿಗೆ ಹೊಸ ವರ್ಷವನ್ನೂ ಕ್ರಿಶ್ಚನ್ನರು ಸಂಭ್ರಮದಿಂದ ಸ್ವಾಗತಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT